Home ಬೆಂಗಳೂರು ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಶೇ. 68ರಷ್ಟು ಹೆಚ್ಚಳ: ಸಚಿವ ಕೆ.ಎಚ್. ಮುನಿಯಪ್ಪ

ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಶೇ. 68ರಷ್ಟು ಹೆಚ್ಚಳ: ಸಚಿವ ಕೆ.ಎಚ್. ಮುನಿಯಪ್ಪ

0

ಬೆಂಗಳೂರು: ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಶೇಕಡಾ 68 ರಷ್ಟು ಹೆಚ್ಚಳ ಮಾಡಿದ್ದು, ಇದರಿಂದ ರಾಜ್ಯದಲ್ಲಿ ಎಲ್‌ಪಿಜಿ ಪೂರೈಕೆ ವ್ಯವಸ್ಥೆ ಗಣನೀಯವಾಗಿ ಸುಧಾರಿಸಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೆಚ್ಚುವರಿ ಪೂರೈಕೆಯಡಿ ಪ್ರತಿದಿನ ಅಂದಾಜು 29,463 ಸಿಲಿಂಡರ್‌ಗಳು ರಾಜ್ಯಕ್ಕೆ ಲಭ್ಯವಾಗಲಿದ್ದು, ಇವುಗಳನ್ನು ವಿವಿಧ ವಲಯಗಳಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಸರ್ಕಾರದ ಯೋಜನೆಯಂತೆ, ಮೊದಲ ಆದ್ಯತೆಯಡಿಯಲ್ಲಿ ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಹಾಸ್ಟೆಲ್‌ಗಳಿಗೆ ಪ್ರತಿದಿನ 4,200 ಸಿಲಿಂಡರ್‌ಗಳನ್ನು ಪೂರೈಸಲಾಗುತ್ತದೆ. ಎರಡನೇ ಆದ್ಯತೆಯಾಗಿ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು, ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಿಗೆ 1,200 ಸಿಲಿಂಡರ್‌ಗಳನ್ನು ನಿಗದಿಪಡಿಸಲಾಗಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಧಾಬಾಗಳು ಮತ್ತು ಕೈಗಾರಿಕೆಗಳಿಗೆ ಮೂರನೇ ಆದ್ಯತೆಯಡಿ ಅತಿ ಹೆಚ್ಚು ಅಂದರೆ 17,500 ಸಿಲಿಂಡರ್‌ಗಳನ್ನು ನೀಡಲಾಗುವುದು. ಇನ್ನುಳಿದಂತೆ ಕೃಷಿ, ಮೀನುಗಾರಿಕೆ ಮತ್ತು ರೇಷ್ಮೆ ಕೃಷಿ ವಲಯಗಳಿಗೆ ನಾಲ್ಕನೇ ಆದ್ಯತೆಯಡಿ 6,000 ಸಿಲಿಂಡರ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದೇ ವೇಳೆ ಬೆಲೆ ಏರಿಕೆಯ ದೂರುಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೆಲವು ಖಾಸಗಿ ವಿತರಕರು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ವಿತರಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಕಾಳಸಂತೆ ತಡೆಗಟ್ಟಲು ನಿರಂತರ ದಾಳಿ ಮತ್ತು ತಪಾಸಣೆ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದರು. ಅಲ್ಲದೆ, ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಾರ್ವಜನಿಕ ವಲಯದ ತೈಲ ಕಂಪನಿಗಳು ಲೀಟರ್‌ಗೆ 77.74 ರೂ. ದರದಲ್ಲಿ ಇಂಧನ ಮಾರಾಟ ಮಾಡುತ್ತಿವೆ ಎಂದು ತಿಳಿಸಿದರು.

You cannot copy content of this page

Exit mobile version