ವಾಷಿಂಗ್ಟನ್: ಫೆಬ್ರವರಿ 28ರಂದು ಪಶ್ಚಿಮ ಏಷ್ಯಾ ಯುದ್ಧ ಆರಂಭವಾದ ನಂತರ ಅಮೆರಿಕದ ವಾಯುಪಡೆಯು ಹಿಂದೆಂದೂ ಕಾಣದಂತಹ ಭೀಕರ ನಷ್ಟವನ್ನು ಅನುಭವಿಸಿದೆ. ಕಳೆದ 37 ದಿನಗಳ ಸಂಘರ್ಷದಲ್ಲಿ ಅಮೆರಿಕವು ಕನಿಷ್ಠ ಏಳು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಸಿಎನ್ಎನ್ (CNN) ವರದಿ ಮಾಡಿದೆ. ಓಎಸ್‌ಐಎನ್‌ಟಿ (OSINT) ಟ್ರ್ಯಾಕಿಂಗ್ ಅಂದಾಜಿನ ಪ್ರಕಾರ, ಈ ನಷ್ಟದಿಂದಾಗಿ ಅಮೆರಿಕಕ್ಕೆ ಸುಮಾರು 15,400 ಕೋಟಿ ರೂಪಾಯಿಗಳ ಆರ್ಥಿಕ ಹೊಡೆತ ಬಿದ್ದಿದೆ.
ಈ ಯುದ್ಧದ ಸರಣಿ ಘಟನೆಗಳಲ್ಲಿ ಅಮೆರಿಕದ ಎಫ್-15, ಎ-10 ಫೈಟರ್ ಜೆಟ್‌ಗಳು ಸೇರಿದಂತೆ ಪ್ರಮುಖ ವಿಮಾನಗಳು ಧ್ವಂಸಗೊಂಡಿವೆ. ಮಾರ್ಚ್ 2ರಂದು ನಡೆದ ವಿಚಿತ್ರ ಘಟನೆಯೊಂದರಲ್ಲಿ, ಕುವೈತ್ ವಾಯು ರಕ್ಷಣಾ ಪಡೆಗಳು ಅಮೆರಿಕದ ಮೂರು ಎಫ್-15 ವಿಮಾನಗಳನ್ನು ಆಕಸ್ಮಿಕವಾಗಿ ಹೊಡೆದುರುಳಿಸಿದ್ದವು. ಇದನ್ನು ಎರಡೂ ದೇಶಗಳು ‘ಸ್ನೇಹಪೂರ್ವಕ ದಾಳಿ’ (Friendly Fire) ಎಂದು ಸಮರ್ಥಿಸಿಕೊಂಡಿದ್ದು, ಅದೃಷ್ಟವಶಾತ್ ಆರು ಮಂದಿ ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಪೈಕಿ ಮೂವರು ಪೈಲಟ್‌ಗಳು ನಂತರ ಇರಾನ್ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿದ್ದರು ಎಂದು ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಖಚಿತಪಡಿಸಿದ್ದಾರೆ.
ಮತ್ತೊಂದೆಡೆ, ಮಾರ್ಚ್ 12ರಂದು ಇರಾಕ್‌ನಲ್ಲಿ ಕೆಸಿ-135 ರೀಫ್ಯುಯೆಲಿಂಗ್ ಟ್ಯಾಂಕರ್ ವಿಮಾನ ಪತನಗೊಂಡು ಆರು ಮಂದಿ ಅಮೆರಿಕನ್ನರು ಮೃತಪಟ್ಟಿದ್ದರು. ಇದು ಶತ್ರುಗಳ ದಾಳಿಯಿಂದ ಸಂಭವಿಸಿದ್ದಲ್ಲ, ಬದಲಿಗೆ ತಾಂತ್ರಿಕ ಕಾರಣದಿಂದ ನಡೆದ ಅಪಘಾತ ಎಂದು ಅಮೆರಿಕದ ಮಿಲಿಟರಿ ವಿವರಣೆ ನೀಡಿದೆ. ಆದರೆ, ಮಾರ್ಚ್ 27ರಂದು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ಏರ್ ಬೇಸ್ ಮೇಲೆ ಇರಾನ್ ನಡೆಸಿದ ನೇರ ದಾಳಿಯಲ್ಲಿ ಅಮೆರಿಕದ ಇ-3 ಸೆಂಟ್ರಿ ವಾಯು ಎಚ್ಚರಿಕೆ ವಿಮಾನ ಮತ್ತು ಒಂದು ಟ್ಯಾಂಕರ್ ವಿಮಾನ ಧ್ವಂಸಗೊಂಡಿದ್ದು, 10 ಮಂದಿ ಸೈನಿಕರು ಗಾಯಗೊಂಡಿದ್ದಾರೆ.
ಇದಲ್ಲದೆ, ಕಳೆದ ತಿಂಗಳು ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಅತ್ಯಾಧುನಿಕ ಎಫ್-35 ವಿಮಾನವೊಂದು ತೀವ್ರವಾಗಿ ಜಖಂಗೊಂಡಿದ್ದು, ಪಶ್ಚಿಮ ಏಷ್ಯಾದ ವಾಯುನೆಲೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಸತತವಾಗಿ ಸಂಭವಿಸುತ್ತಿರುವ ಈ ಸಾವು-ನೋವು ಮತ್ತು ಆಸ್ತಿಪಾಸ್ತಿ ನಷ್ಟವು ಅಮೆರಿಕದ ವಾಯುಪಡೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
