ಹಾಸನ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯೋರ್ವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆಕೆಯ ಕುಟುಂಬದ ಸದಸ್ಯರು ನೋವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ ಚನ್ನರಾಯಪಟ್ಟಣ ತಾಲೂಕು ಹೊನ್ನಶೆಟ್ಟಿಹಳ್ಳಿ ನಿವಾಸಿ ಎಚ್ .ಎಸ್. ರಮ್ಯ(28) ಜ.9ರಂದು ತಮ್ಮ ಪತಿ ಮಂಜೇಗೌಡರ ಜತೆಯಲ್ಲಿ ಬೈಕ್‌ನಲ್ಲಿ ಹಿರಿಸಾವೆ ಹೋಬಳಿ ಕಾವಲುಬಾರ ಗ್ರಾಮದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬೇರೊಂದು ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತಲೆಗೆ ತೀವ್ರ ಗಾಯವಾಗಿತ್ತು.
ತಕ್ಷಣ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಗಾಯಾಳುವನ್ನು ಪರೀಕ್ಷಿಸಿದ ನರರೋಗ ತಜ್ಞ ಡಾ. ಗುರುಪ್ರಸಾದ್ ಅವರ ತಂಡವು ಆಕೆಯ ಮಿದುಳು ನಿಷ್ಕ್ರಿಯವಾಗಿರುವುದನ್ನು ಖಚಿತ ಪಡಿಸಿದರು. ಇದಾದ ನಂತರ ರಮ್ಯ ಅವರ ಕುಟುಂಬದವರು ಆದಿಚುಂಚನಗಿರಿ ಆಸ್ಪತ್ರೆಗೆ ಅಂಗಾಂಗಳನ್ನು ದಾನಮಾಡಲು ನಿರ್ಧರಿಸಿದರು.
ಆಸ್ಪತ್ರೆಯ ಮುಖ್ಯಸ್ಥ ಡಾ.ಕೆ.ಎಂ.ಶಿವಕುಮಾರ್ ಮಾಗದರ್ಶನದಂತೆ ನುರಿತ ತಜ್ಞರ ಸಹಾಯದಿಂದ ಅಂಗಾಂಗಗನ್ನು ದಾನ ಮಾಡಿದರುಒಂದು ಮೂತ್ರಪಿಂಡವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಆದಿಚುಂಚನಗಿರಿಯ ಮೂತ್ರಪಿಂಡ ತಜ್ಞರಾದ ಡಾ.ನರೇಂದ್ರ, ಡಾ.ಅನಿಲ್ ಮತ್ತು ಡಾ.ನಂದೀಶ್ ವಿ ರವರ ಸಹಕಾರದಿಂದ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಯಿತು. ಮತ್ತು ಅದೇ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಣ್ಣುಗಳನ್ನು ಅಂಗಾಂಗ ಕಸಿ ಮಾಡಲಾಯಿತು.ಹೃದಯ ಮತ್ತು ಹೃದಯನಾಳಗನ್ನು ಬೆಂಗಳೂರಿನ ನಾರಾಯಣ ಹೃದಯಾಲಯ, ಮತ್ತೊಂದು ಕಿಡ್ನಿಯನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ, ಯಕೃತ್ತನ್ನು (ಲಿವರ್) ಬೆಂಗಳೂರಿನ ಬಿ.ಜಿ.ಎಸ್. ಅಪೊಲೋ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ರವಾನಿಸಲಾಗಿದೆಪತ್ನಿ ಸಾವಿನ ನೋವಲ್ಲೂ ಅಂಗಾಂಗಗಳನ್ನು ದಾನ ಮಾಡಿ ಐವರು ರೋಗಿಗಳಿಗೆ ಜೀವದಾನ ಮಾಡಿದ ರಮ್ಯ ಕುಂಟುಂಬಸ್ಥರ ನಡೆ ಮಾದರಿಯಾಗಿದೆ.