ಧರ್ಮಸ್ಥಳದ ನಿಗೂಢ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಸಾರ್ವಜನಿಕ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದೆಡೆ ಸಾಮಾಜಿಕ ಕಾರ್ಯಕರ್ತರು ಒಂದು ಲಕ್ಷ ಸಹಿ ಸಂಗ್ರಹದ ಅಭಿಯಾನ ನಡೆಸುತ್ತಿದ್ದರೆ, ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ತನಿಖೆಗೆ ಆಗ್ರಹಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಸಾಗಿದೆ.
ಇದೀಗ ಮೊನ್ನೆಯಷ್ಟೇ ದೇವನಹಳ್ಳಿ ಭೂ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪ್ರಕಾಶ್ ರೈ ಧರ್ಮಸ್ಥಳ ಪ್ರಕರಣಗಳ ಕುರಿತು ದನಿಯೆತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಈ ಪ್ರಕರಣಗಳ ತನಿಖೆಗೆ ಸಿಟ್ ರಚಿಸುವುದರ ಜೊತೆಗೆ, ತನಿಖೆಯ ದಾರಿ ತಪ್ಪಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, “ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ, ಎಸ್‌ಐಟಿ ರಚನೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ತನಿಖೆ ವಿಷಯದಲ್ಲಿ ಯಾರ ಒತ್ತಡವೂ ನಡೆಯಲ್ಲ. ಕಾನೂನು ರೀತಿಯಲ್ಲೇ ಕ್ರಮ ಆಗಲಿದೆ” ಎಂದು ತಮ್ಮ ಟ್ವಿಟರ್ (X) ಖಾತೆಯಲ್ಲಿ ಟ್ವೀಟ್ ಮಾಡಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, “ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೆ, ನಿಮ್ಮ ಮಾತಿನ ಮೇಲೆ ಭರವಸೆಯಿದೆ. ಆದರೆ ಈ ದಾರುಣ ಹಂತಕರನ್ನು, ಅವರನ್ನು ಕಾಪಾಡುತ್ತಿರುವ ಹೀನ ರಾಕ್ಷಸರನ್ನು ನಂಬುವ ಹಾಗಿಲ್ಲ. ದಯವಿಟ್ಟು ತನಿಖೆ ವಿಳಂಬವಾಗಿ ಸಾಕ್ಷ್ಯಾಧಾರಗಳು ನಾಶವಾಗದಂತೆ ತುರ್ತು ಕ್ರಮ ತೆಗುದುಕೊಳ್ಳಿ. ಎಸ್‌ಐಟಿ ರಚಿಸಿ ಮತ್ತು ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ” ಎಂದು ಅವರು ಆಗ್ರಹಿಸಿದ್ದಾರೆ.
ಇದರೊಂದಿಗೆ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಸೃಷ್ಟಿಯಾಗಿದ್ದು, ಸರ್ಕಾರ ಸಿಟ್ ರಚನೆಗೆ ಒಪ್ಪುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಒಂದು ಪತ್ರ ಬಂದ ತಕ್ಷಣವೇ ಸಿಟ್ ರಚನೆಗೆ ಒಪ್ಪಿದ್ದ ಸರಕಾರ ಈಗೇಕೆ ಮೀನಮೇಷ ಎಣಿಸುತ್ತಿದೆ ಎಂದು ಇನ್ನೂ ಕೆಲವರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.
https://x.com/prakashraaj/status/1946233966991945922