Tuesday, February 24, 2026

ಸತ್ಯ | ನ್ಯಾಯ |ಧರ್ಮ

ಮೋದಿ ‘ನಾಚಿಕೆಗೇಡು’ ಟೀಕೆಗೆ ರಾಹುಲ್ ಗಾಂಧಿ ಖಡಕ್ ತಿರುಗೇಟು

ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಮಾಡಿದ “ಗಲೀಜು ಮತ್ತು ನಾಚಿಕೆಗೇಡಿನ ರಾಜಕೀಯ” ಅನ್ನೋ ಟೀಕೆಗೆ ರಾಹುಲ್ ಗಾಂಧಿ ಅವರು ಇವತ್ತು (ಸೋಮವಾರ) ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ‘ಎಐ ಶೃಂಗಸಭೆ’ಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡಿದ್ದನ್ನ ನೋಡಿ ಮೋದಿ ಸಿಕ್ಕಾಪಟ್ಟೆ ಗರಂ ಆಗಿದ್ದರು. ಭಾರತ ಆಯೋಜನೆ ಮಾಡಿದ ಇಂಥ ದೊಡ್ಡ ಇಂಟರ್ನ್ಯಾಷನಲ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತನ್ನ “ಗಲೀಜು ಮತ್ತು ಬೆತ್ತಲೆ” (ಗಂದಿ ಔರ್ ನಂಗಿ) ರಾಜಕೀಯ ಮಾಡ್ತಿದೆ ಅಂತ ಮೋದಿ ಆರೋಪಿಸಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತ ಇಲ್ಲ, ಅದು ಪೂರ್ತಿ ಬರ್ಬಾದ್ ಆಗಿದೆ ಅಂತಲೂ ಹೇಳಿದ್ದರು.

ಇದಕ್ಕೆ ಎಕ್ಸ್ (X) ನಲ್ಲಿ ಪೋಸ್ಟ್ ಹಾಕಿರೋ ರಾಹುಲ್ ಗಾಂಧಿ ಅವರು ಮೋದಿಯವರನ್ನ ಸುಮ್ನೆ ಬಿಟ್ಟಿಲ್ಲ. “ಮೋದಿಯವರೇ, ನೀವು ನಾಚಿಕೆ ಬಗ್ಗೆ ಮಾತಾಡ್ತೀರಾ? ಅಸಲಿ ನಾಚಿಕೆಗೇಡು ಯಾವುದು ಅಂತ ನಾನು ಹೇಳ್ತೀನಿ ಕೇಳಿ. ಲೈಂಗಿಕ ಅಪರಾಧಿ ಎಪ್ಸ್ಟೀನ್ ಫೈಲ್ಸ್‌ನಲ್ಲಿ ನಿಮ್ಮ ಹೆಸರು, ನಿಮ್ಮ ಸಚಿವರ ಹೆಸರು ಮತ್ತೆ ನಿಮ್ಮ ಫ್ರೆಂಡ್ಸ್ ಹೆಸರು ಒಟ್ಟಿಗೆ ಬಂದಿದೆಯಲ್ಲ, ಅದು ಅಸಲಿ ನಾಚಿಕೆಗೇಡು. ಅಮೆರಿಕಾ ಜೊತೆ ಮಾಡಿರೋ ಟ್ರೇಡ್ ಡೀಲ್‌ನಲ್ಲಿ ದೇಶದ ಹಿತಾಸಕ್ತಿಯನ್ನೇ ಮಾರಾಟ ಮಾಡಿದ್ದೀರಿ, ನಮ್ಮ ದೇಶದ ಡೇಟಾವನ್ನ ಬೇರೆಯವರ ಕೈಗೆ ಕೊಟ್ಟಿದ್ದೀರಿ, ರೈತರನ್ನ ಬೀದಿಗೆ ತಂದಿದ್ದೀರಿ; ಇವೆಲ್ಲಾ ನಾಚಿಕೆಗೇಡಿನ ವಿಷಯಗಳು” ಅಂತ ರಾಹುಲ್ ತಿರುಗೇಟು ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ಅಮೆರಿಕಾದಲ್ಲಿ ಗೌತಮ್ ಅದಾನಿ ಮೇಲೆ ನಡೀತಿರೋ ಕೋರ್ಟ್ ಕೇಸ್‌ನಿಂದ ನಿಮಗೆ ರಾತ್ರಿ ನಿದ್ದೆ ಬರ್ತಿಲ್ಲ. ಯಾಕಂದ್ರೆ ಅದು ಬಿಜೆಪಿಯ ಹಣಕಾಸು ವ್ಯವಸ್ಥೆ ಮೇಲೆ ಬಿದ್ದಿರೋ ಹೊಡೆತ. ಕಳೆದ 14 ತಿಂಗಳಿಂದ ಇದರ ಮೇಲೆ ನೀವು ಯಾವುದೇ ಕ್ರಮ ತಗೊಳ್ಳದೆ ಇರೋದೇ ನಾಚಿಕೆಗೇಡು. ನಿಮ್ಮ ಫ್ರೆಂಡ್ಸ್ ಆದ ಅನಿಲ್ ಅಂಬಾನಿ ಮತ್ತೆ ಅದಾನಿಗೋಸ್ಕರ ನೀವು ಏನು ಬೇಕಾದ್ರೂ ಮಾಡ್ಕೊಳ್ಳಿ. ಆದ್ರೆ ನಾನು ಮತ್ತೆ ಕಾಂಗ್ರೆಸ್‌ನ ಸಿಂಹದಂತಿರೋ ಹೋರಾಟಗಾರರು ದೇಶವನ್ನ ಉಳಿಸೋಕೆ ಒಂದು ಇಂಚೂ ಹಿಂದೆ ಸರಿಯಲ್ಲ” ಅಂತ ಸವಾಲು ಹಾಕಿದ್ದಾರೆ.

ತಮ್ಮ ವಿಡಿಯೋ ಸಂದೇಶದಲ್ಲಿ ರಾಹುಲ್ ಅವರು ಪ್ರಧಾನಿಯವರ ಕಣ್ಣಲ್ಲಿ ಭಯ ಕಾಣ್ತಿದೆ ಅಂತಾನೂ ಹೇಳಿದ್ದಾರೆ. ಅದಾನಿ ಕೇಸ್ ಮತ್ತು ಎಪ್ಸ್ಟೀನ್ ಫೈಲ್ಸ್‌ಗಳ ಭಯದಿಂದಾಗಿಯೇ ಮೋದಿ ಅವರು ಬಜೆಟ್ ಅಧಿವೇಶನದಲ್ಲಿ ಪಾರ್ಲಿಮೆಂಟ್‌ಗೆ ಬಂದು ವಿರೋಧ ಪಕ್ಷಗಳನ್ನ ಎದುರಿಸೋಕೆ ಹಿಂದೇಟು ಹಾಕಿದ್ರು ಅಂತ ರಾಹುಲ್ ಲೇವಡಿ ಮಾಡಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಮಾತಿನ ಸಮರ ಈಗ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page