ಉತ್ತರ ಪ್ರದೇಶ ಭಾಗದ ಹಿಂದೂ ಧಾರ್ಮಿಕ ಮುಖಂಡರು, ದಸ್ನಾ ದೇವಿ ದೇವಸ್ಥಾನದ ಮುಖ್ಯಸ್ಥರಾದ ನರಸಿಂಹಾನಂದ ಸರಸ್ವತಿ ಅವರು ಕೇಂದ್ರ ಬಿಜೆಪಿ ಸರ್ಕಾರದ “ಹರ್ ಘರ್ ತಿರಂಗಾ” ಅಭಿಯಾನವನ್ನು ಹಿಂದೂಗಳು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತಂದ ಆರೋಪದ ನಡುವೆಯೂ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಎಲ್ಲಾ ಪ್ರಮುಖರು “ಹರ್ ಘರ್ ತಿರಂಗಾ” ಅಭಿಯಾನಕ್ಕೆ ದೇಶವ್ಯಾಪಿ ಚಾಲನೆ ನೀಡುತ್ತಿದ್ದಾರೆ. ದೇಶದ ಉದ್ದಗಲಕ್ಕೂ ರಾಷ್ಟ್ರಧ್ವಜವನ್ನು ಮನೆ ಮನೆಗಳಿಗೂ ಮಾರಾಟ ಮಾಡುತ್ತಾ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಕರೆ ಕೊಡುತ್ತಿದ್ದಾರೆ. ಈ ನಡುವೆ ಹಿಂದೂ ಧಾರ್ಮಿಕ ಮುಖಂಡ ನರಸಿಂಹಾನಂದ ಧ್ವಜ ಖರೀದಿಸದಂತೆ ಕೊಟ್ಟಿದ್ದಾರೆ.
ನರಸಿಂಹಾನಂದರ ಪ್ರಕಾರ ‘ರಾಷ್ಟ್ರಧ್ವಜ ತಯಾರಿಸುವ ಜವಾಬ್ದಾರಿಯನ್ನು ಸರ್ಕಾರ ಮುಸ್ಲಿಮರೊಬ್ಬರಿಗೆ ಕೊಟ್ಟಿದೆ. ಅವರ ಹೆಸರು ಸಲಾವುದ್ದಿನ್. ಹಾಗಾಗಿ ಅದರ ಎಲ್ಲಾ ಹಣ ಮುಸಲ್ಮಾನರಿಗೆ ತಲುಪುತ್ತದೆ. ಈ ಹಣವನ್ನು ಹಿಂದೂಗಳ ಹತ್ಯೆಗೆ ಬಳಸಲಾಗುತ್ತಿದೆ. ಹಿಂದೂಗಳು ಮುಸಲ್ಮಾನರ ಆರ್ಥಿಕ ಮೂಲಗಳನ್ನು ಬಹಿಷ್ಕರಿಸದೇ ಇದ್ದರೆ ಆ ಹಣ ಹಿಂದೂ ಧರ್ಮದ ಅವಸಾನಕ್ಕೆ ಕಾರಣವಾಗಲಿದೆ ಎಂದು ವಿವಾದಾತ್ಮಕವಾಗಿ ಹೇಳಿದ್ದಾರೆ.