ಹಾಸನ: ಸಂವಿಧಾನಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಜವಾಬ್ದಾರಿಯಿಲ್ಲದೆ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಮಾತನಾಡಿದ್ದಾನೆ. ಇದು ಖಂಡನೀಯ ಎಂದು ದೇಶದ ಗೃಹಮಂತ್ರಿ ಅಮಿತ್ ಶಾ ವಿರುದ್ಧ ಅಂಬೇಡ್ಕರ್ ಪ್ರತಿಮೆ ಮುಂದೆ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೆ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ಮಾತನಾಡಿ, ದೇಶದ ಗೃಹಮಂತ್ರಿ ಅಮಿತ್ ಶಾ. ಅವರು ಡಿಸೆಂಬರ್ ೧೭ ರಂದು ಸಂಸತ್ತಿನಲ್ಲಿ ಮಾತನಾಡುವಾಗ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅತ್ಯಂತ ಹಗುರವಾಗಿ ಮತ್ತು ಜವಾಬ್ದಾರಿಯಿಲ್ಲದೆ ನಾಲಿಗೆಯ ಮೇಲೆ ಹಿಡಿತವಿಲ್ಲದೆ ಮಾತನಾಡಿರುವುದು ಖಂಡನೀಯ. ಈತ ಹೇಳಿರುವುದೇನೆಂದರೆ, ಈಗ ಫ್ಯಾಷನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುತ್ತಿರುವುದು. ಇವರೆಲ್ಲಾ ಇಷ್ಟು ಸಾರಿ ಭಗವಂತನ ಸ್ಮರಣೆ ಮಾಡಿದ್ದೇ ಆಗಿದ್ದಲ್ಲಿ ಏಳು ಜನ್ಮದವರೆಗೆ ಸ್ವರ್ಗವಾದರೂ ದೊರೆಯುತ್ತಿತ್ತು ಎಂದು. ಅಂಬೇಡ್ಕರ್ ಅವರ ಬಗ್ಗೆ ಇಷ್ಟೊಂದು ಹಗುರವಾಗಿ ನಾಲಿಗೆ ಹರಿಬಿಟ್ಟಿರುವ ಅಮಿತ್ ಶಾಗೆ ಒಂದು ಗಂಭೀರವಾದ ಎಚ್ಚರಿಕೆಯೊಂದನ್ನು ರವಾನಿಸಬೇಕಾಗಿದೆ ಎಂದರು. ಹೇಳುತ್ತೇವೆ ಕೇಳು ಅಮಿತ್ ಶಾ ನಮಗೆ ಏಳು ಜನ್ಮದ ಪುಣ್ಯ, ಸ್ವರ್ಗ ಬೇಡವೇ ಬೇಡ. ನಮಗೆ ಸ್ವರ್ಗ ನರಕಗಳಲ್ಲಿ ನಂಬಿಕೆ ಇಲ್ಲ. ನಮಗೆ ಅಗತ್ಯವೂ ಇಲ್ಲ. ನಮಗೆ ಅಂಬೇಡ್ಕರ್ ಒಬ್ಬರೇ ಏಕೈಕ ದೇವರು. ಅದರಲ್ಲಿ ಎಂದಿಗೂ ರಾಜಿ ಇಲ್ಲ. ಅಂಬೇಡ್ಕರ್ ಅವರ ಹೆಸರನ್ನು ಉಸಿರಾಗಿಸಿಕೊಂಡಿದ್ದೇವೆ. ಕೊನೆಯ ಉಸಿರಿರುವವರೆಗೂ ಅಂಬೇಡ್ಕರ್ ಅವರ ಹೆಸರನ್ನೇ ಉಸಿರಾಗಿಸಿಕೊಳ್ಳುತ್ತೇವೆ ಕೂಡಾ ಅಮಿತ್ ಶಾ ನೀವೆಲ್ಲಾ ಅಂಬೇಡ್ಕರ್ ಅವರ ಸಾಧನೆ, ಹೇಳಿಗೆ ಸಹಿಸದೆ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಬರುವ ಮೂಲಕ ನಿಮ್ಮ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದೀರಿ ಎಂದು ದೂರಿದರು. ಅಂಬೇಡ್ಕರ್ ಅವರನ್ನು ಮತ್ತು ಮತ್ತವರ ಸಮುದಾಯಗಳನ್ನು ಒಪ್ಪಿಕೊಳ್ಳಲು ನೀವು ಎಂದಿಗೂ ತಯಾರಿಲ್ಲ. ಇಡೀ ವಿಶ್ವವೇ ಒಪ್ಪಿಕೊಂಡು ವಿಶ್ವ ಸಂಸ್ಥೆ ಇಂದು ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ ೧೪ ರ ದಿನವನ್ನು ವಿಶ್ವ ಜ್ಞಾನದ ದಿನ ಎಂದು ಘೋಷಿಸಿದೆ. ಅಂಬೇಡ್ಕರ್ ಎಂದರೆ ಜ್ಞಾನದ ಸಂಕೇತ. ನೀವು ಅವರನ್ನು ಅರಗಿಸಿಕೊಳ್ಳಲು ಆಗದಂತ ಅಸೂಯೆ..ಛೇ…ನಮಗೆ ನೀವು ಹೇಳುವ ಸ್ವರ್ಗ, ದೇವರು, ಸ್ಮರಣೆ ಬೇಡ. ಅಂಬೇಡ್ಕರ್ ಹೆಸರೊಂದೇ ಸಾಕು. ನಮಗದೇ ಶಕ್ತಿ ನಮಗದೇ ಚೈತನ್ಯ ಮತ್ತು ಸ್ಪೂರ್ತಿ. ಸಾವಿರಾರು ವರ್ಷಗಳಿಂದ ನೀವು ಹೇಳುವ ದೇವರುಗಳನ್ನು ಪೂಜಿಸಿ ಸಾಕಾಯ್ತು. ನಿಮ್ಮ ದೇವರು ನಮ್ಮನ್ನು ದೂರವೇ ಇಟ್ಟ. ಕಡೆಗೆ ಎಲ್ಲರಂತೆ ದೇವಾಲಯದೊಳಕ್ಕೆ ಬಿಟ್ಟುಕೊಳ್ಳಲಿಲ್ಲ ಮಾತ್ರವಲ್ಲ, ದೇವಾಲಯದ ಬಳಿಗೆ ಸುಳಿದರೂ ನಮಗೆ ಕಷ್ಟ ಕೊಡುತ್ತಿದ್ದ. ಅಂಬೇಡ್ಕರ್ ಬಂದ ಮೇಲೆಯೇ ನಮಗೆ ಸ್ವರ್ಗ, ಮೋಕ್ಷ ಎಲ್ಲವೂ… ನಮಗೆ ಅಂಬೇಡ್ಕರ್ ಸ್ಮರಣೆಯೇ ಸಾಕು ಎಂದರು.
ಅಮಿತ್ ಶಾನನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾ ಮಾಡಲು ಈ ಮೂಲಕ ಅಗ್ರಹಪಡಿಸುತ್ತೇವೆ. ಇಲ್ಲವಾದಲ್ಲಿ ಈತನನ್ನು ವಜಾ ಮಾಡುವವರೆಗೂ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಮುಂದುವರೆಯುತ್ತವೆ ಎಂದು ಎಚ್ಚರಿಸಿ ಮನವಿ ನೀಡಿದರು.
ಪ್ರತಿಭಟನೆಯಲ್ಲಿ ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಯ ದಲಿತ ಚಳುವಳಿ ಜಿಲ್ಲಾ ಸಂಚಾಲಕ ಕೃಷ್ಣ, ರೈತ ಸಂಘದ ವಿಠಲಾ, ಜಗದೀಶ್, ಪವಿತ್ರ, ಕಾಳಕ್ಕ, ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.