ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಮಾಜಿ ಸಚಿವ ಡಾ.ಸುಧಾಕರ್ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಅಖಾಡಕ್ಕೆ ಇಳಿಸಿದೆ. ತನ್ನ ಮಾತಿನ ಚಾಟಿಯಿಂದಲೇ ಡಾ.ಸುಧಾಕರ್ ಗೆ ಸೋಲಿನ ರುಚಿ ತೋರಿಸಿದ ಪ್ರದೀಪ್ ಈಶ್ವರ್ ‘ಇನ್ನು ಒಂದೂವರೆ ತಿಂಗಳು ನನಗೆ ನಿಮಗೆ ನೇರ ಯುದ್ಧ’ ಎಂದೇ ತೊಡೆ ತಟ್ಟಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಸಲಾದ ಕಾಂಗ್ರೆಸ್ ನಾಯಕ ರಮೇಶ್ ಬಾಬು ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ‘ಡಾ.ಸುಧಾಕರ್ ಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸದೇ ನಾನು ವಿರಮಿಸುವುದಿಲ್ಲ’ ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ಶಾಸಕನಾಗಿ ಬಂದಾಗ ಈತ ನನ್ನನ್ನು ಬಾಯಿಗೆ ಬಂದಂತೆ ಬೈದರು, ಟ್ರೋಲ್ ಮಾಡಿದರು. ಆದರೆ ಇದ್ಯಾವುದಕ್ಕೂ ಜಗ್ಗದೇ ಜನರ ಮಧ್ಯೆ ನಿಂತೆ. ಅವರ ಬೈಗುಳ, ಬೆದರಿಕೆ, ತಂತ್ರ, ಕುತಂತ್ರ, ಅವಮಾನ ಎಲ್ಲವನ್ನೂ ನಿರೀಕ್ಷೆ ಮಾಡಿಯೇ ನಾನು ರಾಜಕೀಯಕ್ಕೆ ಬಂದೆ. ಡಾ.ಸುಧಾಕರ್ ಗೆ ತಾಕತ್ತು ಇದ್ದರೆ ಅವರ ಆಸ್ತಿ ಬಹಿರಂಗಪಡಿಸಲಿ, ನಾನೂ ಸಹ ಬಹಿರಂಗಪಡಿಸಲು ಸಿದ್ಧ..” ಎನ್ನುವ ಮೂಲಕ ಪ್ರದೀಪ್ ಈಶ್ವರ್ ಮತ್ತೊಮ್ಮೆ ಡಾ.ಸುಧಾಕರ್ ಎದುರುಗೊಳ್ಳುವ ಮಾತಾಡಿದ್ದಾರೆ.
ಇನ್ನು “ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಡಾ.ಸುಧಾಕರ್ ಅವರನ್ನು ಗೆಲ್ಲಿಸಬೇಡಿ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಜನಸಾಮಾನ್ಯರ ಬಳಿ ಅವರು ಗುರುತಿಸಿಕೊಳ್ಳಲು ಅವರ ಬಯಸುವುದಿಲ್ಲ. ಜನತೆ ಸಾವಿಗೆ ಎದುರು ನೋಡುತ್ತಿದ್ದ ಕೋವಿಡ್ ಸಂದರ್ಭದಲ್ಲಿ ಆದ ವ್ಯಾಪಕ ಭ್ರಷ್ಟಾಚಾರವೇ ಇವತ್ತು ಸುಧಾಕರ್ ಸೋಲಿಗೆ ಕಾರಣ ಎಂದು ಡಾ.ಸುಧಾಕರ್ ವಿರುದ್ಧ ಆರೋಪ ಮಾಡಿದ್ದಾರೆ.
ಮುಂದುವರಿದು “ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಲಿ, ಶತಾಯಗತಾಯ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೇ ಗೆಲ್ಲಿಸುತ್ತೇವೆ, ಆ ಮೂಲಕ ಡಾ.ಕೆ.ಸುಧಾಕರ್ ಗೆ ಮತ್ತೊಂದು ಸೋಲಿನ ರುಚಿ ತೋರಿಸುತ್ತೇವೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.