ದೆಹಲಿ: “ಮಹಿಳೆಯರ ಸುರಕ್ಷತೆಯೆನ್ನುವುದು ಕೇವಲ ಒಂದು ಯೋಜನೆಯಲ್ಲ, ಅದು ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳೆಯರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂಸೆಗೆ ಒಳಗಾದ ಮಹಿಳೆಯರಿಗೆ ನೆರವಾಗಲು ಸ್ಥಾಪಿಸಲಾದ ‘ಒನ್ ಸ್ಟಾಪ್ ಸೆಂಟರ್ (OSCs)’ ಗಳ ನಿರ್ವಹಣೆ ವಿಷಯದಲ್ಲಿ ಕೇಂದ್ರ ಸರ್ಕಾರವು ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಭಾನುವಾರ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ಹಿಂಸೆಯಿಂದ ರಕ್ಷಣೆ ಕೋರಿ ಮಹಿಳೆಯೊಬ್ಬಳು ಒನ್ ಸ್ಟಾಪ್ ಸೆಂಟರ್‌ಗೆ ಹೋದಾಗ ಅಲ್ಲಿ ಅವರಿಗೆ ಏಕೆ ನೆರವು ಸಿಗುತ್ತಿಲ್ಲ? ಆ ಸಂಸ್ಥೆಗಳ ಬಾಗಿಲಿಗೆ ಏಕೆ ಬೀಗ ಹಾಕಲಾಗಿದೆ? ಅಲ್ಲಿ ಸಿಬ್ಬಂದಿ ಕೊರತೆ ಏಕೆ ಕಾಡುತ್ತಿದೆ? ದೇಶಾದ್ಯಂತ ಕೇಳಿಬರುತ್ತಿರುವ ಈ ದೂರುಗಳನ್ನು ಸರ್ಕಾರ ಏಕೆ ಅಲಕ್ಷಿಸುತ್ತಿದೆ?” ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ದೇಶಾದ್ಯಂತ ಒನ್ ಸ್ಟಾಪ್ ಸೆಂಟರ್‌ಗಳ ಸ್ಥಿತಿ ತೃಪ್ತಿಕರವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸುತ್ತಿದೆ. ಆದರೆ ಪರಿಸ್ಥಿತಿ ಅಷ್ಟು ಚೆನ್ನಾಗಿದ್ದರೆ ಕೇಂದ್ರಗಳ ಅವ್ಯವಸ್ಥೆಯ ಬಗ್ಗೆ ವರದಿಗಳು ಏಕೆ ಬರುತ್ತಿವೆ ಎಂದು ಅವರು ಪ್ರಶ್ನಿಸಿದ್ದಾರೆ. “ಸುರಕ್ಷತೆಯೇ ನಿಮ್ಮ ಆದ್ಯತೆಯಾಗಿದ್ದರೆ, ಪ್ರತಿ ಐವರು ಮಹಿಳೆಯರಲ್ಲಿ ಮೂವರಿಗೆ ಇನ್ನೂ ಏಕೆ ನೆರವು ಸಿಗುತ್ತಿಲ್ಲ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮೀಸಲಿಟ್ಟ ಪ್ರತಿ 100 ರೂಪಾಯಿಯಲ್ಲಿ ಕೇವಲ 60 ಪೈಸೆಯನ್ನು ಮಾತ್ರ ಒಎಸ್‌ಸಿಗಳಿಗಾಗಿ ಏಕೆ ಖರ್ಚು ಮಾಡಲಾಗುತ್ತಿದೆ?” ಎಂದು ಅವರು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾರ್ಚ್ 27ರಂದು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲೂ ರಾಹುಲ್ ಗಾಂಧಿ ಈ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಒಎಸ್‌ಸಿಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿವೆಯೇ ಮತ್ತು ಕಳೆದ ಐದು ವರ್ಷಗಳಲ್ಲಿ ಎಷ್ಟು ಮಹಿಳೆಯರು ಇಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ವಿವರಗಳನ್ನು ಕೋರಿದ್ದರು.
ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಲಿಖಿತ ಉತ್ತರ ನೀಡಿದ್ದಾರೆ. “ಒನ್ ಸ್ಟಾಪ್ ಸೆಂಟರ್ ‘ಮಿಷನ್ ಶಕ್ತಿ’ ಅಡಿಯಲ್ಲಿ ‘ಸಂಬಲ್’ ವಿಭಾಗದ ಭಾಗವಾಗಿದ್ದು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ವೈದ್ಯಕೀಯ, ಕಾನೂನು ನೆರವು, ಸಮಾಲೋಚನೆ ಮತ್ತು ತಾತ್ಕಾಲಿಕ ಆಶ್ರಯವನ್ನು ನೀಡುತ್ತದೆ. 2015ರ ಏಪ್ರಿಲ್ 1ರಿಂದ 2025ರ ಡಿಸೆಂಬರ್ 31ರವರೆಗೆ ದೇಶದಲ್ಲಿ 13.37 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಕೇಂದ್ರಗಳ ಮೂಲಕ ಸಹಾಯ ಪಡೆದಿದ್ದಾರೆ,” ಎಂದು ಸಚಿವರು ಮಾಹಿತಿ ನೀಡಿದ್ದಾರೆ.
