ಶೃಂಗೇರಿ-ಕೊಪ್ಪ : ಶೃಂಗೇರಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಅತ್ಯಂತ ವಿಶಾಲವಾದ ಭೂ ವಿಸ್ತೀರ್ಣ ಹೊಂದಿರುವ, 3 ತಾಲ್ಲೂಕು ವ್ಯಾಪ್ತಿಗೆ ವಿಸ್ತರಿಸಿಕೊಂಡಿರುವ ಕ್ಷೇತ್ರ. ಇಂತಹ ಒಂದು ಕ್ಷೇತ್ರದಲ್ಲಿ ಕೇವಲ 100 ಹಾಸಿಗೆಗಳ ಒಂದು ಸುಸಜ್ಜಿತ ಆಸ್ಪತ್ರೆಯ ವ್ಯವಸ್ಥೆ ಇಲ್ಲವೆಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂತಹದ್ದೊಂದು ಮಹತ್ವದ ಬೇಡಿಕೆಯನ್ನು ಇಟ್ಟು ಆಸ್ಪತ್ರೆ ಹೋರಾಟ ಸಮಿತಿ ‘ಕೊಪ್ಪ ಚಲೋ’ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ.

ಕಳೆದ 15 ವರ್ಷಗಳಿಂದ ಈ ಕ್ಷೇತ್ರಕ್ಕೆ ಸುಸಜ್ಜಿತ ಆಸ್ಪತ್ರೆಗೆ ಇಲ್ಲಿನ ಜನತೆ, ವಿವಿಧ ಜನಪರ, ಪ್ರಗತಿಪರ ಸಂಘಟನೆಗಳು ನಿರಂತರವಾಗಿ ಬೇಡಿಕೆ ಇಡುತ್ತಲೇ ಬಂದಿವೆ. ಆಸ್ಪತ್ರೆ ನಿರ್ಮಾಣಕ್ಕೆ 2007 ರಲ್ಲೇ ಹಣ ಬಿಡುಗಡೆ ಆಗಿದ್ದರೂ ಇಡೀ ಶೃಂಗೇರಿ ವ್ಯಾಪ್ತಿಯಲ್ಲಿ ಅದಕ್ಕೆ ಬೇಕಾದಂತಹ ಸೂಕ್ತ ಜಾಗದ ವ್ಯವಸ್ಥೆ ಮಾಡಲು ಇಲ್ಲಿನ ರಾಜಕಾರಣಿಗಳು ಸೋತಿರುವುದು ದುರಂತ.
ಶೃಂಗೇರಿ ಒಂದು ತಾಲ್ಲೂಕು ಕೇಂದ್ರವಾದರೂ ಇಲ್ಲಿ ಇರುವುದು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಂತಹ ಸಣ್ಣ ಆಸ್ಪತ್ರೆ. ಇಲ್ಲಿನ ನಾಗರೀಕರು ಜ್ವರ, ಶೀತ ತಲೆನೋವಿನಂತಹ ಸಣ್ಣಪುಟ್ಟ ಖಾಯಿಲೆಗೂ ಸಹ ದೂರದ ಕೊಪ್ಪ, ಶಿವಮೊಗ್ಗ, ತೀರ್ಥಹಳ್ಳಿ ಬಾಳೆಹೊನ್ನೂರು ಊರಿಗೇ ಹೋಗುವ ಅನಿವಾರ್ಯತೆ ಇದೆ. ಎಷ್ಟೋ ಸಂದರ್ಭದಲ್ಲಿ ಸಣ್ಣಪುಟ್ಟ ಶೃಶ್ರೂಷೆಯಿಂದ ಉಳಿಸಿಕೊಳ್ಳಬಹುದಾದ ಎಷ್ಟೋ ಜೀವಗಳು ಸೂಕ್ತ ಚಿಕಿತ್ಸೆ ದೊರಕದೇ ದಾರಿ ಮಧ್ಯೆಯೇ ಜೀವ ಹೋದ ಉದಾಹರಣೆ ಹಲವಷ್ಟಿದೆ. ಹೀಗೆ ಜೀವ ಹೋದ ಪ್ರತೀ ಸಂದರ್ಭದಲ್ಲಿಯೂ ಆಸ್ಪತ್ರೆ ಬೇಡಿಕೆಯ ಕೂಗು ಹೊರಡುತ್ತದೆ, ಕೆಲವು ದಿನಗಳ ನಂತರ ತಣ್ಣಗಾಗುತ್ತದೆ.
ಇಂತಹ ಹಲವಷ್ಟು ಕಾರಣಗಳಿಂದ ಆಸ್ಪತ್ರೆ ಬೇಡಿಕೆ ಬಿಡದೇ ಕೇಳಿ ಬರುತ್ತಿದೆ. ಸುಮಾರು 25 ವರ್ಷಗಳಿಂದಲೂ ಇಲ್ಲಿನ ನಾಗರೀಕರು ಶೃಂಗೇರಿ ಕ್ಷೇತ್ರದಲ್ಲೊಂದು ವ್ಯವಸ್ಥಿತವಾದ ಆಸ್ಪತ್ರೆಗೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಹಣ ಬಿಡುಗಡೆ ಆಗಿದ್ದರೂ ಕಾಣದ ಕೈಗಳ ಕೈವಾಡದಿಂದ ಆಸ್ಪತ್ರೆಗೆ ಜಾಗ ಮಂಜೂರು ಮಾಡಲು ರಾಜ್ಯದಲ್ಲಿ ಆಡಳಿತ ನಡೆಸಿದ ಮೂರೂ ಪಕ್ಷಗಳ ನೇತೃತ್ವದ ಎಲ್ಲಾ ಸರ್ಕಾರಗಳು ಸೋತಿವೆ.
ಇನ್ನು ಈ ಬೇಡಿಕೆ ತೀವ್ರಗೊಳಿಸಿ ಕಳೆದ 2 ವರ್ಷಗಳಿಂದ ಮೇಲಿಂದ ಮೇಲೆ ಒತ್ತಾಯ ಮಾಡಲಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಇದೇ ಕಾರಣಕ್ಕೆ ಇಲ್ಲಿನ ಆಸ್ಪತ್ರೆ ಹೋರಾಟ ಸಮಿತಿಯ ಜೊತೆಗೆ ಪ್ರಮುಖ ಸಂಘಟನೆಗಳು ಇಡೀ ಶೃಂಗೇರಿಯನ್ನು ಬಂದ್ ಮಾಡಿಸಿದ್ದವು. ಅಂದು ನಡೆದ ಹೋರಾಟಕ್ಕೆ ಸರ್ಕಾರ ಶೀಘ್ರದಲ್ಲೇ ಭೂ ಮಂಜೂರು ಮಾಡಿಸುವ ಬಗ್ಗೆಯೂ ಭರವಸೆ ನೀಡಿತ್ತು ಆದರೆ ಈ ಬಗ್ಗೆ ಇಂದಿನ ವರೆಗೂ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದು ನಿಗೂಢ.
ಸಧ್ಯ ಶೃಂಗೇರಿ ಆಸ್ಪತ್ರೆ ಹೋರಾಟ ಸಮಿತಿ ನವೆಂಬರ್ 25 ಮತ್ತು 26 ರ ಎರಡೂ ದಿನ ಅಹೋರಾತ್ರಿ ಹೋರಾಟಕ್ಕೆ ಕರೆ ಕೊಟ್ಟು ಸತ್ಯಾಗ್ರಹ ಪ್ರಾರಂಭಿಸಿದೆ. ಶೃಂಗೇರಿ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದ್ದು, ಬೇಡಿಕೆ ಈಡೇರದೇ ಇದ್ದಲ್ಲಿ, 27 ರ ಕೊಪ್ಪ ತಾಲ್ಲೂಕಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರುವ ದಿನ ಕೊಪ್ಪ ಚಲೋ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದೆ.
ಇದಕ್ಕೆ ನಾಡಿನ ವಿವಿಧ ಜನಪರ ಪ್ರಗತಿಪರ ಸಂಘಟನೆಗಳ ಬೆಂಬಲ ಸಿಕ್ಕಿದ್ದು ನವೆಂಬರ್ 27 ರಂದು ನಿರ್ಣಾಯಕ ಹೋರಾಟದ ಮೂಲಕ ಮುಖ್ಯಮಂತ್ರಿಗಳಿಗೂ ಎಚ್ಚರಿಕೆ ಸಂದೇಶ ನೀಡಲು ಸಜ್ಜಾಗಿವೆ.