ಆಡಳಿತ ಪಕ್ಷವು ಎಲೆಕ್ಟೋರಲ್ ಬಾಂಡ್ ಗಳ ಮೂಲಕ ಅಪಾರದರ್ಶಕ ರೀತಿಯಲ್ಲಿ ದೇಶ ವಿದೇಶಗಳ ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆಯಾಗಿ ಹರಿದು ಬರುವ ಹಣದ ಅತೀ ದೊಡ್ಡ ಫಲಾನುಭವಿಯಾಗಿದ್ದರೂ, ಜನರು ಆ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಲು ಹಿಂಜರಿಯುವುದು ಮಾತ್ರ ಭಾರತಕ್ಕೆ ಸೀಮಿತವಾದ ವಿದ್ಯಮಾನ ಎನಿಸುತ್ತಿದೆ – ರಂಜಿತಾ ಜಿ ಎಚ್, ಫಿನ್ಲೆಂಡ್
ಮಾರ್ಚ್ ಮೊದಲ ವಾರದಲ್ಲಿ ಜಾರ್ಜಿಯಾದ ರಾಜಧಾನಿಯಲ್ಲಿ ಸಾವಿರಾರು ನಾಗರಿಕರು ತನ್ನ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿದ “ ವಿದೇಶೀ ದೇಣಿಗೆಯಲ್ಲಿ ಪಾರದರ್ಶಕತೆ “ ಕುರಿತಾದ ಮಸೂದೆಯ ವಿರುದ್ಧ ಪ್ರತಿಭಟಿಸಿದರು. ಮೂರು ದಿನಗಳ ಭಾರೀ ಪ್ರತಿಭಟನೆಗೆ ಮಣಿದ ಸರ್ಕಾರ ಮಸೂದೆಯನ್ನು ಹಿಂಪಡೆಯಿತು ಹಾಗೂ ಯೂರೋಪಿಯನ್ ಒಕ್ಕೂಟ ಸೇರಲು ತಮ್ಮ ಪ್ರಯತ್ನಗಳು ಜಾರಿಯಲ್ಲಿವೆ ಎಂದು ಜನರಿಗೆ ಆಶ್ವಾಸನೆ ನೀಡಿತು.
ಈ ಪ್ರಸ್ತಾಪಿತ ಕಾನೂನಿನ ಪ್ರಕಾರ ನಾಗರಿಕ ಸಮಾಜದ ಸಂಸ್ಥೆಗಳು, ಎನ್ .ಜಿ .ಓ ಗಳು ಮತ್ತು ಮಾಧ್ಯಮ ಸಂಸ್ಥೆಗಳು ವಿದೇಶೀ ಮೂಲದಿಂದ ಶೇಕಡಾ 20ಕ್ಕಿಂತ ಹೆಚ್ಚು ಹಣವನ್ನು ಪಡೆದಲ್ಲಿ ತಮ್ಮನ್ನು “ವಿದೇಶಿ ಪ್ರಭಾವದ ಏಜೆಂಟ್” ಎಂದು ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ $9,600ವರೆಗೆ ದಂಡ ವಿಧಿಸಲಾಗುತ್ತದೆ. ಜಾರ್ಜಿಯಾದ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್‌ನ ಸಂಸ್ಥೆಯ ಪ್ರಕಾರ “ಎನ್‌ಜಿಒಗಳು ದೇಣಿಗೆಗೆ ಸಂಬಂಧಿಸಿದಂತೆ ಈಗಾಗಲೇ 10 ವಿಭಿನ್ನ ಕಾನೂನುಗಳಿಗೆ ಒಳಪಟ್ಟಿವೆ ಮತ್ತು ಹಣಕಾಸು ಸಚಿವಾಲಯವು ಈಗಾಗಲೇ ಖಾತೆಗಳು, ಹಣ ಮತ್ತಿತರ ಮಾಹಿತಿಗಳನ್ನು ಹೊಂದಲು ಸಂಪೂರ್ಣ ಪ್ರವೇಶವನ್ನು ಹೊಂದಿದೆ”

ಜಾರ್ಜಿಯಾದಲ್ಲಿನ ಪ್ರತಿಭಟನಾಕಾರರ ಮುಖ್ಯ ಕಳವಳ, ಪ್ರಸ್ತಾವಿತ ಕಾನೂನು ರಷ್ಯಾದ ವಿದೇಶಿ ದೇಣಿಗೆಯನ್ನು ನಿರ್ಬಂಧಿಸುವ ಕಾಯ್ದೆಯನ್ನು ಅನುಸರಿಸುತ್ತದೆ ಎಂಬುದಾಗಿತ್ತು. ರಷ್ಯಾದಲ್ಲಿನ ಈ ಕಾನೂನು ಪ್ರಬಲವಾದ ಸಾಧನವಾಗಿ ಮಾರ್ಪಟ್ಟು ಸುದ್ದಿ ಸಂಸ್ಥೆಗಳು, ಎನ್ ಜಿ ಓ ಹಾಗೂ ಅನೇಕ ಇತರೆ ಪಾಶ್ಚಿಮಾತ್ಯ ಸಂಸ್ಥೆ, ಕಂಪನಿಗಳನ್ನು ನಿಷೇಧಿಸಿ ನಾಗರಿಕ ಸಮಾಜವನ್ನು ‘ಸ್ವಚ್ಛಮಾಡಲು’ ಸಹಾಯ ಮಾಡಿತು. 2008ರ ಯುದ್ಧದಲ್ಲಿ ಶೇಕಡಾ 20ರಷ್ಟು ತನ್ನ ಭೂಭಾಗವನ್ನು ರಷ್ಯಾ ವಶಪಡಿಸಿಕೊಂಡ ನಂತರ ಜಾರ್ಜಿಯನ್ನರಿಗೆ ‘ರಷ್ಯನ್ ಮಾದರಿ’ ಎಂಬ ಯಾವುದೇ ಮಸೂದೆ/ವಸ್ತುವು ರುಚಿಸದು.
ಭಾರತದಲ್ಲಿ ಸರ್ಕಾರಗಳೂ, ಎನ್.ಜಿ.ಒಗಳೂ..
ಸಾಮಾನ್ಯವಾಗಿ ಈ ಹಿಂದಿನ ಯಾವ ಸರ್ಕಾರಗಳೂ ಎನ್.ಜಿ.ಒಗಳೊಂದಿಗೆ ಉತ್ತಮ ಒಡನಾಟವನ್ನು ಹೊಂದಿರಲಿಲ್ಲ. ಆದರೆ ವಿಶೇಷವಾಗಿ ಪ್ರಸ್ತುತ ಸರ್ಕಾರವು ಅವುಗಳ ವಿರುದ್ಧ ಯುದ್ಧ ಸಾರಿದಂತಿದೆ. 2015ರಲ್ಲಿ ಗ್ರೀನ್ ಪೀಸ್ ಇಂಡಿಯಾ ದ ಪರವಾನಗಿ ರದ್ದು ಮಾಡುವ ಮೂಲಕ ಶುರುವಾದ ಈ ಯುದ್ಧ ವರ್ಷದಿಂದ ವರ್ಷಕ್ಕೆ ಅಮ್ನೆಸ್ಟಿ ಇಂಟರ್‌ನ್ಯಾಶನಲ್, ಆಕ್ಸ್ಫ್ಯಾಮ್ ಇಂಡಿಯಾದಂಥ ಹಲವು ಸರ್ಕಾರೇತರ ಸಂಸ್ಥೆಗಳ ದೇಣಿಗೆಯ ಮೂಲವನ್ನು ನಿಯಂತ್ರಿಸುತ್ತ ಅಥವಾ ಕೊನೆಗಾಣಿಸುತ್ತ ನಡೆದಿದೆ.
2020ರಲ್ಲಿ ಸುಪ್ರೀಂ ಕೋರ್ಟು, ಇಂಡಿಯನ್ ಸೋಶಿಯಲ್ ಆಕ್ಷನ್ ಫೋರಂ ಸಂಘಟನೆ ಕುರಿತ ವಿಚಾರಣೆ ಪ್ರಕರಣದಲ್ಲಿ “ರಾಜಕೀಯ ಉದ್ದೇಶ ಹೊಂದಿರದ, ಪ್ರಜಾಸತ್ತಾತ್ಮಕ ದಾರಿಯಲ್ಲಿ ಜನಪರ ಹೋರಾಟಗಳಲ್ಲಿ ತೊಡಗಿಕೊಂಡಿರುವ ಸಂಘಟನೆಗಳು ವಿದೇಶೀ ದೇಣಿಗೆ ಸಂಗ್ರಹಿಸುವುದನ್ನು ನಿಷೇಧಿಸಲಾಗದು (ಆದರೆ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಸಂಸ್ಥೆಗಳ ವಿದೇಶೀ ದೇಣಿಗೆ ಸಂಗ್ರಹವನ್ನು ತಡೆಯಬಹುದು)” ಎಂದು ಹೇಳಿತ್ತು.
ವಿದೇಶೀ ದೇಣಿಗೆ ಪರವಾನಗಿ ಕಳೆದುಕೊಂಡ ಎನ್‌ಜಿಒಗಳು…
ಈ ತೀರ್ಪಿನ ಹೊರತಾಗಿಯೂ ಎರಡು ವರ್ಷಗಳ ಆನಂತರ 12,500 ಕ್ಕೂ ಹೆಚ್ಚು ಎನ್‌ಜಿಒಗಳು ವಿದೇಶೀ ದೇಣಿಗೆ ಪಡೆಯುವ ಪರವಾನಗಿ ಕಳೆದುಕೊಂಡವು. ಹಲವು ಎನ್‌ಜಿಒಗಳು ಪರವಾನಗಿ ನವೀಕರಿಸಲು ಅರ್ಜಿ ಸಲ್ಲಿಸಿರಲಿಲ್ಲ ಎಂಬುದು ಸರ್ಕಾರದ ಸಮರ್ಥನೆಯಾದರೆ ತಡರಾತ್ರಿಯಲ್ಲಿ ಗೃಹಸಚಿವಾಲಯವು ತಾನೇ ತರಾತುರಿಯಲ್ಲಿ ಸುಮಾರು 5,933 ಎನ್‌ಜಿಒಗಳ ಪರವಾನಗಿ ರದ್ದು ಪಡಿಸಿ ಆದೇಶ ಹೊರಡಿಸಿತ್ತು. ಈ ಸಂದರ್ಭದಲ್ಲಿ ಪರವಾನಗಿ ಕಳೆದುಕೊಂಡ ಹಲವು ಸಂಸ್ಥೆಗಳೆಂದರೆ – ಕರ್ನಾಟಕದ ಸಿಟಿಜನ್ ಆಕ್ಷನ್ ಗ್ರೂಪ್, ಸೆಂಟ್ರಲ್ ಡಯಾಲಿಸಿಸ್ ಸೆಂಟರ್, ಭಾರತ ಕ್ಷಯ ರೋಗ ಸಂಸ್ಥೆ, ನೆಹರೂ ಮೆಮೊರಿಯಲ್ ಮ್ಯೂಸಿಯಂ, ಕೊಲ್ಕೊತ್ತದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಉತ್ತರಾಖಂಡ ವಿಪತ್ತು ನಿರ್ವಹಣಾ ಕೇಂದ್ರ, ದೆಹಲಿ ಪಬ್ಲಿಕ್ ಸ್ಕೂಲ್ ಸೊಸೈಟಿ, ಸತ್ಯಜಿತ್ ರೇ ಫಿಲ್ಮ್ ಸೊಸೈಟಿ… ಇತ್ಯಾದಿ! ಸರ್ಕಾರದ ಈ ನಡೆಯ ಕೆಲವೇ ತಿಂಗಳ ಹಿಂದೆ ಮದರ್ ಥೆರೇಸಾರವರು ಸ್ಥಾಪಿಸಿದ ಮಿಷನರಿ ಆಫ್ ಚಾರಿಟಿ ಸಂಸ್ಥೆಯ ಪರವಾನಗಿ ನವೀಕರಿಸಲು ನಿರಾಕರಿಸಿದ್ದು ದೊಡ್ಡ ವಿವಾದವಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಿತ್ತು.
ಹೀಗೆ ಹಂತ ಹಂತವಾಗಿ ಎನ್. ಜಿ .ಓ ಗಳಿಗೆ ವಿದೇಶೀ ದೇಣಿಗೆಯನ್ನು ನಿಯಂತ್ರಿಸುವುದರಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರವು ಕಳೆದ ನವೆಂಬರ್ (2022) ನಲ್ಲಿ ‘ಸೇವ್ ದಿ ಚಿಲ್ಡ್ರನ್ ‘ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯು, ದೇಶದೊಳಗಿನ ದಾನಿಗಳಿಂದಲೂ ಹಣ ಸಂಗ್ರಹಣೆ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರಗಳಿಗೆ ಆದೇಶಿಸಿತು. ಹಾಗೂ “ಅಂತಹ ಎನ್‌ಜಿಒಗಳಿಂದ ಹರಡುತ್ತಿರುವ ಸುಳ್ಳು ಮಾಹಿತಿಯನ್ನು ಬಹಿರಂಗಪಡಿಸಲು” ಮತ್ತು ಸರ್ಕಾರದ ಸ್ವಂತ ಪೌಷ್ಟಿಕಾಂಶ ಯೋಜನೆಗಳ ಬಗ್ಗೆ “ಸಕ್ರಿಯವಾಗಿ ಜಾಗೃತಿಯನ್ನು ಪ್ರಸಾರ ಮಾಡಲು” ರಾಜ್ಯಗಳಿಗೆ ಹೇಳಿತು.
ಅವಕೃಪೆಗೆ ತುತ್ತಾದ ‘ಸೈಟ್‌ಸೇವರ್ಸ್ ಇಂಡಿಯಾ’ ಸಂಸ್ಥೆ
ಡಿಸೆಂಬರ್ ನಲ್ಲಿ ಸರ್ಕಾರದ ಅವಕೃಪೆಗೆ ಪಾತ್ರವಾಗುವ ಸರದಿ, 57 ವರ್ಷಗಳಿಂದ ಭಾರತದಲ್ಲಿ ಅಂಧರಿಗೆ ಮತ್ತು ದೃಷ್ಟಿಹೀನರಿಗೆ ಅಂಗವೈಕಲ್ಯ-ಹಕ್ಕುಗಳ ವಕಾಲತ್ತುಗಳನ್ನು ಒದಗಿಸಲು ಕಾರ್ಯನಿರ್ವಹಿಸುತ್ತಿರುವ ‘ಸೈಟ್‌ಸೇವರ್ಸ್ ಇಂಡಿಯಾ’ ಎಂಬ ಸರ್ಕಾರೇತರ ಸಂಸ್ಥೆಯದ್ದಾಯಿತು. ಸೈಟ್‌ಸೇವರ್ಸ್ ಯಾವ ಕಾನೂನುಗಳು ಅಥವಾ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂಬುದನ್ನು ವಿವರಿಸದೆ, ಆರೋಗ್ಯ ಸಚಿವಾಲಯವು ಅಂಧರು ಮತ್ತು ದೃಷ್ಟಿಹೀನರ ಹೆಸರಿನಲ್ಲಿ ದೇಶದೊಳಗಿನ ಮೂಲಗಳಿಂದ ಏಕೆ ದೇಣಿಗೆ ಸಂಗ್ರಹಿಸಿದೆ ಎಂಬುದನ್ನು ವಿವರಿಸಲು ಈ ಎನ್‌ಜಿಒಗೆ ಕೇಳಿದೆ.
ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (CPR ) ಸಂಸ್ಥೆ
6 ತಿಂಗಳ ಹಿಂದೆ ಆಕ್ಸ್ಫ್ಯಾಮ್ ಇಂಡಿಯಾ, ಐಪಿಎಸ್ ಮೀಡಿಯಾ ಮತ್ತು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (CPR ) ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯು ‘ಸರ್ವೇ’ ನಡೆಸಿದ ನಂತರ, 2023 ಮಾರ್ಚ್ ನಲ್ಲಿ ಸರ್ಕಾರವು CPR ಸಂಸ್ಥೆಯ ವಿದೇಶೀ ದೇಣಿಗೆ ಸಂಗ್ರಹಣೆಯ ಪರವಾನಗಿ ರದ್ದು ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆಯು ‘ಸಿಎಜಿ ಸೇರಿದಂತೆ ಸರ್ಕಾರಿ ಅಧಿಕಾರಿಗಳಿಂದ ನಾವು ನಿಯಮಿತವಾಗಿ ಲೆಕ್ಕಪರಿಶೋಧನೆ ಮತ್ತು ಪರಿಶೀಲನೆಗೊಳಗಾಗಿದ್ದೇವೆ ಹಾಗೂ ಎಲ್ಲ ಅಗತ್ಯ ನಿಯಮಗಳನ್ನು ಪಾಲಿಸಲಾಗಿದೆ’ ಎಂದು ಹೇಳಿದೆ .
1973 ರಲ್ಲಿ ಸ್ಥಾಪಿತವಾದ CPR ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಗೌರವಾನ್ವಿತ ನೀತಿ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮತ್ತು ಜಗತ್ತಿನಾದ್ಯಂತದ ಸರ್ಕಾರಿ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ದತ್ತಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಕೆಲಸ ಮಾಡುತ್ತದೆ. ಕಳೆದ ಐದು ದಶಕಗಳಲ್ಲಿ, ಇದು ಭಾರತ ಎದುರಿಸುತ್ತಿರುವ ಪ್ರಮುಖ ಸಾರ್ವಜನಿಕ ನೀತಿ ಪ್ರಶ್ನೆಗಳು ಮತ್ತು ಸವಾಲುಗಳ ಕುರಿತು ಜ್ಞಾನ ಮತ್ತು ಸಂಶೋಧನೆಯ ಪ್ರಮುಖ ಮತ್ತು ದೃಢವಾದ ಪಕ್ಷಾತೀತ ಕೇಂದ್ರವಾಗಿ ಕಾರ್ಯನಿರ್ವಹಿಸಿದೆ. ಸಿಪಿಆರ್ ನಿರ್ಮಿಸಿದ ಅತ್ಯುತ್ತಮ ವಿದ್ಯಾರ್ಥಿವೇತನವು ಭಾರತೀಯ ಸಾರ್ವಜನಿಕ ಚರ್ಚೆಗಳನ್ನು ನಿರಂತರವಾಗಿ ಜಾರಿಯಲ್ಲಿಟ್ಟು ಉತ್ತಮ ಮಾಹಿತಿ ಸಂಗ್ರಹಣೆಗೆ ನೆರವಾಗಿದೆ.
ಸರ್ಕಾರವು ಅಸಮಂಜಸ ಕಾರಣ ನೀಡಿ, ಇಂಥ ವಿಶ್ವಮಾನ್ಯ ಭಾರತೀಯ ಸಂಸ್ಥೆಯೊಂದರ ವಿದೇಶೀ ದೇಣಿಗೆ ಪರವಾನಗಿ ರದ್ಧು ಮಾಡಿರುವುದನ್ನು ಖಂಡಿಸಿ 100ಕ್ಕೂ ಹೆಚ್ಚು ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಶಿಕ್ಷಣ ತಜ್ಞರು ಹಾಗೂ ವಿದ್ವಾಂಸರು “CPR ವಿರುದ್ಧದ ಇತ್ತೀಚಿನ ನಡೆಗಳು ಬೌದ್ಧಿಕ ಸ್ವಾತಂತ್ರ್ಯಕ್ಕೆ ಹೊಡೆತ” ಎಂದು ಭಾರತ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ!
ಹರ್ಷ ಮಂದರ್ ಅವರ ಅಮನ್ ಬಿರಾದಾರಿ ಸಂಸ್ಥೆ
ಈ ಲೇಖನ ಬರೆಯುವ ಹೊತ್ತಿಗೆ ಗೃಹ ಮಂತ್ರಿಗಳು, ಹರ್ಷ ಮಂದರ್ ರ ಅಮನ್ ಬಿರಾದಾರಿ ಸಂಸ್ಥೆಯ ವಿದೇಶೀ ದೇಣಿಗೆಯ ಮೂಲದ ಕುರಿತು ಸಿಬಿಐ ವಿಚಾರಣೆಗಾಗಿ ಆದೇಶಿಸಿದ್ದಾರೆ. ಸರ್ಕಾರದ ಕಟು ಟೀಕಾಕಾರರಾಗಿರುವ ಹರ್ಷ ಮಂದರ್ ರವರ ಬಾಲಾಶ್ರಮಗಳು ಈಗಾಗಲೇ ದೇಣಿಗೆ ದುರುಪಯೋಗದ ನೆಪದಲ್ಲಿ ಹಲವು ಬಾರಿ ವಿಚಾರಣೆಗೊಳಗಾಗಿವೆ. ಇದು ಅವರಿಗೆ ಅನಿರೀಕ್ಷಿತವೇನೂ ಆಗಿರಲಿಕ್ಕಿಲ್ಲ. ಆದರೆ ಸರ್ಕಾರ ಮಾತ್ರ ಯಾರ ಸಲಹೆಗೂ ಕಿವಿಗೊಡದೆ, ಚುನಾವಣಾ ವರ್ಷಕ್ಕೆ ತಯಾರಿ ಎಂಬಂತೆ ತನ್ನ ಅಧೀನದಲ್ಲಿರುವ ವಿವಿಧ ತನಿಖಾ ಸಂಸ್ಥೆಗಳನ್ನು ಹೇಗೆಲ್ಲಾ ಬಳಸಬಲ್ಲೆ ಎಂದು “ಎಲ್ಲರಿಗೂ” ತನ್ನ ಬಲ ಪ್ರದರ್ಶಿಸಲು ತಯಾರಾಗಿ ನಿಂತಿದೆ.
ನಾಗರೀಕರ ಪ್ರತಿಭಟನೆ
ಮಾರ್ಚ್ 2022ರಲ್ಲಿ ( ರಷ್ಯಾ ಉಕ್ರೇನ್ ನ್ನು ಆಕ್ರಮಿಸಿದ ತಿಂಗಳ ನಂತರ ) ಯೂರೋಪಿಯನ್ ಒಕ್ಕೂಟ ಸೇರಲು ಜಾರ್ಜಿಯಾ ಕೂಡ ಅರ್ಜಿ ಸಲ್ಲಿಸಿತ್ತು. ಆದರೆ ಯೂರೋಪಿಯನ್ ಒಕ್ಕೂಟವು ಉಕ್ರೇನ್, ಮಾಲ್ಡೋವಾದ ಅರ್ಜಿಯನ್ನು ಮನ್ನಿಸಿ ಅಭ್ಯರ್ಥಿ ಸ್ಥಾನ ಕೊಟ್ಟರೆ ಜಾರ್ಜಿಯಾ ಗೆ ತನ್ನ ಸರ್ಕಾರದ ಅಂಗಗಳನ್ನು ಭ್ರಷ್ಟಾಚಾರ ಮುಕ್ತ ಮಾಡುವ ಹಾಗೂ ಆಡಳಿತದಲ್ಲಿ ರಷ್ಯನ್ ಶ್ರೀಮಂತರ ಹಸ್ತಕ್ಷೇಪವನ್ನು ತಡೆಯುವ ಕ್ರಮ ಕೈಗೊಳ್ಳಬೇಕೆಂಬ ಷರತ್ತು ವಿಧಿಸಿ ಅದರ ಅರ್ಜಿಯನ್ನು ಕಾಯ್ದಿರಿಸಿತು. ತನ್ನ ಸರ್ಕಾರವು ಒಕ್ಕೂಟದ ಸದಸ್ಯತ್ವ ಪಡೆಯಲು ಈ ಬಾರಿ ವಿಫಲವಾಗಿದ್ದಕ್ಕೆ 60,000ಕ್ಕೂ ಹೆಚ್ಚು ನಾಗರೀಕರು ಆಗ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದರು. ಹಾಗೂ ವಿದೇಶೀ ದೇಣಿಗೆ ನಿಯಂತ್ರಣ ಕಾಯ್ದೆಯ ರಚನೆಯಲ್ಲಿ ರಷ್ಯನ್ ಹಸ್ತಕ್ಷೇಪವನ್ನು ಶಂಕಿಸಿದ ನಾಗರೀಕರ ಪ್ರತಿಭಟನೆಯೂ ಮಾರ್ಚ್ ನಲ್ಲಿ ಅಷ್ಟೇ ಉಗ್ರವಾಗಿ ವ್ಯಾಪಿಸಿತು.
ಭಾರತದಲ್ಲಿ ನಾಗರೀಕರು ಎನ್ ಜಿ ಒ ಗಳ ಪರವಹಿಸುವುದಿಲ್ಲ ಯಾಕೆ?
ಭಾರತದಲ್ಲಿ ನಾಗರೀಕರು ಯಾವುದೇ ಸರಕಾರವು ಎನ್ .ಜಿ .ಓ ಗಳ ಮೇಲೆ ದಾಳಿ ಮಾಡಿದರೆ ಅದರ ಪರವಹಿಸುವುದು ಅಥವಾ ಪ್ರತಿಭಟನೆ ಮಾಡುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ‘ಪ್ರತೀ ವಿದೇಶೀ ದೇಣಿಗೆ ಪಡೆದ (ಅದೆಷ್ಟೇ ಸಣ್ಣ ಮೊತ್ತವಾಗಿರಲಿ ) ಸಂಸ್ಥೆ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ’ ಎಂದು ಸರ್ಕಾರವು ಜನರ ಮನಸ್ಸಿನಲ್ಲಿ ಸಂದೇಹ ಬಿತ್ತುವುದರಲ್ಲಿ ಯಶಸ್ವಿಯಾಗಿರುವುದರಿಂದ ಜನರು ಆ ಸಂಸ್ಥೆಗಳನ್ನು ‘ವಿಮರ್ಶಿಸುವುದರಲ್ಲಿ -ಟೀಕಿಸುವಲ್ಲಿ ‘ ಹಿಂದೆ ಬೀಳುವುದಿಲ್ಲ .
ಆಡಳಿತ ಪಕ್ಷವು ದೇಣಿಗೆಗಳ ಅತೀ ದೊಡ್ಡ ಫಲಾನುಭವಿ
ಸಾರ್ವಜನಿಕ ಸೇವೆಯಲ್ಲಿ ದಶಕಗಳಿಂದ ತೊಡಗಿದ ಸರ್ಕಾರೇತರ ಸಂಸ್ಥೆಗಳು ಹಾಗೂ ವಿರೋಧ ಪಕ್ಷಗಳ ದೇಣಿಗೆಯ ಮೂಲವನ್ನು ಇಷ್ಟು ಸಮರ್ಥವಾಗಿ ನಿಯಂತ್ರಿಸಿ, ಉಸಿರುಗಟ್ಟಿಸುತ್ತಿರುವ ಸರ್ಕಾರ ಬಹುಶ ಇನ್ನೊಂದಿರಲಿಕ್ಕಿಲ್ಲ. ಆದರೆ ಆಡಳಿತ ಪಕ್ಷವು ಎಲೆಕ್ಟೊರಲ್ ಬಾಂಡ್ ಗಳ ಮೂಲಕ ಅಪಾರದರ್ಶಕ ರೀತಿಯಲ್ಲಿ ದೇಶ ವಿದೇಶಗಳ ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆಯಾಗಿ ಹರಿದು ಬರುವ ಹಣದ ಅತೀ ದೊಡ್ಡ ಫಲಾನುಭವಿಯಾಗಿದ್ದರೂ, ಜನರು ಆ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಲು ಹಿಂಜರಿಯುವುದು ಮಾತ್ರ ಭಾರತಕ್ಕೆ ಸೀಮಿತವಾದ ವಿದ್ಯಮಾನ ಎನಿಸುತ್ತಿದೆ.
ರಂಜಿತಾ ಜಿ ಎಚ್
ಬರಹಗಾರರು