Home ರಾಜಕೀಯ ಸಿಬಿಎಸ್‌ಸಿ ವಿವಾದ | ಮೋದಿಗೆ ಮಕ್ಕಳ ಭವಿಷ್ಯಕ್ಕಿಂತ ತನ್ನ ಸರ್ಕಾರ ಉಳಿಸಕೊಳ್ಳುವುದೇ ಮುಖ್ಯವಾಗಿದೆ: ರಾಹುಲ್‌ ಗಾಂಧಿ

ಸಿಬಿಎಸ್‌ಸಿ ವಿವಾದ | ಮೋದಿಗೆ ಮಕ್ಕಳ ಭವಿಷ್ಯಕ್ಕಿಂತ ತನ್ನ ಸರ್ಕಾರ ಉಳಿಸಕೊಳ್ಳುವುದೇ ಮುಖ್ಯವಾಗಿದೆ: ರಾಹುಲ್‌ ಗಾಂಧಿ

0

ದೆಹಲಿ: ಸಿಬಿಎಸ್‌ಇ (CBSE) ಮೌಲ್ಯಮಾಪನ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನ ಮತ್ತು ಶಿಕ್ಷಣ ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಅವರಿಗೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ತಮ್ಮ ಸರ್ಕಾರದ ಉಳಿವೇ ಮುಖ್ಯ ಎಂಬುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಟೀಕಿಸಿದ್ದಾರೆ.

ದೇಶದ ಯುವಜನತೆ ಸತ್ಯವನ್ನು ತಿಳಿದುಕೊಳ್ಳಲು ಅರ್ಹರಾಗಿದ್ದಾರೆ. ಹಾಗಾಗಿ ಸಿಬಿಎಸ್‌ಇಯ ಆನ್-ಸ್ಕ್ರೀನ್ ಮಾರ್ಕಿಂಗ್ (OSM) ಮತ್ತು ‘ಕೋಯೆಂಪ್ಟ್’ (COEMPT) ಕಂಪನಿಗೆ ಗುತ್ತಿಗೆ ನೀಡಿರುವ ಪ್ರಕ್ರಿಯೆಯ ಕುರಿತು ಮೊದಲ ದಿನದಿಂದಲೂ ಸ್ವತಂತ್ರ ನ್ಯಾಯಾಂಗ ತನಿಖೆಗೆ ತಾವು ಒತ್ತಾಯಿಸುತ್ತಿರುವುದಾಗಿ ಎಕ್ಸ್ (X) ಪೋಸ್ಟ್‌ನಲ್ಲಿ ಗಾಂಧಿ ತಿಳಿಸಿದ್ದಾರೆ.

ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಮಾತನಾಡಿರುವ ಅವರು, “ಸಿಬಿಎಸ್‌ಇ ಒಎಸ್‌ಎಂಗಳಿಗಾಗಿ ಮೂರು ಬಾರಿ ಟೆಂಡರ್ ಕರೆದಿತ್ತು. ಮೊದಲ ಬಾರಿಗೆ ಯಾವುದೇ ಬಿಡ್‌ಗಳು ಬಂದಿರಲಿಲ್ಲ. ಎರಡನೇ ಬಾರಿಗೆ ಯಾವುದೇ ಅರ್ಹ ಬಿಡ್‌ದಾರರು ಇರಲಿಲ್ಲ. ಅಂತಿಮವಾಗಿ, ಕೋಯೆಂಪ್ಟ್ ಕಂಪನಿಯು ತೇರ್ಗಡೆಯಾಗುವವರೆಗೆ ತಾಂತ್ರಿಕ ಮಾನದಂಡಗಳನ್ನು ಹಂತ ಹಂತವಾಗಿ ಕಡಿಮೆ ಮಾಡಲಾಯಿತು. ಸ್ಕ್ಯಾನಿಂಗ್ ರೆಸಲ್ಯೂಶನ್ ಕಡಿತಗೊಳಿಸಲಾಯಿತು, ರೋಬೋಟಿಕ್ ಸ್ಕ್ಯಾನರ್ ಅಗತ್ಯತೆಯನ್ನು ಕೈಬಿಡಲಾಯಿತು ಮತ್ತು ಸಿಎಮ್‌ಎಂಐ (CMMI) ಪ್ರಮಾಣೀಕರಣವನ್ನು ಲೆವೆಲ್ 5 ರಿಂದ ಲೆವೆಲ್ 3 ಕ್ಕೆ ಇಳಿಸಲಾಯಿತು. ಅಷ್ಟೇ ಅಲ್ಲದೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಆಗುವ ದೋಷಗಳಿಗೆ ವಿಧಿಸುವ ದಂಡವನ್ನೂ ತೆಗೆದುಹಾಕಲಾಯಿತು,” ಎಂದು ಗಂಭೀರ ಆರೋಪ ಮಾಡಿದ್ದಾರೆ.

“ಭಾರತದ ಅತಿ ದೊಡ್ಡ ಐಟಿ ಸೇವಾ ಕಂಪನಿಯಾದ ಟಿಸಿಎಸ್ (TCS) ಮೂರನೇ ಸುತ್ತಿನಲ್ಲೂ ಅರ್ಹತೆ ಪಡೆದಿತ್ತು. ಆದರೆ ಟಿಸಿಎಸ್ ಸೋತಿತು. ವೈಫಲ್ಯಗಳ ಇತಿಹಾಸವನ್ನು ಹೊಂದಿರುವ ಕೋಯೆಂಪ್ಟ್ ಕಂಪನಿ ಜಯಗಳಿಸಿತು. ಇದರ ಪರಿಣಾಮವಾಗಿ ಇಂದು ಸಿಬಿಎಸ್‌ಇ ವಿದ್ಯಾರ್ಥಿಗಳು ಕಳಪೆ ಸ್ಕ್ಯಾನಿಂಗ್, ಉತ್ತರ ಪತ್ರಿಕೆಗಳಲ್ಲಿ ಪುಟಗಳು ಕಾಣೆಯಾಗಿರುವುದು ಮತ್ತು ದೋಷಪೂರಿತ ಮೌಲ್ಯಮಾಪನ ಪೋರ್ಟಲ್ ಬಗ್ಗೆ ದೂರುತ್ತಿದ್ದಾರೆ,” ಎಂದು ಅವರು ಹೇಳಿದರು. ದೇಶಾದ್ಯಂತ ಜಾರಿಗೆ ತರುವ ಮುನ್ನ ಈ ವ್ಯವಸ್ಥೆಗೆ ಕನಿಷ್ಠ ಒಂದೆರಡು ವರ್ಷಗಳ ಸಿದ್ಧತೆಯ ಅಗತ್ಯವಿದೆ ಎಂದು ಶಿಕ್ಷಕರು ಸಿಬಿಎಸ್‌ಇಗೆ ಮುನ್ನೆಚ್ಚರಿಕೆ ನೀಡಿದ್ದರೂ ಸಹ, ಅತ್ಯಂತ ಆತುರದಿಂದ ಇದನ್ನು ಜಾರಿಗೊಳಿಸಲಾಗಿದೆ ಎಂದು ಅವರು ದೂರಿದ್ದಾರೆ.

“ನಿಯಮಗಳನ್ನು ಸಡಿಲಗೊಳಿಸಿ 18.5 ಲಕ್ಷ ಮಕ್ಕಳ ಭವಿಷ್ಯವನ್ನು ಇಂತಹ ಕಂಪನಿಯ ಕೈಗೆ ಒಪ್ಪಿಸಲಾಗಿದೆ. ಪ್ರಶ್ನೆ ಕೇಳಿದ್ದಕ್ಕಾಗಿ ನನ್ನನ್ನು ಟೀಕಿಸುತ್ತಿರುವ ಬಿಜೆಪಿ ಸಚಿವರಿಗೆ ನಾನು ಹೇಳಬಯಸುವುದೇನೆಂದರೆ, ಸಿಬಿಎಸ್‌ಇ ಮಾತ್ರವಲ್ಲದೆ ಕೋಯೆಂಪ್ಟ್ ಕಂಪನಿಗೆ ನೀಡಲಾದ ಪ್ರತಿಯೊಂದು ಗುತ್ತಿಗೆಯ ಬಗ್ಗೆಯೂ ಸ್ವತಂತ್ರ ನ್ಯಾಯಾಂಗ ತನಿಖೆಯಾಗಬೇಕು. ಮೋದಿ ಅವರೇ, ಈ ಹಗರಣದ ಕುರಿತು ನಿಮ್ಮ ಮೌನವು ದೇಶಕ್ಕೆ ನಿಮ್ಮ ನಿಜವಾದ ಕಾಳಜಿ ಏನೆಂಬುದನ್ನು ತೋರಿಸಿಕೊಡುತ್ತದೆ,” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಸಿಬಿಎಸ್‌ಇ ವಿರುದ್ಧ ಕಿಡಿಕಾರಿದ್ದಾರೆ. ಈ ವರ್ಷದ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಆನ್-ಸ್ಕ್ರೀನ್ ಮೌಲ್ಯಮಾಪನಕ್ಕಾಗಿ ಟೆಂಡರ್ ಪ್ರಕ್ರಿಯೆಯ ನಿಯಮಗಳನ್ನು ಸಿಬಿಎಸ್‌ಇ ನಿರಂತರವಾಗಿ ಸಡಿಲಗೊಳಿಸುತ್ತಾ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.

ಕನಿಷ್ಠ ಸ್ಕ್ಯಾನಿಂಗ್ ರೆಸಲ್ಯೂಶನ್ ಅನ್ನು 300 ಡಿಪಿಐನಿಂದ (DPI) 200 ಡಿಪಿಐಗೆ ಇಳಿಸಿರುವುದು, ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಪರೀಕ್ಷಿಸಬೇಕೆಂಬ ಬೋರ್ಡ್‌ನ ಸಲಹೆಯನ್ನು ನಿರ್ಲಕ್ಷಿಸಿರುವುದು ಮತ್ತು ಪರೀಕ್ಷೆಗೆ ಕೇವಲ ಆರು ತಿಂಗಳು ಬಾಕಿ ಇರುವಾಗ ಆಗಸ್ಟ್ 2025 ರಲ್ಲಿ ಅಂತಿಮ ಪ್ರಸ್ತಾವನೆಯನ್ನು ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ರಮೇಶ್ ಪ್ರಶ್ನಿಸಿದ್ದಾರೆ.

ಹಿಂದೆ ‘ಗ್ಲೋಬರೆನಾ’ (Globarena) ಎಂದು ಕರೆಯಲ್ಪಡುತ್ತಿದ್ದ ಮತ್ತು ಹಲವು ವಿವಾದಗಳಿಗೆ ಸಿಲುಕಿದ್ದ ಕೋಯೆಂಪ್ಟ್ ಕಂಪನಿಯ ಹಿನ್ನೆಲೆಯನ್ನು ಸಿಬಿಎಸ್‌ಇ ಪರಿಶೀಲಿಸಿದೆಯೇ ಅಥವಾ ಮೋದಿ ಸರ್ಕಾರದ ರಾಜಕೀಯ ಮುಖಂಡರಿಂದ ಈ ಕಂಪನಿಗೆ ಗುತ್ತಿಗೆ ನೀಡಲು ಒತ್ತಡವಿತ್ತೇ ಎಂದು ಪ್ರಶ್ನಿಸಿರುವ ಅವರು, ಸಿಬಿಎಸ್‌ಇ ತಕ್ಷಣವೇ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

You cannot copy content of this page

Exit mobile version