ಖ್ಯಾತ ಸುಗಮ ಸಂಗೀತ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ಹಲವು ದಿನಗಳ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ 83 ವರ್ಷದ ಸುಬ್ಬಣ್ಣರವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.
1938ರ ಡಿಸೆಂಬರ್ 14ರಂದು ಶಿವಮೊಗ್ಗದ ಹೊಸನಗರದಲ್ಲಿ ಶಿವಮೊಗ್ಗ ಸುಬ್ಬಣ್ಣ ಜನಿಸಿದರು. ಅವರ ಮೂಲ ಹೆಸರು ಜಿ. ಸುಬ್ರಮಣ್ಯ. ಹೊಸನಗರದ ಪ್ರಖ್ಯಾತ ಸಂಗೀತ ವಿದ್ವಾಂಸರ ಕುಟುಂಬದಲ್ಲಿ ಸುಬ್ಬಣ್ಣರ ಜನನವಾಯಿತು. ತಂದೆ ಗಣೇಶರಾಯರು, ತಾಯಿ ರಂಗನಾಯಕಿ. ತಾತ ಶಾಮಣ್ಣ ಸಂಗೀತದಲ್ಲಿ ಘನ ವಿದ್ವಾಂಸರು. ಇವರ ಮನೆತನದ ಮೂಲದಿಂದಲೇ ಸಂಗೀತದ ಸ್ಪರ್ಶ ಇದ್ದ ಪರಿಣಾಮ ಕರ್ನಾಟಕ ಶಾಸ್ತ್ರೀಯ ಸಂಗೀತ ಇವರಿಗೆ ಚೆನ್ನಾಗಿ ಒಲಿದಿತ್ತು.
‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ…’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು. ‘ಕಾಡು ಕುದುರೆ’ ಸಿನೆಮಾದ ‘ಕಾಡು ಕುದುರೆ ಓಡಿ ಬಂದಿತ್ತಾ’ ಹಾಡಿಗೆ ರಾಷ್ಟ ಪ್ರಶಸ್ತಿ ಲಭಿಸಿದೆ.
ಬಿ.ಕಾಂ ಮತ್ತು ಎಲ್‌ಎಲ್‌ಬಿ ಪದವೀಧರಾದ ಶಿವಮೊಗ್ಗ ಸುಬ್ಬಣ್ಣ 1982ರಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ನೆಲೆಸಿದರು. ಶಿವಮೊಗ್ಗ ಸುಬ್ಬಣ್ಣ ಆಕಾಶವಾಣಿ ಮತ್ತು ದೂರದರ್ಶನದ ಹಿರಿಯ ಗಾಯಕರಾಗಿದ್ದರು. ಚಲನಚಿತ್ರ, ನೃತ್ಯ ಅಕಾಡೆಮಿ ಮತ್ತು ಸಂಗೀತ ಕ್ಷೇತ್ರಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಶಿವಮೊಗ್ಗ ಸುಬ್ಬಣ್ಣ ನಿಭಾಯಿಸಿ ಹೆಸರಾಗಿದ್ದಾರೆ.