ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಂದು ಎಸ್‌ಐಟಿ ಅಧಿಕಾರಿಗಳ ತಂಡ ಧರ್ಮಸ್ಥಳ ಗ್ರಾಮಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಧರ್ಮಸ್ಥಳ ಗ್ರಾಮ ಇರುವ ಬೆಳ್ತಂಗಡಿ ಪಟ್ಟಣದಲ್ಲೇ ಎಸ್ ಐ ಟಿ ಕಚೇರಿ ತೆರೆಯುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಸಮೀಪವೇ ಹೊಸದಾಗಿ ನಿರ್ಮಾಣಗೊಂಡಿರುವ ಪೊಲೀಸ್ ವಸತಿ ಗೃಹದಲ್ಲೇ ಎಸ್‌ಐಟಿ ಈ ಪ್ರಕರಣದ ತನ್ನ ಕೇಂದ್ರ ಕಛೇರಿಯನ್ನಾಗಿ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಇಂದೇ ಎಸ್ಐಟಿ ತನ್ನ ಕೆಲಸಕ್ಕೆ ಚಾಲನೆ ನೀಡಲಿದೆ.
ಈ ಸ್ಥಳ ಎಸ್ಐಟಿ ತಂಡ ಕಾರ್ಯ ನಿರ್ವಹಿಸಲು ಅಗತ್ಯವಿರುವಷ್ಟು ಸ್ಥಳಾವಕಾಶವಿದೆ. ಪೊಲೀಸ್ ಠಾಣೆಯ ಆವರಣದ ಒಳಗೇ ಈ ಕಟ್ಟಡ ಇರುವುದರಿಂದ ಸುರಕ್ಷತೆಯ ದೃಷ್ಟಿಯಿಂದ ಹಾಗೂ ತನಿಖೆ ವಿಚಾರಣೆಗಳ ದೃಷ್ಟಿಯಿಂದ ವಿಶೇಷ ತನಿಖಾ ತಂಡಕ್ಕೆ ಇದು ಸೂಕ್ತ ಸ್ಥಳವಾಗಿದೆ. ಹೀಗಾಗಿ ಇದೇ ಸ್ಥಳವನ್ನು ಎಸ್ಐಟಿ ಆಯ್ಕೆ ಮಾಡಿಕೊಂಡಿದೆ.
ರಾಜ್ಯ ಸರಕಾರವು ಜು.20ರಂದು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಪ್ರಣವ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿದೆ. ತಂಡದಲ್ಲಿ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್, ಸಿಎಆರ್ ಕೇಂದ್ರದ ಡಿಸಿಪಿ ಸೌಮ್ಯಲತಾ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸದಸ್ಯರಾಗಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಪತ್ರದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಧರ್ಮಸ್ಥಳ ಪೊಲೀಸ್ ಠಾಣೆ ಮೊ.ಸಂ. 39/2025 ಕಲಂ 211(ಎ), ಬಿ.ಎನ್.ಎಸ್. ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ಆದೇಶಿಸಿದೆ.