Wednesday, June 19, 2024

ಸತ್ಯ | ನ್ಯಾಯ |ಧರ್ಮ

ಪೋಷಕರು ಹೇರುವ ಒತ್ತಡವೇ ವಿದ್ಯಾರ್ಥಿಗಳ ಸಾವಿಗೆ ಕಾರಣ: ಸುಪ್ರೀಂ ಕೋರ್ಟ್

ಬೆಂಗಳೂರು: ಪೋಷಕರು ಹೇರು ಒತ್ತಡ ಮತ್ತು ಮಿತಿಮೀರಿದ ನಿರೀಕ್ಷೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿವೆ ಸುಪ್ರೀಂ ಕೋರ್ಟ್ ನವೆಂಬರ್ 20 ಸೋಮವಾರ ತಿಳಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಮುಂಬೈ ಮೂಲದ ವೈದ್ಯ ಅನಿರುದ್ಧ ನಾರಾಯಣ್ ಮಲ್ಪಾನಿ ಅವರು ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆಯ ಸಂಬಂಧ ಕೋಚಿಂಗ್ ಸೆಂಟರ್‌ಗಳನ್ನು ನಿಯಂತ್ರಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆ ನಡೆಸಿ ಈ ಅಭಿಪ್ರಾಯವನ್ನು ತಿಳಿಸಿದೆ.

ಆದರೆ ನ್ಯಾಯಾಲಯವು ಅರ್ಜಿದಾರರಿಗೆ, ”ಇವು ಸುಲಭದಲ್ಲಿ ಬಗೆಹರಿಯುವ ಸಂಗತಿಯಲ್ಲ. ಈ ಎಲ್ಲಾ ಘಟನೆಗಳ ಹಿಂದೆ ಪೋಷಕರ ಒತ್ತಡವಿದೆ. ಹೆಚ್ಚಾಗಿ ಪೋಷಕರೇ ಅವರ ಮೇಲೆ ಹೆಚ್ಚು ಒತ್ತಡ ಹೇರುತ್ತಿದ್ದಾರೆ. ಅಂತಹ ಸನ್ನಿವೇಶದಲ್ಲಿ ನ್ಯಾಯಾಲಯವು ಹೇಗೆ ನಿರ್ದೇಶನಗಳನ್ನು ನೀಡಲು ಸಾಧ್ಯ? ಎಂದು ಹೇಳಿದೆ.

2023 ರಲ್ಲಿ, ಕೋಟಾದಲ್ಲಿ ಕನಿಷ್ಠ 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಳೆದ ಎಂಟು ವರ್ಷಗಳಲ್ಲಿ ಅತ್ಯಧಿಕ ಸಂಖ್ಯೆಯಾಗಿದೆ.

ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅರ್ಜಿದಾರರಿಗೆ, ”ಕೋಚಿಂಗ್ ಸೆಂಟರ್‌ಗಳಿಂದಾಗಿ ಆತ್ಮಹತ್ಯೆಗಳು ನಡೆಯುತ್ತಿಲ್ಲ. ಮಕ್ಕಳು ತಮ್ಮ ಹೆತ್ತವರ ನಿರೀಕ್ಷೆಗಳನ್ನು ಪೂರೈಸಲಾಗದೆ ಆತ್ಮಹತ್ಯೆ ಸಂಭವಿಸುತ್ತವೆ. ಸಾವಿನ ಸಂಖ್ಯೆ ಹೆಚ್ಚು ಇರಬಹುದು… ” ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಖನ್ನಾ “ಆದರೂ, ನಮ್ಮಲ್ಲಿ ಹೆಚ್ಚಿನವರಿಗೆ ಯಾವುದೇ ಕೋಚಿಂಗ್ ಸೆಂಟರ್‌ಗಳು ಇರುವುದು ಬೇಕಾಗಿಲ್ಲ, ಆದರೆ ಶಾಲೆಗಳ ಪರಿಸ್ಥಿತಿಗಳನ್ನು ನೋಡಿ. ತೀವ್ರ ಪೈಪೋಟಿ ಇದೆ ಮತ್ತು ವಿದ್ಯಾರ್ಥಿಗಳು ಈ ಕೋಚಿಂಗ್ ಸೆಂಟರ್‌ಗಳಿಗೆ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ,” ಎಂದು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲದ ಕಾರಣ ಅರ್ಜಿದಾರರು ರಾಜಸ್ಥಾನ ಸರ್ಕಾರ ಅಥವಾ ರಾಜಸ್ಥಾನ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಪೀಠ ಶಿಫಾರಸು ಮಾಡಿದೆ.

ಸೆಪ್ಟೆಂಬರ್‌ 2023ರಲ್ಲಿ ರಾಜಸ್ಥಾನ ಸರ್ಕಾರ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯಲು ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳಿಗೆ ಮಾರ್ಗಸೂಚಿಗಳನ್ನು ರವಾನಿಸಿತ್ತು. ವಾರದ ರಜೆಗಳನ್ನು ನೀಡುವಂತೆ ಕೋಚಿಂಗ್ ಸೆಂಟರ್‌ಗಳಿಗೆ ನಿರ್ದೇಶನ ನೀಡುವುದು, ವಾಡಿಕೆಯ ಪರೀಕ್ಷೆಗಳ ಅಂಕಗಳನ್ನು ಗೌಪ್ಯವಾಗಿಡುವುದು…ಮೊದಲಾದ ನಿರ್ದೇಶನಗಳನ್ನು ನೀಡಿತ್ತು.

ಜೊತೆಗೆ, ಕೇಂದ್ರದ ಶಿಕ್ಷಣ ಸಚಿವಾಲಯವು ಅಕ್ಟೋಬರ್ 3 ರಂದು UMMEED ಎಂಬ ಕರಡು ಮಾರ್ಗಸೂಚಿಗಳನ್ನು ಹೊರಡಿಸಿತ್ತು.

ಅರ್ಜಿಯಲ್ಲಿ ಏನಿತ್ತು?

ಕೋಚಿಂಗ್ ಸೆಂಟರ್‌ಗಳನ್ನು ನಿಯಂತ್ರಿಸಲು ಕೋರಿ ಸಲ್ಲಿಸಲಾದ ಅರ್ಜಿಯಲ್ಲಿ, “ಈ ಲಾಭಕ್ಕಾಗಿ ಹಸಿದಿರುವ ಈ ಕೋಚಿಂಗ್ ಸಂಸ್ಥೆಗಳು ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುವುದಿಲ್ಲ ಮತ್ತು ಭಾರತದ ಯುವಜನತೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಒತ್ತಡ ಹೇರಿ ಹಣವನ್ನು ಟಂಕಿಸುವುದರ ಕಡೆಗೆ ಮೇಲೆ ಮಾತ್ರ ಗಮನಹರಿಸುತ್ತವೆ,” ಎಂದು ಹೇಳಲಾಗಿದೆ.

“ವಿದ್ಯಾರ್ಥಿಗಳ ಆತ್ಮಹತ್ಯೆಯು ಮಾನವ ಹಕ್ಕುಗಳ ಗಂಭೀರ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ಆತ್ಮಹತ್ಯೆಗಳ ನಡುವೆಯೂ ಕಾನೂನನ್ನು ಜಾರಿಗೊಳಿಸುವಲ್ಲಿ ಕೇಂದ್ರದ ಕಳಪೆ ಧೋರಣೆಯು ನಮ್ಮ ದೇಶದ ಭವಿಷ್ಯವಾದ ಈ ಯುವ ಮನಸ್ಸುಗಳನ್ನು ರಕ್ಷಿಸುವಲ್ಲಿ ಸರ್ಕಾರವು ತೋರುತ್ತಿರುವ ನಿರಾಸಕ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ದೇಶದಲ್ಲಿ ಘನತೆಯಿಂದ ಬದುಕಲು ಅವರಿಗೆ ಭಾರತದ ಸಂವಿಧಾನದ ಆರ್ಟಿಕಲ್ 21‌ ಅಡಿಯಲ್ಲಿ ಸಾಂವಿಧಾನಿಕ ಹಕ್ಕನ್ನು ನೀಡಲಾಗಿದೆ,” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು