ದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ (AAP) ದೊಡ್ಡ ಮಟ್ಟದ ರಾಜಕೀಯ ಹಿನ್ನಡೆಯಾಗಿದೆ. ಆ ಪಕ್ಷದ ಏಳು ಮಂದಿ ರಾಜ್ಯಸಭಾ ಸದಸ್ಯರು ಇತ್ತೀಚೆಗೆ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಗೊಂಡಿದ್ದ ವಿಲೀನ ಪ್ರಕ್ರಿಯೆಗೆ ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸೋಮವಾರ ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ.
ಈ ಬೆಳವಣಿಗೆಯಿಂದಾಗಿ ರಾಜ್ಯಸಭೆಯ ಸಂಖ್ಯಾಬಲದಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯಸಭೆಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಆಮ್ ಆದ್ಮಿ ಪಕ್ಷದ ಸಂಸದರ ಸಂಖ್ಯೆ 10ರಿಂದ 3ಕ್ಕೆ ಇಳಿಕೆಯಾಗಿದೆ. ಮತ್ತೊಂದೆಡೆ, ಬಿಜೆಪಿಯ ಸಂಸದರ ಬಲ 106ರಿಂದ 113ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಎನ್‌ಡಿಎ (NDA) ಮೈತ್ರಿಕೂಟದ ಸಂಖ್ಯಾಬಲ 141ರಿಂದ 148ಕ್ಕೆ ಹೆಚ್ಚಾಗಿದ್ದು, ರಾಜ್ಯಸಭೆಯಲ್ಲಿ ಬಹುಮತದ ಮ್ಯಾಜಿಕ್ ಸಂಖ್ಯೆ 123ರತ್ತ ಬಿಜೆಪಿ ವೇಗವಾಗಿ ದಾಪುಗಾಲು ಹಾಕುತ್ತಿದೆ.
ಬಿಜೆಪಿಗೆ ಸೇರ್ಪಡೆಗೊಂಡಿರುವ ಏಳು ಮಂದಿ ಸಂಸದರೆಂದರೆ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಸ್ವಾತಿ ಮಲಿವಾಲ್, ಹರ್ಭಜನ್ ಸಿಂಗ್, ವಿಕ್ರಮ್‌ಜಿತ್ ಸಾಹ್ನಿ, ಅಶೋಕ್ ಮಿತ್ತಲ್ ಮತ್ತು ರಾಜೇಂದರ್ ಗುಪ್ತಾ. ಈ ಸಂಸದರು ವಿಲೀನದ ಪತ್ರಕ್ಕೆ ಸಹಿ ಹಾಕಿ ಸಭಾಪತಿಗೆ ಸಲ್ಲಿಸಿದ್ದರು. ವಿಲೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಭಾಪತಿ ರಾಧಾಕೃಷ್ಣನ್ ಅವರು ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದಿದ್ದರು.
ಸಂವಿಧಾನದ 10ನೇ ಅನುಸೂಚಿಯ (ಪಕ್ಷಾಂತರ ನಿಷೇಧ ಕಾಯ್ದೆ) ಪ್ರಕಾರ, ಯಾವುದೇ ಪಕ್ಷದ ಮೂರನೇ ಎರಡರಷ್ಟು (2/3) ಸದಸ್ಯರು ಬೇರೆ ಪಕ್ಷದಲ್ಲಿ ವಿಲೀನಗೊಂಡರೆ ಅದನ್ನು ಮಾನ್ಯ ಮಾಡಬಹುದಾಗಿದೆ. ಆಪ್‌ನ ಏಳು ಮಂದಿ ಸಂಸದರು ಈ 2/3ರ ಮಾನದಂಡವನ್ನು ಪೂರೈಸಿರುವುದರಿಂದ, ವಿಲೀನ ಪ್ರಕ್ರಿಯೆಗೆ ಸಭಾಪತಿ ಸಮ್ಮತಿ ಸೂಚಿಸಿದ್ದಾರೆ.
ಆದರೆ, ಈ ವಿಲೀನವನ್ನು ವಿರೋಧಿಸಿರುವ ಆಮ್ ಆದ್ಮಿ ಪಕ್ಷ, ಸದರಿ ಏಳು ಮಂದಿ ಸಂಸದರನ್ನು ಅನರ್ಹಗೊಳಿಸುವಂತೆ ಸಭಾಪತಿಯವರಿಗೆ ಈ ಮೊದಲೇ ಮನವಿ ಮಾಡಿತ್ತು.
