ಉತ್ತರಪ್ರದೇಶ : ಅಯೋಧ್ಯೆಯ (Ayodhya) ಶ್ರೀರಾಮ ಜನ್ಮಭೂಮಿ (Ram mandir) ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ದೇಣಿಗೆ ಹಣದ ಅವ್ಯವಹಾರದ ವಿವಾದ ಈಗ ದೇಶದ ಸುಪ್ರೀಂ ಕೋರ್ಟ್ (Supreme court) ಅಂಗಳವನ್ನು ತಲುಪಿದೆ. ಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಮತ್ತು ಧನಸಹಾಯದ ನಿರ್ವಹಣೆಯಲ್ಲಿ ಭಾರಿ ಪ್ರಮಾಣದ ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಸಮಗ್ರ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಹೌದು, ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಭಕ್ತರ ಕಾಣಿಕೆಯ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಕೊರತೆಯಿದೆ ಮತ್ತು ಟ್ರಸ್ಟ್‌ನ ಆಡಳಿತ ಮಂಡಳಿ ನಿಧಿ ನಿರ್ವಹಣೆಯಲ್ಲಿ ಲೋಪ ಎಸಗಿದೆ ಎಂಬುದು ಅರ್ಜಿದಾರರ ಮುಖ್ಯ ವಾದವಾಗಿದೆ. ಈ ಸೂಕ್ಷ್ಮ ಪ್ರಕರಣದ ನೈಜತೆಯನ್ನು ಹೊರತರಲು ಸ್ವತಂತ್ರ ಸಂಸ್ಥೆಯ ತನಿಖೆ ಅತ್ಯಗತ್ಯ ಎಂದು ಒತ್ತಾಯಿಸಲಾಗಿದೆ. ಧಾರ್ಮಿಕ ಭಾವನೆಗಳು ಹಾಗೂ ಸಾರ್ವಜನಿಕ ಧನಸಹಾಯದ ಹೊಣೆಗಾರಿಕೆಗೆ ಸಂಬಂಧಿಸಿದ ಈ ವಿಷಯ ಈಗ ಕಾನೂನು ಹೋರಾಟದ ಮೂಲಕ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಈ ಸಂಬಂಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಸ್.ಐ.ಟಿ ರಚಿಸಿ 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದರು. ಈಗಾಗಲೇ ಎಸ್.ಐ.ಟಿ ತಂಡ ಸಿಎಂ ಗೆ ಪ್ರಾಥಮಿಕ ವರದಿಯನ್ನೂ ನೀಡಿದೆ. ಆದ್ರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಈ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ .
