Friday, April 26, 2024

ಸತ್ಯ | ನ್ಯಾಯ |ಧರ್ಮ

ಬೆಲೆ ಏರಿಕೆ | ರಾಜ್ಯ ಸರಕಾರ ಕಾರಣವೇ? ಕೇಂದ್ರ ಸರಕಾರ ಕಾರಣವೇ?

ಜಿಎಸ್‍ಟಿ ಬಂದ ನಂತರ ರಾಜ್ಯಗಳು ಸಂಗ್ರಹಿಸುತ್ತಿದ್ದ ಶೇ.80ರಷ್ಟು ಪರೋಕ್ಷ ತೆರಿಗೆಯನ್ನು ಕೇಂದ್ರ ಸರಕಾರ ಸಂಗ್ರಹಿಸುತ್ತಿದೆ. ಮೂರನೇ ಎರಡರಷ್ಟು ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಅಧಿಕಾರ ಕೇಂದ್ರಕ್ಕಿದೆ. ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳ ಪಾಲು ಶೇ.41 ಮಾತ್ರ. ಆಮದು, ರಫ್ತನ್ನು ನಿಯಂತ್ರಿಸುವುದು, ಹಣದ ಪೂರೈಕೆ ನಿಯಂತ್ರಿಸುವುದು ಇತ್ಯಾದಿಗಳೆಲ್ಲ ಕೇಂದ್ರ ಸರಕಾರದ ಸ್ವಾಧೀನ ಇವೆ. ಆದುದರಿಂದ ಬೆಲೆ ಏರಿಕೆಯ ಬಹುಭಾಗ ಜವಾಬ್ದಾರಿ ಕೇಂದ್ರ ಸರಕಾರದ್ದಾದರೆ ಅಲ್ಪಭಾಗ ಜವಾಬ್ದಾರಿ ರಾಜ್ಯಗಳದ್ದು – ಪ್ರೊ. ಎಂ.ಚಂದ್ರ ಪೂಜಾರಿ, ಅಭಿವೃದ್ಧಿ ಚಿಂತಕರು

ಎಲ್ಲ ಸರಕುಸೇವೆಗಳ ಬೆಲೆ ಗಗನಕ್ಕೇರಿದೆ ಎಂದು ಸಾಬೀತು ಪಡಿಸಲು ಸಾಕ್ಷಿ ಪುರಾವೆಗಳ ಅವಶ್ಯಕತೆ ಇಲ್ಲ. ಇದು ಎಲ್ಲ ಸಾಮಾನ್ಯ ಗ್ರಾಹಕರ ಅನುಭವಕ್ಕೆ ಬಂದಿರುವ ವಿಚಾರ. ಕಳೆದ ವರ್ಷ 25 ರುಪಾಯಿಗೆ ಸಿಗುತ್ತಿದ್ದ ಸರಕುಸೇವೆಗಳಿಗೆ ಈ ವರ್ಷ 50 ರುಪಾಯಿ ಆಗಿದೆ, 100 ರುಪಾಯಿ ಇದ್ದದ್ದು 200 ರುಪಾಯಿ ಆಗಿದೆ. ಅಂದರೆ ಎಲ್ಲ ಸರಕುಸೇವೆಗಳ ಬೆಲೆ ಸರಿ ಡಬ್ಬಲ್ ಆಗಿದೆ. ಏಕೆ ಬೆಲೆ ಏರಿಕೆ ಆಗುತ್ತಿದೆ? ಬೆಲೆ ಏರಿಕೆಗೆ ರಾಜ್ಯ ಸರಕಾರದ ನೀತಿಗಳು ಕಾರಣವೇ? ಅಥವಾ  ಕೇಂದ್ರ ಸರಕಾರದ ಆರ್ಥಿಕ ನೀತಿಗಳು ಕಾರಣವೇ? ಇತ್ಯಾದಿ ಪ್ರಶ್ನೆಗಳು ನಮ್ಮ ಮುಂದಿವೆ. ಈ ಲೇಖನದಲ್ಲಿ ಮೇಲಿನ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಲು ಪ್ರಯತ್ನಿಸಿದ್ದೇನೆ.

ಬೆಲೆ ಏರಿಕೆಗೆ ಎರಡು ಮೂರು ಕಾರಣಗಳನ್ನು ಪಟ್ಟಿ ಮಾಡಬಹುದು.

ಒಂದನೆಯದು ಬೆಲೆ ಏರಿಕೆಯ ಲಾಭ 

ಬೆಲೆ ಏರಿಕೆಯ ಕಾವು ಸಾಮಾನ್ಯ ಗ್ರಾಹಕರನ್ನು ತಟ್ಟಿದಷ್ಟು ಆರ್ಥಿಕ ನೀತಿಗಳನ್ನು ರೂಪಿಸುವವರನ್ನು ತಟ್ಟುವುದಿಲ್ಲ. ಆರ್ಥಿಕ ನೀತಿಗಳನ್ನು  ಸರಕಾರ ರೂಪಿಸುವುದು ಎಲ್ಲರಿಗೂ ತಿಳಿದ ವಿಷಯ. ಸರಕಾರದ ಆರ್ಥಿಕ ನೀತಿಗಳನ್ನು ವ್ಯಾಪಾರ, ಉದ್ದಿಮೆಗಳು ಪ್ರಭಾವಿಸುತ್ತವೆ. ಆದರೆ ಅವುಗಳ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇಲ್ಲ. ಅದೇ ರೀತಿ ಸರಕಾರದ ನೀತಿಗಳನ್ನು ಮೇಲ್‍ಮಧ್ಯಮ ವರ್ಗ ಕೂಡ ಪ್ರಭಾವಿಸುತ್ತದೆ. ಈ ಮೂರು ವರ್ಗಗಳಿಗೂ ಬೆಲೆ ಏರಿಕೆಯಿಂದ ನಷ್ಟಕ್ಕಿಂತ ಲಾಭ ಆಗುತ್ತಿದೆ. ಸರಕಾರಕ್ಕೆ ಜಿಎಸ್‍ಟಿ ಸಂಗ್ರಹ ಹೆಚ್ಚಾಗುತ್ತದೆ. ಸರಕುಸೇವೆಯ ಬೆಲೆ ರೂ.100 ಇದ್ದಾಗ ರೂ.18 ಜಿಎಸ್‍ಟಿ ಸಂಗ್ರಹವಾದರೆ ಬೆಲೆ ರೂ.200 ಆದಾಗ ರೂ.36 ಜಿಎಸ್‍ಟಿ ಸಂಗ್ರಹವಾಗುತ್ತದೆ. ವ್ಯಾಪಾರ ಉದ್ದಿಮೆಗಳಿಗೆ ಏನೇನೂ ವಿನಿಯೋಜನೆ ಇಲ್ಲದೆ ಲಾಭ ಗಳಿಸುವ ಅವಕಾಶ ಸೃಷ್ಟಿ ಆಗುತ್ತದೆ. ಮಧ್ಯಮ ಮತ್ತು ದೊಡ್ಡ ಗಾತ್ರದ ವ್ಯಾಪಾರ ಉದ್ದಿಮೆಗಳು ಕೆಲವು ತಿಂಗಳಿಗಾಗುವಷ್ಟು ಸ್ಟಾಕ್ ಇಟ್ಟಿರುತ್ತಾರೆ.

ಇವರು ಹಳೇ ಸ್ಟಾಕನ್ನು ಹೊಸ ರೇಟಲ್ಲಿ ಮಾರುತ್ತಾರೆ. ರೂ.100ಕ್ಕೆ  ಖರೀದಿಸಿದ್ದನ್ನು ಬೆಲೆ ಏರಿಕೆ ಮುನ್ನ ರೂ.110ಕ್ಕೆ ಮಾರುತ್ತಿದ್ದವರು ಬೆಲೆ ಏರಿಕೆ ನಂತರ ಅದೇ ಸ್ಟಾಕನ್ನು ರೂ.120ಕ್ಕೆ ಮಾರುತ್ತಾರೆ. ಸರಕಾರ ಮತ್ತು ದೊಡ್ಡ ವ್ಯಾಪಾರ ಉದ್ದಿಮೆಗಳಲ್ಲಿ ದುಡಿಯುವವರಿಗೆ ಬೆಲೆ ಏರಿಕೆಯ ನೋವನ್ನು ಸಹಿಸಲು ತುಟ್ಟಿ ಭತ್ತೆ ಸಿಗುತ್ತದೆ. ಇವರೆಲ್ಲ ಆರ್ಥಿಕ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ನೇರ ಮತ್ತು ಪರೋಕ್ಷವಾಗಿ ಪಾಲುಗೊಳ್ಳುವವರು. ಬೆಲೆ ಏರಿಕೆಯ ಕಾವು ಇವರಿಗೆ ತಟ್ಟುವುದಿಲ್ಲ. ಬೆಲೆ ಏರಿಕೆಯ ಕಾವನ್ನು ಅನುಭವಿಸುವ ಸಾಮಾನ್ಯ ಗ್ರಾಹಕರು ಲಾಬಿ ಮಾಡಿ ಸರಕಾರದ ಮೇಲೆ ಒತ್ತಡ ಹೇರಲಾಗುವುದಿಲ್ಲ, ಪೇಪರ್, ಟಿವಿಗಳಲ್ಲಿ ಬರೆದು, ಮಾತಾಡಿ ತಮ್ಮ ನೋವನ್ನು ತೋಡಿಕೊಳ್ಳಲಾಗುವುದಿಲ್ಲ. ಪೇಪರ್, ಟಿವಿಗಳಲ್ಲಿ ಬರೆಯುವ, ಮಾತಾಡುವವರು ತಮ್ಮ ರಾಜಕೀಯ ನಿಲುವಿಗೆ ಅನುಸಾರ ಬೆಲೆ ಏರಿಕೆಗೆ ಒಂದೋ ಕೇಂದ್ರ ಸರಕಾರವನ್ನು ಅಥವಾ ರಾಜ್ಯ ಸರಕಾರವನ್ನು ಕಾರಣವೆಂದು ಜನರನ್ನು ಒಪ್ಪಿಸುತ್ತಾರೆ.

ಎರಡನೆಯದು ಪರಿಹಾರಗಳು

ಬೆಲೆ ಏರಿಕೆ ತಡೆಯಲು ಈಗ ಸರಕಾರ ಕೈಗೊಳ್ಳುವ ಪರಿಹಾರಗಳು ಕೆಲಸ ಮಾಡುತ್ತಿಲ್ಲ. ಎರಡು ಮುಖ್ಯ ಕ್ರಮಗಳ ಮೂಲಕ ಸರಕಾರ ಬೆಲೆ ಏರಿಕೆ ತಡೆಗಟ್ಟಲು ಪ್ರಯತ್ನಿಸುತ್ತಿದೆ. 1) ಹಣದ ಪೂರೈಕೆಯನ್ನು ಕಂಟ್ರೋಲ್ ಮಾಡುವುದು 2) ಸರಕುಸೇವೆಗಳ ಪೂರೈಕೆ ಹೆಚ್ಚಿಸುವುದು. ಈ ಎರಡೂ ಪರಿಹಾರಗಳ ಹಿಂದೆ ಕೆಲಸ ಮಾಡುವ ಗ್ರಹಿಕೆ ಒಂದೇ. ಅದೇನೆಂದರೆ ಜನರ ಕೈಯಲ್ಲಿ ಹೆಚ್ಚು ಹಣ ಇದೆ ಅದರೆ ಸರಕುಸೇವೆಗಳ ಪೂರೈಕೆ ಕಡಿಮೆ ಇದೆ. ಇದರಿಂದ ಸರಕುಸೇವೆಗಳ ಬೆಲೆ ಏರುತ್ತಿದೆ ಎನ್ನುವುದು ಮೊದಲ ಗ್ರಹಿಕೆ. ಸರಕಾರ ಹಣದ ಪೂರೈಕೆ ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೆರವು ಪಡೆಯುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರ (ರೆಪೋ ರೇಟ್) ಹೆಚ್ಚಿಸಿ ಬ್ಯಾಂಕ್‍ಗಳು ನೀಡುವ ಸಾಲದ ಮೇಲಿನ ಬಡ್ಡಿ ರೇಟ್ ಹೆಚ್ಚಿಸುವಂತೆ ಮಾಡುತ್ತದೆ. ಸಾಲ ದುಬಾರಿ ಆದಾಗ ಜನ ಸಾಲ ಪಡೆಯುವುದು ಕಡಿಮೆ ಆಗುತ್ತದೆ. ಅರ್ಥ ವ್ಯವಸ್ಥೆಯಲ್ಲಿ ಹಣದ ಚಲಾವಣೆ ಕಡಿಮೆ ಆಗುತ್ತದೆ. ಈ ರೀತಿಯಾಗಿ ಹಣದ ಪೂರೈಕೆಯನ್ನು ಕಂಟ್ರೋಲ್ ಮಾಡಿ ಬೆಲೆ ಏರಿಕೆ ತಡೆಗಟ್ಟಲು ಸರಕಾರ ಪ್ರಯತ್ನಿಸುತ್ತಿದೆ.

ಆದರೆ ಈ ವಿಧಾನ ಕೆಲಸ ಮಾಡುತ್ತಿಲ್ಲ. ಏಕೆಂದರೆ ಎಲ್ಲರ ಸ್ವಾಧೀನ ಒಂದೇ ಪ್ರಮಾಣದ ಆದಾಯ ಇಲ್ಲ.  ತಿಂಗಳಿಗೆ ಲಕ್ಷಗಟ್ಟಲೆಯಲ್ಲಿ  ಆದಾಯ ಪಡೆಯುವವರ ಸಂಖ್ಯೆ ನಮ್ಮಲ್ಲಿ ಕಡಿಮೆ ಇದೆ. ಬಹುತೇಕರ ತಿಂಗಳ ಆದಾಯ ರೂ.10-15 ಸಾವಿರ ಮೀರುವುದಿಲ್ಲ. ಇವರ ಸ್ವಾಧೀನ ಹಣ ಹೆಚ್ಚಾಗಿರುವುದರಿಂದ ಬೆಲೆ ಏರಿಕೆ  ಸಮಸ್ಯೆ ಆಗಿರುವುದಲ್ಲ ಹಣ ಕಡಿಮೆ ಆಗಿರುವುದರಿಂದ ಸಮಸ್ಯೆ ಆಗುತ್ತಿರುವುದು. ಒಂದು ವೇಳೆ ಬೆಲೆ ಏರಿದಂತೆ ಇವರ ಆದಾಯವೂ ಏರಿದರೆ ಇವರಿಗೂ ಬೆಲೆ ಏರಿಕೆ ಕಾವು ತಟ್ಟುವುದಿಲ್ಲ. ಸರಕಾರದ ಮತ್ತೊಂದು ಕ್ರಮ ಸರಕುಸೇವೆಗಳ ಪೂರೈಕೆ ಹೆಚ್ಚಿಸಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು. ಸರಕುಸೇವೆಗಳ ಪೂರೈಕೆ ಹೆಚ್ಚಿಸಲು ಸರಕಾರ ನೀಡುವ ಪ್ರೊತ್ಸಾಹಗಳ ಬಹುಭಾಗ ದೊಡ್ಡ ಕೃಷಿ, ವ್ಯಾಪಾರ, ಉದ್ದಿಮೆಗಳಿಗೆ ಹೋದರೆ ಅತ್ಯಲ್ಪ ಪ್ರಮಾಣ ಮಾತ್ರ ಸಣ್ಣಪುಟ್ಟ ಕೃಷಿ, ವ್ಯಾಪಾರ, ಉದ್ದಿಮೆಗಳಿಗೆ ಹೋಗುತ್ತದೆ. ಆದರೆ ನಮ್ಮಲ್ಲಿ ಶೇ.70ಕ್ಕಿಂತಲೂ ಹೆಚ್ಚಿನ ಜನರು ಸಣ್ಣಪುಟ್ಟ ವ್ಯಾಪಾರ ಉದ್ದಿಮೆ, ಕೃಷಿಗಳಲ್ಲಿ ದುಡಿಯುವವರು. ಇವರಿಗೆ ಸರಕಾರದ ಪ್ರೋತ್ಸಾಹ ವರ್ಗಾವಣೆ ಆಗುವುದಿಲ್ಲ. ಆದುದರಿಂದ ಇವರ ಸಂಬಳ ಹೆಚ್ಚಾಗುವುದಿಲ್ಲ. ಹಾಗೆಂದು ಕೇಂದ್ರ ಸರಕಾರ ಉತ್ಪಾದಕರ ಸಾಮರ್ಥ್ಯ ವೃದ್ಧಿಸಲು ಕ್ರಮ ಕೈಗೊಂಡಂತೆ ಜನಸಾಮಾನ್ಯರ ಖರೀದಿಸುವ ಶಕ್ತಿ ಹೆಚ್ಚಿಸಲು  ಪ್ರತ್ಯೇಕ ಕ್ರಮ ಕೈಗೊಂಡಿಲ್ಲ. ಹೀಗೆ ಸರಕಾರದ ಬೆಲೆ ಏರಿಕೆ ತಡೆಗಟ್ಟುವ ಎರಡೂ ಪರಿಹಾರಗಳು ನಿಜವಾಗಿ ಬೆಲೆ ಏರಿಕೆಯ ನೋವು ಅನುಭವಿಸುವವರಿಗೆ ಪರಿಹಾರ  ನೀಡುತ್ತಿಲ್ಲ.

ಮೂರನೆಯದು ಮಾರುಕಟ್ಟೆ

ಸರಕುಸೇವೆಗಳ ಬೇಡಿಕೆ ಪೂರೈಕೆಗಳು ಅಥವಾ ಮಾರ್ಕೆಟ್ ಬೆಲೆ ಏರಿಕೆಯನ್ನು ನಿರ್ಧರಿಸುವುದು, ಇದನ್ನು ಸರಕಾರ ಬಿಡಿ ದೇವರು ಬಂದ್ರು ತಡೆಗಟ್ಟಲು ಸಾಧ್ಯವಿಲ್ಲ ಎನ್ನುವ ನಂಬಿಕೆಯನ್ನು ನಮ್ಮ ಮಾಧ್ಯಮಗಳು, ಪಠ್ಯಗಳು ಪ್ರಚಾರ ಮಾಡುತ್ತಿವೆ. ಅಂದರೆ ಮಾರ್ಕೆಟನ್ನು ನಾವು ನೀವು ಚುನಾಯಿಸಿದ ಇದೇ ಎಂಪಿ, ಎಂಎಲ್‍ಎಗಳ ತೀರ್ಮಾನ ಅಲ್ಲ ಅದು  ದೇವರ ತೀರ್ಮಾನ ಎನ್ನುವ ಭ್ರಮೆ ಇದೆ. ಇದು ಸರಿಯಲ್ಲ. ಮಾರ್ಕೆಟ್ ಇತರ ಎಲ್ಲ ಸಂಸ್ಥೆಗಳಂತೆ ಒಂದು ಸಂಸ್ಥೆ. ಇದನ್ನು ನಾವು ಚುನಾಯಿಸುವ ಜನಪ್ರತಿನಿಧಿಗಳೇ ಸೃಷ್ಟಿಸುವುದು. ಇದು ಸರಕಾರದ ಸೃಷ್ಟಿ ಆಗಿರುವುದರಿಂದ ಸರಕಾರ ಮನಸ್ಸು ಮಾಡಿದರೆ ಯಾವುದೇ (ಅವಶ್ಯಕ ಸರಕುಸೇವೆಗಳನ್ನು ಬಿಟ್ಟು) ಸರಕುಸೇವೆಗಳ ಬೇಡಿಕೆ ಪೂರೈಕೆಯನ್ನು ಗಣನೀಯವಾಗಿ ನಿಯಂತ್ರಿಸಬಹುದು. ಯುಕ್ರೇನ್ ಮತ್ತು ರಶ್ಯಾ ನಡುವಿನ ಯುದ್ಧ ಆರಂಭವಾದ ನಂತರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಪೂರೈಕೆ ಕಡಿಮೆ ಆಗಿತ್ತು. ಆವಾಗ ಭಾರತದ ಬೆಳೆಗಾರರು ಗೋಧಿ ರಫ್ತು ಮಾಡಲು ಮುಂದೆ ಬಂದಿದ್ದರು. ಆದರೆ ಕೇಂದ್ರ ಸರಕಾರ ಗೋಧಿ ರಫ್ತನ್ನು ಬ್ಯಾನ್ ಮಾಡಿತ್ತು. ಗೋಧಿ ರಫ್ತಿಗೆ ಅವಕಾಶ ನೀಡಿದರೆ ನಮ್ಮ ದೇಶದೊಳಗಿನ ಪೂರೈಕೆ ಕಡಿಮೆ ಆಗಿ ಗೋಧಿ ಬೆಲೆ ಹೆಚ್ಚಾಗಬಹುದೆನ್ನುವ ಗ್ರಹಿಕೆಯಿಂದ ಸರಕಾರ ಗೋಧಿ ರಫ್ತನ್ನು ತಡೆಗಟ್ಟಿದೆ.

ರಶ್ಯಾ ಯುಕ್ರೇನ್ ಯುದ್ಧ ನಂತರ ಆಮೇರಿಕಾ ರಶ್ಯಾದ ಕಚ್ಚಾ ತೈಲ ಖರೀದಿ ಮೇಲೆ ನಿಷೇಧ ಹೇರಿತ್ತು. ಆವಾಗ ರಶ್ಯಾ ಭಾರತಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಕಚ್ಚಾ ತೈಲ ಮಾರಲು ಮುಂದಾಯಿತು. ರಶ್ಯಾದ ಕಡಿಮೆ ಬೆಲೆಯ ತೈಲವನ್ನು ನಮ್ಮ ಸರಕಾರಿ ಕಂಪೆನಿಗಳು ಖರೀದಿಸುವ ಬದಲು ಸರಕಾರ ಖಾಸಗಿ ಕಂಪೆನಿಗಳಿಗೆ ಖರೀದಿಸಲು ಅನುಮತಿ ನೀಡಿದೆ. ಖಾಸಗಿ ಕಂಪೆನಿಗಳು ರಶ್ಯಾದ ಕಡಿಮೆ ಬೆಲೆಯ ಕಚ್ಚಾ ತೈಲವನ್ನು ಸಂಸ್ಕರಿಸಿ ಪರದೇಶಗಳಿಗೆ ಮಾರಿ ಕೋಟಿಗಟ್ಟಲೆ ಡಾಲರ್ ಲಾಭ ಗಳಿಸಿದವು. ಒಂದು ವೇಳೆ ರಶ್ಯಾದ ಕಡಿಮೆ ಬೆಲೆಯ ಕಚ್ಚಾ ತೈಲವನ್ನು ಸರಕಾರಿ ಕಂಪೆನಿಗಳು ಖರೀದಿಸಿ ದೇಶದೊಳಗೆ ಮಾರುತ್ತಿದ್ದರೆ ಪೆಟ್ರೋಲ್, ಡಿಸೇಲ್ ಬೆಲೆ ಕನಿಷ್ಠ ರೂ.15-20 ಕಡಿಮೆ ಆಗುತ್ತಿತ್ತು. ಸರಕು ಸಾಗಾಟ ವೆಚ್ಚ ಕಡಿಮೆ ಆಗುತ್ತಿತ್ತು ಮತ್ತು ಸರಕುಗಳ ಬೆಲೆ ಈ ರೀತಿಯಲ್ಲಿ ಗಗನಕ್ಕೆ ಏರುತ್ತಿರಲಿಲ್ಲ. ಹೀಗೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ಹಲವು ಅಸ್ತ್ರಗಳು ಸರಕಾರದ ಬತ್ತಳಿಕೆಯಲ್ಲಿವೆ.  ತೆರಿಗೆ, ಆಮದು ರಫ್ತು, ಹಣದ ಪೂರೈಕೆ ನಿಯಂತ್ರಣ, ಪ್ರೊತ್ಸಾಹ ಧನ ಹೀಗೆ ಹಲವು ಕ್ರಮಗಳ ಮೂಲಕ ಸರಕಾರ ಬೆಲೆ ಏರಿಕೆಯನ್ನು ತಡೆಗಟ್ಟಬಹುದು.

ತೆರಿಗೆಯಲ್ಲಿ ಎರಡು ವಿಧದ ತೆರಿಗೆಗಳಿವೆ – ಸರಕುಸೇವೆಗಳ ಮೇಲಿನ ತೆರಿಗೆ ಮತ್ತು ಆದಾಯದ ಮೇಲಿನ ತೆರಿಗೆ. ಸರಕುಸೇವೆಗಳ ತೆರಿಗೆ ಕಡಿಮೆ ಮಾಡಿ ಆದಾಯದ ಮೇಲಿನ ತೆರಿಗೆ ಹೆಚ್ಚಿಸಿದರೆ ಸಾಮಾನ್ಯ ಗ್ರಾಹಕರ ಸ್ವಾಧೀನ ಖರೀದಿಸುವ ಶಕ್ತಿ ಹೆಚ್ಚಾಗುತ್ತದೆ. ಖರೀದಿಸುವ ಶಕ್ತಿ ಹೆಚ್ಚಾದರೆ ಬೆಲೆ ಏರಿಕೆಯ ನೋವು ಅನುಭವಕ್ಕೆ ಬರುವುದಿಲ್ಲ. ಇದರ ಬದಲು ಸರಕುಸೇವೆಗಳ ತೆರಿಗೆ ಹೆಚ್ಚು ಮಾಡಿ ಆದಾಯ ತೆರಿಗೆ ಕಡಿಮೆ ಮಾಡಿದರೆ ಸಾಮಾನ್ಯ ಗ್ರಾಹಕರ ಸ್ವಾಧೀನ ಖರೀದಿಸುವ ಶಕ್ತಿ ಕಡಿಮೆ ಆಗುತ್ತದೆ. ಆಮದು ರಫ್ತುಗಳು ಕೆಲಸ ಮಾಡುವ ವಿಧಾನವನ್ನು ಮೇಲಿನ ಗೋಧಿ ಮತ್ತು ಕಚ್ಚಾತೈಲಗಳ ಉದಾಹರಣೆಯಲ್ಲಿ ನೋಡಿದ್ದೇವೆ. ಮೇಲಿನ ಎರಡೂ ಉದಾಹರಣೆಗಳಲ್ಲೂ ಅನುಕೂಲಸ್ಥರ ಸ್ವಾಧೀನ ಹೆಚ್ಚು ಖರೀದಿಸುವ ಶಕ್ತಿ ಕ್ರೋಢೀಕರಣಗೊಂಡಿದೆ. ಆಹಾರ ಪದಾರ್ಥ, ಕಚ್ಚಾ ಸಾಮಾಗ್ರಿ, ಮೆಶಿನರಿ ಮುಂತಾದ ಸರಕುಗಳ ಆಮದು ರಫ್ತು ಪಾಲಿಸಿಗಳನ್ನು ಏರುಪೇರು ಮಾಡುವ ಮೂಲಕ ಸರಕಾರ ಬೆಲೆ ಏರಿಕೆಯ ಮೇಲೆ ಪ್ರಭಾವ ಬೀರುತ್ತದೆ.

ಒಂದು ವೇಳೆ ಇಲ್ಲಿನ ಕಚ್ಚಾ ಸಾಮಾಗ್ರಿಗಳ ಬೆಲೆ ಹೆಚ್ಚಾಗಿದೆಯೆಂದು ಉದ್ದಿಮೆಗಳು ಸರಕಾರಕ್ಕೆ ದೂರಿದರೆ ಸರಕಾರ ಹೊರಗಿನಿಂದ ಕಚ್ಚಾ ಸಾಮಾಗ್ರಿಗಳನ್ನು (ಅಡಿಕೆ, ತೆಂಗು, ಜೋಳ, ಕಬ್ಬಿಣದ ಅದಿರು ಇತ್ಯಾದಿಗಳನ್ನು) ಆಮದು ಮಾಡಿಕೊಳ್ಳಲು ಅನುಮತಿ ನೀಡುತ್ತದೆ. ಆವಾಗ ಇಲ್ಲಿನ ಕಚ್ಚಾ ಸಾಮಾಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಅಂದರೆ ಇಲ್ಲಿನ ಕಚ್ಚಾ ಸಾಮಾಗ್ರಿ ಉತ್ಪಾದಕರ ಆದಾಯ ಕಡಿಮೆ ಆಗುತ್ತದೆ.  ಹಣದ ಪೂರೈಕೆಯ ನಿಯಂತ್ರಣ ಹಾಗು ಸರಕಾರದ ಪ್ರೋತ್ಸಾಹಗಳು ಕೆಲಸ ಮಾಡುವ ವಿಧಾನವನ್ನು ಮೇಲಿನ ಪ್ಯಾರಾಗಳಲ್ಲಿ ನೋಡಿದ್ದೇವೆ. ಒಟ್ಟಾರೆಯಾಗಿ ಹೇಳುವುದಾದರೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ಶಕ್ತಿ ಸರಕಾರಕ್ಕೆ ಇದೆ. ಆದರೆ ಸರಕಾರದ ಆಭಿವೃದ್ಧಿ ನೀತಿಯೇ ಜಿಡಿಪಿ ಗ್ರೋಥ್‍ಗೆ ಮಹತ್ವ ನೀಡುವುದರಿಂದ ಆರ್ಥಿಕ ನೀತಿಗಳು ದೊಡ್ಡ ವ್ಯಾಪಾರ, ಉದ್ದಿಮೆ, ಕೃಷಿ ಪರ ಇರುತ್ತವೆ. ಸಾಮಾನ್ಯರ ಗ್ರಾಹಕರ ಸ್ವಾಧೀನ ಖರೀದಿಸುವ ಶಕ್ತಿ ತುಂಬುವುದು ಸರಕಾರದ ಆದ್ಯತೆ ಆಗಿಲ್ಲ. ಈ ಆದ್ಯತೆಗಳು ಬದಲಾಗದಿದ್ದರೆ ಸರಕಾರದ ಆರ್ಥಿಕ ನೀತಿಗಳು ಬದಲಾಗುವುದಿಲ್ಲ.

ಸರಕಾರಗಳ ಪಾಲು

ಮೇಲಿನ ಪ್ಯಾರಾಗಳಲ್ಲಿ ಏಕೆ ಬೆಲೆ ಏರಿಕೆ ಆಗುತ್ತಿದೆ ಎನ್ನುವುದನ್ನು ವಿವರಿಸಿದ್ದೇನೆ. ಈ ವಿವರಣೆ ಹಿನ್ನೆಲೆಯಲ್ಲಿ ಬೆಲೆ ಏರಿಕೆಗೆ ರಾಜ್ಯ ಸರಕಾರ ಕಾರಣವೇ? ಅಥವಾ ಕೇಂದ್ರ ಸರಕಾರ ಕಾರಣವೇ? ತೀರ್ಮಾನಿಸುವುದು.  ತೆರಿಗೆ, ಆಮದು ರಫ್ತು, ಹಣದ ಪೂರೈಕೆ ನಿಯಂತ್ರಣ, ಪ್ರೋತ್ಸಾಹ ಧನ ಇವೆಲ್ಲ ಸರಕಾರದ ಸ್ವಾಧೀನ ಇರುವ ಬೆಲೆ ಏರಿಕೆ ನಿಯಂತ್ರಿಸುವ ಆಸ್ತ್ರಗಳು. ಇವುಗಳಲ್ಲಿ ಹೆಚ್ಚಿನ ಕ್ರಮಗಳು ಕೇಂದ್ರ ಸರಕಾರದ ಸ್ವಾಧೀನ ಇವೆ. ಹಿಂದೆ ಕೇಂದ್ರ ಸರಕಾರ ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಸೆಂಟ್ರಲ್ ಎಕ್ಸೈಸ್, ಸೆಂಟ್ರಲ್ ಕಸ್ಟಮ್‍ಗಳನ್ನು ಸಂಗ್ರಹಿಸುತ್ತಿತ್ತು. ಜಿಎಸ್‍ಟಿ ಬಂದ ನಂತರ ರಾಜ್ಯಗಳು ಸಂಗ್ರಹಿಸುತ್ತಿದ್ದ ಶೇ.80ರಷ್ಟು ಪರೋಕ್ಷ ತೆರಿಗೆಯನ್ನು ಕೇಂದ್ರ ಸರಕಾರ ಸಂಗ್ರಹಿಸುತ್ತಿದೆ. ಮೂರನೇ ಎರಡರಷ್ಟು ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ಅಧಿಕಾರ ಕೇಂದ್ರಕ್ಕಿದೆ. ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯಗಳ ಪಾಲು ಶೇ.41 ಮಾತ್ರ. ಆಮದು, ರಫ್ತನ್ನು ನಿಯಂತ್ರಿಸುವುದು, ಹಣದ ಪೂರೈಕೆ ನಿಯಂತ್ರಿಸುವುದು ಇತ್ಯಾದಿಗಳೆಲ್ಲ ಕೇಂದ್ರ ಸರಕಾರದ ಸ್ವಾಧೀನ ಇವೆ. ಆದುದರಿಂದ ಬೆಲೆ ಏರಿಕೆಯ ಬಹುಭಾಗ ಜವಾಬ್ದಾರಿ ಕೇಂದ್ರ ಸರಕಾರದ್ದಾದರೆ ಅಲ್ಪಭಾಗ ಜವಾಬ್ದಾರಿ ರಾಜ್ಯಗಳದ್ದು.

ಕೇಂದ್ರ ಸರಕಾರದ ಜಿಡಿಪಿಗೆ ಮಹತ್ವ ನೀಡುವ ಅಭಿವೃದ್ಧಿ ನೀತಿಗಳು ಉತ್ಪಾದಕರಪರ ಇವೆ. ಉತ್ಪಾದಕರ ಸಾಮರ್ಥ್ಯ ವೃದ್ಧಿಸಲು ಅವರಿಗೆ ಕಡಿಮೆ ಬಡ್ಡಿಗೆ ಸಾಲ, ಸಾಲ ಕಟ್ಟದಿದ್ದರೆ ಸಾಲಮನ್ನಾ, ರಫ್ತನ್ನು ಪ್ರೋತ್ಸಾಹಿಸಲು ಸಬ್ಸಿಡಿ, ಬಡಜನರ ತೆರಿಗೆ ಬಳಸಿಕೊಂಡು ರಸ್ತೆ, ರೈಲು ಇತ್ಯಾದಿ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಇತ್ಯಾದಿ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಇದೇ ಉತ್ಪಾದಕರು ಉತ್ಪಾದಿಸುವ ಸರಕುಸೇವೆಗಳನ್ನು ಖರೀದಿಸಿ ಅನುಭವಿಸುವ ಸಾಮಾನ್ಯ ಗ್ರಾಹಕರ ಸ್ವಾಧೀನ ಖರೀದಿಸುವ ಶಕ್ತಿ ತುಂಬುವ ಕಾರ್ಯಕ್ರಮಗಳು ತುಂಬಾ ಕಡಿಮೆ ಇವೆ. ಕೇಂದ್ರಕ್ಕೆ ಹೋಲಿಸಿದರೆ ಕೆಲವು ರಾಜ್ಯ ಸರಕಾರಗಳು ಅದರಲ್ಲೂ ದಕ್ಷಿಣದ ರಾಜ್ಯಗಳು ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಜನರ  ಖರೀದಿಸುವ ಶಕ್ತಿ ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಈ ವರ್ಷ ಕರ್ನಾಟಕ ಸರಕಾರ ನೀಡುತ್ತಿರುವ 5 ಗ್ಯಾರಂಟಿಗಳು ಇದೇ ಸಾಲಿನಲ್ಲಿ ಬರುವ ಕಾರ್ಯಕ್ರಮಗಳು. ಈ ಎಲ್ಲ ಕಾರ್ಯಕ್ರಮಗಳು ಜನರ ಸ್ವಾಧೀನ 4-5 ಸಾವಿರದಷ್ಟು ಖರೀದಿಸುವ ಶಕ್ತಿ ನೀಡಬಹುದು. ಅಷ್ಟರ ಮಟ್ಟಿಗೆ ಕರ್ನಾಟಕದ ಸಾಮಾನ್ಯ ಗ್ರಾಹಕರು ಬೆಲೆ ಏರಿಕೆಯನ್ನು ನೋವನ್ನು ಸಹಿಸಿಕೊಳ್ಳಬಹುದು.

ಡಾ. ಎಂ ಚಂದ್ರ ಪೂಜಾರಿ

ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರು.

ಇದನ್ನೂ ಓದಿ-ಬಡವರ ಮನೆಗೆ ಭಾಗ್ಯಲಕ್ಷ್ಮಿಯಾಗಲಿರುವ ʼಗೃಹಲಕ್ಷ್ಮಿʼ

Related Articles

ಇತ್ತೀಚಿನ ಸುದ್ದಿಗಳು