Home ಬ್ರೇಕಿಂಗ್ ಸುದ್ದಿ ಹಾಸನ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳಿಂದ ನಾಳೆ ಹೋರಾಟ

ಹಾಸನ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳಿಂದ ನಾಳೆ ಹೋರಾಟ

ಹಾಸನ: ಪರಿಶಿಷ್ಟ ಜಾತಿಯೊಳಗಿನ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಹಾಸನ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟವು ಮತ್ತೊಮ್ಮೆ ಹೋರಾಟದ ಘೋಷಣೆ ಮಾಡಿದೆ. ಕಳೆದ ಮೂರು ದಶಕಗಳಿಂದ ಜನಸಂಖ್ಯೆ ಆಧಾರದ ಮೇಲೆ ಒಳಮೀಸಲಾತಿ ಜಾರಿಗೆ ಒತ್ತಾಯಿಸುತ್ತಾ ಬಂದಿರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಬೇಕು ಎಂದು ಒಕ್ಕೂಟದ ಅಧ್ಯಕ್ಷ ಎಚ್.ಪಿ. ಶಂಕರ್ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗವನ್ನು ರಚಿಸಿ ವರದಿ ಸ್ವೀಕರಿಸಿದೆ ಎಂದರು. ಆಯೋಗವು ಮಾದಿಗ (ಎಡಗೈ) ಜಾತಿಗಳಿಗೆ ಶೇ.6, ಹೊಲಯ (ಬಲಗೈ) ಜಾತಿಗಳಿಗೆ ಶೇ.6 ಮತ್ತು ಇತರೆ ಸ್ಪಶ್ಯ ಜಾತಿಗಳಿಗೆ ಶೇ.5 ಒಳಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ. ಈಗ ಖಾಲಿ ಇರುವ 56,432 ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಈ ಒಳಮೀಸಲಾತಿಯನ್ನು ಅನ್ವಯಿಸಬೇಕೆಂದು ಒತ್ತಾಯಿಸಿದರು. ಇದೇ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 25ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾಂಕೇತಿಕ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಮಾರ್ಚ್ 27ರಂದು ರಾಜ್ಯ ಸರ್ಕಾರವು ಒಳಮೀಸಲಾತಿ ಕುರಿತಂತೆ ವಿಶೇಷ ಸಚಿವ ಸಂಪುಟ ಸಭೆ ಕರೆದಿರುವ ಹಿನ್ನೆಲೆಯಲ್ಲಿ, ಅದೇ ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಮಾದಿಗ ಸಂಘಟನೆಗಳ ಮಹಾಸಭೆ ನಡೆಯಲಿದ್ದು, ಈ ಸಭೆಯನ್ನು ಯಶಸ್ವಿಗೊಳಿಸಲು ಮಾದಿಗ ಸಮಾಜದ ಮುಖಂಡರು, ನೌಕರ ಸಂಘಟನೆಗಳು, ಯುವಕರು ಹಾಗೂ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರ ಶೇಖರ್ ರಾಮಚಂದ್ರ ಮಂಜುನಾಥ್ ಪುಟ್ಟರಾಜು, ಲೋಕೇಶ್ ಖ್ಯಾತನಹಳ್ಳಿ ಇತರರು ಹಾಜರಿದ್ದರು.

You cannot copy content of this page

Exit mobile version