ಮುಂಬೈ: ಹಿಂದಿ ಭಾಷಾ ವಿವಾದ ತಮಿಳುನಾಡಿನಿಂದ ಮಹಾರಾಷ್ಟ್ರಕ್ಕೆ ತಲುಪಿದೆ. ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಜಾರಿಗೆ ತರುವ ನಿರ್ಧಾರದ ಬಗ್ಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಾವು ಹಿಂದೂಗಳು. ಹಿಂದಿಗಳಲ್ಲʼ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನುಷ್ಠಾನದ ಭಾಗವಾಗಿ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ತೃತೀಯ ಭಾಷೆಯನ್ನಾಗಿ ಮಾಡಲು ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ನಿರ್ಧಾರವನ್ನು ವಿರೋಧಿಸಿರುವ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ “ನೀವು ಮಹಾರಾಷ್ಟ್ರದ ಮೇಲೆ ಹಿಂದಿ ಹೇರಲು ಹೊರಟರೆ ನಾವು ಅದರ ವಿರುದ್ಧ ಹೋರಾಟ ನಡೆಸುತ್ತೇವೆ. ಈ ಸರ್ಕಾರ ಮಾಡುತ್ತಿರುವ ಕೆಲಸ ನೋಡಿದರೆ ಅದು ಹಿಂದಿಯವರು ಮತ್ತು ಮರಾಠಿಯವರ ನಡುವೆ ಜಗಳ ಹುಟ್ಟಿಸಿ ಅದರಿಂದ ಚುನಾವಣಾ ಲಾಭ ಪಡೆಯುವ ಹುನ್ನಾರ ನಡೆಸುತ್ತಿರುವ ಹಾಗಿದೆ” ಎಂದು ಹೇಳಿದ್ದಾರೆ.
ಹಿಂದಿ ರಾಷ್ಟ್ರಭಾಷೆಯಲ್ಲ ಎಂದಿರುವ ರಾಜ್ ಠಾಕ್ರೆ, ಮಹಾರಾಷ್ಟ್ರದ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಏಕೆ ಕಲಿಸಬೇಕು ಎಂದು ಕೇಳಿದ್ದಾರೆ. ನಿಮ್ಮ ತ್ರಿಭಾಷಾ ಸೂತ್ರವನ್ನು ಸರ್ಕಾರಿ ವ್ಯವಹಾರಗಳಿಗೆ ಸೀಮಿತಗೊಳಿಸಿ. ಅದನ್ನು ಶಿಕ್ಷಣದಲ್ಲಿ ತರಬೇಡಿ. ಈ ದೇಶದಲ್ಲಿ ಭಾಷೆಯ ಆಧಾರದಲ್ಲೇ ರಾಜ್ಯಗಳನ್ನು ಸೃಷ್ಟಿಸಲಾಗಿದೆ. ಇದು ಹಲವು ವರ್ಷಗಳಿಂದ ನಡೆಯುತ್ತಿದೆ. ಮಹಾರಾಷ್ಟ್ರದ ಮೇಲೆ ಈಗ ಬೇರೆ ಪ್ರದೇಶದ ಭಾಷೆಯನ್ನು ಏಕೆ ಹೇರಲಾಗುತ್ತಿದೆ? ಇದರಿಂದ ಭಾಷಾವಾರು ಪ್ರಾಂತ್ಯಗಳ ಪರಿಕಲ್ಪನೆಗೆ ಹಾನಿಯಾಗುತ್ತದೆ” ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.