Home ದೆಹಲಿ ಅವಹೇಳನಕಾರಿ ಕಾಮೆಂಟ್ ವಿವಾದ ಮಹಿಳಾ ಆಯೋಗದ ಮುಂದೆ – ಪ್ರಣೀತ್‌ ಮೋರೆ ವಿಚಾರಣೆ

ಅವಹೇಳನಕಾರಿ ಕಾಮೆಂಟ್ ವಿವಾದ ಮಹಿಳಾ ಆಯೋಗದ ಮುಂದೆ – ಪ್ರಣೀತ್‌ ಮೋರೆ ವಿಚಾರಣೆ

ನವದೆಹಲಿ : ಕಾಮಿಡಿ ಶೋವೊಂದರಲ್ಲಿ ಪ್ರೇಕ್ಷಕನೊಬ್ಬ ಮಹಿಳೆಯರ ಬಗ್ಗೆ ಮಾಡಿದ್ದ ಅತ್ಯಂತ ಅಸೂಕ್ಷ್ಮ ಹಾಗೂ ಅವಹೇಳನಕಾರಿ ಕಾಮೆಂಟ್ ಈಗ ದೊಡ್ಡ ವಿವಾದವಾಗಿ ಮಾರ್ಪಟ್ಟಿದ್ದು, ಈ ಸಂಬಂಧ ಸ್ಯಾಂಡ್‌ ಅಪ್‌ ಕಾಮಿಡಿಯನ್‌ ಪ್ರಣೀತ್‌ ಮೋರೆ (Pranit More) ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಏನಿದು ಪ್ರಕರಣ?
ಇತ್ತೀಚೆಗೆ ನಡೆದ ಶೋ ಒಂದರಲ್ಲಿ ಹಿಮಾಂಶು ಜಾಂಗ್ರಾ ಎಂಬ 23 ವರ್ಷದ ಯುವಕ, ತಾನು ಮಹಿಳೆಯೊಬ್ಬರ ಜೊತೆ ಡೇಟಿಂಗ್‌ಗೆ ಹೋಗಿದ್ದಾಗ ₹370 ಚಿಕನ್ ಬಿರಿಯಾನಿ ಕೊಡಿಸಿದ್ದೆ, ಹಾಗಾಗಿ ಆ ಹಣಕ್ಕೆ ಪ್ರತಿಯಾಗಿ ಅವರಿಂದ ತನಗೆ ‘ರಿಟರ್ನ್’ (ದೈಹಿಕ ಲಾಭ) ಸಿಗಬೇಕು ಎಂದು ಅಸಹ್ಯವಾಗಿ ಮಾತನಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಈ ವಿವಾದಕ್ಕೆ ಕಾರಣವಾದ ಕ್ರೌಡ್‌ವರ್ಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಕಾಮಿಡಿಯನ್ ಪ್ರಣೀತ್ ಮೋರೆ, ವಿವಾದ ತಾರಕಕ್ಕೇರುತ್ತಿದ್ದಂತೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಆ ಪ್ರೇಕ್ಷಕನ ಮಾತುಗಳು ನನ್ನ ವೈಯಕ್ತಿಕ ನಿಲುವುಗಳಲ್ಲ ಮತ್ತು ಆ ಕ್ಷಣದಲ್ಲಿ ನಗುವಿನ ಜೊತೆ ಸುಮ್ಮನೆ ಬಿಡುವ ಬದಲು ನಾನು ಆತನ ಮಾತನ್ನು ಅಲ್ಲೇ ಖಂಡಿಸಬೇಕಿತ್ತು ಎಂದು ಪ್ರಣೀತ್ ಹೇಳಿಕೆ ನೀಡಿದ್ದರು. ಇತ್ತ ವಿವಾದದ ಕೇಂದ್ರಬಿಂದುವಾಗಿದ್ದ ಹಿಮಾಂಶು ಜಾಂಗ್ರಾ ಕೂಡ ಕ್ಷಮೆ ಕೇಳಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳನ್ನು ಡಿಲೀಟ್ ಮಾಡಿದ್ದ. ಆದರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗವು ಜೂನ್ 22 ರಂದು ಸಂಜೆ 4 ಗಂಟೆಗೆ ವಿಚಾರಣೆ ನಿಗದಿಪಡಿಸಿತ್ತು.

ಕ್ಷಮಾಪಣೆ ನಿರಾಕರಿಸಿದ ಆಯೋಗ
ವಿಚಾರಣೆಯ ಹಿನ್ನೆಲೆಯಲ್ಲಿ ಕಾಮಿಡಿಯನ್ ಪ್ರಣೀತ್ ಮೋರೆ ಹಾಗೂ ಹಿಮಾಂಶು ಜಾಂಗ್ರಾ ಇಬ್ಬರೂ ಮುಖಕ್ಕೆ ಮಾಸ್ಕ್ ಧರಿಸಿ ಮಹಿಳಾ ಆಯೋಗದ ಕಚೇರಿಗೆ ಹಾಜರಾಗಿದ್ದಾರೆ. ಇದೇ ವೇಳೆ ಮಹಿಳೆಯರ ವಿರುದ್ಧ ಅವಹೇಳನಕಾರಿ ಜೋಕ್ ಮಾಡಿದ ಮತ್ತೊಂದು ಪ್ರಕರಣದಲ್ಲಿ ಸಿಲುಕಿರುವ ಮತ್ತೊಬ್ಬ ಕಾಮಿಡಿಯನ್ ಮಧುರ್ ವಿರ್ಲಿ ಕೂಡ ಆಯೋಗದ ಮುಂದೆ ವಿಚಾರಣೆಗೆ ಬಂದಿದ್ದರು. ಕಚೇರಿಯ ಹೊರಗೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ಈ ಮೂವರನ್ನೂ ಪ್ರಶ್ನಿಸಲು ಪ್ರಯತ್ನಿಸಿದರಾದರೂ, ಯಾರೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಒಳನಡೆದಿದ್ದಾರೆ.

ಈ ವಿಚಾರಣೆಯ ನೇತೃತ್ವ ವಹಿಸಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹಟ್ಕರ್ ಅವರು, ಇಂತಹ ಅಸಭ್ಯ ಮತ್ತು ಮಹಿಳಾ ವಿರೋಧಿ ವಿಷಯಗಳನ್ನು ಹಾಸ್ಯದ ಹೆಸರಿನಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂಲಗಳ ಪ್ರಕಾರ, ಆಯೋಗವು ಈ ಕಲಾವಿದರು ನೀಡಿದ ಕ್ಷಮಾಪಣೆಯನ್ನು ಖಡಾಖಂಡಿತವಾಗಿ ತಿರಸ್ಕರಿಸಿದೆ. ಸೃಜನಶೀಲ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆಯೋಗವು ಬೆಂಬಲಿಸುತ್ತದೆ, ಆದರೆ ಅದರ ಅರ್ಥ ಮಹಿಳೆಯರ ಘನತೆಗೆ ಧಕ್ಕೆ ತರುವುದಲ್ಲ ಎಂದು ಸ್ಪಷ್ಟಪಡಿಸಿದೆ. ಹಾಸ್ಯದ ನೆಪದಲ್ಲಿ ಅತ್ಯಾಚಾರ ಮತ್ತು ಕೊಲೆಯಂತಹ ಭೀಕರ ಅಪರಾಧಗಳನ್ನು ಉಲ್ಲೇಖಿಸಿ ಮನರಂಜನೆ ನೀಡುವುದನ್ನು ಅಥವಾ ಇಂತಹ ನಡವಳಿಕೆಗಳನ್ನು ಸಾರ್ವಜನಿಕವಾಗಿ ಸಾಮಾನ್ಯೀಕರಿಸುವುದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಆಯೋಗವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

You cannot copy content of this page

Exit mobile version