ಕೇಂದ್ರವು ಜ್ಞಾನೇಶ್ ಕುಮಾರ್ ಅವರನ್ನು ಹೊಸ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಇದಕ್ಕೆ ಅನುಮೋದನೆ ನೀಡಿದ್ದಾರೆ. ಆದರೆ, ಜ್ಞಾನೇಶ್ ಕುಮಾರ್ ಅವರ ನೇಮಕಾತಿಯನ್ನು ಕಾಂಗ್ರೆಸ್ ಟೀಕಿಸಿದೆ.
ಸುಪ್ರೀಂ ಕೋರ್ಟ್‌ನ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಆತುರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಇಂತಹ ಕ್ರಮಗಳು ಚುನಾವಣಾ ಪ್ರಕ್ರಿಯೆಯ ಬಗ್ಗೆ ಸಂದೇಶಗಳನ್ನು ರವಾನಿಸುತ್ತಿವೆ ಎಂದು ಅವರು ಹೇಳಿದರು. ಇದು ಸಂವಿಧಾನಬಾಹಿರ ಎಂದು ಕಾಂಗ್ರೆಸ್ ಹೇಳಿದೆ.
“ಸಿಇಸಿ ನೇಮಕ ಪ್ರಕ್ರಿಯೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಸಿಇಸಿ ನೇಮಕಾತಿ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಡುವ ವಿಷಯವನ್ನು ಫೆಬ್ರವರಿ 19ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಕೇಂದ್ರ ಸರ್ಕಾರ ಈಗಾಗಲೇ ಹೊಸ ಸಿಇಸಿಯನ್ನು ನೇಮಿಸಿದೆ. ಸುಪ್ರೀಂ ಕೋರ್ಟ್ ಪರಿಶೀಲನೆಯಿಲ್ಲದೆ ಸಿಇಸಿ ನೇಮಕ ಮಾಡುವ ಆತುರವು ಕೇಂದ್ರ ಸರ್ಕಾರದ ನಡೆಯನ್ನು ಸಂಶಯದಿಂದ ನೋಡುವಂತೆ ಮಾಡಿದೆ” ಎಂದು ಕಾಂಗ್ರೆಸ್ ಹೇಳಿದೆ.
“ಈ ಆತುರದ ನಡೆಯಿಂದ ಬಿಜೆಪಿ ಚುನಾವಣಾ ಪ್ರಕ್ರಿಯೆಯನ್ನು ಎಷ್ಟರ ಮಟ್ಟಿಗೆ ನಾಶಪಡಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಇಂತಹ ಕ್ರಮಗಳು ನಕಲಿ ಮತದಾರರ ಪಟ್ಟಿ, ಬಿಜೆಪಿ ಪರ ಚುನಾವಣಾ ವೇಳಾಪಟ್ಟಿ ಮತ್ತು ಇವಿಎಂ ತಿರುಚುವಿಕೆಯ ಕುರಿತಾದ ಅನುಮಾನಗಳನ್ನು ಬಲಪಡಿಸುತ್ತವೆ. ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.