ಕಾಂಗ್ರೆಸ್ ನ ಸಮಸ್ಯೆ ಏನೆಂದರೆ ಅದು ತನ್ನ ತಪ್ಪಿನಿಂದ ಪಾಠ ಕಲಿಯುವುದು ಕಡಿಮೆ. ನಮ್ಮ ಅನೇಕ ಕಾಂಗ್ರೆಸ್ ನಾಯಕರು ತಮ್ಮ ಕ್ಷೇತ್ರದ ಬಗ್ಗೆ ಯೋಚಿಸುತ್ತಾರೆಯೇ ಹೊರತು ಸುತ್ತಲಿನ ಕ್ಷೇತ್ರಗಳನ್ನೂ ಗೆಲ್ಲುವ ಸ್ಥಿತಿಯಲ್ಲಿ ಸಿದ್ಧಪಡಿಸುವ ಬಗ್ಗೆ ಯೋಚಿಸುವುದಿಲ್ಲ- ಅಶೋಕ್ ಸಾಲಿಯಾನ್, ಮಂಗಳೂರು
ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು ಮೇ 10, 2023 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು, ಮೇ 13 ರಂದು ಫಲಿತಾಂಶ ಘೋಷಣೆಯಾಗಲಿದೆ.
ರಾಜ್ಯದ ರಾಜಕೀಯ ಪಕ್ಷಗಳು ಚುನಾವಣೆಗೆ ಭರ್ಜರಿ ತಯಾರಿ ನಡೆಸಿವೆ. ಚುನಾವಣೆ ಘೋಷಣೆಗೆ ಮೊದಲು ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ ಪ್ರಜಾಧ್ವನಿ ಯಾತ್ರೆ, ವಿಜಯಸಂಕಲ್ಪ ಯಾತ್ರೆ, ಪಂಚರತ್ನ ಯಾತ್ರೆ ನಡೆಸಿ ಸ್ಪರ್ಧಾ ನೆಲ ಹಸನುಗೊಳಿಸಿವೆ. ತಮ್ಮದೇ ಸರಕಾರ ಎಂದು ಈ ಮೂರೂ ಸರಕಾರಗಳು ಹೇಳುತ್ತಿವೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಈಗಾಗಲೇ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ್ದರೆ ಬಿಜೆಪಿ ಇನ್ನೂ ಒಂದೇ ಒಂದು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿಲ್ಲ.
ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಅನೇಕ ಸುದ್ದಿ ಸಂಸ್ಥೆಗಳು ಸಮೀಕ್ಷೆ ನಡೆಸಿದ್ದು ಅವುಗಳಲ್ಲಿ ಹೆಚ್ಚಿನವು ಅತಂತ್ರ ವಿಧಾನಸಭೆಯನ್ನು ಭವಿಷ್ಯ ನುಡಿದಿವೆಯಾದರೂ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ ಎಂದು ಹೇಳಿವೆ. ಹಳೆ ಮೈಸೂರು ಭಾಗದಲ್ಲಿ ಎಂದಿನಂತೆ ಜೆಡಿಎಸ್ ಮುನ್ನಡೆಯಲ್ಲಿದೆಯಾದರೆ ಇತರ ಹೆಚ್ಚಿನ ಕಡೆಗಳಲ್ಲಿ ಕಾಂಗ್ರೆಸ್ ನಿಕಟ ಪೈಪೋಟಿ ನೀಡುತ್ತಿದೆ. ಆದರೆ ಸಮೀಕ್ಷೆಗಳಲ್ಲಿ ಒಂದು ಅಂಶವನ್ನು ಸ್ಪಷ್ಟವಾಗಿ ಗಮನಿಸಬಹುದು. ಅದೆಂದರೆ ಕರಾವಳಿ ಭಾಗದಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಕೆಲವು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಕರಾವಳಿ ಭಾಗದಲ್ಲಿ ತೀರಾ ದುಸ್ಥಿತಿಯಲ್ಲಿದೆ.
ಸರಿ ಸುಮಾರು ಮೂರು ದಶಕಕ್ಕೆ ಮೊದಲು ತುಂಬಾ ಬಲಾಢ್ಯವಾಗಿದ್ದ ಮತ್ತು ಅನೇಕ ಮೇರು ನಾಯಕರನ್ನು ಕೊಟ್ಟಿದ್ದ ಕರಾವಳಿಯಲ್ಲಿ ಕಾಂಗ್ರೆಸ್ ಗೆ ಯಾಕೆ ಈ ಸ್ಥಿತಿ ಬಂತು? ನಿಜ, ಕರ್ನಾಟಕ ಕರಾವಳಿಯನ್ನು ಸಂಘಪರಿವಾರದ ಪ್ರಯೋಗಶಾಲೆ ಎಂದೇ ಕರೆಯಲಾಗುತ್ತದೆ. ಇಲ್ಲಿ ಸಂಘ ಪರಿವಾರದ ಬೇರುಗಳು ಗಟ್ಟಿಯಾಗಿ ಬೇರೂರಿವೆ. ಚುನಾವಣೆಗಳಲ್ಲಿ ಅದು ದೊಡ್ಡ ಸಾಧನೆ ಮಾಡುತ್ತಿದೆ. ಆದರೆ ಇದರರ್ಥ ಇಲ್ಲಿನ ಎಲ್ಲರೂ ಬಿಜೆಪಿಯ ಬೆಂಬಲಿಗರೇನಲ್ಲ.
2013 ರ ವಿಧಾನಸಭಾ ಚುನಾವಣೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಆಗ ದಕ್ಷಿಣಕನ್ನಡದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿತ್ತು. ಸುಳ್ಯದಲ್ಲಿ ಬಿಜೆಪಿಯ ಅಂಗಾರ ಅವರು ಗೆದ್ದಿದ್ದರಾದರೂ ಅದು ತೀರಾ ಸಣ್ಣ ಅಂತರದ ಗೆಲುವಾಗಿತ್ತು.
ಇದೇ ದಕ್ಷಿಣಕನ್ನಡ ಕ್ಷೇತ್ರದಲ್ಲಿ ಇಬ್ಬರು ಮುಸ್ಲಿಂ, ಒಬ್ಬರು ಕ್ರೈಸ್ತ, ಒಬ್ಬರು ಜೈನ ಹೀಗೆ ನಾಲ್ವರು ಅಲ್ಪಸಂಖ್ಯಾತರು ಚುನಾವಣೆ ಗೆದ್ದಿದ್ದು ಇಲ್ಲಿನ ಮತೀಯ ಸಾಮರಸ್ಯದ ಉದಾಹರಣೆ. ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಕಾಂಗ್ರೆಸ್ ನಿಕಟ ಪೈಪೋಟಿ ನೀಡುತ್ತ ಬಂದಿದೆ. 2019 ರಲ್ಲಿ 7.74 ಲಕ್ಷ ಮತದಾರರು ಬಿಜೆಪಿಯನ್ನು ಬೆಂಬಲಿಸಿದರೆ 4.99 ಲಕ್ಷ ಮತದಾರರು ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ. ಇದು ಕಾಂಗ್ರೆಸ್ ಗೆ ಈಗಲೂ ಗಟ್ಟಿ ನೆಲೆ ಇರುವುದನ್ನು ಸೂಚಿಸುತ್ತದೆ.
ಈಗಿನ ಪರಿಸ್ಥಿತಿ ಹೇಗಿದೆ? ಕರಾವಳಿಯಲ್ಲಿ ಬಿಜೆಪಿ ನಿಶ್ಚಿಂತೆಯಿಂದಿದೆ. ಯಾಕೆಂದರೆ ಇಲ್ಲಿ ಯಾರು ಅಭ್ಯರ್ಥಿ ಎನ್ನುವುದು ಮುಖ್ಯವಲ್ಲ. ಆ ರೀತಿಯಲ್ಲಿ ಅದು ಕ್ಷೇತ್ರವನ್ನು ಗಟ್ಟಿಮಾಡಿಕೊಂಡು ಇರಿಸಿಕೊಂಡಿದೆ. ಆದರೆ ಇಲ್ಲಿ ಬಂಟ್ವಾಳದಲ್ಲಿ ರಮಾನಾಥ ರೈ, ಉಳ್ಳಾಲದಲ್ಲಿ ಖಾದರ್ ಹೊರತುಪಡಿಸಿದರೆ ಇತರ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ಯಾವತ್ತೂ ಸ್ಪಷ್ಟವಿರಲಿಲ್ಲ. ಚುನಾವಣೆ ಸೋತ ಮರುದಿನದಿಂದಲೇ ಕಾಂಗ್ರೆಸ್ ತನ್ನ ನೆಲೆಯನ್ನು ಭದ್ರಗೊಳಿಸುವ ಕೆಲಸ ಮಾಡಬೇಕಿತ್ತು. ಅದನ್ನು ಮಾಡಿಲ್ಲ. ಅದನ್ನು ಮಾಡುತ್ತಿದ್ದರೆ ಅಭ್ಯರ್ಥಿ ಯಾರೇ ಆಗಲಿ ಅವರು ಗೆಲ್ಲುವ ಸಾಧ‍್ಯತೆ ಇತ್ತು. ಇನ್ನು ಮತದಾನಕ್ಕೆ ಇರುವುದು ಕೇವಲ 40 ದಿನ. ಇನ್ನು ಅಭ್ಯರ್ಥಿ ಘೋಷಣೆಯಾಗಿ ಅವರು ಪ್ರಚಾರ ಮಾಡಿ ಸುಮಾರು 1.5 ಲಕ್ಷ ಮತದಾರರನ್ನು ತಲಪುವುದು ಯಾವಾಗ?
ಕಾಂಗ್ರೆಸ್ ನ ಸಮಸ್ಯೆ ಏನೆಂದರೆ ಅದು ತನ್ನ ತಪ್ಪಿನಿಂದ ಪಾಠ ಕಲಿಯುವುದು ಕಡಿಮೆ. ನಮ್ಮ ಅನೇಕ ಕಾಂಗ್ರೆಸ್ ನಾಯಕರು ತಮ್ಮ ಕ್ಷೇತ್ರದ ಬಗ್ಗೆ ಯೋಚಿಸುತ್ತಾರೆಯೇ ಹೊರತು ಸುತ್ತಲಿನ ಕ್ಷೇತ್ರಗಳನ್ನೂ ಗೆಲ್ಲುವ ಸ್ಥಿತಿಯಲ್ಲಿ ಸಿದ್ಧಪಡಿಸುವ ಬಗ್ಗೆ ಯೋಚಿಸುವುದಿಲ್ಲ. ಎಲ್ಲರಿಗೂ ಮಂತ್ರಿ ಮುಖ್ಯಮಂತ್ರಿ ಆಗುವ ಆಸೆ. ಆದರೆ ಪಕ್ಷ ಗೆದ್ದರೆ ಮಾತ್ರ ಇದು ಸಾಧ್ಯ ಅನ್ನುವ ಯೋಚನೆ ಅವರಿಗೆ ಬರುವುದೇ ಇಲ್ಲ !
ವಿಧಾನಸಭೆಯ ಚುನಾವಣೆ ಒತ್ತಟ್ಟಿಗಿರಲಿ. ಇನ್ನು ಕೇವಲ ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಕಳೆದ ಬಾರಿ 5 ಲಕ್ಷ ಮತ ಪಡೆದ ಮಿಥುನ್ ರೈ ಈಗ ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಅಭ್ಯರ್ಥಿಯಂತೆ! ಲೋಕಸಭಾ ಚುನಾವಣೆಯಲ್ಲಿ ಸುಮಾರು 15 ಲಕ್ಷ ಮತದಾರರನ್ನು ತಲಪಬೇಕಾಗುತ್ತದೆ. ಅದಕ್ಕೆ ಅನೇಕ ವರ್ಷಗಳ ಸಿದ್ಧತೆ ಬೇಕು. ಆದರೆ ಹಿಂದಿನ ಉದಾಹರಣೆಗಳನ್ನು ನೋಡಿದರೆ ಕಾಂಗ್ರೆಸ್ ಮುಂದಿನ ಚುನಾವಣಾ ಘೋಷಣೆಯಾಗುವವರೆಗೂ ಅಭ್ಯರ್ಥಿಯನ್ನು ತಯಾರು ಮಾಡುವುದಿಲ್ಲ. ಅಂದಮೇಲೆ ಗಟ್ಟಿ ನೆಲೆಯಿರುವ ಬಿಜೆಪಿಯನ್ನು ಎದುರಿಸುವುದು ಹೇಗೆ ಸಾಧ್ಯ? ಈಗಾಗಲೇ ಹೇಳಿದ ಹಾಗೆ, ಕಾಂಗ್ರೆಸ್ ನ ಸಮಸ್ಯೆ ಎಂದರೆ ಅದು ತಪ್ಪುಗಳಿಂದ ಪಾಠ ಕಲಿಯುವುದಿಲ್ಲ. ತಪ್ಪುಗಳಿಂದ ಪಾಠ ಕಲಿಯದ ಪಕ್ಷಕ್ಕೆ ಭವಿಷ್ಯವೂ ಇಲ್ಲ
ಅಶೋಕ್ ಸಾಲಿಯಾನ್, ಮಂಗಳೂರು