ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು: 59 ಸಾವುಗಳ ನಂತರ ತಡೆಗೆ ಉನ್ನತ ಮಟ್ಟದ ಸಮಿತಿ ರಚಿಸಿಲು ತೀರ್ಮಾನಿಸಿದ ಸಿಆರ್‌ಪಿಎಫ್‌

ದೆಹಲಿ: ಯೋಧರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಹಾಗೂ ಮಾಸಿಕ ಪರಾಮರ್ಶೆ ನಡೆಸಲು ಉನ್ನತ ಮಟ್ಟದ ‘ಕೋರ್ ಗ್ರೂಪ್’ ಸಮಿತಿಯನ್ನು ರಚಿಸಿದೆ.

ಸಿಆರ್‌ಪಿಎಫ್ ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣಗಳು 2025ರಲ್ಲಿ ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದ್ದವು. ಅಧಿಕೃತ ಅಂಕಿ-ಅಂಶಗಳ ಪ್ರಕಾರ, 2025 ರಲ್ಲಿ ಬರೋಬ್ಬರಿ 59 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 57, 2022ರಲ್ಲಿ 43, 2023ರಲ್ಲಿ 57, 2024ರಲ್ಲಿ 46 ಹಾಗೂ 2025ರಲ್ಲಿ 59 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 2026ರ ಮೇ 30ರವರೆಗೆ 19 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಹಲವು ಘಟನೆಗಳು ಕರ್ತವ್ಯದಲ್ಲಿರುವಾಗಲೇ ನಡೆದಿರುವುದು ಆತಂಕ ಹೆಚ್ಚಿಸಿದೆ.

ಮಾನವ ಹಕ್ಕುಗಳ ಆಯೋಗದಿಂದ ವರದಿ ಕೋರಿಕೆ:

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ), ಕೇಂದ್ರ ಗೃಹ ಸಚಿವಾಲಯ ಹಾಗೂ ಸಿಆರ್‌ಪಿಎಫ್ ಮಹಾನಿರ್ದೇಶಕರಿಂದ (ಡಿಜಿ) ವಿವರವಾದ ವರದಿ ಕೇಳಿದೆ. ಇದರ ಬೆನ್ನಲ್ಲೇ ಸಿಆರ್‌ಪಿಎಫ್ ಡಿಜಿ ಜಿ.ಪಿ. ಸಿಂಗ್ ಅವರ ನೇತೃತ್ವದಲ್ಲಿ ಈ ಉನ್ನತ ಸಮಿತಿ ರಚಿಸಲಾಗಿದ್ದು, ಪ್ರತಿ ತಿಂಗಳ ಮೂರನೇ ವಾರದಲ್ಲಿ ಸಭೆ ನಡೆಸಿ ಆತ್ಮಹತ್ಯೆ ಮತ್ತು ಸ್ವಯಂ ಹಾನಿ ಮಾಡಿಕೊಳ್ಳುವ ಪ್ರಕರಣಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಿದೆ.

ಕಮಾಂಡೆಂಟ್‌ಗಳಿಂದ ಪ್ರೆಸೆಂಟೇಶನ್ ಕಡ್ಡಾಯ:

ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಬೆಟಾಲಿಯನ್ ಕಮಾಂಡೆಂಟ್ ಅಥವಾ ಮುಖ್ಯಸ್ಥರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ ಗ್ರೂಪ್‌ಗೆ ಸಮಗ್ರ ಪ್ರೆಸೆಂಟೇಶನ್ ನೀಡಬೇಕಾಗುತ್ತದೆ. ಇದರಲ್ಲಿ ಮೃತ ಯೋಧನ ಹಿನ್ನೆಲೆ, ಘಟನೆಗೆ ಕಾರಣ, ಘಟಕ ಕೈಗೊಂಡ ಕ್ರಮಗಳು, ವೈದ್ಯಕೀಯ ಮತ್ತು ಕೌನ್ಸೆಲಿಂಗ್ ನೆರವು ಹಾಗೂ ತನಿಖಾ ವರದಿಯನ್ನು ವಿವರಿಸಬೇಕಾಗುತ್ತದೆ. ಈ ಪರಿಶೀಲನಾ ಸಭೆಯಲ್ಲಿ ಡಿಐಜಿ, ಐಜಿ ಮತ್ತು ಎಡಿಜಿ ಮಟ್ಟದ ಹಿರಿಯ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ.

ಸಿಬ್ಬಂದಿಯ ಮಾನಸಿಕ ಒತ್ತಡ ಕಡಿಮೆ ಮಾಡುವುದು, ಸಕಾಲದಲ್ಲಿ ಮಾನಸಿಕ ನೆರವು ಒದಗಿಸುವುದು ಹಾಗೂ ಯೋಧರಲ್ಲಿ ಸ್ವಯಂ ಹಾನಿ ಮಾಡಿಕೊಳ್ಳುವ ಪ್ರವೃತ್ತಿಯನ್ನು ತಡೆಗಟ್ಟಲು ನಿರಂತರ ನಿಗಾ ಇಡುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.

Related Articles

ಇತ್ತೀಚಿನ ಸುದ್ದಿಗಳು