ʼಇದು ಮನೆಗೆ ಹೋಗುವ ಸಮಯವಲ್ಲ, ದಂಧಾ ಮಾಡುವ ಸಮಯ. ಆದರೆ ಏನು ಮಾಡೋದು? ಈ ಟ್ರಾಫಿಕ್ ಜಾಮಿನಲ್ಲಿ ಖೇಲ್ ಖತಮ್. ಇಂದಿಗಿಷ್ಟೇ ಸಾಕು, ಬನ್ನಿʼ ಎಂದ ಡ್ರೈವರ್. ಮುಂದೇನಾಯ್ತು? ಓದಿ.. ರೋಹಿತ್ ಅಗಸರಹಳ್ಳಿಯವರ ತಿರುಗಾಡಿ ಬಂದೊ ಅಂಕಣದ ಐದನೇ ಕಂತು.
ಕೆಂಪು ಕೋಟೆ ನೋಡಿ ಹೊರಬರುವ ಹೊತ್ತಿಗೆ ಒಂದು ತಂಡ ಇನ್ನೂ ಓಡಾಡುವ ಉತ್ಸಾಹ ಉಳಿಸಿ ಕೊಂಡಿದ್ದರೆ; ಮತ್ತೊಂದು ತಂಡದ ಯಜಮಾನ್ತಿ ವಸತಿ ಸೇರುವ ಹುಕಿ ವ್ಯಕ್ತ ಮಾಡಿದಳು. ದಿನೇಶ್ ಅವರ ತಂಡಕ್ಕೆ ಶುಭ ಹಾರೈಸಿ ನಾವು ಗೆಸ್ಟ್ ಹೌಸ್ ಕಡೆ ಹೊಂಟೆವು; ಆದರೆ ಹೊಂಟೆವಷ್ಟೇ….
ನೆಟ್ ಕಟ್ ಫಜೀತಿ!
ಇಷ್ಟು ವರ್ಷಗಳಿಂದ ಸ್ಮಾರ್ಟ್ ಫೋನ್ ಬಳಸುತ್ತಿರುವ ನನಗೆ ಎಂದೂ ಫೋನಿನಲ್ಲಿ ನೆಟ್ ಇಲ್ಲದಿದ್ದರೆ ಎಂಥ ಫಜೀತಿ ಆಗಬಹುದೆಂಬ ಅಂದಾಜಿರಲಿಲ್ಲ. ಅಂದು ಅದಾಯ್ತು. ನಾವು ದಿಲ್ಲಿ ಮುಟ್ಟಿದಾಗಿಂದ ಬಹುತೇಕ ತಿರುಗಿದ್ದು ಓಲಾ ಮತ್ತು ಊಬರ್ ಆ್ಯಪುಗಳ ಸಹಾಯದಿಂದಲೇ. ಭಾಷೆ ತಿಳಿಯದ ನಮಗೆ ಅದುವೇ ಸುಲಭವಾಗಿತ್ತು. ಈಗ ನೆಟ್ ಇಲ್ಲದೆ ಯಾವ ಆ್ಯಪೂ ಕೆಲಸ ಮಾಡದು. ಟ್ಯಾಕ್ಸಿ/ ಆಟೋ ಯಾವೂ ನಾವು ಹೇಳುವ ವಿಳಾಸಕ್ಕೆ ಬರಲೊಲ್ಲವು. ಆ್ಯಪಿನಲ್ಲಿ ವಿಳಾಸ ಹುಡುಕುವುದು ಸರಳವಿತ್ತು; ಆದರೆ ಆಟೋವಾಲಗಳ ಒಟ್ಟಿಗೆ ವಿಳಾಸ ಹೇಳಿ ಚೌಕಾಸಿ ಮಾಡಲು ಸಾಕುಬೇಕಾಯ್ತು. ಟ್ರಾಫಿಕ್ ಜಾಮ್ ಬೇರೆ, ಫೋನ್ ನೆಟ್ವರ್ಕ್ ಕೆಲಸ ಮಾಡುತ್ತಿದ್ದರೂ ಇಂಟರ್ ನೆಟ್ ಸಂಪರ್ಕವಿಲ್ಲದೆ ಏನೂ ನಡೆಯದು. ಒಂದು ತಾಸಿನ ಈ ನೆಟ್ವರ್ಕ್ ಪ್ರಾಬ್ಲೆಮ್ ನಮ್ಮನ್ನು ಹೈರಾಣಾಗಿಸಿತು. ವರ್ಷಗಟ್ಟಲೆ ಮೊಬೈಲ್ ಇಂಟರ್‌ನೆಟ್‌ಗೆ ಲಗಾಮು ಹಾಕಿ ಸರ್ಕಾರ ಆದೇಶ ಹೊರಡಿಸಿರುವುದನ್ನು ಕೇಳಿದ್ದೇನೆ. ಅಲ್ಲಿನ ಜನರ ಆಗಿನ ಸ್ಥಿತಿ ಏನಾಗಿರಬೇಡ? ಆ ಹೊತ್ತಿಗೆ ಸಿಕ್ಕವ ಒಬ್ಬ ಟ್ಯಾಕ್ಸಿ ಡ್ರೈವರು. ನಾವು ಪಾದಚಾರಿ ರಸ್ತೆಯಲ್ಲಿ, ಅವನು ರಸ್ತೆಯಲ್ಲಿ ಇಬ್ಬರೂ ಜಾಮ್ ಆಗಿದ್ದೆವು. ಮೊದಲಿಗೆ ಆತ ಬರಲೊಪ್ಪಲಿಲ್ಲ. ನಾವು ನಿಂತಲ್ಲೇ ನಿಂತಿದ್ದೆವು. ಅವನ ಕಾರು ಮುಂದೆ ಹೋಗಲು ಜಾಗವಿರಲಿಲ್ಲ. ಕಡೆಗೆ ಅವನೇ ಕರೆದು ಕೂರಿಸಿಕೊಂಡು ತನ್ನ ಮನೆ ಕೂಡ ಅದೇ ಏರಿಯಾದ ಪಕ್ಕದಲ್ಲಿದೆ, ಇದು ಮನೆಗೆ ಹೋಗುವ ಸಮಯವಲ್ಲ, ದಂಧಾ ಮಾಡುವ ಸಮಯ. ಆದರೆ ಏನು ಮಾಡೋದು? ಈ ಟ್ರಾಫಿಕ್ ಜಾಮಿನಲ್ಲಿ ಖೇಲ್ ಖತಮ್. ಇಂದಿಗಿಷ್ಟೇ ಸಾಕು, ಬನ್ನಿ ಎಂದ.
ಡ್ರೈವರಣ್ಣನೊಂದಿಗೆ ಹರಟೆ
ನಾವು ಘೂಮ್ನೇ ಕೇಲಿಯೆ ಬಂದವರೆಂದು ಹೇಳಿದೆವಷ್ಟೇ, ಅವನೇ ನೀವು ಬೆಂಗಳೂರು ಕಡೆಯವರ ಅಂದ. ಕರ್ನಾಟಕದ ಕಡೆಯ ಜನ ಒಳ್ಳೆಯವರು ಎಂದು ಹೊಗಳಿದ. ಕಾರು ಏರಿದ ಐದೇ ನಿಮಿಷಕ್ಕೆ ಆತ ಒಂದು ನಿರ್ದಿಷ್ಟ ಪಕ್ಷದ ಕಾರ್ಯಕರ್ತ ಎಂದು ಅರ್ಥವಾಯ್ತು. ಇಂಚಿಂಚೇ ಕಾರು ಚಲಿಸಬೇಕಿದ್ದರಿಂದ ಮಾತಿಗೆ ಬೇಕಷ್ಟು ಅವಕಾಶವಿತ್ತು. ಅಂದು ಜಾಮಾ ಮಸೀದಿ ಚಾಂದಿನಿ ಚೌಕದ ಬಳಿ ಮುಸಲ್ಮಾನರ ಯಾವುದೋ ಹಬ್ಬ ಜರುಗುತ್ತಿದೆ ಎಂದ. ಈ ರಶ್ಶಿಗೆ ಅದೇ ಕಾರಣ ಎಂದ. ಆ ಟ್ರಾಫಿಕ್ಕಿನಲ್ಲಿ ಒಂದು ವಿಚಿತ್ರ ಕಂಡೆವು. ಸಿಕ್ಕಾಬಟ್ಟೆ ಭಿಕ್ಷುಕರು ಕಂಡರು. ಆದರೆ ಅವರಾರೂ ಅಂಗವಿಕಲರೊ, ವೃದ್ಧರೋ ಆಗಿರಲಿಲ್ಲ. ಬಹುತೇಕ ಕಟ್ಟುಮಸ್ತು ದೇಹದವರೇ. ಅವರನ್ನು ನೋಡುತ್ತಲೇ ನಮ್ಮ ಡ್ರೈವರಣ್ಣ ಬೆಂಕಿಯಾದ. ಅವರನ್ನು ಡ್ರಗ್ ಅಡಿಕ್ಟ್ ಗಳು ಎಂದ, ಮೋಸಗಾರರು ಎಂದ. ಕಡೆಗೆ ಅವರ ಧರ್ಮವನ್ನು ಇಂಥದೇ ಇರಬಹುದೆಂದು ಕಲ್ಪಿಸಿಕೊಂಡು ಅದಕ್ಕೊಂದಷ್ಟು ಮಂಗಳಾರತಿ ಎತ್ತಿದ. ಮತ್ತೆ ಕೂಗಳತೆ ದೂರದಲ್ಲಿ ರಸ್ತೆ ಪುಟ್ಟಂಪೂರ ಜಾಮ್ ಆಗಿತ್ತು. ಅಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುತ್ತಿದ್ದವರನ್ನು ತೋರಿಸಿ ಇವೆಲ್ಲ ಕದ್ದ ಮಾಲು ಎಂದ. ಆಮೇಲೆ ಕೊಳ್ಳದಿದ್ದರೂ ಕಿಟಕಿ ಗ್ಲಾಸು ಇಳಿಸಿ ಅವನು ಸಾವಿರ ಎಂದ ವಸ್ತುವನ್ನು ಪಚಾಸ್ ರುಪ್ಯಾಗೆ ಕೇಳಿ ಅವನನ್ನು ಮುಂದೆ ಕಳಿಸಿದ. ಹಾಗೇ ಕುತೂಹಲಕ್ಕೆ ಕೇಳಿದೆ ಅವನ ಊರಾವುದೆಂದು. ಆತ ಉತ್ತರ ಪ್ರದೇಶದ ಗೋರಖ್ ಪುರದವನಂತೆ. ಉತ್ತರ ಪ್ರದೇಶದ ಆದರ್ಶ ಆಡಳಿತವನ್ನೂ ತಾರಾಮಾರ ಹೊಗಳಿದ. ಅಷ್ಟು ಹೊತ್ತಿಗೆ ಕಾರಿನಿಂದ ಒಂದಷ್ಟು ದೂರವೇ ಇದ್ದ ತೃತೀಯ ಲಿಂಗಿಯೊಬ್ಬರನ್ನು ಕರೆದು ಕಾಸು ಕೊಟ್ಟು ಆಶೀರ್ವಾದ ಪಡೆದು ಸಂತೋಷಿಸಿದ. ಅಂದಿಗೆ ನಮ್ಮ ಪ್ರವಾಸ ಮೂರು ದಿನ ಮುಟ್ಟಿದ್ದರೂ ಯಾವ ಡ್ರೈವರಣ್ಣನೊಂದಿಗೂ ಇಷ್ಟು ಮಾತನಾಡುವ ಅವಕಾಶ ನಮಗೆ ದೊರೆತಿರಲಿಲ್ಲ. ಈ ನಡುವೆ ನಾವು ಕೆಂಪುಕೋಟೆ ಸುತ್ತಿನ ಪ್ರದೇಶದಿಂದ ಹಲವು ಸರ್ತಿ ನಾವಿದ್ದ ಗುರು ತೇಜ್ ಬಹಾದ್ದೂರ್ ನಗರಕ್ಕೆ ಓಡಾಡಿದ್ದರಿಂದ ಹೋಗುವ ದಾರಿಯ ಅಂದಾಜಿತ್ತು. ಈತ ಬೇರೆ ಯಾವುದೋ ರೂಟು ಹಿಡಿದಂತೆ ಕಂಡು ಹೆಂಡತಿ ಮೆಲ್ಲಗೆ ಅಚ್ಚಕನ್ನಡದಲ್ಲಿ ಹೇಳಿದಳು. ನಾನು ಮೊಬೈಲ್ ಲೊಕೇಶನ್ ಹಾಕಿ ಬೇರೊಂದು ರೂಟಿನಲ್ಲಿ ನಾವು ತಲುಪಬೇಕಿದ್ದ ಸ್ಥಳಕ್ಕೇ ಹೋಗುತ್ತಿರುವುದನ್ನು ತೋರಿಸಿ ಸಮಾಧಾನಿಸಿದೆ.
ಡ್ರೈವ್ ಮಾಡುತ್ತಲೇ ಸಿಕ್ಕ ಸಮಯದಲ್ಲಿ ತನ್ನ ಮೆಚ್ಚಿನ ರಾಜಕೀಯ ನಾಯಕನ ಯೂಟ್ಯೂಬ್ ವಿಡಿಯೊ ಪ್ಲೇ ಮಾಡಿದ. ಇಂದು ಇಷ್ಟೇಕೆ ರಶ್ಶು ಎಲ್ಲ ಕಡೆಯೂ ಎಂದು ಕೇಳಿದಾಗ ಇಲ್ಲೊಂದು ಮಂದಿರವಿದೆಯೆಂದೂ ಅಲ್ಲಿಗೆ ವಾರದಲ್ಲಿ ಒಂದು ದಿನ ದಿಲ್ಲಿಯ ನಾನಾ ದಿಕ್ಕುಗಳಿಂದ ಜನ ಬರುವರೆಂದೂ ಹೇಳಿದ. ಅಷ್ಟು ಹೊತ್ತಿಗೆ ಹೈವೇ ಸಿಕ್ಕಿ, ತಿರುವೊಂದರಲ್ಲಿ ಪಾಣಿಪತ್ ಎಂಬ ಹೆಸರು ಕಂಡು ಚರಿತ್ರೆಯ ಪಠ್ಯದಲ್ಲಿ ಓದಿದ ನೆನಪಾಗಿ ಅದೆಷ್ಟು ದೂರ ಎಂದೆ. ಇಲ್ಲೇ ಹತ್ತಿರದಲ್ಲೇ, ಅದೀಗ ದಿಲ್ಲಿಯ ಹೊರವಲಯ ಎಂದ. ನಾವು ಮಾರನೇ ದಿನ ಕುತುಬ್ ಮಿನಾರ್ ನೋಡಿ ಆಗ್ರಾ ಕಡೆ ಹೋಗಬೇಕಿತ್ತು. ಅಲ್ಲಿಗೆ ಹೋಗಲು ಯಾವುದು ಅನುಕೂಲದ ದಾರಿ ಕೇಳಿದಾಗ; ಬಸ್ಸಿನಲ್ಲಿ ಹೋಗಬೇಕೆಂದರೆ ಎಲ್ಲಿ ಹೋಗಬೇಕು ಎಂದೆಲ್ಲಾ ಹೇಳಿ, ತಾನೇ ಬೇಕಿದ್ದರೆ ಬರುವುದಾಗಿಯೂ ಹೇಳಿ ಫೋನ್ ನಂಬರ್ ಕೂಡ ಕೊಟ್ಟ. ಮಾರನೇ ದಿನ ಆಗ್ರಾಗೆ ಟ್ರೇನ್ ಬದಲಿಗೆ ಕಾರಿನಲ್ಲಿ ಕೂಡ ಹೋಗಬಹುದು ಎಂದು ಯೋಚಿಸಿ ಆತನಿಗೆ ಮತ್ತೊಮ್ಮೆ ಕೂಡ ಫೋನು ಮಾಡಿದ್ದೆವು.
ಕುತುಬ್ ಮಿನಾರ್ ಎಂಬ ಭಾರತ ವೈಭವ
ಮಾರನೇ ದಿನ ದಿಲ್ಲಿಯಿಂದ ಆಗ್ರಾಗೆ ತಲುಪಬೇಕಿತ್ತು. ಅಂದು ಶುಕ್ರವಾರವಾದ್ದರಿಂದ ತಾಜ್ ಮಹಲ್ ಪ್ರವೇಶಕ್ಕೆ ರಜೆ. ಹಾಗಾಗಿ ರಾತ್ರಿ ಅಲ್ಲಿಗೆ ತಲುಪಿದರೆ ಮುಂಜಾನೆ ಆರಕ್ಕೇ ತಾಜ್ ಆವರಣದಲ್ಲಿರಬೇಕು ಎಂದು ಯೋಜಿಸಿದೆವು. ಹೀಗಾಗಿ ನಮಗೆ ಮತ್ತೂ ಒಂದು ಹಗಲು ದಿಲ್ಲಿಯಲ್ಲಿ ಓಡಾಡಲು ಅವಕಾಶವಿತ್ತು. ನೋಡದೇ ಉಳಿಸಿದ್ದು ಕುತುಬ್ ಮಿನಾರ್ ಮಾತ್ರ.
ದಿಲ್ಲಿಯಲ್ಲಿ ಮೂರು ದಿನಗಳಿಂದ ಓಡಾಡಿದ್ದರೂ ನಾವು ಮೆಟ್ರೋ ಬಳಸಿರಲಿಲ್ಲ. ನಾವು ಉಳಿದು ಕೊಂಡಿದ್ದ ಗೆಸ್ಟ್ ಹೌಸಿಗೆ ಮೆಟ್ರೋ ಸ್ಟೇಷನ್ ಸುಮಾರು ಎರಡು ಕಿ.ಮೀ. ದೂರವಿತ್ತು. ಪ್ರತೀ ಸರ್ತಿ ಅಲ್ಲಿಗೆ ಹೋಗಿ ಟ್ರೇನು ಹಿಡಿಯುವುದು, ಮತ್ತೆ ಅಲ್ಲಿಂದ ಆಟೊ ಹಿಡಿದು ಬಂದು ಗೂಡು ಸೇರುವುದು ಸಮಯ ವ್ಯರ್ಥವೆಂದು ಹಾಗೆ ಮಾಡಿದ್ದೆವು. ಕುತುಬ್ ಮಿನಾರ್ ನಾವಿರುವ ಜಾಗಕ್ಕೆ ಕೊಂಚ ದೂರವೂ ಮತ್ತು ಅದರ ಸಮೀಪ ಮೆಟ್ರೋ ಸ್ಟೇಷನ್ ಇದ್ದುದರಿಂದ ಹೋಗಲು ಅನುಕೂಲವೆಂಬ ಕಾರಣಕ್ಕೆ ಮೆಟ್ರೋದಲ್ಲಿಯೇ ಹೋಗಲು ತೀರ್ಮಾನಿಸಿದೆವು. ನಾವು ಕಳೆದ ಸರ್ತಿ ದಿಲ್ಲಿಗೆ ಹೋಗಿದ್ದಾಗ (2010) ಕೂಡ ಅಲ್ಲಿಗೆ ಮೆಟ್ರೋದಲ್ಲೇ ಹೋಗಿದ್ದೆವು. ಆಗ ಅದೇ ಕಡೆಯ ಸ್ಟೇಷನ್ ಆಗಿತ್ತು. ಈಗ ಕುತುಬ್ ಮಿನಾರ್ ಬಳಿಯಿಂದ ಮುಂದಕ್ಕೆ ಸುಮಾರು ಏಳು ಹೊಸ ಮೆಟ್ರೊ ಸ್ಟೇಷನ್ ಗಳು ಆಗಿರುವುದು ದಿಲ್ಲಿಯ ಬೆಳವಣಿಗೆಯ ವೇಗವನ್ನು ಅರುಹಿದವು. ನಾವು ಹೊರಟಲ್ಲಿಂದ ಕುತುಬ್ ಮಿನಾರಿಗೆ ಮೆಟ್ರೋದಲ್ಲಿಯೇ ಮುಕ್ಕಾಲು ಗಂಟೆ ಪಯಣ. ಅಲ್ಲಿಯೋ ಆಟೋದವರ ಥರಾವರಿ ಆಫರುಗಳು. ಒಬ್ಬ 50 ಅಂದ್ರೆ ಮತ್ತೊಬ್ಬ 25 ಅಂದ, ಮಗದೊಬ್ಬ ಭೂಪ ಪುಕ್ಕಟೆ ಆಫರ್ ನೀಡಿದ. ಇದರ ಹಕೀಕತ್ ಸರಳವಿತ್ತು. ಅವರು ಪುಕ್ಕಟೆಯಾಗಿ ಒಯ್ಯುವುದು ಮಾರ್ಕೆಟಿಗೇ ಹೊರತು ಮೀನಾರಿನ ಬಳಿಗಲ್ಲ! ಈ ಮಾರ್ಕೆಟಿಗೆ ಬ್ಯಾಡವೆಂದರೂ ಒಯ್ಯುವ ಕ್ರಮ ಉತ್ತರದ ಬಹುತೇಕ ಪ್ರವಾಸಿ ಸ್ಥಳಗಳಲ್ಲಿ ಇದ್ದಿರಬೇಕು.
ಹಿಂದಿನ ಸರ್ತಿ ನಾನು- ಸುಜಾತ ಮೆಟ್ರೋದಿಂದ ನಡೆದೇ ಅಲ್ಲಿಗೆ ತಲುಪಿದ್ದ ನೆನಪು. ಉತ್ತರ ಭಾರತದಲ್ಲಿ ಅಕ್ಟೋಬರ್ ತಿಂಗಳು ಶೈಕ್ಷಣಿಕ ಪ್ರವಾಸದ ಸೀಸನ್ನಿರಬೇಕು. ಅಂದು ಕುತುಬ್ ಮಿನಾರಿನ ಆವರಣ ಶಾಲಾ ಮಕ್ಕಳಿಂದ ಗಿಜಿಗುಡುತ್ತಿತ್ತು.
ಕುತುಬ್ ಮಿನಾರನ್ನು ಲಾಲ್ ಕೋಟೆಯ ಅವಶೇಷಗಳ ಮೇಲೆ ಕಟ್ಟಲಾಗಿದೆ ಎಂದು ಹೇಳಲಾಗುತ್ತದೆ. ಕುತುಬ್ ಉದ್ ದಿನ್ ಐಬಕ್ ನಿಂದ 1192 ರಲ್ಲಿ ಆರಂಭವಾದರೆ 1369 ರಲ್ಲಿ ಫಿರೋಝ್ ಶಾ ತುಘಲಕ್ ನಿಂದ ಪೂರ್ಣಗೊಂಡಿತು. ಅಷ್ಟು ದೀರ್ಘ ಕಾಲ ಅದು ಅಪೂರ್ಣವಾಗೇನೂ ಇರಲಿಲ್ಲ. ಕಾಲಕಾಲಕ್ಕೆ ಮಾರ್ಪಾಟು ಗೊಂಡು ಈಗಿನ ರೂಪ ಧರಿಸಿದೆ.
ಕುತುಬ್ ಮಿನಾರ್ 47 ಅಡಿ ಸುತ್ತಳತೆಯ ತಳಪಾಯ( ಬೇಸ್) ದಿಂದ ತುದಿ ಮುಟ್ಟುವ ಹೊತ್ತಿಗೆ ಕೇವಲ 9 ಅಡಿ ಸುತ್ತಳತೆಗೆ ಇಳಿಯುತ್ತದೆ. ಎತ್ತರ 72.5 ಮೀಟರ್ ಅಂದರೆ ಸುಮಾರು 236 ಅಡಿಗಳು. ಒಟ್ಟು ಐದು ಮಹಡಿಗಳ ಕಟ್ಟಡ. ಮೊದಲ ಮಹಡಿ 12 ಅರ್ಧ ಚಂದ್ರಾಕೃತಿಯ ಮತ್ತು 12 ಮೂಲೆಗಳಿಂದ ಕೂಡಿದ ಕಂಬದಂಥ ರಚನೆಗಳಿಂದ ಕೂಡಿದೆ. ಬುಡದಲ್ಲಿ ಇವೆಲ್ಲ ಕುರಾನಿನ ಸಾಲುಗಳ ಅಲಂಕಾರಿಕ ಅಕ್ಷರಗಳಿಂದ ಕೂಡಿವೆ. ಎರಡು, ಮೂರು ಮತ್ತು ನಾಕನೇ ಅಂತಸ್ತುಗಳು ನಿರ್ಮಾಣವಾಗಿದ್ದು ಇಲ್ತಮಶ್ ನ ಕಾಲದಲ್ಲಿ. ಇವುಗಳಲ್ಲಿ ಎರಡನೆಯದು ಪೂರ್ಣವಾಗಿ ಅರ್ಧಚಂದ್ರಾಕೃತಿಯ ರಚನೆಯಾಗಿದ್ದರೆ ಮೂರನೆಯ ಅಂತಸ್ತು ಪೂರ್ಣವಾಗಿ ಮೂಲೆಗಳಿಂದ ಕೂಡಿದ ಕಂಬಾಕೃತಿಗಳಿಂದ ಕೂಡಿದೆ. ನಾಲ್ಕನೆಯದು ಮತ್ತೆ ಅರ್ಧಚಂದ್ರಾಕೃತಿಯನ್ನು ಅನುಸರಿಸಿದೆ.
1369 ರಲ್ಲಿ ಸಿಡಿಲಿನ ಬಡಿತಕ್ಕೆ ಮುಕ್ಕಾದ ಕಟ್ಟಡದಲ್ಲಿ ನಾಲ್ಕನೇ ಅಂತಸ್ತನ್ನು ಕೆಡವಿ 4 ಮತ್ತು 5 ನೇ ಅಂತಸ್ತುಗಳನ್ನು ಒಟ್ಟಿಗೇ ನಿರ್ಮಿಸಲಾಯ್ತಂತೆ. ಈ ಕೆಲಸ ಮಾಡಿಸಿದವನು ಫಿರೋಝ್ ಶಾ ತುಘಲಕ್ ( 1351-1388). ನಾಲ್ಕನೇ ಅಂತಸ್ತಿನ ನಿರ್ಮಾಣದಲ್ಲಿ ಅಮೃತಶಿಲೆಯನ್ನು ಬಳಕೆ ಮಾಡಲಾಗಿದೆ.
ಹೀಗಾಗಿ ಕುತುಬ್ ಮಿನಾರ್ ನಿರ್ಮಾಣ ಸುಮಾರು ಮುನ್ನೂರು ವರ್ಷಗಳ ಕಾಲ ಹರಡಿ ಕೊಂಡಿದೆ. ಚರಿತ್ರೆಯಲ್ಲಿ ಒಂದೇ ಆವರಣದ ಬೇರೆ ಬೇರೆ ಭಾಗಗಳು ವಿವಿಧ ಕಾಲಘಟ್ಟಗಳಲ್ಲಿ ನಿರ್ಮಿತವಾದವು ಎಂಬ ವಿವರಗಳು ಸಿಗುತ್ತವೆ; ಆದರೆ ಒಂದೇ ಕಟ್ಟಡ ಅಂತಸ್ತುಗಳನ್ನು ಪೇರಿಸಿಕೊಂಡು ಹೀಗೆ ನಿಂತಿರುವುದು ಅಪರೂಪವಿರಬೇಕು.
ಒಳಭಾಗದಲ್ಲಿ ತಳದಿಂದ ಸುರುಳಿಯಾಕಾರದ 379 ಮೆಟ್ಟಿಲುಗಳಿವೆ ಮತ್ರು ಪ್ರತೀ ಮಹಡಿಯಲ್ಲಿ ಸುಂದರ ಬಾಲ್ಕನಿಗಳಿವೆ. ಆದರೆ ಈಗ ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧ. ಇದಕ್ಕೆ ಕಾರಣ 1980 ರಲ್ಲಿ ನಡೆದ ಅವಘಡ. ಮೆಟ್ಟಿಲು ಕುಸಿದು ಪ್ರವಾಸಕ್ಕೆ ಬಂದ ಹಲವು ಮಕ್ಕಳು ಅಸುನೀಗಿದ ಮತ್ತು ಆಗಾಗ ಬಾಲ್ಕನಿಗಳಿಂದ ಜಿಗಿದು ಹಲವರು ಆತ್ಮಹತ್ಯೆ ಮಾಡಿಕೊಂಡ ಕಾರಣಗಳಿಗಾಗಿ ಈ ನಿಷೇಧ ಹಾಕಲಾಗಿದೆಯಂತೆ. ಮಿನಾರು ಬುಡದಿಂದ 65 ಸೆಂ.ಮೀ. ವಾಲಿಕೊಂಡಿದೆ; ಆದರೆ ಇದು ಅಪಾಯಕಾರಿ ಅಲ್ಲ ಎಂದು ತಜ್ಞರು ಹೇಳಿದ್ದಾರಂತೆ. ಈ ವಾಲುವಿಕೆ ಬರಿಗಣ್ಣಿಗೆ ಅಗೋಚರ.
ಇದೇ ಆವರಣದಲ್ಲಿ ಇನ್ನೂ ಹಲವು ಸ್ಮಾರಕಗಳಿವೆ. ಮೀನಾರಿನ ಬುಡದಲ್ಲೇ ಇರುವ ಅಲಾಯಿ ದರ್ವಾಜ(ಬಾಗಿಲು) ಸುಂದರವಾದ ಬಾಗಿಲೆಂದೇ ಪ್ರಸಿದ್ಧ. ಕುವ್ವತ್ ಉಲ್ ಇಸ್ಲಾಂ ಮಸೀದಿಯ ಹೆಬ್ಬಾಗಿಲು. ಅಲ್ಲಾ ಉದ್ದೀನ್ ಖಿಲ್ಜಿಯ ಕಾಲದಲ್ಲಿ 1311 ರಲ್ಲಿ ನಿರ್ಮಿತವಾದ್ದು.
ತುಕ್ಕೇ ಹಿಡಿಯದ ಕಬ್ಬಿಣದ ಕಂಬ!
7.21 ಮೀಟರ್ ಎತ್ತರದ ಇದು ಕ್ರಿ.ಶ. 4ನೇ ಶತಮಾನಕ್ಕೆ ಸೇರಿದ್ದು. 10 ನೇ ಶತಮಾನದಲ್ಲಿ ಇದನ್ನು ಅನಂಗಪಾಲ ಎಂಬ ದೊರೆ ಇಲ್ಲಿಗೆ ತಂದನಂತೆ. ಸುಮಾರು ಆರು ಟನ್ ತೂಗುವ ಇದೊಂದು ಸ್ತಂಭ ಶಾಸನವೂ ಹೌದು. ಈ ಕಂಬದ ಸುತ್ತಿನ ಹಲವು ರಚನೆಗಳು ಮೇಲ್ನೋಟಕ್ಕೆ ಕಾಣುವಂತೆ ಇಸ್ಲಾಮೇತರ ವಾಸ್ತುಶಿಲ್ಪದ ರಚನೆಗಳು; ಅಸ್ಪಷ್ಟವಾಗಿ ಹಲವಿವೆ.
ಅಪೂರ್ಣವಾಗಿಯೇ ಉಳಿದ ಅಲಾಯಿ ಮಿನಾರ್
ಅಲಾಯಿ ಮಿನಾರ್ ಅಲ್ಲಾ ಉದ್ದೀನ್ ಖಿಲ್ಜಿಯ ಟಾಂಬ್ ಮತ್ತು ಮದ್ರಸದ ಜೊತೆಗೆ ಆತನ ಭಗ್ನಗೊಂಡ ಕನಸೊಂದು ಕೂಡ. ಕಾಲ 1300. ಹೆಸರು ಅಲಾಯಿ ಮಿನಾರ್. ಇದು ಪೂರ್ಣಗೊಂಡಿದ್ದರೆ ಕುತುಬ್ ಮಿನಾರಿಗಿಂತ ಎರಡು ಪಟ್ಟು ಎತ್ತರ ಇರುತ್ತಿತ್ತಂತೆ. ಸದ್ಯ ಅಪೂರ್ಣಗೊಂಡ ಅದರ ತಳಪಾಯದ ಕಟ್ಟಡ 82 ಅಡಿ ಎತ್ತರದ್ದಿದೆ. ಖಿಲ್ಜಿಯ ಸಾವಿನೊಂದಿಗೆ ಈ ಕನಸೂ ಭಗ್ನ ಗೊಂಡಿದೆ. ಅವನ ನಂತರದವರಾರೂ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ನಮ್ಮ ಬಿಜಾಪುರದಲ್ಲಿ ಕೂಡ ಇಂಥ ಅಪೂರ್ಣ ರಚನೆಯೊಂದಿದೆ. ಅದೇ ಬಾರಾ ಕಮಾನು. ಇದು ಕೂಡ ಪೂರ್ಣಗೊಂಡಿದ್ದರೆ ಗೋಲಗುಮ್ಮಟ ಮೀರಿಸುವ ಕಟ್ಟಡವಾಗಿರುತ್ತಿತ್ತಂತೆ! ಈ ಒಂದಕ್ಕಿಂತ ಒಂದು ಎತ್ತರದ ವಿಸ್ತಾರವಾದ ರಚನೆಗಳನ್ನು ಮಾಡಿ ತಮ್ಮ ಹೆಸರುಗಳನ್ನು ಚಿರಸ್ಥಾಯಿ ಮಾಡಿಕೊಳ್ಳುವ ಹಂಬಲ ಆಗಿನ ಸರ್ವಾಧಿಕಾರಿಗಳ ಖಯಾಲಿ ಮಾತ್ರವಲ್ಲ ಈಗಲೂ ಮುಂದುವರೆದಿದೆ ಅನ್ನೋದು ಹಲವೆಡೆ ಎದ್ದು ನಿಂತ ದೊಡ್ಡವರ ಎತ್ತರದ ಮೂರ್ತಿಗಳನ್ನು ನೋಡಿದರೆ ಅರಿವಿಗೆ ಬಾರದಿರದು…
ರೋಹಿತ್ ಅಗಸರಹಳ್ಳಿ
ಹಾಸನದ ನಿವಾಸಿಯಾದ ರೋಹಿತ್ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.
ಇವನ್ನೂ ಓದಿ
ತಿರುಗಾಡಿ ಬಂದೊ ನಾಲ್ಕನೇ ಕಂತು– ಕೆಂಪು ಕೋಟೆಗೊಂದು ಸುಸ್ತಿನ ಸುತ್ತು
ತಿರುಗಾಡಿ ಬಂದೊ ಮೂರನೇ ಕಂತು– ದೆಹಲಿಯಲ್ಲಿ ಸಿಕ್ಕ ʼಅಕ್ಕಲಕೋಟೆ ಸ್ವಾಮಿಗಳುʼ
ತಿರುಗಾಡಿ ಬಂದೊ ಎರಡನೇ ಕಂತು- ಆರರಲ್ಲಿ ಐದು ವಿಕೆಟ್ ರಿಟೈರ್ಡ್ ಹರ್ಟ್….
ತಿರುಗಾಡಿ ಬಂದೊ ಒಂದನೇ ಕಂತು- ಲೆಕ್ಕಾಚಾರ ತಪ್ಪೋಯ್ತು..