ನವದೆಹಲಿ: ತನ್ನ ಛಾಯಾಚಿತ್ರಗಳಿಗಾಗಿ 2022 ರ ಪುಲಿಟ್ಜರ್ ಪ್ರಶಸ್ತಿ ವಿಜೇತರಲ್ಲಿ ಪಡೆದ ಕಾಶ್ಮೀರಿ ಫೋಟೋ ಜರ್ನಲಿಸ್ಟ್ ಸನ್ನಾ ಇರ್ಷಾದ್ ಮಟ್ಟೂ ಅವರು ಪ್ರಶಸ್ತಿ ಸ್ವೀಕರಿಸಲು ನ್ಯೂಯಾರ್ಕ್ ಗೆ ತೆರಳಲು ವೀಸಾವನ್ನು ಹೊಂದಿದ್ದರೂ ದೆಹಲಿಯ ವಲಸೆ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.
ಈ ಕುರಿತು ಸ್ವತಃ ಸನ್ನಾ ಅವರೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು, ಪುಲಿಟ್ಜರ್ ಪ್ರಶಸ್ತಿಯನ್ನು ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳುವ ಕ್ಷಣ ಮತ್ತೆ ಮತ್ತೆ ಬರುವುದಿಲ್ಲ. ವಿದೇಶಕ್ಕೆ ಪ್ರಯಾಣಿಸದಂತೆ ನನ್ನನ್ನು ಯಾಕೆ ತಡೆಯಲಾಗುತ್ತಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಸನ್ನಾ ಅವರು ಸೆರೆಂಡಿಪಿಟಿ ಆರ್ಲೆಸ್ ಅನುದಾನ 2020 ರ ಪ್ರಶಸ್ತಿ ವಿಜೇತರಲ್ಲಿ ಒಬ್ಬಳಾಗಿ ಪುಸ್ತಕ ಬಿಡುಗಡೆ ಮತ್ತು ಛಾಯಾಗ್ರಹಣ ಪ್ರದರ್ಶನಕ್ಕಾಗಿ ಪ್ಯಾರಿಸ್‌ಗೆ ತೆರಳಲು ಯತ್ನಿಸಿದಾಗಲೂ ಅವರನ್ನು ತಡೆಯಲಾಗಿತ್ತು. ಈ ಕುರಿತು ಅಧಿಕಾರಿಗಳ ಜೊತೆ ಸಂವಹನ ನಡೆಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಸನಾ ಹೇಳಿದ್ದಾರೆ.
ಸನ್ನಾ ಕಾಶ್ಮೀರದಲ್ಲಿ ರಾಯಿಟರ್ಸ್ ವಾಗಿ ಕೆಲಸ ಮಾಡುವ ಫೊಟೋ ಜರ್ನಲಿಸ್ಟ್. ಇವರಿಗೆ 2022ರ ಪುಲಿಟ್ಜರ್ ಪ್ರಶಸ್ತಿ ಘೋಷಣೆಯಾಗಿತ್ತು. ಪ್ರಶಸ್ತಿ ಸ್ವೀಕರಿಸಲು ನ್ಯೂಯಾರ್ಕ್ ಗೆ ತೆರಳಬೇಕಿದ್ದ ಸನ್ನಾ ವಲಸೆ ಅಧಿಕಾರಿಗಳ ಕ್ರಮದಿಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ವಂಚಿತರಾಗಿದ್ದಾರೆ.