Home ಅಂಕಣ ಅಂತರ್ಧರ್ಮೀಯ ವಿವಾಹಗಳಿಗೆ ಭಾರತೀಯ ಕಾನೂನಿನ ತೊಡಕುಗಳೇನು?

ಅಂತರ್ಧರ್ಮೀಯ ವಿವಾಹಗಳಿಗೆ ಭಾರತೀಯ ಕಾನೂನಿನ ತೊಡಕುಗಳೇನು?

0
ಅಂತರ್ಧರ್ಮೀಯ ವಿವಾಹಗಳಿಗೆ ಭಾರತೀಯ ಕಾನೂನಿನ ತೊಡಕುಗಳೇನು?

ಫೆಬ್ರವರಿ 8 ರಂದು ಭೋಪಾಲ್ ನ್ಯಾಯಾಲಯದಲ್ಲಿ ಹಿಂದೂ ಮಹಿಳೆಯೊಂದಿಗೆ ತನ್ನ ಮದುವೆಯನ್ನು ನೋಂದಾಯಿಸಲು ಯತ್ನಿಸಿದ ಮುಸ್ಲಿಂ ವ್ಯಕ್ತಿಯನ್ನು ಹಿಂದುತ್ವ ಗುಂಪುಗಳ ಸದಸ್ಯರು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ನಂತರ ಭೋಪಾಲ್ ಪೊಲೀಸರು ಮಧ್ಯಪ್ರದೇಶದ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಆ ವ್ಯಕ್ತಿಯನ್ನೇ ಬಂಧಿಸಿದರು. ಆದರೆ ಆತನ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಲಾಗಿಲ್ಲ ಅಥವಾ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಿಲ್ಲ.

ತನ್ನ ಸಂಗಾತಿಯನ್ನು ಇಸ್ಲಾಂಗೆ ಮತಾಂತರಿಸಲು ಯತ್ನಿಸಿದ ಆರೋಪದ ಮೇಲೆ ಆ ವ್ಯಕ್ತಿಯನ್ನು ಬಂಧಿಸಲಾಗಿದ್ದರೂ, ದಂಪತಿಗಳು ಅಂತರಧರ್ಮೀಯ ವಿವಾಹಗಳಿಗೆ ಅನುವು ಮಾಡಿಕೊಡುವ ವಿಶೇಷ ವಿವಾಹ ಕಾಯ್ದೆ, 1954 ರ ಅಡಿಯಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಫೆಬ್ರವರಿ 4 ರಂದು, ಭಾರತೀಯ ಜನತಾ ಪಕ್ಷ ಆಡಳಿತದ ರಾಜಸ್ಥಾನ ಸರ್ಕಾರವು ಮಧ್ಯಪ್ರದೇಶದ ಮತಾಂತರ ವಿರೋಧಿ ಕಾನೂನಿನ ಮಾದರಿಯಲ್ಲಿಯೇ ಮಸೂದೆಯನ್ನು ಮಂಡಿಸಿತು. ಇದು ಜಾರಿಗೆ ಬಂದರೆ, 2017 ರಿಂದ ಬಿಜೆಪಿ ಆಡಳಿತದ ರಾಜ್ಯವು ಮತಾಂತರದ ನಂತರ ಮದುವೆಯಾಗುವುದನ್ನು ಕಷ್ಟಕರವಾಗಿಸುವ ಒಂಬತ್ತನೇ ಕಾನೂನು ಇದಾಗಲಿದೆ.

ಈ ಎರಡೂ ಬೆಳವಣಿಗೆಗಳು ಇಂದು ಭಾರತದ ಹಲವಾರು ರಾಜ್ಯಗಳಲ್ಲಿ ಅಂತರ್ಧರ್ಮೀಯ ದಂಪತಿಗಳು ಮದುವೆಯಾಗುವುದು ಹೇಗೆ ಅಸಾಧ್ಯ ಎಂಬುದನ್ನು ತೋರಿಸುತ್ತವೆ.

ಅಂತರ್ಧರ್ಮೀಯ ದಂಪತಿಗಳಿಗೆ ಎರಡು ಮಾರ್ಗಗಳಿವೆ: ಇಬ್ಬರೂ ತಮ್ಮ ಧರ್ಮವನ್ನು ಉಳಿಸಿಕೊಂಡು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗುವುದು, ಅಥವಾ ಅವರಲ್ಲಿ ಒಬ್ಬರು ಇನ್ನೊಬ್ಬರ ಧರ್ಮಕ್ಕೆ ಮತಾಂತರಗೊಂಡು ನಂತರ ಆ ಧರ್ಮದ ವೈಯಕ್ತಿಕ ಕಾನೂನಿನಡಿಯಲ್ಲಿ ಮದುವೆಯಾಗುವುದು. ಕಳೆದ ಕೆಲವು ವರ್ಷಗಳಿಂದ, ಅನೇಕ ರಾಜ್ಯಗಳಲ್ಲಿ ಅಂತರ್ಧರ್ಮೀಯ ದಂಪತಿಗಳಿಗೆ ಎರಡೂ ಮಾರ್ಗಗಳು ವಾಸ್ತವಿಕವಾಗಿ ಮುಚ್ಚಿಹೋಗಿವೆ, ವಿಶೇಷವಾಗಿ ಪುರುಷ ಮುಸ್ಲಿಂ ಮತ್ತು ಮಹಿಳೆ ಹಿಂದೂ ಆಗಿದ್ದರೆ.

ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಲು ಪ್ರಯತ್ನಿಸಿದಾಗ, ಅಂತಹ ದಂಪತಿಗಳ ಮೇಲೆ ಒತ್ತಡ ಅಥವಾ ಬೆದರಿಕೆ ಹಾಕಲಾಗುತ್ತದೆ. ಇದಲ್ಲದೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿರುವ ಮತಾಂತರ ವಿರೋಧಿ ಕಾನೂನುಗಳು, ಒಬ್ಬ ಸಂಗಾತಿಯು ಇನ್ನೊಬ್ಬರ ಧರ್ಮಕ್ಕೆ ಮತಾಂತರಗೊಂಡ ವಿವಾಹಗಳನ್ನು ಅಪರಾಧ ಎಂಬಂತೆ ನೋಡುತ್ತವೆ. ತಮ್ಮ ಮತಾಂತರವನ್ನು ಬಲವಂತವಾಗಿ ಅಥವಾ ಕಾನೂನುಬಾಹಿರವಾಗಿ ಪ್ರೇರೇಪಿಸಲಾಗಿಲ್ಲ ಎಂದು ಸಾಬೀತುಪಡಿಸಲು ಅಂತರ್ಧರ್ಮೀಯ ದಂಪತಿಗಳನ್ನು ಕಷ್ಟಪಡುವಂತೆ ಮಾಡಲಾಗುತ್ತದೆ, ವಿಶೇಷವಾಗಿ ಮಹಿಳೆ ಇಸ್ಲಾಂಗೆ ಮತಾಂತರಗೊಂಡಿದ್ದರೆ.

ವಿಶೇಷ ವಿವಾಹ ಕಾಯ್ದೆ

ಸಾಂಪ್ರದಾಯಿಕವಾಗಿ, ಪ್ರತಿಯೊಂದು ಧರ್ಮವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳ ಮೂಲಕ ಮಾತ್ರ ವಿವಾಹವನ್ನು ನಡೆಸಬಹುದಿತ್ತು. ಇದರರ್ಥ ಅಂತರ್ಧರ್ಮೀಯ ದಂಪತಿಗಳು ಅವರಲ್ಲಿ ಒಬ್ಬರು ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳದ ಹೊರತು ಮದುವೆಯಾಗಲು ಸಾಧ್ಯವಿಲ್ಲ. 1872 ರಲ್ಲಿ, ಬ್ರಿಟಿಷರು ಭಾರತದ ಮೊದಲ ಅಂತರ್ಧರ್ಮೀಯ ವಿವಾಹ ಕಾನೂನನ್ನು ಜಾರಿಗೆ ತಂದರು. ಆದಾಗ್ಯೂ, ಈ ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬ ಸಂಗಾತಿಯೂ ತಮ್ಮ ಧರ್ಮವನ್ನು ತ್ಯಜಿಸುವ ಅಗತ್ಯವಿತ್ತು.

ಈ ಕಾನೂನನ್ನು 1954 ರಲ್ಲಿ ಸ್ವತಂತ್ರ ಭಾರತವು ವಿಶೇಷ ವಿವಾಹ ಕಾಯ್ದೆಯನ್ನು ತಂದು ಬದಲಾಯಿಸಿತು. ಇದು ಯಾವುದೇ ಧರ್ಮದ ವ್ಯಕ್ತಿಗಳು ಇಬ್ಬರೂ ತಮ್ಮ ನಂಬಿಕೆಯನ್ನು ತ್ಯಜಿಸದೆ ಮದುವೆಯಾಗಲು ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, 1954 ರ ಕಾನೂನಿನ ಪ್ರಕಾರ ದಂಪತಿಗಳು ತಮ್ಮ ಮದುವೆಗೆ 30 ದಿನಗಳ ಮೊದಲು ನೋಟಿಸ್ ನೀಡಬೇಕಾಗುತ್ತದೆ. ಮದುವೆಗೆ ಆಕ್ಷೇಪಣೆಗಳಿದ್ದರೆ ಅವುಗಳು ಬರಲಿ ಎಂದು ಸಾರ್ವಜನಿಕ ವೀಕ್ಷಣೆಗಾಗಿ ವಿವಾಹ ನೋಂದಾವಣಾ ಕಚೇರಿಯಲ್ಲಿ ಈ ಸೂಚನೆಯನ್ನು ಹಾಕಲಾಗುತ್ತದೆ. ಇದು ಹೆಸರುಗಳು, ವಿಳಾಸಗಳು, ವಯಸ್ಸು, ಉದ್ಯೋಗ ಮತ್ತು ಫೋಟೋಗಳು ಸೇರದಂತೆ ದಂಪತಿಗಳ ವೈಯಕ್ತಿಕ ವಿವರಗಳನ್ನು ಒಳಗೊಂಡಿರುತ್ತದೆ.

ಕಾನೂನು ಅಂಗೀಕಾರವಾಗುವ ಮೊದಲು ಸಂಸತ್ತಿನಲ್ಲಿ ನಡೆದ ಚರ್ಚೆಯು , 30 ದಿನಗಳ ನೋಟಿಸ್‌ನ ಹಿಂದಿನ ತಾರ್ಕಿಕ ಉದ್ದೇಶವೆಂದರೆ ಇವರ “ಮದುವೆಯಲ್ಲಿ ನಿಜವಾಗಿಯೂ ಆಸಕ್ತಿ ಹೊಂದಿರುವ ವ್ಯಕ್ತಿಗಳಿಗೆ” ಮಾಹಿತಿ ನೀಡದೆ “ಓಡಿಹೋದ ದಂಪತಿಗಳು” ಮದುವೆಯಾಗುವುದನ್ನು ತಡೆಯುವುದಾಗಿತ್ತು ಎಂದು ಸೂಚಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ದಂಪತಿಗಳು ತಮ್ಮ ಕುಟುಂಬಗಳ ಅನುಮೋದನೆಯಿಲ್ಲದೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಈ ಅವಶ್ಯಕತೆಯಾಗಿತ್ತು. ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಓಡಿಹೋಗಿ ಮದುವೆಯಾಗುವುದು ಒಂದು ಆಯ್ಕೆಯಾಗಿರಲಿಲ್ಲ.

ಇದರಲ್ಲಿ, ಈ ಕಾನೂನು ಭಾರತದಲ್ಲಿ ಸಗೋತ್ರವಿವಾಹ (ಎಂಡೋಗಮಿ) ಸುತ್ತಲಿನ ಬಲವಾದ ಸಾಮಾಜಿಕ ನಂಬಿಕೆಗಳನ್ನು ಪ್ರತಿಬಿಂಬಿಸುತ್ತದೆ. 2019-2020ರ ಅವಧಿಯಲ್ಲಿ ಸುಮಾರು 30,000 ಭಾರತೀಯರ ಸಮೀಕ್ಷೆಯ ಪ್ರಕಾರ, 66% ಹಿಂದೂಗಳು ಮತ್ತು 80% ಮುಸ್ಲಿಮರು ತಮ್ಮ ಸಮುದಾಯಗಳ ಮಹಿಳೆಯರು ಇತರ ಧಾರ್ಮಿಕ ಸಮುದಾಯದವರನ್ನು ಮದುವೆಯಾಗುವುದನ್ನು ತಡೆಯಲು ಬಯಸುತ್ತಾರೆ ಎಂದು ಹೇಳಿದ್ದಾರೆ. 2018 ರ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ನಡೆಯುವ ಎಲ್ಲಾ ವಿವಾಹಗಳಲ್ಲಿ 90% ಕ್ಕಿಂತ ಹೆಚ್ಚು ದಂಪತಿಗಳ ಕುಟುಂಬ ಸದಸ್ಯರು ಏರ್ಪಡಿಸುತ್ತಾರೆ ಎಂದು ಅಂದಾಜಿಸಲಾಗಿದೆ .

ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಕೇವಲ 5% ಜನರು ಮಾತ್ರ ತಮ್ಮ ಕುಟುಂಬದವರಲ್ಲಿ ಕೆಲವರು ತಮ್ಮ ಧರ್ಮದ ಹೊರಗೆ ವಿವಾಹವಾಗಿದ್ದಾರೆ ಎಂದು ಹೇಳಿದ್ದಾರೆ.

ಸೂಚನೆ ಅವಶ್ಯಕತೆ ಇದೆಯೇ?

30 ದಿನಗಳ ನೋಟಿಸ್ ಪಿರೇಡ್‌ನ ಅಗತ್ಯವು ಈ ಕಾಯ್ದೆಯಡಿಯಲ್ಲಿ ಮದುವೆಯಾಗುವ ದಂಪತಿಗಳ ಗೌಪ್ಯತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕಾನೂನು ತಜ್ಞರು ಟೀಕಿಸಿದ್ದಾರೆ . ಇದು ವಿವಾಹ ನೋಂದಾವಣಾ ಪ್ರಕ್ರಿಯೆಯ “ಹೆಚ್ಚು ಸಾರ್ವಜನಿಕ, ಸಮಯ ತೆಗೆದುಕೊಳ್ಳುವ ಮತ್ತು ಉದ್ದೇಶಿತ ದಂಪತಿಗಳಿಗೆ ಕಷ್ಟಕರವಾಗಿಸುತ್ತದೆ” ಎಂದು ಒಬ್ಬ ವಿಮರ್ಶಕ ಹೇಳಿದ್ದಾರೆ.

ನೋಟಿಸ್ ಪಿರೇಡ್‌ನ ಅಗತ್ಯವನ್ನು 2020 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆದಾಗ್ಯೂ, ಸುಪ್ರೀಂ ಕೋರ್ಟ್ ತಾಂತ್ರಿಕ ಕಾರಣಗಳ ಮೇಲೆ ಅರ್ಜಿಯನ್ನು ವಜಾಗೊಳಿಸಿತು. 2023 ರಲ್ಲಿ, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ನ್ಯಾಯಾಧೀಶರು ಸಮಲಿಂಗೀ ಜೋಡಿಗಳ ವೈವಾಹಿಕ ಹಕ್ಕುಗಳನ್ನು ಕೋರುವ ಅರ್ಜಿಗಳ ವಿಚಾರಣೆ ನಡೆಸುವಾಗ ವಿಶೇಷ ವಿವಾಹ ಕಾಯ್ದೆಯಡಿ ನೋಟಿಸ್ ಪಿರೇಡನ್ನು ಟೀಕಿಸಿದ್ದರು. ಇದು ದಂಪತಿಗಳ, ವಿಶೇಷವಾಗಿ ಅಲ್ಪಸಂಖ್ಯಾತರು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳಿಗೆ ಸೇರಿದವರ ಗೌಪ್ಯತೆಯನ್ನು ಅತಿಕ್ರಮಿಸುತ್ತದೆ ಎಂದು ಅವರು ಹೇಳಿದರು.

ತಜ್ಞರು ಮತ್ತು ಸುಪ್ರೀಂ ಕೋರ್ಟ್‌ನ ಈ ಟೀಕೆಗಳು ಕಾಯ್ದೆಯಡಿಯಲ್ಲಿ ಮದುವೆಯಾಗಲು ಪ್ರಯತ್ನಿಸುತ್ತಿರುವ ಹಲವಾರು ದಂಪತಿಗಳ ಅನುಭವದಿಂದ ಉಂಟಾಗಿವೆ. ವಿಶೇಷವಾಗಿ ಕಳೆದ ಕೆಲವು ವರ್ಷಗಳಲ್ಲಿ ದೇಶಾದ್ಯಂತ, ಬಿಜೆಪಿ ಮತ್ತು ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ಕಡ್ಡಾಯ 30 ದಿನಗಳ ನೋಟಿಸ್ ದಂಪತಿಗಳ ಕುಟುಂಬಗಳು ಮತ್ತು ಹಿಂದುತ್ವ ಗುಂಪುಗಳಿಂದ ಹೇಗೆ ಅವರು ಕಿರುಕುಳವನ್ನು ಅನುಭವಿಸುತ್ತಾರೆ ಎಂಬುದರ ಕುರಿತು ಸಾಕಷ್ಟು ವರದಿಗಳು ಬಂದಿವೆ. ದಂಪತಿಗಳು ಆಕ್ರಮಣವನ್ನು ಎದುರಿಸುತ್ತಾರೆ ಮತ್ತು ತಮ್ಮ ಮದುವೆಯ ಯೋಜನೆಯನ್ನು ಕೈಬಿಡಲು ಒತ್ತಾಯಿಸಲ್ಪಡುತ್ತಾರೆ.

ಉದಾಹರಣೆಗೆ, ಭೋಪಾಲ್‌ನಲ್ಲಿ ಹಲ್ಲೆಗೆ ಗುರಿಯಾದ ಅಂತರ್ಧರ್ಮೀಯ ದಂಪತಿಯನ್ನು SMA ನೋಟಿಸ್‌ ಮೂಲಕ ಗುರುತಿಸಲಾಗಿತ್ತು. ಘಟನೆಯ ದಿನದಂದು ಹಿಂದುತ್ವವಾದಿ ವಕೀಲರು ದಂಪತಿಗಳನ್ನು “ಕೊನೆಗೂ ಪತ್ತೆಹಚ್ಚುವ” ಮೊದಲು ಅವರ ಸುತ್ತ “ಕಾವಲು” ಇಟ್ಟಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ .

2018 ರಲ್ಲಿ, ಹಿಂದುತ್ವ ಗುಂಪುಗಳು ನ್ಯಾಯಾಲಯಗಳಲ್ಲಿ ಇಂತಹ ಜಾಲಗಳನ್ನು ರಚಿಸಿಕೊಂಡಿದ್ದು , ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹವಾಗಲು ಬಯಸುವ ಅಂತರ್ಧರ್ಮೀಯ ಜೋಡಿಗಳ ನೋಟಿಸ್‌ಗಳನ್ನು ಕಳೆಹಾಕುತ್ತವೆ ಎಂದು ಸ್ಕ್ರೋಲ್ ವರದಿ ಮಾಡಿತ್ತು.

ನ್ಯಾಯಾಲಯಗಳಲ್ಲಿ

ನೋಟೀಸ್ ಬಳಸಿಕೊಂಡು ಮದುವೆಗಳಲ್ಲಿ ಹಸ್ತಕ್ಷೇಪ ಮಾಡುವ ಈ ಅವಕಾಶವನ್ನು ಅಲಹಾಬಾದ್ ಹೈಕೋರ್ಟ್ ಗುರುತಿಸಿದೆ. 2021 ರಲ್ಲಿ, ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ದಂಪತಿಗಳು ಮದುವೆಯಾಗಲು ನಿರ್ಧರಿಸುವ ಮೊದಲು ನೋಟಿಸ್ ಪ್ರಕಟಿಸುವುದು ಇನ್ನು ಮುಂದೆ ಕಡ್ಡಾಯವಲ್ಲ ಎಂದು ಅದು ತೀರ್ಪು ನೀಡಿತು . ಈ ನಿಯಮಗಳು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿವೆ ಮತ್ತು ಹಸ್ತಕ್ಷೇಪವಿಲ್ಲದೆ ಮದುವೆಯಾಗಲು ಬಯಸುವ ವ್ಯಕ್ತಿಯ ಸಾಮರ್ಥ್ಯವನ್ನು ಉಲ್ಲಂಘಿಸುತ್ತವೆ ಎಂದು ನ್ಯಾಯಾಲಯ ಗಮನಿಸಿದೆ.

ಆದಾಗ್ಯೂ, ನ್ಯಾಯಾಲಯದ ತೀರ್ಪು ಪ್ರಾಯೋಗಿಕವಾಗಿ ಯಾವುದೇ ಪರಿಣಾಮ ಬೀರಿಲ್ಲ, ಏಕೆಂದರೆ ಸರ್ಕಾರಿ ಅಧಿಕಾರಿಗಳು ಕಾಯ್ದೆಯಡಿಯಲ್ಲಿ ವಿವಾಹಗಳನ್ನು ನೋಂದಾಯಿಸುವ 30 ದಿನಗಳ ನೋಟಿಸ್ ಅವಧಿ ಪ್ರಕ್ರಿಯೆಯನ್ನು ಇನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ವಿವಾಹದಲ್ಲಿ ವೈಯಕ್ತಿಕ ಆಯ್ಕೆಯ ವಿರುದ್ಧದ ಸಾಮಾಜಿಕ ಪೂರ್ವಾಗ್ರಹಗಳನ್ನು ನ್ಯಾಯಾಲಯಗಳು ಸಹ ತೋರಿಸುತ್ತವೆ. ಉದಾಹರಣೆಗೆ, ಕಳೆದ ವರ್ಷ ಮೇ ತಿಂಗಳಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗಲು ಸಾಧ್ಯವಿಲ್ಲ ಎಂದು ತಪ್ಪಾದ ತೀರ್ಪು ನೀಡಿತು. ಡಿಸೆಂಬರ್‌ನಲ್ಲಿ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ಇದನ್ನು ಅಂತಿಮವಾಗಿ ರದ್ದುಗೊಳಿಸಿತು , ಕಾಯ್ದೆಯಡಿಯಲ್ಲಿ ಅಂತಹ ವಿವಾಹಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿತು.

ಮತಾಂತರದ ಹೊರತಾಗಿ ಏನು?

ಅಂತರ್ಧರ್ಮೀಯ ದಂಪತಿಗಳಿಗೆ ವಿಶೇಷ ವಿವಾಹ ಕಾಯ್ದೆಯ ಬಾಗಿಲುಗಳು ಹೆಚ್ಚಾಗಿ ಮುಚ್ಚಲ್ಪಡುತ್ತಿರುವುದರಿಂದ, ಅವರಲ್ಲಿರುವ ಇನ್ನೊಂದು ಆಯ್ಕೆಯೆಂದರೆ ಒಬ್ಬರು ಇನ್ನೊಬ್ಬರ ಧರ್ಮಕ್ಕೆ ಮತಾಂತರಗೊಂಡು ಆ ಧರ್ಮದ ವೈಯಕ್ತಿಕ ಕಾನೂನುಗಳ ಪ್ರಕಾರ ಮದುವೆಯಾಗುವುದು.

ಆದಾಗ್ಯೂ, ಬಿಜೆಪಿ ಆಡಳಿತದ ರಾಜ್ಯಗಳು ಕರಾಳ ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಅಂತಹ ವಿವಾಹಗಳ ವಿರುದ್ಧ ಕಠಿಣ ಕ್ರಮವನ್ನು ಪ್ರಾರಂಭಿಸಿವೆ. ಕಾನೂನಾಗಿ ರೂಪುಗೊಂಡರೆ, ರಾಜಸ್ಥಾನ ಮತಾಂತರ ವಿರೋಧಿ ಮಸೂದೆಯು ಇತರ ರಾಜ್ಯಗಳಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಇದೇ ರೀತಿಯ ಕಾನೂನುಗಳ ಸರಣಿ: 2017 ರಲ್ಲಿ ಜಾರ್ಖಂಡ್ , 2018 ರಲ್ಲಿ ಉತ್ತರಾಖಂಡ , 2019 ರಲ್ಲಿ ಹಿಮಾಚಲ ಪ್ರದೇಶ , 2020 ರಲ್ಲಿ ಉತ್ತರ ಪ್ರದೇಶ , 2021 ರಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶ ಹಾಗೂ 2022 ರಲ್ಲಿ ಹರಿಯಾಣ ಮತ್ತು ಕರ್ನಾಟಕಯ ಪಟ್ಟಿಯಲ್ಲಿ ಸೇರುತ್ತದ. ಈ ಕಾನೂನುಗಳಿಗೆ ಪ್ರಚಾರದಲ್ಲಿರುವ ಹೆಸರು “ಲವ್ ಜಿಹಾದ್ ಕಾನೂನುಗಳು” ಎಂದು. ಈ ಹೆಸರನ್ನು ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲು ಪ್ರಣಯ ಸಂಬಂಧಗಳನ್ನು ಬೆಳೆಸಿಕೊಳ್ಳುತ್ತಾರೆ ಎಂಬ ಹಿಂದುತ್ವ ಪಿತೂರಿ ಸಿದ್ಧಾಂತದಿಂದ ತೆಗೆದುಕೊಳ್ಳಲಾಗಿದೆ.

ಈ ಕಾನೂನುಗಳ ಪ್ರಮುಖ ನಿಬಂಧನೆಗಳ ಮೂಲ ರಚನೆ ಮತ್ತು ಭಾಷೆ ಬಹುತೇಕ ಒಂದೇ ಆಗಿವೆ. ಈ ಕಾನೂನುಗಳು ದಬ್ಬಾಳಿಕೆ, “ಆಮಿಷ”, “ಅನಗತ್ಯ ಪ್ರಭಾವ” ಅಥವಾ ಮೋಸದ ವಿಧಾನಗಳಂತಹ ಅಸ್ಪಷ್ಟವಾಗಿ ವ್ಯಾಖ್ಯಾನಿಸುವ ಅಂಶಗಳ ಮೂಲಕ ಸಂಗಾತಿಗಳಲ್ಲಿ ಒಬ್ಬರ ಮತಾಂತರದ ನಂತರ ನಡೆಯುವ ವಿವಾಹಗಳನ್ನು ಅಮಾನ್ಯವೆಂದು ಪರಿಗಣಿಸುತ್ತವೆ.

ಇದಲ್ಲದೆ, ಈ ಕಾನೂನುಗಳಲ್ಲಿ ಹೆಚ್ಚಿನವು ಆರೋಪಿಯ ಮೇಲೆ ತಮ್ಮ ಸಂಗಾತಿಯ ಮತಾಂತರಕ್ಕೆ ಒಪ್ಪಿಗೆಯನ್ನು ಕಾನೂನುಬಾಹಿರವಾಗಿ ಪಡೆಯಲಾಗಿಲ್ಲ ಎಂಬುದನ್ನು ಸಾಬೀತುಪಡಿಸುವ ಹೊಣೆಯನ್ನು ಹೇರುತ್ತವೆ. ಅಂದರೆ, ಈ ಕಾನೂನುಗಳ ಅಡಿಯಲ್ಲಿ ಪೂರ್ವನಿಯೋಜಿತ ಊಹೆಯೆಂದರೆ ಮತಾಂತರದ ಮೂಲಕ ನಡೆಯುವ ವಿವಾಹಗಳು ಕಾನೂನುಬಾಹಿರ ಮತ್ತು ಒಪ್ಪಿಗೆಯಿಲ್ಲದವುಗಳಾಗಿವೆ.

ಈ ಕಾನೂನುಗಳು ಮದುವೆಯ ಮೂಲಕ ಬಲವಂತದ ಮತಾಂತರಕ್ಕೆ ಬಲಿಯಾದ ವ್ಯಕ್ತಿಯ ಯಾವುದೇ ಕುಟುಂಬದ ಸದಸ್ಯರು ಕಾಯ್ದೆಯಡಿಯಲ್ಲಿ ಎಫ್‌ಐಆರ್ ನೋಂದಾಯಿಸಲು ಅವಕಾಶ ನೀಡುತ್ತವೆ. ಕಾಯ್ದೆಗಳ ಅಡಿಯಲ್ಲಿನ ಎಲ್ಲಾ ಅಪರಾಧಗಳು ಜಾಮೀನು ರಹಿತವಾಗಿವೆ.

ಮತಾಂತರಗೊಂಡ ವ್ಯಕ್ತಿಗಳು ತಮ್ಮ ಮತಾಂತರದ ಘೋಷಣೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಬೇಕು, ನಂತರ ಅವರು ಮತಾಂತರವನ್ನು ದೃಢೀಕರಿಸುವ ಮೊದಲು ತಮ್ಮ ಕಚೇರಿಯ ಸೂಚನಾ ಫಲಕದಲ್ಲಿ ಘೋಷಣೆಯನ್ನು ಪ್ರದರ್ಶಿಸುತ್ತಾರೆ. ಘೋಷಣೆಯು ಸಾರ್ವಜನಿಕರ ಕಾಣುವಂತೆ ಮತಾಂತರಗೊಂಡ ವ್ಯಕ್ತಿಯ ವೈಯಕ್ತಿಕ ಗುರುತಿಸಬಹುದಾದ ವಿವರಗಳನ್ನು ಒಳಗೊಂಡಿರುತ್ತದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರಕ್ಕೆ ಅವಕಾಶ ನೀಡಿದ ನಂತರವೇ ಮದುವೆ ನಡೆಯಬಹುದು. ಮುಸ್ಲಿಂ ಪುರುಷ ಹಿಂದೂ ಮಹಿಳೆಯನ್ನು ಮದುವೆಯಾಗಲು ಪ್ರಯತ್ನಿಸುತ್ತಿದ್ದರೆ, ಈ ಅನುಮತಿ ಅಸಾಧ್ಯ.

ಈ ಎಲ್ಲಾ ಅಂಶಗಳು ಒಟ್ಟಾಗಿ ಕಾನೂನುಗಳನ್ನು ಅಧಿಕಾರಿಗಳು ಮತ್ತು ಮತೀಯವಾದಿ ಗುಂಪುಗಳು ಅಲ್ಪಸಂಖ್ಯಾತರು ಮತ್ತು ಅಂತರಧರ್ಮೀಯ ದಂಪತಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲು ದುರುಪಯೋಗಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ . ಈ ಕಾನೂನುಗಳ ಅಡಿಯಲ್ಲಿ ಯಾವುದೇ ಅಂತರ್ಧರ್ಮೀಯ ದಂಪತಿಗಳ ಕುಟುಂಬ ಸದಸ್ಯರು – ಸಾಮಾನ್ಯವಾಗಿ ಹುಡುಗಿಯ ಕುಟುಂಬ ಸದಸ್ಯರು – ದೂರು ನೀಡಿದರೆ ಸಂಗಾತಿಯನ್ನು – ಸಾಮಾನ್ಯವಾಗಿ ಪತಿಯನ್ನು – ಬಂಧಿಸಬಹುದು.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತಂದ ಕೂಡಲೇ ಅಂತರ್ಧರ್ಮೀಯ ದಂಪತಿಗಳು ಎದುರಿಸಿದ ಅಗ್ನಿಪರೀಕ್ಷೆಯಿಂದ ಇದು ಸ್ಪಷ್ಟವಾಗುತ್ತದೆ.

NDTV ವರದಿಯ ಪ್ರಕಾರ, ಹಿಂದೂ ಮಹಿಳೆಯೊಬ್ಬರ ಮುಸ್ಲಿಂ ಪತಿಯನ್ನು 2020 ರಲ್ಲಿ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಬಂಧಿಸಲಾಯಿತು . ಬಂಧನಕ್ಕೆ ಕೆಲವು ತಿಂಗಳ ಮೊದಲು ದಂಪತಿಗಳು ಇಸ್ಲಾಮಿಕ್ ಕಾನೂನಿನಡಿಯಲ್ಲಿ ವಿವಾಹವಾಗಿದ್ದರು ಎಂದು ವರದಿಯಾಗಿದೆ. ಮಹಿಳೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳನ್ನು ಆ ವ್ಯಕ್ತಿ ಬಲವಂತವಾಗಿ ಮತಾಂತರಗೊಳಿಸಿದ್ದಾನೆ ಎಂದು ಆರೋಪಿಸಿದ್ದರು.

ಆ ಮಹಿಳೆ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ತನ್ನ ವಿವಾಹವನ್ನು ನೋಂದಾಯಿಸಲು ಮತ್ತು ತಾನು ಸ್ವಯಂಪ್ರೇರಣೆಯಿಂದ ಮತಾಂತರಗೊಂಡಿದ್ದೇನೆ ಎಂದು ದೃಢಪಡಿಸಲು ಹೋದಾಗ, ಹಿಂದುತ್ವವಾದಿ ಕಾರ್ಯಕರ್ತರು ಅವಳನ್ನು ಕೆಣಕಿದರು.

ಉತ್ತರ ಪ್ರದೇಶದಲ್ಲಿ ಮತಾಂತರದ ನಂತರ ಮದುವೆಯಾಗಲು ಆಯ್ಕೆ ಮಾಡಿಕೊಂಡ ಹಲವಾರು ಅಂತರ್ಧರ್ಮೀಯ ದಂಪತಿಗಳು ತಮ್ಮ ವಿವಾಹಗಳನ್ನು ನೆರವೇರಿಸಲು ರಾಜ್ಯದ ಮತಾಂತರ ವಿರೋಧಿ ಕಾನೂನಿನ ಕಠಿಣ ಅವಶ್ಯಕತೆಗಳನ್ನು ಪಾಲಿಸುವುದು ಅತ್ಯಂತ ಕಷ್ಟಕರವೆಂದು ಕಳೆದ ವರ್ಷ ಸ್ಕ್ರಾಲ್ ವರದಿ ಮಾಡಿತ್ತು. ಇದರ ಪರಿಣಾಮವಾಗಿ, ಅಲಹಾಬಾದ್ ಹೈಕೋರ್ಟ್ ಅವರ ಕುಟುಂಬ ಸದಸ್ಯರು ನೀಡುವ ಹಿಂಸಾಚಾರದಿಂದ ರಕ್ಷಣೆ ನೀಡಲು ನಿರಾಕರಿಸಿತು.

ನ್ಯಾಯಾಲಯಗಳ ಭಿನ್ನ ತೀರ್ಪುಗಳು

ಅಂತರ್ಧರ್ಮೀಯ ಅವಿವಾಹಿತ ದಂಪತಿಗಳಿಗೆ ಕಾನೂನನ್ನು ಅವಲಂಬಿಸಿ ಹಿಂಸಾಚಾರದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದೆ ಎಂದು ಸ್ಕ್ರೋಲ್ ಕಳೆದ ವರ್ಷ ವರದಿ ಮಾಡಿದೆ. ನ್ಯಾಯಾಲಯದ ತಾರ್ಕಿಕತೆ – ಕಾನೂನಿನಲ್ಲಿ ಅಂತಹ ಯಾವುದೇ ಅವಶ್ಯಕತೆಯಿಲ್ಲದಿದ್ದರೂ, “ವಿವಾಹದ ಸ್ವರೂಪದಲ್ಲಿ” ಸಂಬಂಧಗಳಿಗೆ ಮತಾಂತರ ಅಗತ್ಯವಿದೆ, ಅಂದರೆ ಲಿವ್-ಇನ್ ಸಂಬಂಧಗಳು – ನ್ಯಾಯಾಂಗ ಮಿತಿಮೀರಿದ ವ್ಯಾಪ್ತಿಯನ್ನು ಪ್ರತಿನಿಧಿಸುತ್ತದೆ.

ಆದಾಗ್ಯೂ, ಎಲ್ಲಾ ನ್ಯಾಯಾಲಯಗಳು ಅಂತರ್ಧರ್ಮೀಯ ದಂಪತಿಗಳನ್ನು ಅನುಮಾನದಿಂದ ನೋಡಿಲ್ಲ. 2021 ರಲ್ಲಿ, ಗುಜರಾತ್ ಹೈಕೋರ್ಟ್ ಮದುವೆಗಾಗಿ ಧಾರ್ಮಿಕ ಮತಾಂತರಗಳು ಮೋಸದ ಅಥವಾ ಬಲವಂತದವು ಎಂದು ಭಾವಿಸುವ ರಾಜ್ಯದ ಮತಾಂತರ ವಿರೋಧಿ ಕಾನೂನಿನ ನಿಬಂಧನೆಗಳ ಮೇಲೆ ಮಧ್ಯಂತರ ತಡೆಯಾಜ್ಞೆ ನೀಡಿತು. ನ್ಯಾಯಾಲಯ ಇದಕ್ಕೆ ನೀಡಿದ ತರ್ಕವೇನೆಂದರೆ, “ಅಂತರ್ಧರ್ಮೀಯ ವಿವಾಹವನ್ನು ಬಯಸುವ ಪಾರ್ಟಿಗಳನ್ನು ಅನಗತ್ಯವಾಗಿ ಕಿರುಕುಳದಿಂದ ರಕ್ಷಿಸಲು”.

2022 ರಲ್ಲಿ, ಮಧ್ಯಪ್ರದೇಶ ಹೈಕೋರ್ಟ್ ಇದೇ ರೀತಿ ರಾಜ್ಯದ ಮತಾಂತರ ವಿರೋಧಿ ಕಾನೂನಿನ ನಿಬಂಧನೆಯನ್ನು ತಡೆಹಿಡಿದಿತ್ತು , ಅದು ಮದುವೆಗೆ ಮೊದಲು ಧಾರ್ಮಿಕ ಮತಾಂತರಕ್ಕಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಪೂರ್ವಾನುಮತಿ ನೀಡಬೇಕು ಎಂಬುದಾಗಿತ್ತು. ಅಧಿಕಾರಿಗಳಿಗೆ ತಿಳಿಸದೆ ಮದುವೆಯಾಗಲು ಸ್ವಯಂಪ್ರೇರಣೆಯಿಂದ ಮತಾಂತರಗೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದನ್ನು ನ್ಯಾಯಾಲಯವು ರಾಜ್ಯ ಸರ್ಕಾರವನ್ನು ನಿಷೇಧಿಸಿತು, ಇದು ಸ್ಪಷ್ಟವಾಗಿ ಅಸಂವಿಧಾನಿಕ ಎಂದು ಕರೆದಿದೆ.

ತಡೆಗಳ ಹೊರತಾಗಿಯೂ, ಇತರ ರಾಜ್ಯಗಳಲ್ಲಿನ ಬಿಜೆಪಿ ಸರ್ಕಾರಗಳು ಇದೇ ರೀತಿಯ ಕಾನೂನುಗಳನ್ನು ಜಾರಿಗೆ ತಂದಿವೆ. 2023 ರಲ್ಲಿ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್‌ ಸರ್ಕಾರ ಬಂದಾಗ ಕರ್ನಾಟಕ ಈ ಕಾನೂನನ್ನು ರದ್ದುಗೊಳಿಸಲಾಯಿತು.

ಲೇಖನ: ವಿನೀತ್‌ ಬಲ್ಲಾ

ಸ್ಕ್ರೋಲ್.ಇನ್‌ನಲ್ಲಿ ಪ್ರಕಟವಾದ How Indian law is trying to make it impossible for interfaith couples to marry ಲೇಖನದ ಕನ್ನಡ ಭಾವಾನುವಾದ

You cannot copy content of this page

Exit mobile version