ಬೆಂಗಳೂರು, ಆ. 08: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮೊಗಳು ರಮಾಬಾಯಿ ಡಾ. ಆನಂದ್ ತೇಲ್ತುಂಬ್ಡೆ ಅವರು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ ನಗರದ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಐಕ್ಯತಾ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಅವರ ಮೊಮ್ಮೊಗಳು ಭಾಗವಹಿಸಿ ಮಾತಾಡಲಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಸಂವಿಧಾನದ ಆಶಯಗಳನ್ನು ರಕ್ಷಿಸಬೇಕೆನ್ನುವ ನಿಟ್ಟಿನಲ್ಲಿ ಈ ಶೋಷಿತರ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರಾದ ವಿ ನಾಗರಾಜ್ ಅವರು ತಿಳಿಸಿದ್ದಾರೆ.
ರಮಾಬಾಯಿ ಡಾ.ಆನಂದ್ ತೇಲ್ತುಂಬ್ಡೆ ಅವರು ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ರಮಾಬಾಯಿ ದಂಪತಿಗಳ ಮೊದಲ ಮಗ ಯಶವಂತ್ ಅಂಬೇಡ್ಕರ್ ಅವರ ಒಬ್ಬಳೇ ಮಗಳಾಗಿದ್ದಾರೆ. ಯಶವಂತ್ ಅಂಬೇಡ್ಕರ್ ಮತ್ತು ಮೀರಾ ಅಂಬೇಡ್ಕರ್ ದಂಪತಿಗಳಿಗೆ ನಾಲ್ವರು ಗಂಡು ಮಕ್ಕಳು (ಪ್ರಕಾಶ್, ರಮಾ, ಭೀಮರಾವ್ ಮತ್ತು ಆನಂದರಾಜ್) ಹಾಗೂ ಒಬ್ಬಳು ಮಗಳು. ರಮಾಬಾಯಿಯರು ಅಂಬೇಡ್ಕರ್‌ವಾದಿ ಚಿಂತಕರಾದ ಡಾ.ಆನಂದ್ ತೇಲ್ತುಂಬ್ಡೆ ಅವನ್ನು ಬಾಳಸಂಗಾತಿಯಾಗಿ ಆರಿಸಿಕೊಂಡಿದ್ದರು.
