ಸಾವರ್ಕರ್ ಧೈರ್ಯವಂತರೋ ಹೇಡಿಯೋ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸಲಾಗದು: ರಾಹುಲ್ ಗಾಂಧಿ ಮೇಲಿನ ವಿಚಾರಣೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಸಂಶೋಧಕ

ಮುಂಬೈ: ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ರಾಹುಲ್ ಗಾಂಧಿ ಮಾನಹಾನಿ ಮಾಡಿದ್ದಾರೆ ಎನ್ನಲಾದ ಪ್ರಕರಣದ ವಿಚಾರಣೆ ಪುಣೆಯ ವಿಶೇಷ ಸಂಸದ/ಶಾಸಕರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಈ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಸಂಶೋಧಕ ಹಾಗೂ ಪ್ರಾಧ್ಯಾಪಕ ಪಂಕಜ್ ಫಡ್ನಿಸ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪುಣೆ ವಿಶೇಷ ನ್ಯಾಯಾಲಯವು ತನ್ನ ವ್ಯಾಪ್ತಿಯನ್ನು ಮೀರಿ, ‘ಸಾವರ್ಕರ್ ಧೈರ್ಯವಂತರೋ ಅಥವಾ ಹೇಡಿಯೋ’ ಎಂಬುದನ್ನು ನಿರ್ಧರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಾವರ್ಕರ್ ಅವರ ಮೊಮ್ಮಗ (ಸೋದರನ ಮೊಮ್ಮಗ) ಸತ್ಯಕಿ ಸಾವರ್ಕರ್ ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಫಡ್ನಿಸ್ ಸಲ್ಲಿಸಿದ್ದ ಅರ್ಜಿಯನ್ನು ಪುಣೆಯ ವಿಶೇಷ ನ್ಯಾಯಾಲಯವು ಈ ಹಿಂದೆ ತಿರಸ್ಕರಿಸಿ, ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ₹20,000 ದಂಡ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿರುವ ಫಡ್ನಿಸ್, ಬಾಂಬೆ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ, ಮೂಲ ದೂರಿಗೆ ಅಪ್ರಸ್ತುತವಾದ ಸಾಕ್ಷ್ಯಗಳನ್ನು ಪರಿಶೀಲಿಸಲು ‘ಅಮಿಕಸ್ ಕ್ಯೂರಿ’ (ನ್ಯಾಯಾಲಯದ ಮಿತ್ರ) ನೇಮಕ ಮಾಡುವಂತೆಯೂ ಮನವಿ ಮಾಡಿದ್ದಾರೆ.

“ಸ್ವಾತಂತ್ರ್ಯ ಹೋರಾಟಕ್ಕೆ ಒಬ್ಬ ವ್ಯಕ್ತಿಯ ಕೊಡುಗೆ ಏನು ಮತ್ತು ಅವರು ಧೈರ್ಯವಂತರಾಗಿದ್ದರೇ ಅಥವಾ ಹೇಡಿಯಾಗಿದ್ದರೇ ಎಂಬುದು ನ್ಯಾಯಾಲಯದ ತೀರ್ಮಾನಕ್ಕೆ ಒಳಪಡುವ ವಿಷಯವಲ್ಲ. ಸಂಸತ್ತಿನಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಒಮ್ಮತದೊಂದಿಗೆ ಸಾವರ್ಕರ್ ಅವರ ಭಾವಚಿತ್ರವನ್ನು ಅಳವಡಿಸುವ ಮೂಲಕ ಸಂಸತ್ತು ಈಗಾಗಲೇ ಈ ಬಗ್ಗೆ ತನ್ನ ನಿಲುವು ವ್ಯಕ್ತಪಡಿಸಿದೆ. ಈ ವಿಷಯವನ್ನು ಸಂಸತ್ತು ಮತ್ತು ಸರ್ಕಾರಕ್ಕೇ ಬಿಡುವುದು ಸೂಕ್ತ. ಆದರೆ ಪುಣೆ ನ್ಯಾಯಾಲಯವು ರಾಜಕೀಯ ಇತಿಹಾಸದ ಚರ್ಚೆಗಳಿಗೆ ಅವಕಾಶ ನೀಡಿ ತನ್ನ ವ್ಯಾಪ್ತಿಯನ್ನು ಮೀರಿದೆ” ಎಂದು ಫಡ್ನಿಸ್ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಪುಣೆಯ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಪರ ವಕೀಲರ ಪಾಟಿಸವಾಲಿನ ವೇಳೆ, ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಅರ್ಜಿ ಬರೆದಿದ್ದರು, ‘ಸ್ವಾತಂತ್ರ್ಯವೀರ’ ಬಿರುದನ್ನು ಯಾವುದೇ ಸರ್ಕಾರ ನೀಡಿಲ್ಲ ಹಾಗೂ ಗೋಡ್ಸೆ ಸೋದರರು ಆರ್‌ಎಸ್‌ಎಸ್‌ನ ಸಕ್ರಿಯ ಸದಸ್ಯರಾಗಿದ್ದರು ಎಂಬ ಹೇಳಿಕೆಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ತಡೆ ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು