ಹಾಸನ: ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳಾ ಶಿಕ್ಷಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆತಂಕಕಾರಿ ಘಟನೆ ಹಾಸನ ಜಿಲ್ಲೆಯ ದುದ್ದ ಹೋಬಳಿ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಸಿದ್ದಾಪುರ ಗ್ರಾಮದ ನಿವಾಸಿ ಗಂಗಾಧರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆ (ಹೆಸರು ಗೌಪ್ಯತೆಗಾಗಿ ಬಹಿರಂಗಪಡಿಸಲಾಗಿಲ್ಲ) ನೀಡಿದ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸ್ ಮಾಹಿತಿ ಪ್ರಕಾರ, ಸಂಜೆ ಸುಮಾರು 4.45ರ ವೇಳೆಗೆ ಸಿದ್ದಾಪುರ ಗೇಟ್ ಬಳಿ ಬಸ್‌ಗಾಗಿ ಕಾಯುತ್ತಿದ್ದ ಶಿಕ್ಷಕಿಗೆ ಆರೋಪಿ ಲಿಫ್ಟ್ ನೀಡುವ ನೆಪದಲ್ಲಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಶಿಕ್ಷಕಿ ನಿರಾಕರಿಸಿದರೂ ಬಲವಂತವಾಗಿ ಬೈಕ್ ಮೇಲೆ ಹತ್ತಿಸಿಕೊಂಡು ದುಡ್ಡದತ್ತ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಮುಂದೆ, ದುಡ್ಡ ತಲುಪಿದ ಬಳಿಕವೂ ಬೈಕ್ ನಿಲ್ಲಿಸದೆ ಮಾಯಸಮುದ್ರ–ಗೋಪನಹಳ್ಳಿ ಮಾರ್ಗವಾಗಿ ನಿರ್ಜನ ಪ್ರದೇಶದತ್ತ ಕರೆದೊಯ್ದು, ದೊಡ್ಡಪುರ ರೈಲ್ವೆ ಹಳಿಯ ಸಮೀಪ ಅತ್ಯಾಚಾರಕ್ಕೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ನಂತರ ಸಂತ್ರಸ್ತೆ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅಪಹರಣ, ಜೀವ ಬೆದರಿಕೆ ಹಾಗೂ ಅತ್ಯಾಚಾರ ಯತ್ನದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
