ಶವ ಸಂಸ್ಕಾರಕ್ಕೆ ಬೇಕಾದ ಸಾಮಾನುಗಳನ್ನು ಮಾರುವ ಕುಲವೃತ್ತಿಯ ಕಡು ಬಡತನದ ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಹಲವಾರು ವರ್ಷಗಳ ಕಾಲ ಮನವಿಯನ್ನು ಸಲ್ಲಿಸುತ್ತಿದ್ದರೂ ಅವರ ಬೇಡಿಕೆ ಈಡೇರಿರಲಿಲ್ಲ. ಈಗ ಬೊಮ್ಮಾಯಿ ಸರಕಾರವು ಅವರನ್ನು ಪ್ರವರ್ಗ 2(d) ಗೆ ಸೇರಿಸಿದೆ. ತಮ್ಮ ಅಧಿಕಾರಾವಧಿಯಲ್ಲಿ ಸರಕಾರಕ್ಕೆ ನೀಡಿದ ಶಿಫಾರಸನ್ನು ನೆನಪಿಸಿಕೊಂಡು ಬರೆದಿದ್ದಾರೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ ಎಸ್ ದ್ವಾರಕಾನಾಥ್.
ಮೀಸಲಾತಿಯ ವಿಷಯದಲ್ಲಿ ಏನೆಲ್ಲಾ ಗೊಂದಲಗಳನ್ನು ಸೃಷ್ಟಿಸಿದ ಬೊಮ್ಮಾಯಿ ಸರ್ಕಾರದ ಒಂದು ನಿಲುವು ಮಾತ್ರ ವಿಭಿನ್ನವಾಗಿತ್ತು! ಮಾನವೀಯವಾಗಿತ್ತು, ಅದಕ್ಕೇ ಇಷ್ಟವಾಯಿತು!! ಬೆಂಕಿ ಬಿದ್ದು ಭಸ್ಮವಾದ ಕಾಡಿನಲ್ಲಿ ಎಲ್ಲೋ ಕೋಗಿಲೆಯ ಕಂದು ಬಣ್ಣದಿಂದ ಕೂಡಿರುವ ಕೂಗಿನಂತೆ…
ಸುಮಾರು ಹದಿಮೂರು ವರ್ಷಗಳ ಹಿಂದೆ ನಾನು ಹಿಂದುಳಿದ ವರ್ಗಗಳ ಆಯೋಗದ ಛೇರ್ಮನ್ ಆಗಿದ್ದ ಸಂದರ್ಭದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಆಯೋಗದ ಕಛೇರಿಗೆ ಬಂದು “ಸರ್.. ನಮ್ಮದು ‘ವೈಶ್ಯವಾಣಿ’ ಎಂಬ ಸಮುದಾಯ, ನಾವು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಎಲ್ಲೂ ಸೇರ್ಪಡೆಯಾಗಿಲ್ಲ.. ನಾವು ಕಡುಬಡವರು.. ನಮ್ಮ ಜಾತಿಯ ಹೆಸರು ವೈಶ್ಯವಾಣಿ ಎಂದಿರುವುದರಿಂದ ನಾವು ‘ವೈಶ್ಯರು’ ಎಂಬ ಶ್ರೀಮಂತ ಸಮುದಾಯಕ್ಕೆ ಸೇರಿದವರಿರಬಹುದೆಂದು ಶಂಕಿಸಿ ಯಾವ ಆಯೋಗವೂ ನಮ್ಮನ್ನು ಕೇಳಿಸಿಕೊಳ್ಳುತ್ತಿಲ್ಲ.. ಹಾವನೂರು ಆಯೋಗದಿಂದ ಹಿಡಿದು ರವಿವರ್ಮಕುಮಾರ್ ಆಯೋಗದವರೆಗು ಎಲ್ಲಾ ಆಯೋಗಗಳಿಗೂ ಮನವಿ ಕೊಟ್ಟಿದ್ದೇನೆ.. ನಾವು ಬೆಳಗಾವಿಯ ಹೊರವಲಯದಲ್ಲಿ ಇದ್ದೇವೆ.. ನಾನು ಹೇಗೋ ಹಣ ಒದಗಿಸಿಕೊಂಡು ಸತತವಾಗಿ ಬೆಂಗಳೂರಿಗೆ ಬಂದು ಆಯೋಗದ ಮನವೊಲಿಸಲು ಪ್ರಯತ್ನಿಸುತ್ತಿದ್ದೆ. ನನಗೂ ವಯಸ್ಸಾಗುತ್ತಿದೆ ಅಷ್ಟು ದೂರದಿಂದ ಬೆಂಗಳೂರಿಗೆ ಆಗಾಗ ಬರಲಾರೆ.. ನಾನು ಸತ್ತರೆ ನನ್ನಂತೆ ಓಡಾಡಬಲ್ಲ ಸಾಧಾರಣ ವಿದ್ಯಾವಂತರೂ ನಮ್ಮಲಿಲ್ಲ.. ದಯವಿಟ್ಟು ಒಮ್ಮೆ ನಮ್ಮ ಕಾಲೊನಿಗೆ ಬನ್ನಿ, ನಿಮಗೆ ನಮ್ಮ ಸ್ಥಿತಿ ಅರ್ಥವಾಗುತ್ತೆ…” ಅಂತ ಅಂಗಲಾಚಿದರು.
ಇವರ ದೈನ್ಯ ಮನವಿ ನನ್ನನ್ನು ಕಲಕಿತು. ಇವರ ಮನವಿಗಳನ್ನು ಮತ್ತೆ ಮತ್ತೆ ಓದಿದೆ, ಒಂದು ದಿನ ಬೆಳಗಾವಿಯ ವೈಶ್ಯವಾಣಿ ಕಾಲೋನಿಗೆ ನನ್ನ ಆಯೋಗದ ಸದಸ್ಯರೊಂದಿಗೆ ಹೊರಟೆ. ಮನೆಮನೆ ಓಡಾಡಿದೆ, ಅವರ ಸ್ಥಿತಿ ಕಂಡು ನೀರುನೀರಾದೆ! ವೈಶ್ಯವಾಣಿಯ ಕುಲವೃತ್ತಿ ‘ಅಂತ್ಯಕ್ರಿಯೆಗೆ ಬೇಕಾದ ಸಾಮಾನುಗಳನ್ನು ಮಾರುವುದು!! ಯಾರದಾದರೂ ಮನೆಯಲ್ಲಿ ಸಾವಾದರೆ ಮಾತ್ರ ವೈಶ್ಯವಾಣಿ ಸಮುದಾಯದ ಮನೆಯಲ್ಲಿ ಒಲೆ ಉರಿಯುತ್ತದೆ!!’ ತಕ್ಷಣ ವಿವರ ಪಡೆದೆ, ಪಬ್ಲಿಕ್ ಹಿಯರಿಂಗ್ ಕರೆದೆ, ಒಂದು ಒಳ್ಳೆಯ ವರದಿ ಬರೆದು ತಕ್ಷಣ ವೈಶ್ಯವಾಣಿ ಸಮುದಾಯವನ್ನು ಪ್ರವರ್ಗ 2(a)ಗೆ ಸೇರಿಸಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಈ ಶಿಫಾರಸ್ಸು ಮಾಡಿ ಹದಿಮೂರು ವರ್ಷವಾಯಿತು, ಇಷ್ಟು ಸರ್ಕಾರಗಳು ಬಂದವು, ಇಷ್ಟು ಜನ ಮುಖ್ಯಮಂತ್ರಿಗಳು ಬಂದು ಹೋದರು. ಒಬ್ಬರೂ ಈ ವರದಿಯ ಕಡೆ ನೋಡಲಿಲ್ಲ! ಕಡೆಗೆ ಈಗ ಬೊಮ್ಮಾಯಿ ಸರ್ಕಾರ ವೈಶ್ಯವಾಣಿ ಎಂಬ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಕಡುಬಡತನದ ಸಮುದಾಯವನ್ನು ಪ್ರವರ್ಗ 2(d) ಗೆ ಸೇರಿಸಿದೆ, ಇದಕ್ಕಾಗಿ ಬೊಮ್ಮಾಯಿ ಸರ್ಕಾರಕ್ಕೆ ಅಭಿನಂದನೆ ಹೇಳುತ್ತೇನೆ.
ಅಂತೆಯೇ ಈಗಿನ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಕುಡುಒಕ್ಕಲಿಗ, ಆದಿಬಣಜಿಗ, ಲಾಳಗೊಂಡ, ನೊಳಂಬ, ವೀರಶೈವ ಮಲ್ಲವ, ಮತ್ತು ಮಲೆಗೌಡ ಲಿಂಗಾಯತ ಸಮುದಾಯಗಳನ್ನು ಹಿಂದುಳಿದ 2(d) ಪಟ್ಟಿಗೆ ಸೇರಿಸಿದೆ.
ವಿಶೇಷವಾಗಿ ಜಾತಿ ಇಲ್ಲದ ಅನಾಥ ಮಕ್ಕಳನ್ನು ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯ ಅತೀ ಹಿಂದುಳಿದ ಪ್ರವರ್ಗ 2(ಡಿ) ಅಡಿಯಲ್ಲಿ ಹೊಸದಾಗಿ ಸೇರಿಸಲು ಆದೇಶಿಸಲಾಗಿದೆ. ಇದು ಅತ್ಯಂತ ಮಹತ್ವದ ಆದೇಶ. ಈ ಕಾರಣಕ್ಕೂ ಬೊಮ್ಮಾಯಿ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಂತೆಯೇ ಅನಾಥ ಮಕ್ಕಳ ಕುರಿತು ವರದಿ ನೀಡಿದ ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗವನ್ನೂ ಅಭಿನಂದಿಸುತ್ತೇನೆ.
ಸಿ.ಎಸ್.ದ್ವಾರಕಾನಾಥ್
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು