ಬೆಂಗಳೂರು: ಇತಿಹಾಸವನ್ನು “ಅಗೆಯುವ” ಪ್ರಯತ್ನಗಳ ವಿರುದ್ಧ ಭಾನುವಾರ ತೀವ್ರ ವಾಗ್ದಾಳಿ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಯಾವುದೇ ಮಸೀದಿಯನ್ನು ಅಗೆದರೆ ದೇವಸ್ಥಾನ ಸಿಗಬಹುದು, ಆದರೆ ಆ ದೇವಸ್ಥಾನವನ್ನೇ ಅಗೆದರೆ ಸ್ತೂಪ ಸಿಗಬಹುದು” ಎಂದು ಹೇಳಿದ್ದಾರೆ.
ಪತ್ರಕರ್ತ ನವೀನ್ ಸೂರಿಂಜೆ ಅವರ ‘ಕರಾವಳಿ ಇತಿಹಾಸದಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ನೀವು ಇತಿಹಾಸವನ್ನು ಅಗೆಯಲು ಹೋದರೆ ನೀವೇ ಸಿಕ್ಕಿಹಾಕಿಕೊಳ್ಳುತ್ತೀರಿ. ಸ್ತೂಪವನ್ನು ಅಗೆದರೆ ಏನು ಸಿಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಇತಿಹಾಸದ ಮಿತಿ 3,000 ರಿಂದ 3,500 ವರ್ಷಗಳ ಹಳೆಯದ್ದು,” ಎಂದು ತಿಳಿಸಿದರು. ವೇದ ಕಾಲದ ಬ್ರಾಹ್ಮಣ್ಯದ ಸಂಪ್ರದಾಯವು ಜಾತಿ ವ್ಯವಸ್ಥೆ ಮತ್ತು ವೇದಗಳ ಪ್ರಾಬಲ್ಯವನ್ನು ನಂಬದ ಜೈನ ಮತ್ತು ಬೌದ್ಧ ಧರ್ಮದಂತಹ ಶ್ರಮಣ ಸಂಪ್ರದಾಯಗಳೊಂದಿಗೆ ದೀರ್ಘಕಾಲದ ಹೋರಾಟ ನಡೆಸಿದೆ ಎಂಬ ಐತಿಹಾಸಿಕ ಹಿನ್ನೆಲೆಯನ್ನು ಅವರು ಈ ಮೂಲಕ ಉಲ್ಲೇಖಿಸಿದರು.
ಟಿಪ್ಪು ಸುಲ್ತಾನ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಶ್ಲಾಘಿಸಿದ ಸಚಿವರು, ಬ್ರಿಟಿಷರ ವಿರುದ್ಧ ಟಿಪ್ಪು ನಡೆಸಿದ ಹೋರಾಟವನ್ನು ಆರೆಸ್ಸೆಸ್ (RSS) ನಿಲುವಿಗೆ ಹೋಲಿಸಿದರು. ಬ್ರಿಟಿಷರ ವಿರುದ್ಧ ಆರೆಸ್ಸೆಸ್ ಒಂದು ಸಣ್ಣ ಧ್ವನಿಯನ್ನೂ ಎತ್ತಿರಲಿಲ್ಲ ಎಂದು ಟೀಕಿಸಿದ ಅವರು, 18ನೇ ಶತಮಾನದ ರಾಜ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ನಡೆಸಿದ ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳನ್ನು ಮತ್ತು ಅವರ ವಸಾಹತುಶಾಹಿ ವಿರೋಧಿ ನಿಲುವನ್ನು ಸ್ಮರಿಸಿದರು.
ಇದೇ ವೇಳೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, “ಟಿಪ್ಪು ಸುಲ್ತಾನ್ ತೋಟಗಾರಿಕೆಯ ಪಿತಾಮಹ, ಅದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಬೆಂಗಳೂರಿನ ಲಾಲ್‌ಬಾಗ್ ನಿರ್ಮಿಸಿದರು. ಆ ಭಾಗದ ಸಂಸದರು ಟಿಪ್ಪು ವಿರೋಧಿ, ಹಾಗೆಂದು ನೀವು ಲಾಲ್‌ಬಾಗ್ ಅನ್ನು ಸುಟ್ಟು ಹಾಕುತ್ತೀರಾ?” ಎಂದು ಪ್ರಶ್ನಿಸಿದರು. ತಾನು ಇಂಗ್ಲೆಂಡ್‌ಗೆ ಭೇಟಿ ನೀಡಿದಾಗ ಬ್ರಿಟಿಷ್ ಇತಿಹಾಸ ತಜ್ಞರೊಬ್ಬರು, ಬ್ರಿಟಿಷ್ ಇತಿಹಾಸದ ಪುಸ್ತಕಗಳಲ್ಲಿ ಭಾರತದ ಕೆಲವೇ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಹೆಸರಿದ್ದು ಅದರಲ್ಲಿ ಟಿಪ್ಪು ಹೆಸರು ಪ್ರಮುಖವಾಗಿದೆ ಎಂದು ಹೇಳಿದ್ದನ್ನು ಅವರು ನೆನಪಿಸಿಕೊಂಡರು.
