ಹಾಸನ : ಮಾಜಿ ಸಚಿವ ಹಾಗೂ ಹೋಳೇನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಭೂಸ್ವಾಧೀನ ಪರಿಹಾರ ವಿತರಣೆಯಲ್ಲಿನ ಗೊಂದಲ, ರೈತರ ಅರ್ಜಿಗಳನ್ನು ತೀರ್ಮಾನಿಸುವಲ್ಲಿ ವಿಳಂಬ ಉಂಟಾಗುತ್ತಿದೆ ಹಾಗೂ ತಮ್ಮ ಕೈಕೆಳಗಿನ ಅಧಿಕಾರಿಗಳ ಮೇಲೆ ಡಿಸಿ ಒತ್ತಡ ಹೇರುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೇವಣ್ಣ ಅವರು ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಪ್ರಗತಿಯನ್ನು ಪ್ರಸ್ತಾಪಿಸಿ, “ಈ ಯೋಜನೆಯ ಮೊದಲ ಮತ್ತು ಎರಡನೇ ಹಂತಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 165 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. 2019ರಲ್ಲಿ ಆಲಗೋಡನಹಳ್ಳಿ ಲಿಫ್ಟ್ ಇರಿಗೇಷನ್ ಮೂಲಕ 26 ಕೆರೆಗಳನ್ನು ತುಂಬಿಸಲು 47 ಕೋಟಿ, ಶಂಭುಗೌಡನ ಕೆರೆಗೆ 21 ಕೋಟಿ ಹಾಗೂ ಒಂಟಿಪುರದಿಂದ ಚಾಕೇನಹಳ್ಳಿ ಡ್ಯಾಂ ನಿರ್ಮಾಣಕ್ಕೆ 22 ಕೋಟಿ ರೂಪಾಯಿ ನೀಡಲಾಗಿದೆ. ಆ ಹಣ ಬಿಡುಗಡೆಗೊಂಡು ಆರು ವರ್ಷವಾದರೂ ಯೋಜನೆ ಪೂರ್ಣಗೊಳ್ಳುವ ದಾರಿ ಕಂಡಿಲ್ಲ. ಕೆಲವರು ಬಂದು ಉದ್ಘಾಟನೆ ಮಾಡಿ ಮಾತಾಡಿ ಹೋದಷ್ಟೇ ಕೆಲಸವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ನೀಡದ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ
1986 ರಲ್ಲೇ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ನಡೆದಿದೆ ಎಂಬುದನ್ನು ಉಲ್ಲೇಖಿಸಿ, “ಭೂಮಿ ಕಳೆದುಕೊಂಡ ರೈತರಿಗೆ ಇಂದಿಗೂ ಪರಿಹಾರ ಹಣ ನೀಡಿಲ್ಲ. ಸರ್ಕಾರದ ಹಣ ಜಿಲ್ಲಾಧಿಕಾರಿ ಖಾತೆಗೆ ಬಂದಿದೆ. ಆದರೆ ರೈತರ ಅರ್ಜಿಗಳನ್ನು ಬಗೆಹರಿಸದೇ ಎಸ್‌ಎಲ್‌ಓ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಎಸ್‌ಎಲ್‌ಓ ಕಚೇರಿ ಜಿಲ್ಲಾಧಿಕಾರಿ ಅಧೀನದಲ್ಲಿರುವುದರಿಂದ ವಾರಕ್ಕೊಮ್ಮೆ ಸಭೆ ನಡೆಸಿ ಹಳೆಯ ಅರ್ಜಿಗಳನ್ನು ತ್ವರಿತವಾಗಿ ಬಗೆಹರಿಸಬೇಕು” ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಅಧಿಕಾರಿಗಳ ಮೇಲೆ ಒತ್ತಡ – ಆತ್ಮಹತ್ಯೆ ಆದರೆ ಡಿಸಿ ಹೊಣೆ :
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ನಡೆ ಬಗ್ಗೆ ಗಂಭೀರ ಆರೋಪ ಹೊರಿಸಿದ ರೇವಣ್ಣ, “ಕೆಲವು ಅಧಿಕಾರಿಗಳು ಅವರ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡರೂ ಜಿಲ್ಲಾಧಿಕಾರಿಗಳೇ ಹೊಣೆಗಾರರು. ಒಬ್ಬ ತಹಸೀಲ್ದಾರ್ ನನ್ನ ಬಳಿ ಬಂದು ‘ಡಿಸಿ ನಮಗೆ ಹೀಗೆ ಬರೆಯಿರಿ ಎಂದು ಹೇಳುತ್ತಾರೆ, ಕೊಡುವ ಕಾಟದಿಂದ ಬದುಕಲು ಕಷ್ಟವಾಗಿದೆ’ ಎಂದು ಮನವಿ ಮಾಡಿದ್ದಾರೆ. ಬೆಳಿಗ್ಗೆ ಎಂಟು ಗಂಟೆಗೆ ಅಧಿಕಾರಿಗಳನ್ನು ಕರೆಸಿ ಮಧ್ಯಾಹ್ನದವರೆಗೂ ಕೆಲಸ ಮಾಡಿಸಿ, ನಂತರ ಬೇರೆ ತಾಲ್ಲೂಕಿಗೆ ಹೋಗುತ್ತಾರೆ. ಇಂತಹ ಕಿರುಕುಳದಿಂದ ಕೆಲ ಅಧಿಕಾರಿಗಳು ಸೂಸೈಡ್ ಮಾಡಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು.
ಜಿಲ್ಲಾಧಿಕಾರಿಗಳಿಗೆ ರೇವಣ್ಣ ಎಚ್ಚರಿಕೆ
“ನಾನು ಶಾಸಕನಾಗಿಯೂ, ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಜಿಲ್ಲಾಧಿಕಾರಿಗಳೇ, ನಿಮ್ಮ ನಡವಳಿಕೆ ತಿದ್ದುಕೊಳ್ಳಿ. ಕೆಳಮಟ್ಟದ ಅಧಿಕಾರಿಗಳೊಂದಿಗೆ ಗೌರವಯುತವಾಗಿ ವರ್ತಿಸಿ. ನಿಮ್ಮ ಕಚೇರಿಯನ್ನು ಶುದ್ಧೀಕರಣ ಮಾಡಿ” ಎಂದರು.