ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇಂದು ನ್ಯಾಯಾಲಯ ಪ್ರಕರಣದ ಸಂತ್ರಸ್ತೆಯೋರ್ವರ ವಿಚಾರಣೆ ನಡೆಸಿದ್ದು, ಸಂತ್ರಸ್ತೆ ಸಾಕ್ಷ್ಯವನ್ನು ದಾಖಲಸಿಕೊಂಡಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಮುಚ್ಚಿದ ಕೋರ್ಟ್ ಹಾಲ್ನಲ್ಲಿ ವಿಚಾರಣೆಯನ್ನು ಮಾಡುವ ಮೂಲಕ ಸಂತ್ರಸ್ತೆಯ ಹೇಳಿಕೆ ದಾಖಲಿಸಿ ನಾಳೆಗೆ ವಿಚಾರಣೆ ಮುಂದೂಡಿ ಕೋರ್ಟ್ ಆದೇಶಿಸಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೋರ್ವರಿಗೆ ಬೆದರಿಕೆಯೊಡ್ಡಿ ಪ್ರಜ್ವಲ್ ಅತ್ಯಾಚಾರ ಎಸಗಿದ್ದ ಎಂಬುವುದು ತನಿಖೆಯಲ್ಲಿ ದೃಧಿಢಪಟ್ಟಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸಿಐಡಿ ಎಸ್‌ಐಟಿ ನ್ಯಾಯಾಲಯಕ್ಕೆ ತಿಳಿಸಿತ್ತು. ಆರೋಪಿ ಪ್ರಜ್ವಲ್, ಸಂತ್ರಸ್ತೆ ಮೇಲೆ ಬಲವಂತದಿಂದ ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ದೃಧಿಢಪಟ್ಟಿದೆ ಎಂದು ಸಾಕ್ಷ್ಯಾಧಾರಗಳನ್ನ ಲಗತ್ತಿಸಿ, ಸಂತ್ರಸ್ತೆ ಹೇಳಿಕೆ, 120 ಸಾಕ್ಷಿದಾರರ ಹೇಳಿಕೆಗಳು, ಎಫ್‌ಎಸ್‌ಎಲ್ ವರದಿ ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳನ್ನು SIT ಲಗತಿಸಿತ್ತು.
ಸಂಸದರ ಕ್ವಾರ್ಟರ್ಸ್‌ನಲ್ಲಿಯೇ ಪ್ರಜ್ವಲ್, ಸಂತ್ರಸ್ತೆ ಮೇಲೆ ಕೃತ್ಯ ಎಸಗಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟುಕೊಂಡಿದ್ದ. ಅತ್ಯಾಚಾರದ ಕುರಿತು ಯಾರಿಗಾದರೂ ಹೇಳಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದ ಎಂಬ ಆರೋಪವಿದೆ. ಎಸ್‌ಐಟಿ ಈ ಬಗ್ಗೆ ತನಿಖೆ ನಡೆಸಿ 3ನೇ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. 1,691 ಪುಟಗಳ ಆರೋಪ ಆ ಪಟ್ಟಿಯಲ್ಲಿ ಈ ಮೇಲಿನಂತೆ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿತ್ತು ಎಂದು ವರದಿಯಾಗಿದೆ