ರಾಜಸ್ಥಾನದ ಜಲೋರ್ ಜಿಲ್ಲೆಯ ಸಾಯಲಾ ತಹಸಿಲ್ ವ್ಯಾಪ್ತಿಯ ಸುಮಾರು 15 ಗ್ರಾಮಗಳ ಸಮುದಾಯವೊಂದು ಹೆಣ್ಣುಮಕ್ಕಳ ಮೇಲೆ ವಿಲಕ್ಷಣ ನಿರ್ಬಂಧಗಳನ್ನು ಹೇರಿದೆ.
‘ಕಾಂಭಿವಾಲ್ ಮತ್ತು ಗೋಲ ಸಮಾಜ’ದ (Kambhiwal and Gola community) ಪಂಚಾಯತ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಅವಿವಾಹಿತ ಹುಡುಗಿಯರು ಸ್ಮಾರ್ಟ್‌ಫೋನ್ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೆಣ್ಣುಮಕ್ಕಳು ಸಾಮಾಜಿಕ ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿ ದಾರಿ ತಪ್ಪಬಾರದು ಮತ್ತು ಸಂಸ್ಕೃತಿಯನ್ನು ಕಾಪಾಡಬೇಕು ಎಂಬ ನೆಪವನ್ನೊಡ್ಡಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹೊಸ ನಿಯಮದ ಪ್ರಕಾರ, ಯಾವುದೇ ಹುಡುಗಿ ಸ್ಮಾರ್ಟ್‌ಫೋನ್ ಬಳಸುತ್ತಿರುವುದು ಕಂಡುಬಂದಲ್ಲಿ, ಆಕೆಯ ಪೋಷಕರಿಗೆ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ಒಂದು ವೇಳೆ ಹೆಣ್ಣುಮಕ್ಕಳು ತಮ್ಮ ಇಚ್ಛೆಯಂತೆ ಅಂತರ್ಜಾತಿ ವಿವಾಹ ಮಾಡಿಕೊಂಡರೆ ಅಥವಾ ಮನೆಯವರಿಂದ ಓಡಿಹೋದರೆ, ಅಂತಹ ಕುಟುಂಬಗಳಿಗೆ ಸುಮಾರು 2 ಲಕ್ಷ ರೂಪಾಯಿಗಳವರೆಗೆ ಭಾರಿ ದಂಡ ವಿಧಿಸುವ ಮತ್ತು ಸಮಾಜದಿಂದ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಈ ಪಂಚಾಯತ್ ನಿರ್ಧಾರವು ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆಧುನಿಕ ಯುಗದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಂವಹನಕ್ಕೆ ಅಡ್ಡಿಪಡಿಸುವ ಇಂತಹ ನಿರ್ಧಾರಗಳು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದಾರೆ.
ಈ ವಿಚಾರವು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕಾನೂನುಬಾಹಿರವಾಗಿ ಇಂತಹ ನಿರ್ಬಂಧಗಳನ್ನು ಹೇರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದೆ.
