Home ಬೆಂಗಳೂರು ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆಯೆನ್ನುವ ಆರೋಪ ಸುಳ್ಳು: ಬಿಎಂಪಿ ಸ್ಪಷ್ಟನೆ

ಪ್ರಕಾಶ್ ರಾಜ್ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆಯೆನ್ನುವ ಆರೋಪ ಸುಳ್ಳು: ಬಿಎಂಪಿ ಸ್ಪಷ್ಟನೆ

0

ಬೆಂಗಳೂರು: ಜಾರಿಯಲ್ಲಿರುವ ಸುಸಜ್ಜಿತ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ನಟ ಪ್ರಕಾಶ್ ರಾಜ್ ಮಾಡಿದ್ದ ಆರೋಪಕ್ಕೆ ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆ ಸ್ಪಷ್ಟನೆ ನೀಡಿದ್ದು, ಆರೋಪ ಸುಳ್ಳು ಎಂದು ತಿಳಿಸಿದೆ.

ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಜೂನ್ 16, 2026 ರಂದು ಮತದಾರರ ಪಟ್ಟಿಯ ದತ್ತಾಂಶವನ್ನು ಸ್ಥಗಿತಗೊಳಿಸಿದ (Data Freeze) ವೇಳೆಗೆ, ಶಾಂತಿನಗರ ವಿಧಾನಸಭಾ ಕ್ಷೇತ್ರದ (ಭಾಗ ಸಂಖ್ಯೆ 13) ಕ್ರಮ ಸಂಖ್ಯೆ 90 ರಲ್ಲಿ ಪ್ರಕಾಶ್ ರಾಜ್ ಅವರ ಹೆಸರು ಸಕ್ರಿಯವಾಗಿ ನೋಂದಾಯಿತಗೊಂಡಿದೆ.

ಮತದಾರರ ಪಟ್ಟಿ ಪರಿಶೀಲನೆ ವೇಳೆ ಬೂತ್ ಮಟ್ಟದ ಅಧಿಕಾರಿಗಳು (BLO) ಗಾರ್ಡನ್ ಅಪಾರ್ಟ್‌ಮೆಂಟ್ (ನಂ. 2*6) ವಿಳಾಸಕ್ಕೆ ತೆರಳಿದ್ದಾಗ ಪ್ರಕಾಶ್ ರಾಜ್ ಅವರು ಅಲ್ಲಿಂದ ಬೇರೆಡೆಗೆ ಕಾಯಂ ಆಗಿ ಸ್ಥಳಾಂತರಗೊಂಡಿರುವುದು ತಿಳಿದುಬಂದಿದೆ. ಅವರು ಕಳೆದ ನಾಲ್ಕು ವರ್ಷಗಳಿಂದ ಆ ವಿಳಾಸದಲ್ಲಿ ವಾಸಿಸುತ್ತಿಲ್ಲ ಎಂದು ಅಕ್ಕಪಕ್ಕದ ನಿವಾಸಿಗಳು, ಅಪಾರ್ಟ್‌ಮೆಂಟ್ ಮ್ಯಾನೇಜರ್ ಹಾಗೂ ಫ್ಲ್ಯಾಟ್ ಮಾಲೀಕರು ದೃಢಪಡಿಸಿದ್ದರು.

ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ, ಅಧಿಕಾರಿಗಳು ಸ್ಥಳ ತಪಾಸಣೆ ವರದಿ (ಮಹಜರು) ತಯಾರಿಸಿ ಅವರ ಮತದಾರರ ಸ್ಥಿತಿಯನ್ನು “ಸ್ಥಳಾಂತರಗೊಂಡಿದ್ದಾರೆ” (Shifted) ಎಂದು ಗುರುತಿಸಿದ್ದರು. ಆಗಸ್ಟ್ 11 ರಂದು ಅಪಾರ್ಟ್‌ಮೆಂಟ್ ಮ್ಯಾನೇಜರ್ ಕೂಡ ಫೋನ್ ಕರೆ ಮೂಲಕ ಇದೇ ಮಾಹಿತಿಯನ್ನು ದೃಢಪಡಿಸಿದ್ದರು.

ಬೆಳವಣಿಗೆಯ ನಂತರ, ಸ್ವತಃ ನಟ ಪ್ರಕಾಶ್ ರಾಜ್ ಅವರೇ ಫೋನ್ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಿ, ತಾವು ಪ್ರಸ್ತುತ ಆ ವಿಳಾಸದಲ್ಲಿ ವಾಸಿಸುತ್ತಿಲ್ಲವಾದರೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬೇರೊಂದು ಜಾಗದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಜಗದೀಶ್ ಜಿ. ಅವರು ಮಾತನಾಡಿ, “ಪ್ರಕಾಶ್ ರಾಜ್ ಅವರು ‘ಫಾರ್ಮ್-6’ ಭರ್ತಿ ಮಾಡುವ ಮೂಲಕ ತಮ್ಮ ಪ್ರಸ್ತುತ ವಾಸಸ್ಥಳದ ವಿಳಾಸಕ್ಕೆ ಮತದಾರರ ವಿವರಗಳನ್ನು ಸುಲಭವಾಗಿ ಮರು-ನೋಂದಾಯಿಸಿಕೊಳ್ಳಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಾಡಲಾಗಿರುವ ಆರೋಪಗಳನ್ನು ಪರಿಶೀಲಿಸಲಾಗಿದ್ದು, ಅವು ಸತ್ಯಕ್ಕೆ ದೂರವಾಗಿವೆ,” ಎಂದು ಸ್ಪಷ್ಟಪಡಿಸಿದ್ದಾರೆ.

You cannot copy content of this page

Exit mobile version