Home ಬ್ರೇಕಿಂಗ್ ಸುದ್ದಿ ಹಾಸನ ನಗರ ಪಾಲಿಕೆ ಬಜೆಟ್ ಪೂರ್ವ ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ

ಹಾಸನ ನಗರ ಪಾಲಿಕೆ ಬಜೆಟ್ ಪೂರ್ವ ಸಭೆಯಲ್ಲಿ ಸಾರ್ವಜನಿಕರ ಆಕ್ರೋಶ

0

ಹಾಸನ :  ನಗರದ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ಮಹಾನಗರ ಪಾಲಿಕೆಯ 2026-27ನೇ ಸಾಲಿನ ಆಯವ್ಯಯ ತಯಾರಿಕೆಯ ಮೊದಲ ಹಂತದ ಸಾರ್ವಜನಿಕ ಸಮಾಲೋಚನಾ ಸಭೆ, ಸಾರ್ವಜನಿಕರ ತೀವ್ರ ಆಕ್ರೋಶ, ಸಮಸ್ಯೆಗಳ ಸುರಿಮಳೆ ಮತ್ತು ಕೆಲ ಕ್ಷಣಗಳ ಕಾಲ ಗೊಂದಲ, ವಾಗ್ವಾದಕ್ಕೆ ಸಾಕ್ಷಿಯಾಯಿತು. ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆ ಪಡೆದ ಬಳಿಕ ನಡೆಯುತ್ತಿರುವ ಮೊದಲ ಬಜೆಟ್ ಪೂರ್ವ ಸಭೆಯಾಗಿರುವ ಕಾರಣ, ಸಭೆಗೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಮುಂದೆ ಮಂಡಿಸಿದರು.

ಸಭೆಯಲ್ಲಿ ಕೆಲ ವಿಚಾರಗಳಲ್ಲಿ ಅಧಿಕಾರಿಗಳ ಪರ-ವಿರೋಧದ ವಾಗ್ವಾದ ತೀವ್ರಗೊಂಡು ಪರಿಸ್ಥಿತಿ ಉದ್ವಿಗ್ನವಾಗಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ ಶಾಂತಿ ಕಾಪಾಡಿದರು. ಬಳಿಕ ಸಭಾಂಗಣದೊಳಗೆ ಪೊಲೀಸರ ಹಾಜರಾತಿ ಮುಂದುವರಿಯಿತು.

ಗುಡ್ಡೆನಹಳ್ಳಿ ನಿವಾಸಿ ರಂಗಸ್ವಾಮಿ ಗ್ರಾಮಸ್ಥರ ಪರವಾಗಿ ಮಾತನಾಡಿ, ಸರ್ವೆ ನಂಬರಿನಲ್ಲಿ ಇರುವ ಸರ್ಕಾರಿ ಕೆರೆಯ ದುಸ್ಥಿತಿಯನ್ನು ವಿವರಿಸಿದರು.

ಕೆರೆಯಲ್ಲಿ ಕಸ ಸುರಿದು ನೀರು ಸಂಪೂರ್ಣವಾಗಿ ಮಲಿನಗೊಂಡಿದ್ದು, ಗಿಡಗಂಟೆ ಬೆಳೆದು ದುರ್ವಾಸನೆ ಹರಡುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ನಾನಾ ಕಾಯಿಲೆಗಳು ಹರಡುವ ಭೀತಿ ಎದುರಾಗಿದೆ. ಎಂದು ಆತಂಕ ವ್ಯಕ್ತಪಡಿಸಿದರು. ಈ ಕೆರೆಯನ್ನು ಸ್ವಚ್ಛಗೊಳಿಸಿ ಕೃಷಿಗೆ ನೀರು ಹಾಕಲು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಾಗಿ ಬಳಸಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಸಿಗದಿರುವುದಾಗಿ ದೂರಿದರು. ಈ ವಿಷಯವನ್ನು ಪೌರಾಯುಕ್ತರ ಗಮನಕ್ಕೆ ತಂದಾಗ ಗ್ರಾಮಸ್ಥರ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿ ಉಡಾಫೆ ಉತ್ತರ ನೀಡಲಾಗಿದೆ. ಎಂಬ ಆರೋಪವೂ ಕೇಳಿಬಂತು. ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಮಾತನಾಡಬಾರದು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದಾಗ ಸಭೆಯಲ್ಲಿ ಗೊಂದಲ ಉಂಟಾಗಿ ವಾಗ್ವಾದ ಜೋರಾಯಿತು.

ಬಿ. ಕಾಟೀಹಳ್ಳಿಯ ಮುಖ್ಯ ರಸ್ತೆಯಲ್ಲಿ ಪೈಪ್ ಒಡೆದು ನೀರು ವ್ಯರ್ಥವಾಗುತ್ತಿರುವುದು, ಬಸ್ ತಂಗುದಾಣವನ್ನು ದ್ವಿಚಕ್ರ ವಾಹನ ಪಾರ್ಕಿಂಗ್‌ಗಾಗಿ ಬಳಸಿಕೊಳ್ಳುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದು, ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ನಗರದ ವಿವಿಧ ಭಾಗಗಳಲ್ಲಿ ಅಂಗಡಿ ಮಾಲೀಕರು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿ ತಮ್ಮ ವಸ್ತುಗಳನ್ನು ಇಟ್ಟಿರುವುದರಿಂದ ಸಾರ್ವಜನಿಕರು ನಡೆದು ಹೋಗುವುದೇ ಕಷ್ಟವಾಗಿದೆ. ಈ ಅಕ್ರಮಗಳನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಸಭೆಯಲ್ಲಿ ಮನವಿ ಮಾಡಲಾಯಿತು.

ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಮಾತನಾಡಿ, ಹಾಸನ ಮಹಾನಗರ ಪಾಲಿಕೆಯ ವಿದ್ಯುತ್ ಶಾಖೆಯ ಸಹಾಯಕ ಅಭಿಯಂತರ ಕೆ.ಆರ್. ಕವಿತಾ ಅವರಿಗೆ ವಿದ್ಯುತ್ ಶಾಖೆಯ ಹೊರತಾಗಿ ಪರಿಸರ ನೈರ್ಮಲ್ಯ, ಕುಡಿಯುವ ನೀರು, ಯುಜಿಡಿ, ಕಸ ನಿರ್ವಹಣೆ, ಟೆಂಡರ್ ಪ್ರಕ್ರಿಯೆ, ವಾಹನಗಳ ಇಂಧನ ಹಾಗೂ ನಿರ್ವಹಣೆ, ಹೊರಗುತ್ತಿಗೆ ಮತ್ತು ಪೌರಕಾರ್ಮಿಕರ ಮೇಲ್ವಿಚಾರಣೆ ಸೇರಿದಂತೆ ಅನೇಕ ಪ್ರಮುಖ ಜವಾಬ್ದಾರಿಗಳನ್ನು ಒಬ್ಬರಿಗೇ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಎಲ್ಲ ಶಾಖೆಗಳಿಗೆ ಪ್ರತ್ಯೇಕ ಇಂಜಿನಿಯರ್‌ಗಳಿದ್ದರೂ ಇಷ್ಟೊಂದು ಹೊಣೆಗಾರಿಕೆಗಳನ್ನು ಒಬ್ಬರೇ ನಿಭಾಯಿಸುವುದು ಅಸಂಗತವಾಗಿದೆ ಎಂದು ಟೀಕಿಸಿದರು.

ಕೆಲಸದ ಒತ್ತಡದಿಂದ ಕೆಳ ಹಂತದ ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಏರುಧ್ವನಿ ಮತ್ತು ದರ್ಪದ ವರ್ತನೆ ನಡೆಯುತ್ತಿದೆ. ಎಂಬ ಆರೋಪವೂ ಕೇಳಿಬಂತು. ಅಲ್ಲದೆ, ತಮ್ಮ ಕೆಲಸಗಳ ಪ್ರಚಾರಕ್ಕಾಗಿ ಸ್ವತಃ ವೀಡಿಯೋ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಪ್ರವೃತ್ತಿಯ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದರು.

ಅವರನ್ನು ಇತರ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ವಿದ್ಯುತ್ ಶಾಖೆಯ ಕೆಲಸಕ್ಕೆ ಮಾತ್ರ ನಿಯೋಜಿಸಬೇಕೆಂದು ಕೆಲ ಸಮಯ ಸ್ತಳದಲ್ಲೆ ಪ್ರತಿಭಟನೆ ಕೂಡ ನಡೆಸಿದರು.

ನಗರದ ವೃತ್ತಗಳಲ್ಲಿ ರಸ್ತೆ ದಾಟುವುದು ಅತಿ ಕಷ್ಟಕರವಾಗಿದ್ದು, ಪಾದಚಾರಿಗಳ ಸುರಕ್ಷತೆಗೆ ಪ್ಲೈಓವರ್‌ಗಳ ಅಗತ್ಯವಿದೆ ಎಂದು ಕೆಲವರು ಸಲಹೆ ನೀಡಿದರು. ಅಂಬೇಡ್ಕರ್ ವೃತ್ತಗಳಲ್ಲಿ ಪ್ರತಿಮೆ ಸ್ಥಾಪನೆ, ಪರಿಶಿಷ್ಟ ಜಾತಿ-ಪಂಗಡದವರಿಗಾಗಿ ಟೈಲರಿಂಗ್ ಮಿಷನ್‌ಗಳ ವಿತರಣೆಯನ್ನೂ ಒತ್ತಾಯಿಸಿದರು.

You cannot copy content of this page

Exit mobile version