ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ 600ಕ್ಕೂ ಹೆಚ್ಚು ಭರವಸೆ ನೀಡಿದ್ದು, ಶೇ.10ರಷ್ಟು ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಅಭಿಯಾನದ ಮೂಲಕ ಇಂದು 50ನೇ ಪ್ರಶ್ನೆ ಕೇಳುತ್ತಿದ್ದು, ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಪೇಸಿಎಂ ಅಭಿಯಾನದ ಜತೆಗೆ ನಾವು SayCM ಆಂದೋಲನವನ್ನು ನಡೆಸಬೇಕಿದೆ. ಸರ್ಕಾರ ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ. ನೀವು ಈ ಪ್ರಣಾಳಿಕೆ ಮೂಲಕ ಜನರಿಂದ ಮತ ಹಾಕಿಸಿಕೊಂಡಿದ್ದೀರಿ. ಹೀಗಾಗಿ ನೀವು ಜನರಿಗೆ ಉತ್ತರಿಸಬೇಕು.
ಇನ್ನು ಕೆಲವು ದಿನಗಳ ಹಿಂದೆ ಹೊನ್ನಾವರ ನ್ಯಾಯಾಲಯದಲ್ಲಿ ಪರೇಶ್ ಮೇಸ್ತಾ ಅವರ ಸಾವಿನ ಪ್ರಕರಣದಲ್ಲಿ ಸಿಬಿಐ ತನ್ನ ವರದಿ ಸಲ್ಲಿಸಿದೆ. ಬಿಜೆಪಿ ಸುಳ್ಳಿನ ಕಾರ್ಖಾನೆ ಎಂಬುದು ಎಲ್ಲರಿಗೂ ಗೊತ್ತು. ಈ ಸುಳ್ಳಿನ ಕಾರ್ಖಾನೆಯಿಂದ ರಾಜ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಜತೆಗೆ ನಮ್ಮ ಯುವಕರ ಭವಿಷ್ಯ ನಿರ್ಣಾಮವಾಗುತ್ತಿದೆ. ಬಿಜೆಪಿಯವರು ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ತಮ್ಮ ರಾಜಕೀಯ ದುರುದ್ದೇಶಕ್ಕೆ ಯುವಕರನ್ನು ಬಿಜೆಪಿ ದಾಳಗಳಾಗಿ ಬಳಸಿಕೊಳ್ಳುತ್ತಿದೆ. ಆ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಯುವಕರಿಗೆ ಶಿಕ್ಷಣ, ಉದ್ಯೋಗ ನೀಡುವ ಬದಲು ಅವರ ಹೆಗಲಿಗೆ ಕೇಸರಿ ಶಾಲು ಹಾಕಿ ಅವರಿಗೆ ಧರ್ಮ ರಕ್ಷಕ ಹಾಗೂ ಗೋರಕ್ಷಕ ಎಂಬ ಬಿರುದು ನೀಡುತ್ತಿದ್ದಾರೆ. ಕಾಂಗ್ರೆಸ್ ಆರಂಭದಿಂದಲೂ ಬಿಜೆಪಿ ಯುವಕರ ದಾರಿ ತಪ್ಪಿಸುತ್ತಿದೆ, ಭವಿಷ್ಯದ ಜತೆ ಚೆಲ್ಲಾಟವಾಡಿ, ಅವರ ಭವಿಷ್ಯ ನಾಶ ಮಾಡುತ್ತಿದೆ ಎಂದು ಹೇಳುತ್ತಲೇ ಬಂದಿದ್ದೆ. ಆದರೆ ಇಂದು ಪರೇಶ್ ಮೇಸ್ತಾ ಅವರ ಸಾವಿನ ಬಗ್ಗೆ ಸಿಬಿಐ ವರದಿ ಬಂದಿದ್ದು, ಈ ಸಾವು ಹೇಗೆ ಸಂಭವಿಸಿದೆ, ಇದರಲ್ಲಿ ಯಾರು ಹೇಗೆ ರಾಜಕೀಯ ಮಾಡಿದ್ದಾರೆ ಎಂಬ ಅಂಶ ವರದಿಯಲ್ಲಿ ಸ್ಪಷ್ಟವಾಗಿದೆ. ಬಿಜೆಪಿ ಅಮಾಯಕರ ಜೀವನದ ಜತೆ ಚೆಲ್ಲಾಟವಾಡಿ, ಹೆಣದ ಮೇಲೆ ರಾಜಕೀಯ ಮಾಡಲು ಹಿಂಜರಿಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಮಹೇಂದ್ರ ಕುಮಾರ್ ಎಂಬುವವರು ರಾಜ್ಯ ಬಜರಂಗದಳದ ಅಧ್ಯಕ್ಷರಾಗಿದ್ದರು. ಅವರಿಗೆ ಬಿಜೆಪಿ ಹಾಗೂ ಆರ್ ಎಸ್ಎಸ್ ನವರು ಹೇಗೆ ಕೆಲಸ ಮಾಡುತ್ತಾರೆ ಎಂದು ಅರಿತು ಆ ವ್ಯವಸ್ಥೆಯಿಂದ ಹೊರ ಬಂದು ಬಹಿರಂಗ ವೇದಿಕೆಯಲ್ಲಿ ಭಾಷಣ ಮಾಡಿ, ‘ ಬಿಜೆಪಿ ಹಾಗೂ ಆರ್ ಎಸ್ಎಸ್ ಬಡ ಯುವಕರ ತಲೆ ಕೆಡಿಸಿ ಧರ್ಮ ರಕ್ಷಣೆಗೆ ಕಳುಹಿಸಿ ಅವರ ಸಾವಾದರೆ ರಾಜಕೀಯ ಫಸಲು ತೆಗೆಯುತ್ತಾರೆ. ಅವರು ರಕ್ತ ಹೀರುವ ಕ್ರಿಮಿಗಳು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮೇಸ್ತಾ ಸಾವಿನ ಪ್ರಕರಣದ ಸಿಬಿಐ ವರದಿಯಲ್ಲೂ ಇದೇ ಅಂಶವಿದೆ.
ಈ ವರದಿ ನಮ್ಮದಲ್ಲ. ಇದು ಸಿಬಿಐ ವರದಿ. ಸಿಬಿಐ ಇರುವುದು ಕೇಂದ್ರ ಸರ್ಕಾರ ಅದರಲ್ಲೂ ಅಮಿತ್ ಶಾ ಅವರ ನಿಯಂತ್ರಣದಲ್ಲಿ. ಆದರೂ ಬಿಜೆಪಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ. ಇದು ಬಿಜೆಪಿ ಯುವಕನ ಸಾವಿಗೆ ಧರ್ಮದ ಬಣ್ಣ ಕಟ್ಟಿ ಲಾಭ ಮಾಡುವ ಪ್ರಯತ್ನ ಮಾಡುತ್ತಿರುವುದು ಸ್ಪಷ್ಟವಾಗಿಲ್ಲವೇ?
ಶೋಭ ಕರಂದ್ಲಾಜೆ, ಅನಂತ ಕುಮಾರ್ ಹೆಗಡೆ, ಸಿ.ಟಿ ರವಿ, ನಳೀನ್ ಕುಮಾರ್ ಕಟೀಲ್ ಅವರಿಗೆ ಈ ಸಾವಿನ ಬಗ್ಗೆ 24 ಗಂಟೆಗಳಲ್ಲಿ ಇಷ್ಟೋಂದು ವಿವರಣೆ ಗೊತ್ತಾಗಿದ್ದು ಹೇಗೆ? ಆತನ ಕೈ ಕತ್ತರಿಸಲಾಗಿದೆ ಎಂದು ಹೇಳಿದ್ದರು, ಮೃತದೇಹ ಸಿಕ್ಕಾಗ ಕೈ ಇತ್ತಲ್ಲವೇ? ಆತನ ಕೈಯಲ್ಲಿ ಜೈ ಶ್ರೀರಾಮ ಎಂಬ ಟ್ಯಾಟೂ ಇತ್ತು ಎಂದು ಹೇಳಿದ್ದಾರೆ. ಆದರೆ ಪರೇಶ್ ಮೇಸ್ತಾ ಕೈಮೇಲೆ ಶಿವಾಜಿ ಟ್ಯಾಟೂ ಇತ್ತು. ಮೃತದೇಹ ಸಿಕ್ಕಾಗ ಆ ಟ್ಯಾಟೂ ಹಾಗೇ ಇದೆ. ಕುದಿಯುವ ಎಣ್ಣೆ ಹಾಕಿದ್ದಾರೆ, ಕಣ್ಣುಗುಡ್ಡೆ ಕೀಳಲಾಗಿದೆ ಎಂಬ ಮಾಹಿತಿಯನ್ನು ಇವರಿಗೆ ಕೊಟ್ಟವರು ಯಾರು? ಇವರು ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡುವುದಾಗಿ ಹೇಳುತ್ತಾರೆ. ಇದು ಕೊಲೆಯೇ ಆಗಿದ್ದು, ಸಾಕ್ಷ್ಯಾಧ್ಯಾರಗಳು, ಮಾಹಿತಿ ಇದ್ದರೆ ಈ ಬಿಜೆಪಿ ನಾಯಕರು ಕತ್ತೆ ಕಾಯುತ್ತಿದ್ದರೇ? ಸಿಬಿಐಗೆ ಸಾಕ್ಷಿ ಯಾಕೆ ನೀಡಲಿಲ್ಲ? ಅಮಿತ್ ಶಾ ಅವರ ಬಳಿ ನಿಯೋಗವನ್ನು ಕರೆದುಕೊಂಡು ಹೋಗಿದ್ದರಲ್ಲವೇ ಆಗಲೇ ಸಾಕ್ಷಿ ನೀಡಬಹುದಿತ್ತಲ್ಲವೇ? ಈಶ್ವರಪ್ಪ, ಅನಂತ ಕುಮಾರ್ ಹೆಗಡೆ ಬಾಯಿಗೆ ಬಂದಂತೆ ಮಾಡಿದ್ದರು. ಆಗ ಪರೇಶ್ ಮೇಸ್ತಾ ಮನೆಗೆ ದಂಡಿಯಾತ್ರೆ ಮಾಡಿದ್ದ ಬಿಜೆಪಿ ನಾಯಕರು ಈಗ ಹೋಗಿ ಕ್ಷಮೆ ಕೇಳಲಿ. ಇದು ಅವರಿಂದ ಸಾಧ್ಯವೇ?
ಹೆಣದ ಮೇಲೆ ರಾಜಕೀಯ ಮಾಡಲು ನಾಚಿಕೆಯಾಗುವುದಿಲ್ಲವೇ? ನೀವು ರಾಜಕೀಯಕ್ಕಾಗಿ ಯಾರನ್ನು ಬೇಕಾದರೂ ಬಲಿ ತೆಗೆದುಕೊಳ್ಳುತ್ತೀರಾ? ಯುವಕರ ಭವಿಷ್ಯಕ್ಕೆ ಕಿಮ್ಮತ್ತಿಲ್ಲವೇ? ನೀವೆಂತಾ ನಾಯಕರು? ನಿಮ್ಮ ಪ್ರತ್ರಿಕಾ ಹೇಳಿಕೆಯಲ್ಲಿ ಪರೇಶ್ ಹತ್ಯೆಯ ಬಗ್ಗೆ ಗ್ರಾಫಿಕ್ ಡೀಟೇಲ್ಸ್ ಎಂದು ಹೇಳಿದ್ದೀರಿ. ಈ ಮಾಹಿತಿಯನ್ನು ಸಿಬಿಐಗೆ ನೀಡಿಲ್ಲ ಏಕೆ? ಪಿಎಸ್ಐ ನೇಮಕಾತಿ ಹಗರಣದ ಬಗ್ಗೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾಹಿತಿ ಹೇಳಿದರೆ ನನಗೆ ನೊಟೀಸ್ ನೀಡಿದ್ದರು, ಪೇಸಿಎಂ ಪೋಸ್ಟರ್ ಅಂಟಿಸಿದವರಿಗೆ ಸಿಸಿಬಿ ಪ್ರಕರಣ. ಆದರೆ ಹಿಂದೂ ಕಾರ್ಯಕರ್ತ ಸಾವು ಹೇಗಾಗಿದೆ ಎಂದು ಗೊತ್ತಿರುವಾಗ ಅವರಿಗೆ ಸಾಕ್ಷಿ ನೀಡಿ ಎಂದು ಈ ಸರ್ಕಾರ ಕೇಳಿಲ್ಲ. ನಾನು ಅತ್ತಂಗೆ ಮಾಡುತ್ತೇನೆ, ನೀನು ಚಿವುಟಿದಂತೆ ಮಾಡುವ ಪ್ರಯತ್ನವೇ?
ಇದೇ ಕಾರಣಕ್ಕೆ ಮಹೇಂದ್ರ ಕುಮಾರ್ ಅವರು ನಿಮ್ಮನ್ನು ರಕ್ತ ಹೀರುವ ಕ್ರೀಮಿಗಳು ಎಂದು ಹೇಳಿದ್ದಾರೆ. ರಾಜ್ಯದ ಯುವ ಜನರಿಗೆ ಈ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ರಾಜ್ಯದ ಯುವಕರಲ್ಲಿ ಸಾಕಷ್ಟು ಪ್ರತಿಭೆ ಇದೆ, ನಿಮಗೆ ಒಳ್ಳೆಯ ಭವಿಷ್ಯ ಇದೆ. ನೀವು ಬಿಜೆಪಿ ಆರ್ ಎಸ್ಎಸ್ ಅಜೆಂಡಾಕ್ಕೆ ನಿಮ್ಮ ತಲೆ ಕೆಡೆಸಿಕೊಂಡು ಭವಿಷ್ಯ ನಾಶ ಮಾಡಿಕೊಳ್ಳಬೇಡಿ. ನಿಮ್ಮ ಭವಿಷ್ಯ ಉಜ್ವಲವಾದರೆ ರಾಜ್ಯ ಉದ್ದಾರವಾಗುತ್ತದೆ.
ನಿಮಗೆ ಕೇಸರಿ ಶಾಲು ಹಾಕಲು ಬಂದರೆ, ಬಿಜೆಪಿ ನಾಯಕರ ಮಕ್ಕಳು ಯಾಕೆ ಕೇಸರಿ ಶಾಲು ಹಾಕಿಕೊಂಡು ಧರ್ಮ ರಕ್ಷಣೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಕೇಳಿ. ಎಷ್ಟು ಜನ ಗೋಶಾಲೆಯಲ್ಲಿದ್ದಾರೆ? ಎಷ್ಟು ಮಂದಿ ಗೋ ಪೂಜೆ ಮಾಡಿ ಗೋಮೂತ್ರ ಕುಡಿಯುತ್ತಾರೆ? ಗೋರಕ್ಷಣೆಗೆ ಕೇವಲ ಬಡವರು, ಈಡಿಗರು, ಪರಿಶಿಷ್ಟರು, ಬಿಲ್ಲವ ಸಮುದಾಯದವರು ಬೇಕಾ? ಸಮೃದ್ಧ ಹಾಗೂ ಪ್ರಬುದ್ಧ ಕರ್ನಾಟಕ ಕಟ್ಟಬೇಕಾದರೆ, ಯುವಕರಿಗೆ ಉತ್ತಮ ಶಿಕ್,ಣ, ಉದ್ಯೋಗ ನೀಡಿ ಅವರ ಭವಿಷ್ಯ ಕಟ್ಟಬೇಕು. ಬಿಜೆಪಿಯವರಿಗೆ ಇವೆರಡನ್ನೂ ನಿಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗೋರಕ್ಷಣೆ ಧರ್ಮ ರಕ್ಷಣೆಗೆ ಕಳುಹಿಸುತ್ತಿದ್ದಾರೆ.
ಬಿಜೆಪಿ ಮಾತೆತ್ತಿದರೆ ಕಾಂಗ್ರೆಸ್ , ಧಮ್ಮು, ತಾಕತ್ತು ಎಂಬ ಮಾತನಾಡುತ್ತಾರೆ. ನಿಮಗೆ ತಾಕತ್ತೂ ಧಮ್ಮು, ಮಾನವೀಯತೆ ಇದ್ದರೆ ಪರೇಶ್ ಮೇಸ್ತಾ ಅವರ ಕುಟುಂಬಕ್ಕೆ ಕ್ಷಮೆ ಕೇಳಿ. ದಕ್ಷಿಣ ಕನ್ನಡ, ಯುವಕರ ಕೈಕಾಲಿಗೆ ಬೀಳಿ. ಶೋಭ ಕರಂದ್ಲಾಜೆ, ಈಶ್ವರಪ್ಪ, ಸಿ.ಟಿ ರವಿ, ನಳೀನ್ ಕುಮಾರ್ ಕಟೀಲ್, ಅನಂತ ಕುಮಾರ್ ಹೆಗಡೆ ಯಾರೆಲ್ಲ ಈ ರೀತಿ ಸುಳ್ಳು ಮಾಹಿತಿ ನೀಡಿ ಜನರ ದಾರಿತಪ್ಪಿಸಿ ರಾಜ್ಯಕ್ಕೆ ಬೆಂಕಿ ಹಚ್ಚಿದವರ ವಿರುದ್ದ ಪ್ರಕರಣ ದಾಖಲಿಸಲಿ. ಸಿಎಂ ಎಂದರೆ ಕಾಮನ್ ಮ್ಯಾನ್ ಎನ್ನುವ ಮುಖ್ಯಮಂತ್ರಿಗಳೇ ನೀವು ಪರೇಶ್ ಮೇಸ್ತಾ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೀರಾ? ಇವರ ಮೇಲೆ ಪ್ರಕರಣ ದಾಖಲಿಸುವ ತಾಕತ್ತು ಇದೆಯಾ?
ಸುಮೋಟೋ ಪ್ರಕರಣ ದಾಖಲಿಸಲು ನಾವು ಸರ್ಕಾರಕ್ಕೆ 15 ದಿನ ಕಾಲಾವಕಾಶ ನೀಡುತ್ತೇವೆ. ಇಲ್ಲದಿದ್ದರೆ ನಾವು ಇವರು ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ ಎಂದು ಸಿಬಿಐಗೆ ದೂರು ನೀಡುತ್ತೇವೆ. ನೀವು ಈ ಮೂರ್ಖತನಕ್ಕೆ ಅಂತ್ಯವಾಡದಿದ್ದರೆ ಕಾಂಗ್ರೆಸ್ ಪಕ್ಷ ಅಂತ್ಯ ಹಾಕಲಿದೆ. ನಾವು ನಮ್ಮ ಯುವಕರ ಭವಿಷ್ಯ ಹಾಳಾಗಲು ಬಿಡುವುದಿಲ್ಲ. ನೀವು 15 ದಿನಗಳ ಒಳಗೆ ಸುಮೋಟೋ ಪ್ರಕರಣ ದಾಖಲಿಸಿ ಬಂಧಿಸದಿದ್ದರೆ ನಾವು ದೂರು ದಾಖಲಿಸುತ್ತೇವೆ.
ಪ್ರಶ್ನೋತ್ತರ:
ಕಾಂಗ್ರೆಸ್ ಸಾಕ್ಷಿ ನಾಶ ಮಾಡಿದ್ದಕ್ಕೆ ಸಿಬಿಐ ಈ ರೀತಿ ವರದಿ ನೀಡಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಿಬಿಐ ಯಾರ ಕೇಳಗೆ ಇದ್ದಾರೆ? ಅವರ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಈಗಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಅಸಮರ್ಥರು. ಕಳೆದ ಮೂರ್ನಾಲ್ಕು ವರ್ಷದಿಂದ ಇವರೇ ಅಧಿಕಾರದಲ್ಲಿದ್ದರೂ ಸಾಕ್ಷಿ ನೀಡಲು ಆಗಿಲ್ಲ. ಸಿಬಿಐ ವರದಿಯಲ್ಲಿ ಪ್ಯಾರಾ 16.21ನಿಂದ 16.23ವರೆಗೆ ನೋಡಿ ಎಲ್ಲ ಸಾಕ್ಷ್ಯಾಧಾರ ಎಲ್ಲಿಂದ ಕಲೆ ಹಾಕಿದ್ದಾರೆ ಎಲ್ಲದರ ವಿಚಾರಣೆ ಮಾಡಿದ ನಂತರ ಈ ವರಿದಿ ನೀಡಲಾಗಿದೆ ಎಂದು ತಿಳಿಸಲಾಗಿದೆ’ ಎಂದರು.
ಈ ಪ್ರಕರಣ ಮರುತನಿಖೆ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ‘ಈ ಸಿಬಿಐ ವರದಿಯಲ್ಲಿ ಯಾವ ಲೋಪವಿದೆ? ಯಾವ ಆಧಾರದ ಮೇಲೆ ಮರುತನಿಖೆಗೆ ನೀಡುತ್ತಾರೆ? ಈ ವರದಿ ಸರ್ಕಾರದ ಬಳಿ ಇಲ್ಲವೇ? ಅವರು ಪತ್ರಿಕಾಗೋಷ್ಠಿ ಕರೆದು ಇದರ ಲೋಪಗಳನ್ನು ಹೇಳಲಿ. ನನ್ನ ಪ್ರಶ್ನೆ ಬಿಜೆಪಿ ನಾಯಕರಿಗೆ ಈ ಹತ್ಯೆ ಬಗ್ಗೆ ಮಾಹಿತಿ ಸಿಕ್ಕಿದ್ದು ಹೇಗೆ? ಅವುಗಳನ್ನು ಬಹರಂಗವಾಗಿ ಇಟ್ಟು, ಅವುಗಳನ್ನು ತನಿಖಾ ಸಂಸ್ಥೆಗೆ ನೀಡಿ ನಂತರ ಮರುತನಿಖೆಗೆ ಆಗ್ರಹಿಸಲಿ. ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುವುದೇ ನಿಮ್ಮ ಸಂಕಲ್ಪ ಯಾತ್ರೆಯೇ?’ ಎಂದು ಪ್ರಶ್ನಿಸಿದರು.
ಪೇಸಿಎಂ ಅಭಿಯಾನದಲ್ಲಿ ಸಿಸಿಬಿ ನೊಟೀಸ್ ಬಗ್ಗೆ ಕೇಳಿದಾಗ, ‘ಆ ನೊಟೀಸ್ ಗೆ ಲಿಖಿತ ಉತ್ತರ ನೀಡಬಹುದು. ದುರದೈವ ಎಂದರೆ ಪೇಸಿಎಂ ಅಭಿಯಾನ ಮಾಡಿದ್ದು ಯಾರು? ಪೋಸ್ಟರ್ ಅಂಟಿಸಿದವರು ಯಾರು ಎಂದು ಗೊತ್ತಿದೆ. ಆದರೂ ಇದರ ತನಿಖೆಯನ್ನು ಸಿಸಿಬಿಗೆ ನೀಡಿದ್ದಾರೆ. ಆದರೆ ಪಿಎಸ್ಐ ಹಗರಣ, ಕೆಪಿಟಿಸಿಎಲ್, ಪಿಡಬ್ಲ್ಯೂಡಿ ಅಕ್ರಮ ತನಿಖೆ ಬಗ್ಗೆ ನ್ಯಾಯಾಂಗ ತನಿಖೆ ಮಾಡುತ್ತಿಲ್ಲ. ನಮ್ಮ ಸರ್ಕಾರದ ಕಾರ್ಯವೈಖರಿ ಹಾಗೂ ಆದ್ಯತೆಗಳು ಇದರಿಂದ ಸ್ಪಷ್ಟವಾಗುತ್ತದೆ’ ಎಂದರು.