Home ಅಂಕಣ ಸಂಸತ್ತಿನ ಪೂರ್ವಸೂರಿಗಳು – 31 : ಭೂಪೇಶ್ ಗುಪ್ತಾ : ನರೇಂದ್ರ ಮೋದಿ ಈಗ ಓದಿಕೊಳ್ಳಬೇಕಾದ...

ಸಂಸತ್ತಿನ ಪೂರ್ವಸೂರಿಗಳು – 31 : ಭೂಪೇಶ್ ಗುಪ್ತಾ : ನರೇಂದ್ರ ಮೋದಿ ಈಗ ಓದಿಕೊಳ್ಳಬೇಕಾದ “ಸ್ಟೋರ್ಮಿ ಪೆಟ್ರೆಲ್”

0

ಈ ಲೇಖನ ಸರಣಿಯು ‘ದಿ ಅರ್ಲಿ ಪಾರ್ಲಿಮೆಂಟರಿಯನ್ಸ್’ ಎಂಬ ಶೀರ್ಷಿಕೆಯ ‘ದಿ ವೈರ್’ ಪತ್ರಿಕೆಯ ಸರಣಿಯ ಭಾಗವಾಗಿದೆ. ಸ್ವಾತಂತ್ರ್ಯಾ ನಂತರದ ಸಂಸದರ ಜೀವನ ಮತ್ತು ಕೆಲಸವನ್ನು ಈ ಸರಣಿಯು ಉಲ್ಲೇಖಿಸುತ್ತದೆ. ಇದು ಅದರ ಮೂವತ್ತೊಂದನೇ ಲೇಖನ

ಗುಪ್ತಾ ಅವರು ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಮರ್ಥ ಸಂಸದ, ಅದ್ಭುತ ಮಾತುಗಾರ ಮತ್ತು ರಾಜ್ಯಸಭೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಸಂಸದರಾಗಿದ್ದರು. ಅವರು ಮೇಲ್ಮನೆಯಲ್ಲಿ 29 ವರ್ಷಗಳಿಗೂ ಹೆಚ್ಚು ಕಾಲ ಸದಸ್ಯರಾಗಿದ್ದರು.

ಡೊನಾಲ್ಡ್‌ ಟ್ರಂಪ್ ಜೊತೆಗಿನ ಸ್ನೇಹದ ಬಗ್ಗೆ ಮುನ್ನೆಚ್ಚರಿಕೆ ನೀಡದ ತನ್ನ ಸಲಹೆಗಾರರ ಬಗ್ಗೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಏನಾದರೂ ಅಸಮಾಧಾನವಿದ್ದರೆ, ಅವರು ಓದಿಕೊಳ್ಳಲೇಬೇಕಾದ ಒಬ್ಬ ಕಮ್ಯುನಿಸ್ಟ್‌ ವ್ಯಕ್ತಿಯಿದ್ದಾರೆ.

ಕಳೆದ ಶತಮಾನದಲ್ಲಿ, ದಶಕಗಳ ಹಿಂದೆಯೇ ಸಂಸತ್ತಿನಲ್ಲಿ ಮಾತನಾಡುತ್ತಾ ಭಾರತದ ಕಮ್ಯುನಿಸ್ಟ್‌ ಚಳುವಳಿಯ ಪ್ರಮುಖ ನಾಯಕರಲ್ಲಿ ಪ್ರಮುಖರಾದ ಭೂಪೇಶ್‌ ಗುಪ್ತಾ ಹೇಳುವ ಮಾತು ಹೀಗಿದೆ. “ಭಾರತಕ್ಕೆ ಹೊಡೆತ, ನಿರ್ಬಂಧಗಳು, ಬೆದರಿಕೆ-ಗದರಿಕೆಗಳ ಹೊರತಾಗಿ, ದಕ್ಷಿಣ ಏಷ್ಯಾದ ಈ ಪ್ರದೇಶದಲ್ಲಿ ತಮ್ಮ ಪ್ರಾಬಲ್ಯ ಸಾಧ್ಯವಿಲ್ಲವೆಂದು ಅಮೆರಿಕಾದ ಸಾಮ್ರಾಜ್ಯಶಾಹಿಗಳಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದಲೇ ಅವರು ನಮ್ಮನ್ನು ಅವರ ವಿಶೇಷ ಗುರಿಯಾಗಿಸಿಕೊಂಡರು. ಮತ್ತು ಆ ಕಾರಣಕ್ಕಾಗಿಯೇ ಅವರು ಮತ್ತೊಮ್ಮೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದಾರೆ.”

ಗುಪ್ತಾ ಅವರು ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸಮರ್ಥ ಸಂಸದ, ಅದ್ಭುತ ಮಾತುಗಾರ ಮತ್ತು ರಾಜ್ಯಸಭೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಸಂಸದರಾಗಿದ್ದರು. ಅವರು ಮೇಲ್ಮನೆಯಲ್ಲಿ 29 ವರ್ಷಗಳಿಗೂ ಹೆಚ್ಚು ಕಾಲ ಸದಸ್ಯರಾಗಿದ್ದರು. ಅವರನ್ನು ಒಬ್ಬ ವ್ಯಕ್ತಿ ಎಂಬ ನೆಲೆಗಿಂತ ಒಂದು ಸಂಸ್ಥೆ ಎಂಬಂತೆ ಪರಿಗಣಿಸಲಾಗಿತ್ತು. ಎಸ್.‌ಎ ಡಾಂಗೆ, ಏ.ಕೆ ಗೋಪಾಲನ್‌, ಹಿರೇನ್‌ ಮುಖರ್ಜಿ ಮತ್ತು ಇಂದ್ರಜಿತ್‌ ಗುಪ್ತಾ ಮೊದಲಾದ ದಿಗ್ಗಜರನ್ನು ಕೂಡ ಬದಿಗೆ ಸರಿಸುವಷ್ಟು ಅವರು ಪ್ರಭಾವಶಾಲಿಯಾಗಿದ್ದರು.

1914 ಅಕ್ಟೋಬರ್ 20 ರಂದು ಮೈಮೆನ್ಸಿಂಗ್ ಜಿಲ್ಲೆಯ (ಈಗ ಬಾಂಗ್ಲಾದೇಶ) ಇಟ್ನಾದಲ್ಲಿ ಜನಿಸಿದ ಗುಪ್ತಾ, ಕಲ್ಕತ್ತಾ ವಿಶ್ವವಿದ್ಯಾಲಯದ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಕಟಿಬದ್ಧರಾಗಿದ್ದ ಅವರು ಅನುಶೀಲನ್‌ ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಸೇರಿಕೊಳ್ಳುತ್ತಾರೆ. ನಾಗರಿಕ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದ ಅವರನ್ನು 1930, 1931 ಮತ್ತು 1933 ವರ್ಷಗಳಲ್ಲಿ ಹಲವು ಬಾರಿ ಬಂಧಿಸಲಾಗಿತ್ತು. 1937 ರವರೆಗೆ ಅವರು ಬಂಧನದಲ್ಲಿ ಕಳೆದಿದ್ದರು. ಗುಪ್ತಾ ಅವರು ಬೆರ್ಹಾಂಪೊರ್‌ ಜೈಲಿನಿಂದಲೇ ಕಲ್ಕತ್ತಾ ವಿಶ್ವವಿದ್ಯಾಲಯದ IA ಮತ್ತು BA ಪರೀಕ್ಷೆಗಳನ್ನು ಬರೆದು ತೇರ್ಗಡೆಗೊಳ್ಳುತ್ತಾರೆ. ಅದರ ನಂತರ ಕಾನೂನು ವ್ಯಾಸಂಗಕ್ಕೆಂದು ಇಂಗ್ಲೆಂಡಿಗೆ ತೆರಳುತ್ತಾರೆ.

ಗುಪ್ತಾ ಅವರು ಲಂಡನ್‌ ವಿಶ್ವವಿದ್ಯಾಲಯದಿಂದ ತಮ್ಮ ಬ್ಯಾರಿಸ್ಟರ್‌ ಪದವಿ ಪಡೆದುಕೊಳ್ಳುತ್ತಾರೆ. ಲಂಡನ್‌ನ ಮಿಡಲ್‌ ಟೆಂಪಲ್‌ನಿಂದ ವಕೀಲರ ಸಂಘಕ್ಕೆ ಕರೆ ಬರುತ್ತದೆ. ಇಂಗ್ಲೆಂಡಿನಲ್ಲಿ ಅವರು ತಮ್ಮ ಬದುಕನ್ನು ಆಪ್ತ ಗೆಳೆಯರಾಗಿದ್ದ ಫಿರೋಜ್‌ ಗಾಂಧಿ ಮತ್ತು ಇಂದಿರಾ ಗಾಂಧಿ ಅವರುಗಳ ಜೊತೆಗೆ ಕಳೆದಿದ್ದರು.

ಕಮ್ಯುನಿಸ್ಟ್
ತಮ್ಮ ಗೆಳೆಯರು ಮತ್ತು ಸಹೋದ್ಯೋಗಿಗಳಿಂದ ಭೂಪೇಶ್‌ದಾ ಎಂದು ಕರೆಸಿಕೊಳ್ಳುತ್ತಿದ್ದ ಗುಪ್ತಾ ಅವರು ತಮ್ಮ ವ್ಯಾಸಂಗವನ್ನು ಪೂರ್ಣಗೊಳಿಸಿ 1941 ರಲ್ಲಿ ಭಾರತಕ್ಕೆ ಮರಳುತ್ತಾರೆ. ಆ ನಂತರ ಅವರು ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಕ್ಕೆ ಸಂಬಂಧಿಸಿದ ಕೆಲಸಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ. 1948 ರಲ್ಲಿ ಪಕ್ಷ ನಿಷೇಧಕ್ಕೊಳಪ್ಪಟ್ಟಾಗ ಕಲ್ಕತ್ತಾದಲ್ಲಿ ಭೂಗತರಾಗಿ ಬದುಕುತ್ತಾರೆ. 1951 ರಲ್ಲಿ ಬಂಧಿತರಾಗುವ ಅವರನ್ನು 1952 ಏಪ್ರಿಲ್‌ ತಿಂಗಳವರೆಗೆ ಬಂಧನದಲ್ಲಿಡಲಾಗುತ್ತದೆ. 1947 ರಲ್ಲಿ ಅವರು ಪಶ್ಚಿಮ ಬಂಗಾಳ ಪ್ರಾಂತೀಯ ಸಮಿತಿಗೆ ಆಯ್ಕೆಯಾಗಿದ್ದರು. 1951 ರಲ್ಲಿ ಪಕ್ಷದ ಬಂಗಾಳಿ ದಿನಪತ್ರಿಕೆಯಾಗಿದ್ದ ಸ್ವಾಧೀನತಾದ ಸಂಪಾದಕೀಯ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ.

1953 ರಲ್ಲಿ ಗುಪ್ತಾ ಅವರು ಸಿಪಿಐ ಪಕ್ಷದ ಕೇಂದ್ರ ಸಮಿತಿಗೆ ಆಯ್ಕೆಯಾಗುತ್ತಾರೆ. 1981 ರಲ್ಲಿ ನಿಧನರಾಗುವ ಹೊತ್ತಿಗೆ ಅವರು ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸಿಪಿಐ ರಾಷ್ಟ್ರೀಯ ಮಂಡಳಿಯ ಕಾರ್ಯದರ್ಶಿಯಾಗಿದ್ದರು. 1964 ರಲ್ಲಿ ಕಮ್ಯುನಿಸ್ಟ್‌ ಪಕ್ಷ ವಿಭಜನೆಯಾದಾಗ, ಅದನ್ನು ತಡೆಯಲು ಗುಪ್ತಾ ಅವರು ತಮ್ಮ ಕೈ ಮೀರಿ ಪ್ರಯತ್ನ ಪಡುತ್ತಾರಾದರೂ ಅದರಲ್ಲಿ ವಿಫಲರಾಗುತ್ತಾರೆ.

ದೇಶದ ಹೊರಗಿನ, ಅಂತರಾಷ್ಟ್ರೀಯ ಕಮ್ಯುನಿಸ್ಟ್‌ ಚಳುವಳಿಯಲ್ಲಿ ಅವರು ಬಹಳ ಜನಪ್ರಿಯತೆ ಗಳಿಸಿದ್ದರು. ಕಮ್ಯುನಿಸ್ಟ್ ಚಳುವಳಿಯ ಎಲ್ಲಾ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು. 1957, 1960 ಮತ್ತು 1969 ರಲ್ಲಿ ನಡೆದ ವಿಶ್ವ ಕಮ್ಯುನಿಸ್ಟ್‌ ಚಳುವಳಿಯ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಿಪಿಐ ನಿಯೋಗದ ಸದಸ್ಯರಾಗಿದ್ದರು. 1959 ರಲ್ಲಿ ಸಿಪಿಐ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿ ಅಜಯ್‌ ಘೋಷ್‌ ನೇತೃತ್ವದಲ್ಲಿ ಆಗಿನ ಪೀಕಿಂಗಿಗೆ ಭೇಟಿ ನೀಡಿ ಮಾವೋ ತ್ಸೆ ತುಂಗ್‌ ಅವರನ್ನು ಭೇಟಿ ಮಾಡಿದ ಸಿಪಿಐ ನಿಯೋಗದ ಭಾಗವಾಗಿದ್ದರು.

ಸಂಸದರಾಗಿ
ಗುಪ್ತಾ ಅವರನ್ನು ಅದಮ್ಯ ಮತ್ತು ಅವಿಶ್ರಾಂತ ಸಂಸದೀಯ ಪಟು ಎಂದೇ ಗುರುತಿಸಲಾಗಿತ್ತು. ದುಡಿಯುವ ವರ್ಗದ ಬಗ್ಗೆ ಹಠಮಾರಿತನದ ಹೋರಾಟಗಾರರಾಗಿದ್ದರು. ಆ ವರ್ಗದ ಕುಂದು ಕೊರತೆಗಳನ್ನು, ಬಯಕೆ ಮತ್ತು ಆಕಾಂಕ್ಷೆಗಳನ್ನು ಸಂಸತ್ತನಲ್ಲಿ ಮಂಡಿಸುವುದು ಅವರ ಧ್ಯೇಯವಾಗಿತ್ತು. ತನ್ನ ರಾಜಕೀಯ ವಿರೋಧಿಗಳಿಂದಲೂ ಗೌರವಿಸಲ್ಪಡುತ್ತಿದ್ದ ಅವರು ಭಾರತದ ಸಂಸದೀಯ ಪ್ರಜಾಪ್ರಭುತ್ವದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಂಡವರು.

ಗುಪ್ತಾ ಅವರು ಸಂಸತ್ತಿನಲ್ಲಿ ಹಲವಾರು ರಾಷ್ಟ್ರ ಮಟ್ಟದ ವಿವಾದಗಳ ಬಗ್ಗೆ ಗಮನ ಸೆಳೆದಿದ್ದರು. ಸ್ವತಂತ್ರ ಭಾರತದ ಮೊದಲ ಹಣಕಾಸು ಹಗರಣವಾದ ಶೇರು ಮಾರುಕಟ್ಟೆ ದಲ್ಲಾಳಿ ಹರಿದಾಸ್‌ ಮುಂದ್ರಾ ಹಗರಣಕ್ಕೆ ಸಂಬಂಧಿಸಿದ ವಿಷಯ ಮತ್ತು ಖ್ಯಾತ ಪತ್ರಕರ್ತ ನಿಖಿಲ್‌ ಚಕ್ರವರ್ತಿ ತನ್ನ ಲೇಖನದಲ್ಲಿ ಬಹಿರಂಗಪಡಿಸಿದ ವಿಷಯಗಳನ್ನು ಎತ್ತಿ ತೋರಿಸಿ ಪ್ರಧಾನಿ ನೆಹರೂ ಅವರ ವಿಶೇಷ ಸಹಾಯಕರಾಗಿದ್ದ ಎಂ.ಓ. ಮಥಾಯಿ ಅವರನ್ನು ಹುದ್ದೆ ತೊರೆಯುವಂತೆ ಮಾಡಿದ್ದು ಅವುಗಳಲ್ಲಿ ಕೆಲವು ಮಾತ್ರ.

ದೃಢತೆ ಅವರ ಲಕ್ಷಣವಾಗಿದ್ದರೆ, ತೀಕ್ಷ್ಣತೆ ಅವರ ಸ್ವಭಾವವಾಗಿತ್ತು. ಮಧ್ಯಪ್ರವೇಶ ಮಾಡುವ ಅವಕಾಶಗಳನ್ನು ಅವರು ಕಳೆದುಕೊಳ್ಳುತ್ತಿದ್ದದ್ದು ಬಹಳ ಅಪರೂಪ. ಯಾವುದೇ ವಿಷಯವಿದ್ದರೂ ಅದನ್ನು ಸವಾಲು ಮಾಡಿ ಚರ್ಚಿಸದೆ ಮುಂದಕ್ಕೆ ಹೋಗಲು ಬಿಡುತ್ತಿರಲಿಲ್ಲ. ಹಾಗೆಯೇ ಸಮರ್ಥಿಸಿಕೊಳ್ಳಬೇಕಾದ ಕಡೆಗಳಲ್ಲಿ ಕೂಡ ಅವರು ಎಡವುತ್ತಿರಲಿಲ್ಲ.

1954 ರಲ್ಲಿ ರಾಜ್ಯಸಭೆಯಲ್ಲಿ ಮಾತನಾಡುತ್ತಿದ್ದ ನೆಹರೂ “ಯಾವುದೇ ವಿದೇಶಿ ಸೇನೆ ಭಾರತದ ಮೂಲಕ ಹಾದು ಹೋಗಲು ಅಥವಾ ಹಾರಿ ಹೋಗಲು ಅವಕಾಶ ನೀಡಬಾರದೆಂಬುದು ಕಳೆದ ಆರು ವರ್ಷಗಳಿಂದ ಸರಕಾರ ಪಾಲಿಸಿಕೊಂಡು ಬರುತ್ತಿರುವ ನೀತಿ.” ಏಂದು ಹೇಳುತ್ತಾರೆ. ಆಗ ಮಧ್ಯಪ್ರವೇಶ ಮಾಡುವ ಗುಪ್ತಾ ಅವರು 1954 ಏಪ್ರಿಲ್‌ 24 ರಂದು ಫ್ರೆಂಚ್‌ ಸೇನಾ ಪಡೆಯನ್ನು ಇಂಡೋಚೀನಾಗೆ ಕರೆದೊಯ್ಯುತ್ತಿದ್ದ ಅಮೇರಿಕಾದ ಗ್ಲೋಬ್‌ಮಾಸ್ಟರ್‌ ವಿಮಾನವು ಡಮ್‌ ಡಮ್‌ ವಿಮಾನ ನಿಲ್ದಾಣದಲ್ಲಿ ಇಳಿದು ಇಂಧನ ತುಂಬಿಕೊಂಡು ಹೋದ ಪತ್ರಿಕಾ ವರದಿಯನ್ನು ಸದನದ ಗಮನಕ್ಕೆ ತರುತ್ತಾರೆ. 1954 ಏಪ್ರಿಲ್‌ 27 ರಂದು ಫ್ರೆಂಚ್‌ ವಾಯುಪಡೆಗೆ ಸೇರಿದ ಸ್ಕೈ ಮಾಸ್ಟರ್‌ ಡಮ್‌ ಡಮ್‌ ವಿಮಾನ ನಿಲ್ದಾಣದಲ್ಲಿ ಇಳಿದು ಹೋದ ಮತ್ತೊಂದು ವರದಿಯನ್ನೂ ಅವರು ಉಲ್ಲೇಖಿಸುತ್ತಾರೆ. ಈ ವರದಿಗಳನ್ನು ಭಾರತ ಸರಕಾರ ನಿರಾಕರಿಸಿಲ್ಲ ಎಂದು ಕೂಡ ಅವರು ಹೇಳಿಕೊಂಡಿದ್ದರು. (ವಿಯೆಟ್ನಾಮಿನ ಫ್ರೆಂಚ್‌ ಯುದ್ಧ ಅಥವಾ ಮೊದಲ ಇಂಡೋ ಚೀನಾ ಯುದ್ಧದಲ್ಲಿ ಈ ವಿಮಾನಗಳು ಭಾಗಿಯಾಗಿದ್ದವೆಂದು ಶಂಕಿಸಲಾಗಿದೆ)

ವಿದೇಶಾಂಗ ನೀತಿ, ರಾಷ್ಟ್ರಪತಿಗಳ ಭಾಷಣ, ಹಣಕಾಸು ಮಸೂದೆ ಮತ್ತು ವಿನಿಯೋಗ ಮಸೂದೆಯ ಕುರಿತು ಅವರು ಬಹಳ ಆಳವಾದ ವಾದಗಳನ್ನು ಮಂಡಿಸಿದ್ದರು. ಅದರಲ್ಲಿ ಅವರು ಮುಖ್ಯ ಅಂಶಗಳನ್ನು ತೆಳು ಹಾಸ್ಯ ಮತ್ತು ಕಟು ವ್ಯಂಗ್ಯಗಳ ಮೂಲಕ ಮಂಡಿಸಿದ್ದರು. ವಾಸ್ತವ ಸಂಗತಿಗಳು, ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಸದಾ ಸಿದ್ದವಾಗಿಟ್ಟುಕೊಂಡು ವಾದ ಮಾಡುವ ಅವರಂತಹ ಇನ್ನೊಬ್ಬ ಸಂಸದನನ್ನು ಯಾವುದೇ ಪಕ್ಷದಲ್ಲಿ ಹುಡುಲು ಸಾಧ್ಯವಿಲ್ಲ.

ರಾಜ್ಯಸಭೆಯ ಅವರ ಭಾಷಣಗಳು ಕೇವಲ ಅವರ ಭಾಷಣ ಕೌಶಲ್ಯಕ್ಕೆ ಮಾತ್ರವಲ್ಲದೆ ಅವರ ಕಟು ವಿಮರ್ಶೆಗಳಿಗೂ ಸಾಕ್ಷಿಯಾಗಿದ್ದವು. ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ದೂರುಗಳ ಬಗ್ಗೆ ಕೆ.ಸಿ. ಪಂತ್ ಹಗುರ ಧಾಟಿಯಲ್ಲಿ ಮಾತನಾಡಿದ್ದನ್ನು ಖಂಡಿಸುವ ಗುಪ್ತಾ ಈ ರೀತಿ ಹೇಳುತ್ತಾರೆ. “ನನಗೆ ಹಾಸ್ಯ ಇಷ್ಟ. ಹಾಗಂತ ಅದು ನನ್ನ ಕುತ್ತಿಗೆಯ ಬೆಲೆಗೆ ಅಲ್ಲ, ನನ್ನ ಬಳಿಯಿರುವ ಅಲ್ಪ ಸ್ವಲ್ಪ ಸೊತ್ತಿನ ಬೆಲೆಗೆ ಅಲ್ಲ. ಹಾಸ್ಯ ಇಷ್ಟ. ಆದರೆ ಅದು ಕಳ್ಳ ಕಾಕರರ ಕೃಪೆಯಿಂದ ಅಲ್ಲ.”

“ಗುಪ್ತಾರಿಗೆ ತನ್ನ ಸೊತ್ತಿನ ಮೇಲೆ ಕಾಳಜಿ ಇದೆಯೆಂದು ತಿಳಿದು ನನಗೆ ಸಂತೋಷವಾಗಿದೆ.” ಎಂದು ಪಂತ್ ಉತ್ತರಿಸುತ್ತಾರೆ.

ಅದಕ್ಕೆ ಗುಪ್ತಾ ಅವರ ಉತ್ತರ ಹೀಗಿತ್ತು: “ಹೌದು. ಖಂಡಿತಾ ನನ್ನ ಬಳಿ ಆಸ್ತಿ ಇದೆ. ನನ್ನ ಬಳಿ ಒಂದು ಟೈಪ್‌ರೈಟರ್ ಇದೆ. ನನ್ನ ಬಳಿಯಿರುವ ಅತ್ಯಂತ ದೊಡ್ಡ ಸೊತ್ತು ಇದುವೇ.”

ಗುಪ್ತಾ ಅವರು ಅವಿವಾಹಿತರೆನ್ನುವುದು ಸದನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಲಘು ಚರ್ಚೆಗೆ ಕಾರಣವಾಗಿತ್ತು. ಸಂಸದರ ಸಂಬಳ, ಭತ್ಯೆಗಳು ಮತ್ತು ಪಿಂಚಣಿ ಕುರಿತ ಚರ್ಚೆಯ ಸಮಯದಲ್ಲಿ, ಕುಮಾರಿ ಸರೋಜ್ ಖಪಾರ್ಡೆ ಅವರು ಗುಪ್ತಾ ಮತ್ತು ತನ್ನಂತಹ ಏಕಾಂಗಿಗಳಿಗೆ ರೈಲು ಪ್ರಯಾಣದಲ್ಲಿ “ಸಂಗಾತಿ ಪಾಸ್‌” ನೀಡುವಂತೆ ಒತ್ತಾಯಿಸಿದ್ದರು.

ಅದಕ್ಕೆ ಗುಪ್ತಾ ಅವರು “ನಿಮ್ಮ ಬಗ್ಗೆ ಸಹಾನುಭೂತಿ ಇದೆ. ಆದರೆ ನನಗೆ ಮಾತ್ರ ಯಾವುದೇ ರೀತಿಯ ಸಂಗಾತಿ ಇಲ್ಲ.” ಎಂದು ಹೇಳುತ್ತಾರೆ.

ಭಾಯಿ ಮಹಾವೀರ್‌ ಅವರು “ಗೌರವಾನ್ವಿತ ಸದಸ್ಯರಿಬ್ಬರೂ ಪರಸ್ಪರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.” ಎಂದು ಹೇಳಿ ಈ ಮಾತುಕತೆಗೆ ತೆರೆಯೆಳೆಯುತ್ತಾರೆ.

ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಗುಪ್ತಾ ಅವರು ತಮ್ಮ ನಿಲುವಿಗೆ ಕಟಿಬದ್ಧರಾಗಿದ್ದರು. 1962 ರ ಚೀನಾ ಆಕ್ರಮಣದ ಕಾಲದಲ್ಲಿ ಭಾರತ ರಕ್ಷಣಾ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಗುಪ್ತಾ ಅವರು ಹೀಗೆ ಹೇಳುತ್ತಾರೆ. “ದೇಶದ ಭದ್ರತೆಯನ್ನು ವಿರೋಧಿಸುವ ಅಥವಾ ಈಗ ನಡೆದ ಆಕ್ರಮಣದ ಬಗ್ಗೆ ಸಹಾನುಭೂತಿ ಹೊಂದಿರುವ ಒಬ್ಬನೇ ಒಬ್ಬ ಕಮ್ಯುನಿಸ್ಟ್‌ ಅಥವಾ ಟ್ರೇಡ್‌ ಯೂನಿಯನ್‌ವಾದಿ ಕೂಡ ನನ್ನ ಪರಿಚಯದಲ್ಲಿ ಇಲ್ಲ ಎಂದು ಈ ಸದನದಲ್ಲಿ ನಿಂತುಕೊಂಡು ನಾನು ಘೋಷಿಸಿಬಲ್ಲೆ. ಯಾರಾದರೂ ಆ ರೀತಿ ವರ್ತಿಸುವವರಿದ್ದರೆ ಖಂಡಿತಾ ಅವರು ದೇಶಭಕ್ತಿಯ ವಿಚಾರದಲ್ಲಿ ಯಾವುದೇ ರಾಜಿಯಿಲ್ಲದ ನಮ್ಮ ಸಿದ್ಧಾಂತದ ವಿರುದ್ಧವಿದ್ದಾರೆ ಎಂದೇ ಅರ್ಥ. ಅಂತವರು ನಾವು ಕಮ್ಯುನಿಸ್ಟ್‌ ಪಕ್ಷ ಮತ್ತು ಚಳುವಳಿ ಎಂದು ಗುರುತಿಸುವ ವಿಭಾಗದಿಂದ ಹೊರಗುಳಿಯುತ್ತಾರೆ.”

1953-54 ರಲ್ಲಿ ಸಂಸದರಾಗಿದ್ದಾಗ ಅವರು ಹಿಂದೂ ಕಾನೂನುಗಳಲ್ಲಿನ ವಿವಾಹ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಸುಧಾರಣೆಗಳನ್ನು ವಿರೋಧಿಸುತ್ತಿದ್ದ ಸಂಪ್ರದಾಯವಾದಿ ಗುಂಪಿನ ವಿರುದ್ಧ ಹೋರಾಟಕ್ಕಿಳಿದಿದ್ದರು. ಈ ಕಾನೂನುಗಳು ಅಂಗೀಕಾರಗೊಳ್ಳಲು ಮತ್ತು ಅವುಗಳ ಪರವಾದ ಸಾರ್ವಜನಿಕ ಅಭಿಪ್ರಾಯ ನಿರ್ಮಿಸಲು ಗುಪ್ತಾ ಬಹಳ ದೊಡ್ಡ ಪಾತ್ರ ವಹಿಸಿದ್ದರು.

1975 ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆರಂಭವಾದಾಗ, ಸಂಸತ್ತಿನಲ್ಲಿ ಭಾವಪೂರ್ಣ ಭಾಷಣ ಮಾಡುವ ಗುಪ್ತಾ, ಮಹಿಳೆಯರ ಸಾಮಾಜಿಕ ಸ್ಥಾನಮಾನ ಮತ್ತು ಜೀವನಮಟ್ಟವನ್ನು ಸುಧಾರಿಸಲು ಸರಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಾರೆ. ಜೊತೆಗೆ ಇಂತಹ ಆಚರಣೆಗಳು ಸಭೆಗಳಿಗೆ ಮತ್ತು ವಿಚಾರ ಸಂಕಿರಣಗಳಿಗೆ ಸೀಮಿತವಾಗಬಾರದೆಂದೂ ಅವರು ಒತ್ತಿ ಹೇಳುತ್ತಾರೆ.

ಗುಪ್ತಾ ಅವರ ಮಾತುಗಳು ಹೀಗಿದ್ದವು: “ಮಹಿಳೆಯರ ವಿಮೋಚನೆ ಎಂಬುದು ಒಂದು ವರ್ಗದ ಜನರ ವಿಮೋಚನೆಯ ಸಮಸ್ಯೆ ಮಾತ್ರವಲ್ಲ. ಮೂಲಭೂತವಾಗಿ ಹೇಳುವುದಾದರೆ, ನಮ್ಮ ಸಾಮಾಜಿಕ ಜೀವನದ ಅಡಿಪಾಯವನ್ನೇ ನಾಶ ಮಾಡುವ ಅಧೋಗತಿ, ಬಂಧನಗಳು, ನರಳಿಕೆಗಳು, ಸಂಕಷ್ಟಗಳು ಮೊದಲಾದ ಪಿಡುಗುಗಳಿಂದ ಮಹಿಳಾ ನಾಗರೀಕತೆಯನ್ನೇ ವಿಮೋಚಿಸುವ ಸಮಸ್ಯೆಯೂ ಹೌದು.”

ಗುಪ್ತಾ ಅವರೊಂದಿಗೆ ತರ್ಕಕ್ಕೆ ನಿಲ್ಲಲು ಯಾರೂ ಧೈರ್ಯ ಮಾಡುತ್ತಿರಲಿಲ್ಲ. 1977 ಜೂನ್‌ 22 ರಂದು ರಾಜ್ಯಸಭೆಯು ತನ್ನ 100 ನೇ ಅಧಿವೇಶನ ಮತ್ತು 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿತ್ತು. ಅಂದು ಗುಪ್ತಾ ಅವರಿಗೆ ಸನ್ಮಾನವನ್ನೂ ಮಾಡಲಾಗಿತ್ತು. ಸನ್ಮಾನ ಸ್ವೀಕರಿಸಿಕೊಂಡು ಮಾತನಾಡುವ ಅವರು, ರಾಜ್ಯಸಭೆಯು ಸದಾ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ “ಚೈತನ್ಯಶೀಲ ಮತ್ತು ಜೀವಂತ ಸಂಸ್ಥೆಯಾಗಿ” ಕೆಲಸ ಮಾಡಬೇಕೆಂದು ಹೇಳುತ್ತಾರೆ.

ಅವರ ಮಾತು ಹೀಗಿತ್ತು: “ಈ ಸದನದಲ್ಲಿ ಕಾಲು ಶತಮಾನಗಳ ಕಾಲ ಇರಲು ಸಾಧ್ಯವಾಗಿದ್ದು ನನ್ನ ಸೌಭಾಗ್ಯ ಮತ್ತು ಗೌರವ. ಆದರೆ, ನಾನು ಈ ಸದನದಲ್ಲಿ ವಹಿಸಿದ ಪಾತ್ರ ಯಾವ ರೀತಿಯದ್ದು, ಯಾವ ದೃಷ್ಟಿಕೋನದಿಂದ ಕೆಲಸ ಮಾಡಿದ್ದೇನೆ ಎಂದೆಲ್ಲ ಹೇಳುವುದು ನನ್ನ ಕೆಲಸವಲ್ಲ. ಆದರೂ, ನನ್ನ ದೇಶಕ್ಕೆ, ನನ್ನ ದೇಶದ ಮಹಾಜನತೆಗೆ, ಅಮೂಲ್ಯ ಸಂಸ್ಕೃತಿಯನ್ನು, ಪ್ರಾಚೀನ ಮತ್ತು ಅಳಿಸಲಾಗದ ಪರಂಪರೆಯನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಎತ್ತಿ ಹಿಡಿಯಲು ಪ್ರಯತ್ನಿಸಿದ್ದೇನೆ. ಈ ಸದನದಲ್ಲಿ ಮಿಂಚುವುದು ಒಬ್ಬ ವ್ಯಕ್ತಿಯಲ್ಲ. ಒಟ್ಟು ಈ ಸದನದಲ್ಲಿ ಸಾಮೂಹಿಕವಾಗಿ ಮಿಂಚಿದ್ದೇವೆ.”

ಸಂಸದರಾಗಿ ಗುಪ್ತಾ ಅವರ ಅಪರೂಪದ ಗುಣಗಳನ್ನು ಶತ್ರು ಮಿತ್ರರೆಲ್ಲರೂ ಸಮಾನವಾಗಿ ಮೆಚ್ಚಿಕೊಳ್ಳುತ್ತಿದ್ದರು. ಅವರನ್ನು ರಾಜ್ಯಸಭೆಯ “ಸ್ಟೋರ್ಮಿ ಪೆಟ್ರೆಲ್” (ಒಂದು ಜಾತಿಯ ಸಮುದ್ರ ಹಕ್ಕಿ) ಎಂದೇ ಕರೆಯಲಾಗುತ್ತಿತ್ತು. ಇದಕ್ಕೆ ಕಾರಣ, ಅವರು ಬಹುತೇಕ ಒಂದು ಸಂಸ್ಥೆಯಂತಯೇ ಕೆಲಸ ಮಾಡಿದ್ದರು. ಅವರು ಕಮ್ಯುನಿಸಂಗಾಗಿ, ದುಡಿಯುವ ವರ್ಗದ ಜನಸಾಮಾನ್ಯರಿಗಾಗಿ, ದೇಶದ ತುಳಿತಕ್ಕೊಳಗಾದ ಮತ್ತು ದಮನಿತರ ಪರವಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದರು.

ಫಿರೋಜ್ ಗಾಂಧಿ ಮತ್ತು ಇಂದಿರಾ ಗಾಂಧಿಯವರೊಂದಿಗಿನ ಅವರ ವೈಯಕ್ತಿಕ ಒಡನಾಟವು ಇಂಗ್ಲೆಂಡಿನಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಬಹಳ ಗಟ್ಟಿಯಾಗಿತ್ತು ಮತ್ತು ಅದು ಎಲ್ಲರಿಗೂ ತಿಳಿದ ಸಂಗತಿಯೇ ಆಗಿತ್ತು. ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಸಂದರ್ಭದಲ್ಲಿ, 5 ಫಿರೋಜ್‌ ಷಾ ರಸ್ತೆಯಲ್ಲಿರುವ ಗುಪ್ತಾ ಅವರ ನಿವಾಸಕ್ಕೆ ತಮ್ಮ ಖಾಸಗಿ ಫಿಯೆಟ್‌ ಕಾರಿನಲ್ಲಿ ಬಂದು ಬೆಂಬಲ ಕೋರಿದ್ದರು. ಸಿಪಿಐ ಪಕ್ಷವು ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಮತ್ತು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿತ್ತು.

ಗುಪ್ತಾ ಅವರೊಬ್ಬ ಸಮರ್ಥ ಪತ್ರಕರ್ತ ಮತ್ತು ಒಳ್ಳೆಯ ಬರಹಗಾರರೂ ಆಗಿದ್ದರು. 1954 ರಿಂದ 1957 ರವರೆಗೆ ಮತ್ತು 1966 ರಿಂದ ತನ್ನ ಕೊನೆಗಾಲದವರೆಗೂ ಅವರು ಸಿಪಿಐ ಪಕ್ಷದ ವಾರಪತ್ರಿಕೆಯಾದ ನ್ಯೂ ಏಜ್‌ನ ಸಂಪಾದಕರಾಗಿದ್ದರು. ಮಾಸ್ಕೋದ ಆಸ್ಪತ್ರೆಯಲ್ಲಿದ್ದ ಅವರು ಚೀನಾದ ಕಮ್ಯುನಿಸ್ಟ್‌ ಪಕ್ಷದ ಕೇಂದ್ರ ಸಮಿತಿಯ ಪ್ಲೀನಮ್‌ ಫಲಿತಾಂಶಗಳ ಕುರಿತು ತಮ್ಮ ಕೊನೆಯ ಲೇಖನವನ್ನು ಬರೆದಿದ್ದರು.

1981 ಆಗಸ್ಟ್‌ 6 ರಂದು ಅವರು ಮಾಸ್ಕೋದಲ್ಲಿ ನಿಧನರಾಗುತ್ತಾರೆ. ಆ ಸಂದರ್ಭದಲ್ಲಿ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯರ ಮಾತು ಹೀಗಿತ್ತು. “ಕಾಮ್ರೇಡ್‌ ಭೂಪೇಶ್‌ ಗುಪ್ತಾ ಅವರ ಸಾವಿನೊಂದಿಗೆ ದೇಶವು ತನ್ನ ಒಬ್ಬ ಸಮರ್ಪಿತ ಮತ್ತು ಸಮರ್ಥ ಪುತ್ರನನ್ನು ಕಳೆದುಕೊಳ್ಳುತ್ತಿದೆ. ರಾಜಕೀಯವಾಗಿ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದವರೂ ಕೂಡ ಅವರನ್ನು ಗೌರವದಿಂದ ಕಾಣುತ್ತಿದ್ದರು. ಅವರಿಲ್ಲದ ಪಾರ್ಲಿಮೆಂಟ್‌ ಹಿಂದಿನಂತಿರುವುದಿಲ್ಲ.”

ಅವರ ಆತ್ಮೀಯ ಗೆಳೆಯ ಮತ್ತು ಹಿರಿಯ ಪತ್ರಕರ್ತ ನಿಖಿಲ್ ಚಕ್ರವರ್ತಿ ಅವರ ಗೌರವ ಸಮರ್ಪಣೆ ಹೀಗಿತ್ತು: “ಮೂವತ್ತರ ದಶಕದ ಕೊನೆಯಲ್ಲಿ ನನ್ನ ಸಕ್ರಿಯ ರಾಜಕಾರಣದ ಆರಂಭ ಕಾಲದಿಂದಲೂ ಭೂಪೇಶ್‌ ಗುಪ್ತಾ ನನಗೆ ಪರಿಚಿತರು. ನಲವತ್ತು ವರ್ಷಗಳ ಹಿಂದೆ ಬ್ರಿಟನ್ನಿನಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹಾದಿಯನ್ನು ಹುಡುಕುತ್ತಿದ್ದ ತೀವ್ರವಾದಿ ಭಾರತೀಯರ ಸಣ್ಣ ಗುಂಪಿನಲ್ಲಿ, ನಿಜವಾಗಿಯೂ ಆಗ್ನಿಯಿಂದ ದೀಕ್ಷಾಸ್ನಾನ ಪಡೆದುಕೊಂಡವರೆಂದು ಹೇಳಿಕೊಳ್ಳಬಹುದಾದ ಏಕೈಕ ವ್ಯಕ್ತಿ ಭೂಪೇಶ್‌ ಗುಪ್ತಾ ಅವರು ಮಾತ್ರವೆಂದು ಹೇಳಬಹುದು.”

ಕುರ್ಬಾನ್ ಅಲಿ ಒಬ್ಬ ತ್ರಿಭಾಷಾ ಪತ್ರಕರ್ತರು. ಅವರು ಆಧುನಿಕ ಭಾರತದ ಕೆಲವು ಪ್ರಮುಖ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ವರದಿ ಮಾಡಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಈಗ ದೇಶದ ಸಮಾಜವಾದಿ ಚಳುವಳಿಯ ಇತಿಹಾಸವನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.

You cannot copy content of this page

Exit mobile version