Home ಅಂಕಣ ಸಮಾಧಾನ ಸಾವಧಾನ ಮೊಲೆಯ ಮಾತಿನಿಂದ ನಿಮ್ಮ ಭಾಷೆಯ ಮಡಿ ಮೈಲಿಗೆಯಾಗುವುದಿಲ್ಲ

ಸಮಾಧಾನ ಸಾವಧಾನ ಮೊಲೆಯ ಮಾತಿನಿಂದ ನಿಮ್ಮ ಭಾಷೆಯ ಮಡಿ ಮೈಲಿಗೆಯಾಗುವುದಿಲ್ಲ

0

ಸಮಾಧಾನ ಸಾವಧಾನ
ಮೊಲೆಯ ಮಾತಿನಿಂದ ನಿಮ್ಮ ಭಾಷೆಯ
ಮಡಿ ಮೈಲಿಗೆಯಾಗುವುದಿಲ್ಲ
ಯೋನಿಯ ಕವಿತೆಯಿಂದ ನಿಮ್ಮ ಕಣ್ಣು
ಮಬ್ಬು ಕುರುಡಾಗುವುದಿಲ್ಲ
ಸಮಾಧಾನ ಸಾವಧಾನ

ಸೋಷಿಯಲ್ ಮೀಡಿಯಾವು ಈಚಿನ ಕೆಲವು ವರ್ಷಗಳಲ್ಲಿ ಎಲ್ಲೋ ಯಾರೋ ಶುರು ಮಾಡುವ ಒಂದು ಸಣ್ಣ ವಿಚಾರಕ್ಕೆ ಬಹುದೊಡ್ಡನಾದ ಪ್ರತಿಕ್ರಿಯೆಯನ್ನು ಉಂಟು ಮಾಡಿಬಿಡುತ್ತದೆ. ಅದರೊಳಗೆ ತೀವ್ರನಾಗಿ ತೊಡಗಿಕೊಂಡಿರುವ ನಾವೆಲ್ಲರೂ ಅದರೊಂದು ಪರವಿರೋಧ ಅಥವಾ ತಟಸ್ಥದ ರೂಪವಾಗಿ ಕಾಣಿಸಿಕೊಳ್ಳುತ್ತೇವೆ. ಆದ್ರೆ ಈ ಪ್ರತಿಕ್ರಿಯೆಯು ಅಭಿಮತವಾಗಿರದೇ ತೀರ್ಮಾನ/ತೀರ್ಪಿನ ರೂಪ ಪಡೆದುಕೊಳ್ಳುವುದೇ ಪಿಡುಗಾಗಿಬಿಟ್ಟಿದೆ. ನಾವೆಲ್ಲರೂ ಇದರಿಂದ ಹೊರ ಬರುವ ಜರೂರು ಇದ್ದೇ ಇದೆ.

ಈಚೆಗೆ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯರಾದ ಮಮತಾ ಸಾಗರ ಅವ್ರು ಓದಿದ ಅವರ ಬಹಳ ಹಳೆಯ ಕವಿತೆ ವೈಪರೀತ್ಯದ ಚರ್ಚೆಗೆ ಸಿಕ್ಕಿಕೊಂಡಿದೆ. ಎರಡೂವರೆ ದಶಕಗಳಿಂದ ಕನ್ನಡ ಮತ್ತು ಹತ್ತಾರು ದೇಶಭಾಷೆಗಳ ಕಾವ್ಯದ ಓದುಗನಾದ ನನಗೆ ಅದರಲ್ಲಿ ಅಂತಹ ವಿವಾದವಾಗಲಿ, ಭಾಷೆಯ ಬಗೆಗೆ ಸಂಕೋಚವಾಗಲಿ ಆಗಲಿಲ್ಲ. ಕವಿತೆಯ ವಾಚನದ ಶೈಲಿ ತುಸು ವಿಭಿನ್ನವಾಗಿತ್ತು. ಅದು ಮಮತಾ ಸಾಗರರೇ ರೂಪಿಸಿಕೊಂಡದ್ದು. ಆದ್ರೆ ಯಾರೋ ಕೆಲವರು ಆ ಕವಿತಾ ವಾಚನದ ವಿಡಿಯೋಗೆ ಮಾಡಿದ ಕಾಮೆಂಟುಗಳು ಉಳಿದವರಿಗೂ ಹಬ್ಬಿ ಎಲ್ಲರೂ ಅದರ ಬಗ್ಗೆ ಬೇಕಾಬಿಟ್ಟಿ ಕಾಮೆಂಟು ಮಾಡಲಾರಂಭಿಸಿದರು. ಅದರಲ್ಲಿ ನನ್ನ ಪರಿಚಯಸ್ಥರೂ ಇದ್ದಾರೆ!

ಗಂಡಸೇ ಯಜಮಾನನಾಗಿರುವ, ಸಾವಿರಾರು ವರ್ಷದ ಈ ಸಮಾಜದೊಳಗೆ ಹೆಣ್ಣು ಮಾತನಾಡಲು ಅವಕಾಶ ಸಿಕ್ಕಿದ್ದೇ ಅಪರೂಪ. “ಹೆಣ್ಣು, ಹೊನ್ನು, ಮಣ್ಣು” ಎನ್ನುವ ನುಡಿಗಟ್ಟಿನೊಳಗೆ ಹೆಣ್ಣನ್ನು ಒಂದು ಸ್ವತ್ತು / ಅನುಭೋಗದ ದೃಷ್ಟಿಯಲ್ಲಿ ಕಾಣಿಸಲಾಗಿದೆ. ಇವತ್ತಿಗೂ ನಾವೆಲ್ಲಾ ‘ಹೆಣ್ಣು’ ಏನಾದರೂ ಹೇಳಿದರೆ ಹಳಹಳಿಸಲು ಶುರು ಮಾಡಿಬಿಡುತ್ತೇವೆ. ಹೆಣ್ಣಿನ ಜೈವಿಕ ಭಾಗಗಳನ್ನು (ಸ್ತನ, ಯೋನಿ ಇತ್ಯಾದಿ) ಇದುವರೆಗೂ ಕವಿಗಳು, ಕಲಾವಿದರು ಚಿತ್ರಿಸಿದ್ದು ಕೂಡ ಈ ಅನುಭೋಗದ ದೃಷ್ಟಿಯಿಂದಲೇ! ಬಲಪಂಥೀಯ ಸಂಪ್ರದಾಯವಾದವು ಕೂಡ ಹೆಣ್ಣು ಒಂದು ಪ್ರಾಪರ್ಟಿ ಎಂದೇ ಪರಿಗಣಿಸಿ ಆಕೆಯ ಎಲ್ಲ ನಡೆನುಡಿಗಳನ್ನ ನಿಯಂತ್ರಿಸಲು ನೋಡುತ್ತದೆ. ಸೆಕೆಂಡ್ ಸೆಕ್ಸ್ ಆಗಿರುವ ಹೆಣ್ಣಿನ ಬಗೆಗೆ ಈ ಎಲ್ಲ ತೆರೆನಾದ ನೋಟಗಳನ್ನು ಸೃಷ್ಟಿಸಿದ್ದು, ಫಸ್ಟ್ ಸೆಕ್ಸ್ ಎಂದು ತಾನೇ ಪರಿಗಣಿಸಿಕೊಂಡಿರುವ ಗಂಡು.

ಯಾವಾಗ ಈ ಫಸ್ಟ್ ಸೆಕ್ಸ್ ಸಮಾಜವು ತನ್ನ ಮಾನ ಮಾರ್ಯಾದೆಗಳನ್ನು ಸೆಕೆಂಡ್ ಸೆಕ್ಸ್ ನ ಯೋನಿಯೊಳಗೆ ಹುದುಗಿಸಿಟ್ಟಂತೆ ಮಾತಾನಾಡುತ್ತದೋ, ಅವಾಗ ಅದನ್ನ ಪ್ರತಿರೋಧಿಸಲು ಸೆಕೆಂಡ್ ಸೆಕ್ಸ್ ಏನು ಮಾಡಬೇಕು ( First Sex & Second Sex ಎರಡೂ ಪದಗಳನ್ನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ.) ಆಕೆ ಮೊಲೆ, ಯೋನಿ ಪದ ಬಳಿಸಿದರೆ ಆಗುವ ಮುಜುಗರ, ಅಸಹ್ಯ, ಅಸಹನೆಗಳು ಯಾಕೆ ಸಾವಿರಾರು ವರ್ಷಗಳಿಂದ ನೂರಾರು ಫಸ್ಟ್ ಸೆಕ್ಸ್ ಕವಿಗಳು ಬಳಸಿದಾಗ ಆಗಿಲ್ಲ, ಇವತ್ತಿಗೂ ಆಗುತ್ತಿಲ್ಲ?! ಅವೆಲ್ಲಾ ಶೃಂಗಾರ ಕವಿತೆಗಳು ಅಂತ ಯಾಕೆ ಅನಿಸಿಕೊಂಡವು?! ಅವುಗಳನ್ನು ಚಪ್ಪರಿಸುತ್ತಾ ಆಸ್ವಾದಿಸುವಾಗ ಅಸಹ್ಯವೇಕೆ ಆಗಲಿಲ್ಲ?! ಗಂಡು ಬರೆದಾಗ ರಸಿಕತೆ, ಹೆಣ್ಣು ಬರೆದಾಗ ಅಸಹ್ಯವೇಕೆ ಆಯಿತು?!

ಮುಂದುವರಿದು..
ಮಾತಿನಲ್ಲಿ, ಬೈಗುಳದಲ್ಲೂ ಪದೇ ಪದೇ ಅವಹೇಳನಕ್ಕೆ ಹೆಣ್ಣಿನ ಜೈವಿಕ ಅಂಗಗಳು, ಸಂಬಂಧಗಳೇ ಯಾಕೆ ಬಳಕೆಯಾಗುತ್ತವೆ?!

ಹೆಣ್ಣಿನ ಜೈವಿಕ ಅಂಗಗಳ ಮೇಲಿನ ರೂಪಕ ಭಾಷೆಯನ್ನು  ಕನ್ನಡದಲ್ಲಿ ಅಕ್ಕ, ಮತ್ತಿತ್ತರ ವಚನಕಾರ್ತಿಯರು ಒಡೆದು ಹಾಕಿ ಕಟ್ಟಿದ ವಚನಗಳೇ ನಮ್ಮ ಮುಂದಿರುವಾಗ ಮಮತಾ ಸಾಗರ ಅವರ ಒಂದು ಕವಿತೆಗೆ ಈ ಪರಿಯ ಅಸಮಾಧಾನದ ಅಗತ್ಯವಿತ್ತೆ?! ನೀವು ಕವಿತೆಯನ್ನು ಸರಾಸಗಟಾಗಿ ನಿರಾಕರಿಸಬಹುದು. ಅದು ನಿಮ್ಮ ಆಯ್ಕೆ. ಇಷ್ಟವಾಗದೇ ಇದ್ದಲ್ಲಿ ನಿರ್ಲಕ್ಷ್ಯಿಸಬಹುದು, ಅದು ನಿಮ್ಮ‌ ಹಕ್ಕು. ಆದ್ರೆ ಕವಿಯನ್ನು ನಿಂದಿಸುವುದಾದರೂ ಯಾಕೆ?! ಈ ಎಲ್ಲ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡರೆ ನಮ್ಮ ತಪ್ಪು ತಿಳುವಳಿಕೆ ಆಗಿರುವುದೆಲ್ಲಿ ಎಂದರಿಯಬಹುದೇನೋ.. ಈ ಅರಿವು ಕೂಡ ನಮ್ಮ ಆಯ್ಕೆಯೇ ಆಗಿದೆ.

ಕವಿತೆಯ ಸ್ವರೂಪ, ಸಂರಚನೆ, ಅದರ ಭಾಷೆ-ನೀರೂಪಣೆ ಕುರಿತು ವಿಮರ್ಶೆ ಮಾಡಿ, ತೊಂದರೆಯಿಲ್ಲ. ಅದು ಟ್ರೋಲ್ ರೂಪದ್ದು ಆಗಬಾರದು. ಟ್ರೋಲ್ ಈ ಕಾಲದ ಒಂದು ಕೆಟ್ಟ ವಿಕೃತಿ. ಅದನ್ನು ನಾವು ಬೆಂಬಲಿಸಬಾರದು, ಬೆನ್ನಿಗೆ ಕಟ್ಟಿಕೊಳಲೂ ಬಾರದು.

ಪುರಾಣ ಪುಣ್ಯಕಥೆಗಳಿಂದ ಹಿಡಿದು ಸೂಕ್ತ, ಸ್ತೋತ್ರಗಳು, ಕಾವ್ಯಗಳು, ದೇವಳದ ಶಿಲ್ಪಗಳು ಎಲ್ಲದರಲ್ಲೂ ಹೆಣ್ಣಿನ ಸ್ತನ, ಯೋನಿಗಳು ಸೃಷ್ಟಿ, ಸೌಂದರ್ಯ, ಆರಾಧನೆ, ಕಟ್ಟುಪಾಡು, ಕರಾರುಗಳಿಗೆ ಒಳಗಾಗಿರುವಾಗ ಇಂತಹ ಎಲ್ಲ ಕರಾರುಗಳ ಕರಾಳತೆಯಿಂದ ಒಡೆದು ಹೊರಬರುವ ಪ್ರಯತ್ನಗಳಿಗೆ ಇಷ್ಟು ಅಸಮಾಧಾನದ ಪ್ರತಿಕ್ರಿಯೆಗಳ ಅಗತ್ಯವಿಲ್ಲ. ನಮ್ಮನ್ನು ಬಲಪಂಥೀಯ ನೈತಿಕಗಿರಿ ಸುತ್ತುವರಿದಿರುವ ಹೊತ್ತಿನಲ್ಲಿ ಅದರ ನೆರಳು, ಉಸಿರು ನಮ್ಮಲ್ಲೂ ಉಂಟು ಮಾಡಬಹುದಾದ ಸೋಂಕಿಗೆ ನಾವು ಒಳಗಾಗುವುದು ಬೇಡ.

ಕಲೆಗೆ, ಕಾವ್ಯಕ್ಕೆ ಜೈವಿಕ ಅಂಗಗಳ ಮೈಲಿಗೆ ಇಲ್ಲ, ನಮ್ಮೆಲ್ಲ ಅನೈತಿಕ ಆರೋಪಗಳನ್ನು ತ್ಯಜಿಸಿ, ಸೃಷ್ಟಿ ಸಹಜ ವಿವೇಕವನ್ನು ಸ್ವೀಕರಿಸಬೇಕಿದೆ.
– – – – – –
ಅಂದ ಹಾಗೆ ಈ ಹೊತ್ತಿನಲ್ಲಿ ಒಂದು  ಸಂಸ್ಕೃತ ಸುಭಾಷಿತದ ನೆನಪಾಯಿತು.. ಪ್ರೇಮಕವಿ ಬಿಲ್ಹಣನು ಕಾಶ್ಮೀರವನ್ನು ತೊರೆದು ವಿಂಧ್ಯೆ ದಾಟಿ ಚಾಲುಕ್ಯ ಸಾಮ್ರಾಟ ವಿಕ್ರಮಾಧಿತ್ಯನ ಆಸ್ಥಾನವನ್ನು ಪ್ರವೇಶಿಸಲು ಯತ್ನಿಸಿದಾಗ ಭಟರು ಆತನನ್ನು ಪ್ರವೇಶದ್ವಾರದಲ್ಲೇ ತಡೆದು ನಿಲ್ಲಿಸುತ್ತಾರೆ. ವಿದ್ವಾಂಸನೂ, ಪ್ರಣಯ ಕವಿಯೂ ಆದ ಬಿಲ್ಹಣನು ಭಟರಿಗೆ ಒಂದು ಪದ್ಯವನ್ನು ಬರೆದುಕೊಟ್ಟು ‘ಇದನ್ನ ಸಾಮ್ರಾಟರಿಗೆ ತಲುಪಿಸಿರಿ, ಅವರ ಆಜ್ಞೆ ಬರುವರೆಗೂ ಇಲ್ಲೇ ಕಾಯುವೆ’ ಎಂದು ಮನವಿ ಮಾಡುತ್ತಾನೆ. ಭಟರು ಬಿಲ್ಹಣನ ಪದ್ಯವನ್ನು ವಿಕ್ರಮಾದಿತ್ಯನಿಗೆ ಕೊಡುತ್ತಾರೆ.‌ ಅದನ್ನು ಓದಿದ ಸಾಮ್ರಾಟ ತಕ್ಷಣವೇ ಸ್ವತಃ ಪ್ರವೇಶದ್ವಾರಕ್ಕೆ ಬಂದು ಬಿಲ್ಹಣನನ್ನು ಆಸ್ಥಾನಕ್ಕೆ ಬರಮಾಡಿಕೊಂಡನಂತೆ.. (ದಂತಕತೆ)

ಅದೆಂತಹ ಪದ್ಯ ಬರೆದಿದ್ದ ಬಿಲ್ಹಣನೆಂದರೆ..
”ರಾಜದ್ವಾರೆ ಭಗಾಕಾರೆ ವಿಷಂತಿ ಪ್ರವಿಷಂತಿ ಚ
ಶಿಶ್ನವತ್ ಪಂಡಿತಾಸರ್ವೇ ಬಿಲ್ಹಣೋ ವೃಷಣಾಯತೇ.”
(ಯೋನಿ(ಭಗ)ಯಾಕಾರದಲ್ಲಿರುವ ರಾಜದ್ವಾರದಲ್ಲಿ
ಪಂಡಿತರು ಶಿಶ್ನದ ಹಾಗೆ ಒಳಗೆ ಹೊರಗೆ ಓಡಾಡುತ್ತಿದ್ದಾರೆ.
ಆದರೆ ಬಿಲ್ಹಣನು ಮಾತ್ರ ವೃಷಣ(ಬೀಜ)ದ ಹಾಗೆ ಹೊರಗಡೆ ನಿಂತಿದ್ದಾನೆ.)

You cannot copy content of this page

Exit mobile version