ಹಾಸ್ಯ ಕಾರ್ಯಕ್ರಮವೊಂದರಲ್ಲಿ ಲೈಂಗಿಕವಾದ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ಮಹಾರಾಷ್ಟ್ರ, ಅಸ್ಸಾಂ ಮತ್ತು ರಾಜಸ್ಥಾನದಲ್ಲಿ ಅವರ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿಗಳಲ್ಲಿ, ಯೂಟ್ಯೂಬರ್ ಮತ್ತು ಪಾಡ್‌ಕ್ಯಾಸ್ಟರ್ ರಣವೀರ್ ಅಲ್ಲಾಬಾದಿಯಾನನ್ನು ಸುಪ್ರೀಂ ಕೋರ್ಟ್ ಮಂಗಳವಾರ ಬಂಧನದಿಂದ ರಕ್ಷಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
ಆತನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಯಾವುದೇ ಪ್ರಕರಣಗಳನ್ನು ದಾಖಲಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ಆದಾಗ್ಯೂ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು, ಪಾಡ್‌ಕ್ಯಾಸ್ಟ್ ಮತ್ತು ಯೂಟ್ಯೂಬ್ ಚಾನೆಲ್ ಬೀರ್‌ಬೈಸೆಪ್ಸ್‌ಗೆ ಹೆಸರುವಾಸಿಯಾದ ಅಲ್ಲಾಬಾದಿಯಾಗೆ ಮುಂದಿನ ಆದೇಶದವರೆಗೆ ಯಾವುದೇ ಹೊಸ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ನಿರ್ದೇಶಿಸಿದೆ.
ಫೆಬ್ರವರಿ 9 ರಂದು ಬಿಡುಗಡೆಯಾದ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಸಂಚಿಕೆಯಲ್ಲಿ ಅಲ್ಲಾಬಾದಿಯಾ ಒಬ್ಬ ಸ್ಪರ್ಧಿಗೆ ಅನೈತಿಕ ಸಂಬಂಧವನ್ನು ಸೂಚಿಸುವ ಸ್ಪಷ್ಟ ಪ್ರಶ್ನೆಯನ್ನು ತಮಾಷೆಯಾಗಿ ಕೇಳಿದ ನಂತರ ವಿವಾದ ಭುಗಿಲೆದ್ದಿತು.
ಈ ಕಾರ್ಯಕ್ರಮವನ್ನು ಹಾಸ್ಯನಟ ಸಮಯ್ ರೈನಾ ನಿರೂಪಣೆ ಮಾಡುತ್ತಿದ್ದು, ಅಲ್ಲಾಬಾದಿಯಾ ಒಂದು ಸಂಚಿಕೆಯಲ್ಲಿ ಅತಿಥಿ ತೀರ್ಪುಗಾರನಾಗಿ ಭಾಗವಹಿಸಿದ್ದ.
ಫೆಬ್ರವರಿ 11 ರಂದು, ಕೇಂದ್ರ ಸರ್ಕಾರದ ದೂರಿನ ಆಧಾರದ ಮೇಲೆ ಯೂಟ್ಯೂಬ್ ಈ ಸಂಚಿಕೆಯನ್ನು ತೆಗೆದುಹಾಕಿತು . ಹೆಚ್ಚುವರಿಯಾಗಿ, ಮಹಾರಾಷ್ಟ್ರ ಪೊಲೀಸರು ಕಾರ್ಯಕ್ರಮದ “ಎಲ್ಲಾ ಸಂಚಿಕೆಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ ಎಲ್ಲಾ ಸದಸ್ಯರ” ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ.
ತರುವಾಯ ರೈನಾ ತನ್ನ ಯೂಟ್ಯೂಬ್ ಚಾನೆಲ್‌ನಿಂದ ಕಾರ್ಯಕ್ರಮದ ಎಲ್ಲಾ ಇತರ ಸಂಚಿಕೆಗಳನ್ನು ಅಳಿಸಿಹಾಕಿದ್ದ.
ಮಂಗಳವಾರ, ಸುಪ್ರೀಂ ಕೋರ್ಟ್ ಅಲ್ಲಾಬಾದಿಯಾಗೆ ಬಂಧನದಿಂದ ರಕ್ಷಣೆ ನೀಡಿದ್ದರೂ, ಕಾರ್ಯಕ್ರಮದ ಸಮಯದಲ್ಲಿ ಆತನ ಭಾಷೆ ಮತ್ತು ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿತು.
“ನೀವು ಆರಿಸಿಕೊಂಡ ಮಾತುಗಳಿಂದ ಪೋಷಕರು ನಾಚಿಕೆಪಡುತ್ತಾರೆ. ಇಡೀ ಸಮಾಜವು ನಾಚಿಕೆಪಡುತ್ತದೆ. ನೀವು ಮತ್ತು ನಿಮ್ಮ ಬೆಂಬಲಿಗರು ಯಾವ ಮಟ್ಟಕ್ಕೆ ಹೋಗಿದ್ದೀರಿ ಎಂಬುದು ಅಧಃಪತನದ ಮಟ್ಟಗಳು. ಕಾನೂನು ಮತ್ತು ವ್ಯವಸ್ಥೆಯ ನಿಯಮವನ್ನು ಪಾಲಿಸಬೇಕು. ತನ್ನ ಹೆತ್ತವರಿಗೆ ಏನು ಮಾಡಿದ್ದಾನೆ ಎಂಬುದರ ಬಗ್ಗೆ ಅವನು ನಾಚಿಕೆಪಡಬೇಕು” ಎಂದು ಬಾರ್ ಆಂಡ್ ಬೆಂಚ್ ನ್ಯಾಯಾಲಯದ ಹೇಳಿಕೆಯನ್ನು ಉಲ್ಲೇಖಿಸಿದೆ.
ವಿಚಾರಣೆಯ ಸಮಯದಲ್ಲಿ, ಅಲ್ಲಾಹಬಾದಿಯಾ ವಕೀಲರು “10 ಸೆಕೆಂಡುಗಳ ಕ್ಲಿಪ್” ಮೂಲಕ ತಮ್ಮ ಕಕ್ಷಿದಾರರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಎತ್ತಿ ತೋರಿಸಿದರು. ಆದಾಗ್ಯೂ, ನ್ಯಾಯಾಲಯವು ಅಲ್ಲಾಹಬಾದಿಯಾ ಪದಗಳ ಆಯ್ಕೆಯನ್ನು ಪ್ರಶ್ನಿಸುತ್ತಲೇ ಇತ್ತು.
“ಇಂತಹ ನಡವಳಿಕೆಯನ್ನು ಖಂಡಿಸಲೇಬೇಕು. ನೀವು ಜನಪ್ರಿಯರಾಗಿದ್ದೀರಿ ಎಂಬ ಕಾರಣಕ್ಕೆ ಸಮಾಜವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯ ಹೇಳಿದೆ.
ತನಿಖೆಗೆ ಸಹಕರಿಸುವಂತೆ ಮತ್ತು ಆತನ ಪಾಸ್‌ಪೋರ್ಟ್ ಅನ್ನು ಥಾಣೆ ಪೊಲೀಸರಿಗೆ ಸಲ್ಲಿಸುವಂತೆ ನ್ಯಾಯಪೀಠ ಅಲ್ಲಾಬಾದಿಯಾಗೆ ತಿಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.