Home ಇನ್ನಷ್ಟು ಕೋರ್ಟು - ಕಾನೂನು ಕುನಾಲ್ ಕಾಮ್ರಾ ಅರ್ಜಿಗೆ ಪ್ರತಿಕ್ರಿಯಿಸಿ: ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶನ

ಕುನಾಲ್ ಕಾಮ್ರಾ ಅರ್ಜಿಗೆ ಪ್ರತಿಕ್ರಿಯಿಸಿ: ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶನ

0

ಮುಂಬೈ: ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಅವಮಾನಿಸಿದ್ದಕ್ಕಾಗಿ ಖಾರ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕಾಮ್ರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್ ಮತ್ತು ನ್ಯಾಯಮೂರ್ತಿ ಎಸ್.ಎಂ.ಮೋದಕ್ ಅವರನ್ನೊಳಗೊಂಡ ನ್ಯಾಯಪೀಠ ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ ಮತ್ತು ದೂರುದಾರರು ಅರ್ಜಿಗೆ ಪ್ರತಿಕ್ರಿಯಿಸುವಂತೆ ಅದು ಆದೇಶಿಸಿತು. ಮುಂದಿನ ವಿಚಾರಣೆಯನ್ನು ಈ ತಿಂಗಳ 16ನೇ ತಾರೀಖಿನ ಮಧ್ಯಾಹ್ನ 2:30ಕ್ಕೆ ಮುಂದೂಡಲಾಗಿದೆ.

ಮಂಗಳವಾರದ ವಿಚಾರಣೆಯಲ್ಲಿ ಕಾಮ್ರಾ ಪರವಾಗಿ ವಕೀಲ ನವ್ರೋಜ್ ಸೀರ್ವಾಯಿ ವಾದ ಮಂಡಿಸಿದರು. ತಮ್ಮ ಕಕ್ಷಿದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರು ಬಾರಿ ಹೇಳಿಕೆ ನೀಡಲು ಮುಂದಾಗಿದ್ದರು, ಆದರೆ ಅಧಿಕಾರಿಗಳು ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ವಕೀಲರು ಹೇಳಿದರು. ಇದು ಕೊಲೆ ಪ್ರಕರಣವಲ್ಲ, ಕೇವಲ ಹಾಸ್ಯ ಕಾರ್ಯಕ್ರಮ ಮತ್ತು ಈ ಕಾರ್ಯಕ್ರಮದ ವೀಡಿಯೊ ಕೂಡ ಲಭ್ಯವಿದೆ ಎಂದು ಅವರು ಹೇಳಿದರು.

ತನಗೆ ಕೊಲೆ ಬೆದರಿಕೆ ಬಂದಿರುವುದರಿಂದ ತಾನು ವಿಚಾರಣೆಗೆ ಖದ್ದು ಹಾಜರಾಗಿಲ್ಲ ಎಂದು ಕಮ್ರಾ ನ್ಯಾಯಾಲಯಕ್ಕೆ ತಿಳಿಸಿದರು. ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಕಾಮ್ರಾಗೆ ನಿರೀಕ್ಷಣಾ ಮಧ್ಯಂತರ ಜಾಮೀನು ನೀಡಿತ್ತು ಎಂಬುದನ್ನು ಅವರು ನೆನಪಿಸಿದರು.

ಮಹಾರಾಷ್ಟ್ರ ಸರ್ಕಾರದ ಪರವಾಗಿ ಪೀಠದ ಮುಂದೆ ಹಾಜರಾದ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಮಂಕುನ್ವರ್ ದೇಶಮುಖ್, ಮುಂದಿನ ವಿಚಾರಣೆಯನ್ನು ಈ ತಿಂಗಳ 22ಕ್ಕೆ ಮುಂದೂಡಬೇಕೆಂದು ಮನವಿ ಮಾಡಿದರು.

ಮದ್ರಾಸ್ ಹೈಕೋರ್ಟ್ ನೀಡಿದ್ದ ಜಾಮೀನನ್ನು ಈ ತಿಂಗಳ 17 ರವರೆಗೆ ವಿಸ್ತರಿಸಿದ್ದರಿಂದ, ಬಾಂಬೆ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಈ ತಿಂಗಳ 16ಕ್ಕೆ ಮುಂದೂಡಿತು.

You cannot copy content of this page

Exit mobile version