Friday, April 26, 2024

ಸತ್ಯ | ನ್ಯಾಯ |ಧರ್ಮ

 ಶ್ರೀಪಾದಭಟ್‌ ಅವರಿಗೆ ರಂಗಭೂಪತಿ ಪ್ರಶಸ್ತಿ: ಗೋಪಾಲ ವಾಜಪೇಯಿಯವರ ರಂಗಗೀತೆಗಳ ರಂಗಸಂಜೆ

ಧಾರವಾಡ: ಗೋವಾ ರಂಗ-ಸಂಗ ತಂಡ, ಆಟ-ಮಾಟ ಧಾರವಾಡ ಮತ್ತು ಬಹುರೂಪಿ ಬೆಂಗಳೂರು ಸಂಸ್ಥೆಗಳ ಸಹಯೋಗದಲ್ಲಿ ಹಿರಿಯ ರಂಗ ನಿರ್ದೇಶಕ ಶ್ರೀಪಾದಭಟ್‌ ಅವರಿಗೆ 2024ರ ಸಾಲಿನ ರಂಗಭೂಪತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕವಿ ರಾಜಕುಮಾರ್‌ ಮಡಿವಾಳರ ತಿಳಿಸಿದ್ದಾರೆ.

ಧಾರವಾಡ ರಂಗಾಯಣ ಆವರಣದಲ್ಲಿರುವ ಪಂ.ಬಸವರಾಜ ರಾಜಗುರು ಬಯಲುರಂಗಮಂದಿರದಲ್ಲಿ ಮಾ.30ರಂದು ಸಂಜೆ 6ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ʼಪ್ರಶಸ್ತಿ ಪ್ರಧಾನದ ಜೊತೆಗೆ ಸಾಹಿತಿ ಗೋಪಾಲ ವಾಜಪೇಯಿ ಅವರ ನೆನಪಿನ ರಂಗಗೀತೆಗಳ “ರಂಗಸಂಜೆ” ಕಾರ್ಯಕ್ರಮವು ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋಪಾಲ್‌ ವಾಜಪೇಯಿಯವರು ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದವರು. ಜೊತೆಗೆ ಜಕವಿ, ನಾಟಕಕಾರ, ನಟ, ನಿರ್ದೇಶಕರಾಗಿ, ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ  ಮೂರು ದಶಕಗಳಿಗೂ ಹೆಚ್ಚು ಕಾಲ ಒಂದಿಡಿ ತಲೆಮಾರನ್ನು ತಮ್ಮ ಬರಹದ ಮೂಲಕ ಪ್ರಭಾವಿಸಿದವರು. ಉತ್ತರ ಕರ್ನಾಟಕದ ಗಟ್ಟಿ ಆಡುಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರು, ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಅದೇನೋ ಕಾರಣಕ್ಕೆ ಅವರು ಅಜ್ಞಾತರಾಗಿಯೇ ಉಳಿದರು. ಮುಖ್ಯವಾಹಿನಿಗೆ ಬರಲಿಲ್ಲ. ಅವರಿಗೆ ದಕ್ಕಬೇಕಾದ ಗೌರವವೂ ದೊರೆಯಲಿಲ್ಲ.

ಅಂಥ ಅಪರೂಪದ ಸಾಧಕನನ್ನು ನೆನಪಿಸಿಕೊಳ್ಳುವ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ, ಕೊಡುಗೆ ನೀಡಿರುವ ಪ್ರತಿಭಾವಂತರೊಬ್ಬರಿಗೆ “ರಂಗಭೂಪತಿ” ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ರಾಜಕುಮಾರ್‌ ತಿಳಿಸಿದ್ದಾರೆ,

ಪ್ರಸಕ್ತ ಸಾಲಿನ ಮೊದಲ ಪ್ರಶಸ್ತಿಯನ್ನು ಪ್ರತಿಭಾವಂತ ನಿರ್ದೇಶಕ ಶ್ರೀ ಶ್ರೀಪಾದ ಭಟ್ ಅವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ವಿಶ್ವರಂಗ ಭೂಮಿ ದಿನದ ಪ್ರಯುಕ್ತ, ಈ ಕಾರ್ಯಕ್ರಮದಲ್ಲಿ ಗೋಪಾಲ ವಾಜಪೇಯಿ ಅವರು ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದೆ.

 ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ.ಕೆ.ಎಮ್, ರವಿ ಯಲ್ಲಪ್ಪನವರ್,  ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಹಿರಿಯ ಸಾಹಿತಿ, ನಾಟಕಕಾರ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶ್ರೀ ಗೋಪಾಲ ವಾಜಪೇಯಿ ಕುಟುಂಬಸ್ತರು, ರಂಗಕರ್ಮಿ ಧನಂಜಯ ಕುಲಕರ್ಣಿ, “ಅವಧಿ ಈ-ಮ್ಯಾಗಜಿನ್” ಸಂಪಾದಕ ಶ್ರೀ ಜಿ,ಎನ್. ಮೋಹನ, ರವಿ ಕುಲಕರ್ಣಿ ಉಪಸ್ಥಿತರಿರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.  

Related Articles

ಇತ್ತೀಚಿನ ಸುದ್ದಿಗಳು