ಅಸ್ಸಾಂನ ವೆಸ್ಟ್ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ವೃತ್ತಿಪರ ಮತ್ತು ಗ್ರಾಮ ಹುಲ್ಲುಗಾವಲು ಮೀಸಲು ಭೂಮಿಯಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಕರ್ಬಿ ಬುಡಕಟ್ಟು ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ.
ಡಿಸೆಂಬರ್ 22 ರಂದು ಪ್ರತಿಭಟನಾ ಸ್ಥಳದಲ್ಲಿದ್ದ ಉಪವಾಸ ಸತ್ಯಾಗ್ರಹಿಗಳನ್ನು ಪೊಲೀಸರು ಅಲ್ಲಿಂದ ತೆರವುಗೊಳಿಸಿದ ನಂತರ ಆಕ್ರೋಶಗೊಂಡ ಪ್ರತಿಭಟನಾಕಾರರು ಕರ್ಬಿ ಆಂಗ್ಲಾಂಗ್ ಸ್ವಾಯತ್ತ ಮಂಡಳಿಯ ಮುಖ್ಯಸ್ಥ ಮತ್ತು ಬಿಜೆಪಿ ನಾಯಕ ತುಲಿರಾಮ್ ರೊಂಗ್‌ಹಾಂಗ್ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಸಿಆರ್‌ಪಿಎಫ್ ಪಡೆಗಳನ್ನು ನಿಯೋಜಿಸಲಾಗಿದೆ.
ಈ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಸ್ಸಾಂ ಸರ್ಕಾರವು ಮಧ್ಯಸ್ಥಿಕೆ ವಹಿಸಿದ್ದು, ಸಚಿವ ರನೋಜ್ ಪೆಗು ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಚಿವರ ಭರವಸೆಯ ಮೇರೆಗೆ ಪ್ರತಿಭಟನಾಕಾರರು ತಮ್ಮ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ.
ಈ ವಿವಾದವನ್ನು ಬಗೆಹರಿಸಲು ಡಿಸೆಂಬರ್ ಅಂತ್ಯದೊಳಗೆ ರಾಜ್ಯ ಸರ್ಕಾರ, ಸ್ವಾಯತ್ತ ಮಂಡಳಿ ಮತ್ತು ಪ್ರತಿಭಟನಾಕಾರರ ನಡುವೆ ತ್ರಿಪಕ್ಷೀಯ ಸಭೆ ನಡೆಸಲು ನಿರ್ಧರಿಸಲಾಗಿದೆ. ಒತ್ತುವರಿ ತೆರವು ಪ್ರಕ್ರಿಯೆಯು ಪ್ರಸ್ತುತ ಗೌಹಾಟಿ ಹೈಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ವಿಳಂಬವಾಗುತ್ತಿದೆ ಎಂದು ಬಿಜೆಪಿ ನಾಯಕ ರೊಂಗ್‌ಹಾಂಗ್ ಸ್ಪಷ್ಟಪಡಿಸಿದ್ದಾರೆ.
