ಯಾದಗಿರಿ: ಜಿಲ್ಲೆಯ ಕೆಂಬಾವಿ ಸಮೀಪದ ನಾಗನೂರು ಗ್ರಾಮದಲ್ಲಿ ಭಾನುವಾರ ಈಜಲು ಹೋಗಿದ್ದ 6 ರಿಂದ 11 ವರ್ಷ ವಯಸ್ಸಿನ ಒಂದೇ ಕುಟುಂಬದ ನಾಲ್ವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಮೃತರಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಭಾನುವಾರ ಶಾಲಾ ರಜೆ ಇದ್ದ ಕಾರಣ ಮಕ್ಕಳು ಈಜಲೆಂದು ಕೃಷಿ ಹೊಂಡಕ್ಕೆ ತೆರಳಿದ್ದರು. ಕಿರಣ್ (6), ಶರತ್ (6), ಹನುಮೇಶ್ (7) ಮತ್ತು ಬಸಮ್ಮ (11) ನೀರಿಗೆ ಇಳಿದ ಸ್ವಲ್ಪ ಸಮಯದಲ್ಲೇ ಆಳ ತಿಳಿಯದೆ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರಂತ ಘಟನೆಯು ಇಡೀ ಗ್ರಾಮದಲ್ಲಿ ಶೋಕದ ಅಲೆ ಎಬ್ಬಿಸಿದೆ. ತಮ್ಮ ಮಕ್ಕಳ ಮೃತದೇಹಗಳನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸಹಾಯಕ ಕಮಿಷನರ್ ಶ್ರೀಧರ್ ಗೋಟೂರು, ಡಿವೈಎಸ್ಪಿ ಜಾವೇದ್ ಇನಾಮದಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಡ್ಲೂರು ಗ್ರಾಮಕ್ಕೆ ಭೇಟಿ ನೀಡಿ ಶೋಕತಪ್ತ ಪೋಷಕರಿಗೆ ಸಾಂತ್ವನ ಹೇಳಿದರು. ಕೆಂಬಾವಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕಳೆದ ಐದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಎರಡನೇ ಘಟನೆ ಇದಾಗಿದೆ. ಕೆಲವು ತಿಂಗಳುಗಳ ಹಿಂದಷ್ಟೇ ಪಕ್ಕದ ಖಾನಾಪುರ ಗ್ರಾಮದ ಕೃಷಿ ಹೊಂಡದಲ್ಲಿ ಮೂವರು ಬಾಲಕರು ಜಲಸಮಾಧಿಯಾಗಿದ್ದರು.
