ದೆಹಲಿ: ಭಾರತೀಯ ತಂಡದ ಪ್ರವಾಸಗಳ ಸಮಯದಲ್ಲಿ ಕ್ರಿಕೆಟಿಗರ ಜೊತೆ ಕುಟುಂಬ ಸದಸ್ಯರು ಇರುವುದಕ್ಕೆ ಬಿಸಿಸಿಐ ನಿರ್ಬಂಧಗಳನ್ನು ವಿಧಿಸಲಿದೆ. ವಿದೇಶಿ ಪ್ರವಾಸಗಳ ಸಮಯದಲ್ಲಿ ಆಟಗಾರರು ಕುಟುಂಬ ಸದಸ್ಯರೊಂದಿಗೆ ಕಳೆಯುವ ಸಮಯದ ಬಗ್ಗೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಬಿಸಿಸಿಐ ಉದ್ದೇಶಿಸಿದೆ.
ಮಂಡಳಿಯ ನಿಯಮಗಳು ಜಾರಿಗೆ ಬಂದರೆ, ಸಂಗಾತಿಗಳು ಮತ್ತು ಮಕ್ಕಳು 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪ್ರವಾಸಗಳಲ್ಲಿ ಕ್ರಿಕೆಟಿಗರೊಂದಿಗೆ 14 ದಿನಗಳಿಗಿಂತ ಹೆಚ್ಚು ಕಾಲ ಇರಲು ಅನುಮತಿಸಲಾಗುವುದಿಲ್ಲ. ಪ್ರವಾಸದ ಮೊದಲ ಎರಡು ವಾರಗಳ ಕಾಲ ಇರುವಂತೆಯೇ ಇಲ್ಲ.
ಕುಟುಂಬ ಸದಸ್ಯರು ಸಣ್ಣ ಪ್ರವಾಸಗಳಲ್ಲಿ ಗರಿಷ್ಠ ಒಂದು ವಾರ ಮಾತ್ರ ಇರಲು ಅವಕಾಶವಿದೆ. ಅಭ್ಯಾಸ ಮತ್ತು ಪಂದ್ಯಗಳ ಸಮಯದಲ್ಲಿ, ಆಟಗಾರರು ಪ್ರತ್ಯೇಕವಾಗಿ ಪ್ರಯಾಣಿಸದೆ, ತಂಡದ ಬಸ್‌ನಲ್ಲಿ ಪ್ರಯಾಣಿಸಬೇಕು.
ಈ ನಿಬಂಧನೆಗಳು ಆಟಗಾರರ ಒಪ್ಪಂದಗಳ ಭಾಗವಾಗಿದ್ದರೂ, ಕೋವಿಡ್ -19ರ ಸಮಯದಲ್ಲಿ ಮಾನಸಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಸಡಿಲಿಕೆಗಳನ್ನು ಮಾಡಲಾಗಿತ್ತು.
ಆಸ್ಟ್ರೇಲಿಯಾ ಪ್ರವಾಸದ ನಂತರ ಶನಿವಾರ ಮುಂಬೈನಲ್ಲಿರುವ ಬಿಸಿಸಿಐ ಕಚೇರಿಗೆ ಭೇಟಿ ನೀಡಿದ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಅವರಿಗೆ ಹಿಂದಿನ ನಿಯಮಗಳ ಅನುಷ್ಠಾನದ ಬಗ್ಗೆ ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರವಾಸಗಳ ಸಮಯದಲ್ಲಿ ಮಂಡಳಿಯು ಕುಟುಂಬ ಸದಸ್ಯರಿಗೆ ವಸತಿ ಸೌಕರ್ಯವನ್ನು ಒದಗಿಸಿದರೆ, ಕ್ರಿಕೆಟಿಗರು ಪ್ರಯಾಣ ವೆಚ್ಚವನ್ನು ತಾವೇ ಭರಿಸುತ್ತಿದ್ದಾರೆ. ಈ ನಿಬಂಧನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಂಡಳಿಯ ಮೂಲಗಳು ತಿಳಿಸಿವೆ.