ರಾಯ್‌ಪುರ: ಇತ್ತೀಚಿನ ದಿನಗಳಲ್ಲಿ ಛತ್ತೀಸ್‌ಗಢದಲ್ಲಿ ನಕಲಿ ಜಾತಿ ಸರ್ಟಿಫಿಕೇಟ್ ವಿಷಯ ಬಹುದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಇದನ್ನು ಪ್ರತಿಭಟಿಸಿ ಎಸ್‌ಸಿ-ಎಸ್‌ಟಿ ಯುವಕರು ಬೀದಿಗೆ ಬಂದು ಬೆತ್ತಲೆ ಪ್ರದರ್ಶನದ ಮೂಲಕ ಪ್ರತಿಭಟನೆ ಮಾಡುತ್ತಿದ್ದಾರೆ.
ಛತ್ತೀಸ್‌ಗಢದಲ್ಲಿ 267 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಕಲಿ ಪ್ರಮಾಣ ಪತ್ರ ಮಾಡಿಸಿ ಕೆಲಸ ಮಾಡುತ್ತಿದ್ದರೂ ಅವರ ವಿರುದ್ಧ ಆಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾನಿರತ ಯುವಕರು ಸುದ್ದಿಗಾರರಿಗೆ ತಿಳಿಸಿದರು.
ಪ್ರತಿಭಟನಾ ನಿರತ ಯುವಕರು ಬೆತ್ತಲೆಯಾಗಿ ವಿಧಾನಸೌಧಕ್ಕೆ ತೆರಳಿ ನಕಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಈಗಾಗಲೇ ಯುವಕರಿಗೆ ಎಚ್ಚರಿಕೆ ನೀಡಿದ್ದರು ಮತ್ತು ರಾತ್ರಿಯಿಡೀ ಪೊಲೀಸ್ ಬಂಧಿಸಿಟ್ಟಿದ್ದರು. ಆದರೆ, ಇದರ ಹೊರತಾಗಿಯೂ ಯುವಕರು ಪ್ರದರ್ಶನದಲ್ಲಿ ಯಶಸ್ವಿಯಾದರು, ನಂತರ ಅವರನ್ನು ವಿಧಾನಸಭಾ ಬಳಿ ಬಂಧಿಸಲಾಯಿತು.
ಛತ್ತೀಸ್ ಗಢ ರಚನೆಯಾದಾಗಿನಿಂದ, ಮೀಸಲಾತಿಯೇತರ ವರ್ಗದ ಜನರು ಸರ್ಕಾರಿ ಉದ್ಯೋಗಗಳು ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮೀಸಲಾತಿ ವರ್ಗದ ಕೋಟಾದ ಲಾಭವನ್ನು ಅನ್ಯಾಯದ ರೀತಿಯಲ್ಲಿ ಪಡೆಯುತ್ತಿದ್ದಾರೆ ಎಂದು ರಾಜ್ಯದ ವಿವಿಧ ಇಲಾಖೆಗಳಿಗೆ ದೂರುಗಳು ಬಂದಿದ್ದವು. ಈ ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಉನ್ನತ ಮಟ್ಟದ ಜಾತಿ ಪರಿಶೀಲನಾ ಸಮಿತಿಯನ್ನು ರಚಿಸಿತ್ತು, ಅದರ ವರದಿಯ ಆಧಾರದ ಮೇಲೆ, ಸಾಮಾನ್ಯ ಆಡಳಿತ ಇಲಾಖೆ ನಕಲಿ ಜಾತಿ ಪ್ರಮಾಣಪತ್ರಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ನೌಕರರನ್ನು ಪ್ರಮುಖ ಹುದ್ದೆಗಳಿಂದ ತಕ್ಷಣ ತೆಗೆದುಹಾಕಲು ಆದೇಶ ಹೊರಡಿಸಿತ್ತು. ಆದಾಗ್ಯೂ, ಇಲ್ಲಿಯವರೆಗೆ ಈ ಆದೇಶಗಳು ಕಾರ್ಯರೂಪಕ್ಕೆ ಬಾರದೆ ಕಾಗದದ ಮೇಲಷ್ಟೇ ಉಳಿದುಹೋಗಿವೆ ಎನ್ನಲಾಗಿದೆ.
ನಗರದ ಪಾಂಡ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಮಾ ಸಿಯೋನಿ ಮೋರ್ ಬಳಿ ಅಶ್ಲೀಲ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.