ಬೆಳಗಾವಿ: ರಾಜ್ಯಾಡಳಿತದಿಂದ ರಾಷ್ಟ್ರೀಯ ಲಾಂಛನದ ಶಿಷ್ಟಾಚಾರಕ್ಕೆ ಉಲ್ಲಂಘನೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೆಳಗಾವಿ ಅಖಿಲ ಭಾರತ ಸ್ವತಂತ್ರ್ಯ ಹೋರಾಟಗಾರರ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಇಲಾಖೆಗಳ ಮುಖಾಂತರ ಚೈನಾ ಸೀಲ್ಕ್ ಬಟ್ಟೆಯಲ್ಲಿ ಸ್ಟೀನ್ ಪ್ರಿಂಟ್ ಮುಖಾಂತರ ಅಕ್ರಮವಾಗಿ ರಾಷ್ಟ್ರಧ್ವಜ ತಯಾರಿಸಿ ಅವುಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದ್ದು, ಈ ಕ್ರಮದಿಂದ ರಾಷ್ಟ್ರೀಯ ಲಾಂಛನದ ಶಿಷ್ಟಾಚಾರ ಪಾಲನೆಯ ಉಲ್ಲಂಘನೆಯಾಗಿ ರಾಷ್ಟ್ರ ಧ್ವಜಕ್ಕೆ ಅಪಮಾನವಾಗುವ ಸಾಧ್ಯತೆ ಇರುತ್ತದೆ. ರಾಷ್ಟ್ರ ಧ್ವಜಕ್ಕೆ ಹಾಗೂ ಧ್ವಜಾರೋಹಣಕ್ಕೆ ಗೌರವ ವಂದನೆಗೆ ಅದರದೇ ಆದ ಶಿಷ್ಟಾಚಾರಗಳಿದ್ದು, ಅವುಗಳ ಉಲ್ಲಂಘನೆಯಾದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿ ಅಗೌರವ ಸಲ್ಲಿಸಿದಂತಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸಮಿತಿ ಕಿಡಿಕಾರಿದೆ.
ರಾಷ್ಟ್ರ ಧ್ವಜವನ್ನು ಖಾದಿ ನೂಲಿನ ಮೂಲಕ ಸ್ವದೇಶಿ ಸಾಮಗ್ರಿಗಳನ್ನು ಬಳಸಿ ರಾಷ್ಟ್ರೀಯ ಲಾಂಛನದ ನಿಯಮಾವಳಿಗಳ ಅಡಿಯಲ್ಲಿ ವ್ಯವಸ್ಥಿತವಾಗಿ ತಯಾರಿಸುವ ಕ್ರಮವು ಭಾರತ 47ರ ಸ್ವಾತಂತ್ರೋತ್ಸವದ ದಿನದಿಂದ ಇಲ್ಲಿಯವರೆಗೆ ನಡೆದು ಬಂದಿರುತ್ತದೆ. ಈಗ ಸರಕಾರವು ಶೀಘ್ರವಾಗಿ ಬೇಡಿಕೆಗಣುಗುಣವಾಗಿ ಪೂರೈಸಲು ಸಾಧ್ಯವಿಲ್ಲದ ಕಾರಣ ವಿದೇಶದಿಂದ ಆಮದು ಮಾಡಿಕೊಂಡ ಚೈನಾ ಸೀಲ್ಕ್ ಬಟ್ಟೆಗೆ ಸ್ಟೀನ್ ಪ್ರಿಂಟ್ ಮೂಲಕ ಅಕ್ರಮ ರೀತಿಯಲ್ಲಿ ತಯಾರಿಸಿ ದರ ನಿಗದಿ ಪಡಿಸಿ, ಅದನ್ನು ಸರಕಾರದ ಕಾರ್ಯಾಲಯಗಳ ಇಲಾಖೆ ಮೂಲಕ ಪ್ರತಿ ಮನೆಗೆ ಪೂರೈಸಲು ಕ್ರಮ ಜರುಗಿಸುತ್ತಿದೆ ಎಂದರು.
ಈ ಲಾಂಛನವನ್ನು ಪಡೆಯುವ ಜನಸಾಮಾನ್ಯರಿಗೆ ಅದರ ಮಹತ್ವ ಹಾಗೂ ಧ್ವಜಾರೋಹಣದ ನಂತರ ಅದನ್ನು ಕಾಪಾಡುವ ರೀತಿ ಅದರ ಬಳಕೆಯ ಬಗ್ಗೆ ಪರಿಜ್ಞಾನವಿಲ್ಲದೇ ದುರ್ಬಳಕೆಯಾದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಸರಕಾರವೇ ರಾಷ್ಟ್ರ ಧ್ವಜದ ದುರ್ಬಳಕೆಗಾಗಿ ಜನಸಾಮಾನ್ಯರಿಗೆ ನೀಡುತ್ತಿರುವುದು ದೇಶಾಭಿಮಾನಕ್ಕೆ ಹಿನ್ನೆಡೆಯಾಗುತ್ತಿದೆ, ತಕ್ಷಣ ಮನೆ ಮನೆಗೆ ಚೈನಾ ಸೀಲ್ಕ ಬಟ್ಟೆಯ ರಾಷ್ಟ್ರ ಧ್ವಜಗಳ ಪೂರೈಕೆಯನ್ನು ನಿಲ್ಲಿಸಿ ಪ್ರತಿ ವರ್ಷ ಸ್ವಾತಂತ್ರೋತ್ಸವನ್ನು ಆಚರಿಸುವ ಮಾದರಿಯಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಬೇಕು. ಆಚರಣೆಗೆ ಗೌರವ ವಂದನೆ ಸಲ್ಲಿಸಲು ಸಮಾಜದ ಎಲ್ಲಾ ಜನತೆಗೆ ಜ್ಞಾಪಿಸಿ ಅದ್ದೂರಿಯಾಗಿ ಆಚರಣೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ದೇಶೀಯ ಸಾಮಾಗ್ರಿಗಳನ್ನು ಬಳಸಿ ಖಾದಿ ಭಂಡಾರಗಳ ಮುಖಾಂತರ ಖರೀದಿಸಿದ ರಾಷ್ಟ್ರಧ್ವಜವು ಮರು ಉಪಯೋಗಕ್ಕೆ ಬಾರದಿದ್ದಲ್ಲಿ ಅದನ್ನು ದುರ್ಬಳಕೆ ಮಾಡುವಂತಿಲ್ಲ. ಅದು ನಿಷ್ಕ್ರಿಯಗೊಂಡಲ್ಲಿ ಅದನ್ನು ಭೂಮಿಯ ಆಳದಲ್ಲಿ ಗೌರವದಿಂದ ಮುಚ್ಚಬೇಕಾಗುತ್ತದೆ. ಚೈನಾ ಸೀಲ್ಕ್ ನಿಂದ ಮಾಡಿದ ರಾಷ್ಟ್ರಧ್ವಜವು ಮಣ್ಣಿನಲ್ಲಿ ಹುಳುವುದರಿಂದ ಅದು ತನ್ನ ಗುಣಮಟ್ಟವನ್ನು ಹಾಗೆ ಉಳಿದುಕೊಳ್ಳುವುದರಿಂದ ಈ ಲಾಂಛನಕ್ಕೆ ಅಪಮಾನ ಮಾಡಿದಂತಾಗುವುದು. ಯಾವುದೇ ಪರಿಸ್ಥಿತಿಯಲ್ಲಿ ಚೈನಾ ಸೀಲ್ಕ್ ಬಟ್ಟೆಯಲ್ಲಿ ತಯಾರಿಸಿದ ರಾಷ್ಟ್ರ ಧ್ವಜಕ್ಕೆ ನಮ್ಮ ಸಂಪೂರ್ಣ ವಿರೋಧವಿದ್ದು ಅದನ್ನು ನಿಲ್ಲಿಸಬೇಕೆಂದು ಅಖಿಲ ಭಾರತ ಸ್ವತಂತ್ರ್ಯ ಹೋರಾಟಗಾರರ ಸಮಿತಿಯ ರಾಜ್ಯಾಧ್ಯಕ್ಷ ಬಿ. ಎಮ್. ಚಿಕ್ಕನಗೌಡರ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದಾರೆ.