ಮಂಡ್ಯ : ಕೃಷಿ ಇಲಾಖೆ ಅಧಿಕಾರಿಗಳ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಮಂಡ್ಯ ಜಿಲ್ಲಾ ಬಿಜೆಪಿ ‘ಪೇಸಿಎಸ್ (Pay CS) ಅಭಿಯಾನ’ ನಡೆಸಿದೆ. ಮಂಡ್ಯ ಪಟ್ಟಣ ವ್ಯಾಪ್ತಿಯಲ್ಲಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಗರದ ಹಲವು ಕಡೆಗಳಲ್ಲಿ ‘ಪೇಸಿಎಸ್’ ಪೋಸ್ಟರ್ ಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ‘ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರೂ ಆದ ಎನ್. ಚಲುವರಾಯಸ್ವಾಮಿ ಅವರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಪ್ರತಿ ತಾಲೂಕಿನ ಕೃಷಿ ಅಧಿಕಾರಿಗಳಿಂದ 6 ರಿಂದ 8 ಲಕ್ಷ ಲಂಚದ ಹಣವನ್ನು ಸಂಗ್ರಹ ಮಾಡಲು ಸೂಚಿಸಿದ್ದರ ವಿರುದ್ಧ ರಾಜ್ಯಪಾಲರಿಗೆ ಅಧಿಕಾರಿಗಳು ಪತ್ರ ಬರೆದು ನಮ್ಮ ಕುಟುಂಬ ಸಮೇತ ವಿಷ ಕುಡಿಯುತ್ತೇವೆ ಎಂದು ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಲುವರಾಯಸ್ವಾಮಿ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರದ ಇತಿಹಾಸದಲ್ಲೇ ಅಧಿಕಾರಿಗಳು ಸಚಿವರ ವಿರುದ್ಧ ಪತ್ರ ಬರೆದಿರುವುದು ಲಜ್ಜೆಗೇಡಿತನದ ಸಂಗತಿಯಾಗಿದೆ. ಈ ಕೂಡಲೇ ಸಚಿವರು ಆರೋಪ ಮುಕ್ತರಾಗುವವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಮಂಡ್ಯ ನಗರದ ಹಲವೆಡೆ ‘ಪೇಸಿಎಸ್’ ಪೋಸ್ಟರ್ ಅಂಟಿಸಿದ್ದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಸಂಜಯ್ ವೃತ್ತದಲ್ಲಿ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ವಶಕ್ಕೆ ಪಡೆದು, ಪೋಸ್ಟರ್ ಹರಿದು ಹಾಕಿದ್ದಾರೆ.
ಇತ್ತ ಕಾಂಗ್ರೆಸ್ ಮುಖಂಡರೂ ಸಹ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಎನ್.ಚಲುವರಾಯಸ್ವಾಮಿ ಅವರ ಜನಪ್ರಿಯತೆ ಮತ್ತು ಕಾಂಗ್ರೆಸ್ ಸರ್ಕಾರದ ಮೇಲಿನ ಅಸಹನೆಯಿಂದ ಅವರ ಜನಪ್ರಿಯತೆ ಕೆಡಿಸಲು ಯಾರೋ ಷಡ್ಯಂತ್ರ ರೂಪಿಸಿದ್ದಾರೆ. ಈ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಮಂಡ್ಯ ಜಿಲ್ಲಾ ಪೊಲೀಸರಿಗೆ ಮನವಿ ಮಾಡಿದ್ದಾರೆ.