ಕೋಲ್ಕತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಸಂಜೋಯ್ ರಾಯ್ ದೋಷಿ ಎಂದು ಕೋರ್ಟ್ ನಿಂದ ಸಾಬೀತಾಗಿದ್ದು, ಇಂದು ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಪ್ರಕರಣದ ಅಪರಾಧಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ಆರೋಪಿ ಸಂಜೋಯ್ ರಾಯ್ ತಪ್ಪಿತಸ್ಥ ಎಂದು ಕೋಲ್ಕತ್ತಾದ ಸೆಷನ್ಸ್ ನ್ಯಾಯಾಲಯ ನಿನ್ನೆ ತೀರ್ಪು ನೀಡಿತ್ತು. ಸಿಯಾಲ್ಡಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಅನಿರ್ಬನ್ ದಾಸ್ ಅವರು ನಿನ್ನೆ ಇದರ ತೀರ್ಪು ನೀಡಿದ್ದರು.
ಇಂದು ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಸಂಜಯ್ ಎಸಗಿರುವ ಕೃತ್ಯ ಸಮಾಜದಲ್ಲಿ ಆತಂಕಕಾರಿಯಾಗಿದೆ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸಿಬಿಐ ಪರ ವಕೀಲರು ಕೋಲ್ಕತ್ತಾ ಸೆಷನ್ಸ್ ಕೋರ್ಟ್ ಗೆ ಮನವಿ ಮಾಡಿದ್ದರು. ಕೋಲ್ಕತಾದ ಆರ್ಜಿ ಕಾರ್ ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಸಂಜೋಯ್ ರಾಯ್ ಅವರನ್ನು ಬಂಧಿಸಲಾಗಿತ್ತು.
ತೀರ್ಪು ಪ್ರಕಟಿಸುವ ಮುನ್ನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಸಂಜೋಯ್ ರಾಯ್, ನಾನು ಯಾವುದೇ ಅಪರಾಧ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ. ಈ ಕುರಿತು ಸಿಬಿಐ, ಇದೊಂದು ಘೋರ ಅಪರಾಧ ಎಂದು ಹೇಳಿದೆ. ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸಮಾಜದಲ್ಲಿ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಕಠಿಣ ಶಿಕ್ಷೆಯನ್ನು ನಾವು ಕೋರುತ್ತೇವೆ ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಇತ್ತ ಪ್ರಕರಣದ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಸಂತ್ರಸ್ತೆಯ ಪೋಷಕರು ಒತ್ತಾಯಿಸಿದ್ದಾರೆ.